ಲಹರಿ
ವಸುಂಧರಾ ಕದಲೂರು
ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…
ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸವೆಂದು.
ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.
ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…
ಇಷ್ಟಯೇ… ಸಾಕೇ..?!
ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾನೇನು ಅವ್ವ, ಅಮ್ಮನ ಕಾಲದವಳೇ..? ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವಳು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?
ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?
ಅವರಿಗೂ ಬೇಸರವೇ…
ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ, ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.
ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?
ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.
ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.
ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.
**********
ಹೌದಲ್ವಾ ವಸುಂಧರಾ… ಲಹರಿ ಚೆಂದಿದೆ
ಧನ್ಯವಾದ ಸ್ಮಿತಾ…
Good Vasundhara Nice