ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಲ ಎಲ್ಲವನ್ನೂ ಮರೆಸಿತು ನಿನ್ನ ನೆನಪೊಂದನು ಬಿಟ್ಟು
ಕಾಲ ಎಲ್ಲಾ ನೋವನ್ನು ಅಳಿಸಿತು ನೀ ಮಾಡಿದ ಗಾಯವೊಂದನು ಬಿಟ್ಟು..!!

ಯುಗವುರಳಿ ಭಿನ್ನ ಮುಖ ಕಣ್ಣ ಮುಂದೆ ಚಲಿಸುತ್ತಿವೆ ಒಂದೊಂದೇ
ಕಾಲ ಕಸದರಾಶಿಯಲೂ ಹೂ ಅರಳಿಸಿತು ನನ್ನ ಪಾಲಿನ ಹೂವೊಂದನು ಬಿಟ್ಟು!!

ಮೊದಲಿಲ್ಲದ ಕೊನೆ,ಕೊನೆಯಿಲ್ಲದ ಮೊದಲು  ಒಂಟಿತನಕೆ ನಾಂದಿ ಬಯಸವು
ಕಾಲ ಎಲ್ಲಾ ಕಲಿಸಿತು ನನ್ನ ನೆರಳಿಗೆ ನಗಿಸುವುದೊಂದನು ಬಿಟ್ಟು!!

ಈ ಶೋಕ ಒಂದು ಗಳಿಗೆಯದ್ದಲ್ಲಾ ಇಡೀ ಜೀವಮಾನದ್ದಾಯ್ತು
ಕಾಲ ಕಂಬನಿ ನಿಲ್ಲಿಸೆಂದಿತು ರಕ್ತ ಒಸರುವುದೊಂದನು ಬಿಟ್ಟು!!

ಖಾಲಿತನದ ಹೆಜ್ಜೆ ಅನುಕಂಪದ ಪೆಟ್ಟಿಗೆಗೆ ಸರಿಯಬಹುದೆಂದುಕೊಂಡೆ
ಕಾಲ ಛಿದ್ರ ಹಳಿಗಳನು ಒಂದುಗೂಡಿಸಿತು ಹಾದಿ ತಪ್ಪಿದ ಪ್ರೀತಿಯೊಂದನು ಬಿಟ್ಟು!!

ಪ್ರೀತಿಯೆಂಬ ಪುಸ್ತಕದಿ ಉಳಿದಿದ್ದು ಹೆಸರೇ ಇಲ್ಲದ ನಾನು, ನೀನು
ಕಾಲ ಎಲ್ಲವನ್ನೂ ಉಳಿಸಿತು ನಿನ್ಹೆದೆಯಲಿ ನನ್ಹೆಸರೊಂದನು ಬಿಟ್ಟು!!

ಕತ್ತಲು ಕನಸುಗಳ ನಡುವೆ ಮೌನ ಹೊದಿಕೆ ಹೊದ್ದು ಜಯವನ್ನು ಬೇಡಿದಾಗ
ಕಾಲ ಕೊನೆಗೂ ಕನಿಕರಿಸಿತು ಸಾವೊಂದನು ಬಿಟ್ಟು!!


About The Author

2 thoughts on “ಜಯಂತಿ ಸುನಿಲ್ ಅವರ ಗಜಲ್”

Leave a Reply

You cannot copy content of this page

Scroll to Top