ಕರುಣಾಮಯಿ

ಕವಿತೆ

ಪೂಜಾ ನಾರಾಯಣ ನಾಯಕ

ಆಸುಪಾಸಿನ ಬೇಲಿಯಲಿದ್ದ
ಕಾಷ್ಟದ ತುಂಡಾಯ್ದು
ಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದು
ಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದು
ಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳು
ಕರುಣಾಮಯಿ ನನ್ನಮ್ಮ…

ಕಡು ಬಡತನದ ಸಂಕಟದಲ್ಲೂ
ಆಶಾ-ಭರವಸೆಯ ನುಡಿಯಾಡಿ
ಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆ
ತಾನೊಬ್ಬಳೇ ಹೋರಾಡಿ
ಹರಿದಿರುವ ಹರುಕು ಅಂಗಿಯ ತುಂಡಿಗೂ
ಮೊಂಡಾದ ಸೂಜಿಗೂ
ಮಧುರವಾದ ಬಾಂಧವ್ಯ ಬೆಸೆದವಳು
ಕರುಣಾಮಯಿ ನನ್ನಮ್ಮ..

ನಾ ಸೋತು ಕೂತಾಗ
ಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತು
ನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿ
ನನ್ನ ಸಾವಿರ ಕನಸುಗಳನ್ನು
ನನಸು ಮಾಡಲು ಹೊರಟು ನಿಂತವಳು
ಕರುಣಾಮಯಿ ನನ್ನಮ್ಮ..

ಕೂಡಿಟ್ಟ ಕಾಸಿನಲಿ
ಶಾಲೆಗೆ ಪೀಜು ತುಂಬಿ
ತನ್ನ ಹರುಕು ಸೀರೆಯ ಲೆಕ್ಕಿಸದೆ
ನನಗೊಂದು ಹೊಸ ಅಂಗಿಯ ಕೊಡಿಸಿ
ದೊಡ್ಡ ಅಧಿಕಾರಿಯ ಸ್ಥಾನದಲಿ
ತಾ ಕೂಸ ನೋಡಬೇಕೆಂದು
ಆಸೆಯಿಂದ ಕಾಯುತ್ತ ಕುಳಿತವಳು
ಕರುಣಾಮಯಿ ನನ್ನಮ್ಮ….

ತನ್ನ ಜೀವದ ಕೊನೆಯ ಉಸಿರಿನ ತನಕ
ತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವ
ಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….
ಅವಳ ಋಣ ತೀರಿಸಲು ಸಾಧ್ಯವಿಹುದೇನು?…
ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…
ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?….

******

6 thoughts on “ಕರುಣಾಮಯಿ

Leave a Reply

Back To Top