ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಜೀವನ-ಮರಣ”


ಅಯ್ಯೋ ಪ್ರಾಣವೇ…
ನಿನಗಲ್ಲ, ನನಗಾಗಿದೆ ಪ್ರಾಯ,
ತ್ರಾಣವಿಲ್ಲದ ಎಲುಬುಗಳ ಮಧ್ಯೆ
ಉಸಿರೊಂದೇ ಈಗ ಉಳಿದಿರಲು,!
ಪ್ರಾಣವೆಂಬ ಈ ಜೀವಾತ್ಮವು
ಜೀವನದಾಟಗಳ ಮುಗಿಸಿ ಕೂತಿದೆ,
ಉಸಿರು ಹಾರುವ ತವಕದಲಿ
ಜೀವನದ ಬಯಕೆಗಳ ಮುಗಿಸಲು,!
ಬರೀ ಗೋಳು, ಈ ಬದುಕು
ದೇವನೇ ತೆಗೆದು ಬಿಡು ಪ್ರಾಣವ,
ನನ್ನೂಸಿರನು ಈ ದೇಹದಿಂದೊಮ್ಮೆ
ಈ ಜನ್ಮವು ಸಾಕು, ಮುಗಿಸಿ ಬಿಡಲು,!
ಯಾರಿಗೂ ಹೊರೆಯಾಗದೆ
ಯಾರಿಂದಲೂ ನನ್ನ ತಿರಸ್ಕರಿಸದೆ
ನೋಯಿಸುವ ಮುನ್ನ, ನನ್ನನ್ನೊಮ್ಮೆ
ಕರೆಸಿ ಬಿಡು ದೇವ, ನಿನ್ನ ಬಳಿ ಸೇರಲು,!
ನನ್ನಾತ್ಮವನು ಸ್ವೀಕರಿಸಿ
ನಿನ್ನೊಡನೆ ಸುಖವಾಗಿರಲು ಬಿಡು,
ನನ್ನಯ ಸತ್ಕರ್ಮಗಳೊಮ್ಮೆ
ಬೇಗನೆ ತೂಲನೆ ನೀ ಮಾಡಿ ಬಿಡಲು,!
ದುಷ್ಟರಿಂದ ತುಂಬಿದ ಜಗತ್ತು
ಜಗಮಗಿಸುತ್ತಿರಲು,ನಾನಿರಲಾರೆ,
ಹಿಂಸಿಸಿ ಕೊಲ್ಲುವ ಜನರೊಳಗಿಂದ
ಸುರಕ್ಷಿತ ಮರಣವನು ದಯಪಾಲಿಸಲು.!
ಹಮೀದ್ ಹಸನ್ ಮಾಡೂರು



