ಕವಿತೆ
ವಿದ್ಯಾ ಕುಂದರಗಿ
ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿ
ರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ
ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯು
ದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ
ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲ
ಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ
ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವು
ಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ
ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆ
ಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ
‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋ
ಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ
*******************
ಆಹಾ, ಸ್ವಾತಂತ್ರ್ಯ ,ಮುಕ್ತತೆಯ ಹಂಬಲ….ಗಟ್ಟಿಬಂಧದ ಕವಿತೆ
ಚೆನ್ನಾಗಿದೆ.
ಮೊದಲ ಸಾಲನ್ನು ಕೊಂಚ ಬದಲಿಸಿದರೆ ಒಳ್ಳೆಯದೊಂದು ಗಜ಼ಲ್ ಆಗುತ್ತದೆ.
ಎಷ್ಟೇ ಸ್ವಾತಂತ್ರ್ಯ ವಿದ್ದರೂ….ಕಾಲಿಗೆ ಕಟ್ಟಿಕೊಂಡ ಚಿನ್ನದ ಬೇಡಿಯಂತೆ ….ಸುತ್ತ ಮುತ್ತ ಲಿನ ವ್ಯವಸ್ಥೆ ಹೆಣ್ಣಿಗೆ ಕಾಡುತ್ತದೆ. ಅದರಿಂದ ಪಾರಾಗಬೇಕೆಂಬ ತುಡಿತ ಎದ್ದು ಕಾಣುತ್ತದೆ. ಪದಗಳ ಜೋಡಣೆ ತುಂಬಾ ಚೆನ್ನಾಗಿದೆ.
ಚಂದ