ಕಾವ್ಯ ಸಂಗಾತಿ
ವಿಮಲಾರುಣ ಪಡ್ಡಂಬೈಲು
ಗೀಚಿನಿಂದರಳಿದ ಗೀತೆ


ಆ ಪುಟ್ಟ ಕೈಯಲಿ ಅಂದು
ತೋಚಿ ಗೀಚಿದ ಸಾಲು
ಬಿಳಿಹಾಳೆ ಮೇಲೇರಿ ಕವಿತೆಯಾಗಲು
ಮನದಿ ಮೂಡಿದ ಆ ಭಾವ ಬಲು ಹಿತ.
ಸೂರ್ಯ-ಚಂದಿರ-ಚುಕ್ಕಿ-ತಾರೆಗಳ
ಪಿಸುಮಾತು ಎದೆಗಿಳಿಯಲು
ನನ್ನ ದಿಟ್ಟಿಸಿ ನಕ್ಕಿದ್ದವು
ನೈಜ ಭಾವದ ನನ್ನ ತಾಳ-ಮೇಳಕೂ ವರ್ಣ ಕುಹಕವೋ ಮೋಹಕವೋ ತಿಳಿಯದಾದೆ!
ಆದರೂ ಕವಿತೆ ಗಾನವಾದಾಗ
ನಾ ಸಂಭ್ರಮಿಸಿದ ಆ ದಿನಗಳೆಷ್ಟು ಚೆಂದ..
ಹಿತ್ತಲಲ್ಲರಳಿದ ಜಾಜಿ ಸೇವಂತಿಗೆ ಗುಲಾಬಿ
ಕಂಪು ಸೂಸುತ್ತ ಹನಿಯ ಬಿಗಿದಪ್ಪಿರಲು
ಮೌನಗರ್ಭದಿ ಕೂಸು ಮಿಸುಕಾಡಿದಂತಾಯ್ತು
ಖಾಲಿ ಕಾಗದದಿ ಜೀವ ತಳೆದಾಯ್ತು
ನಾನೋ ಅದರ ಬೆನ್ನು ತಟ್ಟಿದ್ದೆ
ಅಥವಾ ಅದು ನನ್ನೊಳಗಿನ ಸ್ಪಂದನೆಗೆ
ಸ್ಪರ್ಶಸಿತ್ತೋ?
ಒಂದಂತೂ ದಿಟ
ಅರಿಯದ ಆ ಮುಗ್ಧ ಮಹಾದಾನಂದ.
ಚಿಮಣಿ ದೀಪ ಸುತ್ತ ಸೆಳಕು ಚೆಲ್ಲಿರಲು
ಉರಿವ ಸೌದೆಯ ಉರಿಯಲಿ
ಅಮ್ಮನ ಬೆವರು ಬಸಿದಿರಲು
ತುತ್ತು ಉಣ್ಣಿಸಿದ ಖುಷಿಗೆ
ಆತ್ಮತೃಪ್ತಿಯ ಎರಕ ಹೊಯ್ದ
ನಾ ಬರೆದ ಎರಡು ಸಾಲು
ಅವಳಿಗದೆಷ್ಟು ಸಂತೃಪ್ತಿ!
ಹಿಗ್ಗಿತ್ತು ನನ್ನ ಹೃದಯ.
ಅಪ್ಪನ ಹೆಗಲೇರಿ ನೋಡಿದ ಜಾತ್ರೆ
ಅಕ್ಕತಂಗಿಯರೊಡಗೂಡಿ ಆಡಿದ ಆಟ
ಮರದ ನೆರಳಲ್ಲಿ ಬಿತ್ತಿದ ಬೀಜಗಳು
ಬರಹದ ಬೇರಾಗಿ ಅವು ಕವಿತೆಯಾಗಿ
ಬೀಸುವ ಕುಳಿರ್ಗಾಳಿ ನೀ ಕವಿಯೆಂದು
ಪಿಸುಗುಟ್ಟಿದ ಆ ದಿನವೆಷ್ಟು ಚೆಂದ …
ಅಂದು ಗೀಚಿದ್ದೆ ಗೀತೆ ಅದೆಂಥಾ ಆನಂದ
ಇಂದು ಭಾವಗಳ ಹೆಣೆದಷ್ಟು ನಿರ್ಭಾವ
ಜೋಂಪು ನಿದಿರೆಯಲಿ ಮುದುಡಿದ ಪದಗಳ
ಭಾವವಾಗಿ ನನ್ನತ್ತ ಹರಿಯ ಬಿಡು ಕವಿತೆ
ನಿನ್ನಾಗ ಜಗ ಮೆಚ್ಚುವುದು ಸುನೀತೆ.
ವಿಮಲಾರುಣ ಪಡ್ಡoಬೈಲು



