ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು. 

ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ. 

ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು. 

ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು. 


About The Author

Leave a Reply

You cannot copy content of this page

Scroll to Top