ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

                            ಅದೋ! ಮೇಧಾಶ್ವವನು ಬಿಟ್ಟರು

ಬಂದ ವಸಂತರಾಜ. ಋತುಗಳ ರಾಜ. ಗಾಳಿಗೆ ಒಂದೆಡೆಯಲ್ಲಿ ನಿಲ್ಲುವ ಪುರುಸೊತ್ತಿಲ್ಲ. ಯಾವುದೋ ಗಮ್ಯದೆಡೆಗೆ ಅದರ ಗಮನ. ಆ ಗಮ್ಯವನ್ನು ಹೋಗಿ ತಲುಪಿದ ಮರುಗಳಿಗೆಯೇ ಗಾಳಿಗೆ ಇನ್ನೊಂದು ಗಮ್ಯದೆಡೆಗಿನ ಸೆಳೆತ. ಮತ್ತೆ ಮತ್ತೊಂದು ಗಮ್ಯದೆಡೆಗೆ ಎಳೆತ. ಗಮ್ಯಾತಿಗಮ್ಯವನ್ನು ಹೋಗಿ ಸೇರುವ ತುಡಿತ. ಚಂದನದ ಸುವಾಸನೆಯನ್ನು ಮೈವೆತ್ತಿಕೊಂಡ ಮಂದ ಮಾರುತ ಮಲಯ ಪರ್ವತವನ್ನು ದಾಟಿ ಸರೋವರದಲ್ಲಿ ಸಂಚರಿಸುವ ಮರಿದುಂಬಿಗಳ ಗುಂಪನ್ನು ಕೂಡಿಕೊಂಡು ತೇಲಿ ತೇಲಿ ಬಂದಿತದೋ ವಿರಹಿಗಳ ಎದೆಯ ಬಿಸಿ ಆರಿಹೋಗುವಂತೆ; ಮಡುಗಟ್ಟಿರುವ ವಿರಾಗ ಬೇಗೆ ಹಾರಿಹೋಗುವಂತೆ. 

     ಹಸಿಹಸಿರ ಬಸುರಿಯಾದಳದೋ ಧರಣಿ ವಸಂತನ ಮಧುರ ಹನಿಯನ್ನು ಗರ್ಭದೊಳಗಿರಿಸಿಕೊಂಡು. ಮರಿ ಕೋಗಿಲೆಗಳದೋ ಹಾಡುವುದನ್ನು ಕಲಿತವು, ಇಂಪು ಇಂಪಾಗಿ. ದುಂಬಿಗಳ ಗುಂಪದೋ ತೃಷೆಯನ್ನು ಇಂಗಿಸಿಕೊಂಡವು ಅರಳಿನಿಂತ ಹೂವುಗಳ ಸಿಹಿಯೆದೆಯ ಸವಿರಸಕೆ ಮೊಗವಿಟ್ಟು. ಸಕಲ ವನಗಳು ವಸಂತಮಯವಾದವು. 

    ಚಿಗುರಿನಿಂತ ಮಾಮರದೆಡೆಯಿಂದ ಕೋಗಿಲೆಯ ಕೂಗು ಕೇಳಿಬರತೊಡಗಿತು. ಕನಕವರ್ಣದ ತಾವರೆ, ಸಂಪಿಗೆ, ಮಲ್ಲಿಗೆ ಮೊದಲಾದ ಕುಸುಮಗಳು ಮನಕೆ ಮುದವನ್ನಿಕ್ಕಿದವು. 

    ದಾರಿಹೋಕರಿಗೆ ಪಯಣದ ಶ್ರಮವಂತೂ ಇಲ್ಲವೇ ಇಲ್ಲ. ಚೆನ್ನಾಗಿ ಬೆಳೆದುನಿಂತ ಮರಗಳ ನೆರಳಿದೆ, ವಿರಮಿಸುವುದಕ್ಕೆ. ಶುಭ್ರವಾದ ಜಲವಿದೆ, ಬಾಯಾರಿಕೆಯನ್ನು ನೀಗಿಕೊಳ್ಳುವುದಕ್ಕೆ. ಹೊಸಬಗೆಯ ಪರಿಮಳವನ್ನು ಹೊತ್ತು ನಿಂತಿದೆ ಗಾಳಿ, ನವ ಉಲ್ಲಾಸ ನೀಡುವುದಕ್ಕೆ. 

    ವಸಂತ ಋತುವಿನ ಬೆಳದಿಂಗಳು ಧರ್ಮರಾಜನ ಕೀರ್ತಿ ಜಗದಗಲ ಪಸರಿಸಿರುವುದನ್ನು ಸಾರಿ ಹೇಳುತ್ತಿತ್ತು. ಕೇಳಿಬರುತ್ತಿದ್ದ ಕೋಗಿಲೆಯ ದನಿ ಯಾಗದ ದಾನಿಗಳನ್ನು ಕೂಗಿ ಕೂಗಿ ಕರೆಯುತ್ತಿತ್ತು. ಮಾವಿನ ಮರದಲ್ಲಿ ಕಾಣಿಸಿದ ಚಿಗುರುಗಳು ಜನಸಮೂಹದ ಅಪೇಕ್ಷೆಯನ್ನು ನೆನಪಿಸುವಂತಿದ್ದವು. ಮುಗಿದುಹೋದ ಮಾಗಿಯ ಕಾಲ ಕುರುಕ್ಷೇತ್ರ ಯುದ್ಧ ಪಾತಕದ ಅಂತ್ಯವನ್ನು ಸಂಕೇತಿಸುತ್ತಿತ್ತು. ಪುಣ್ಯ ಪರಿಮಳವದು ಬರುವಂತೆ ದಕ್ಷಿಣದ ದೆಸೆಯಿಂದ ಗಾಳಿ ತೇಲಿಬಂತು. 

                                                                   ವಸಂತರಾಜನ ವೈಭೋಗಾತಿರೇಕದ ಈ ಸಮಯದಲ್ಲಿ ಧರ್ಮರಾಜ ಯಾಗದ ಅಶ್ವವನ್ನು ಸಂಚಾರಕ್ಕೆ ಬಿಡುವ ತೀರ್ಮಾನವನ್ನು ಕೈಗೊಂಡ. ವೇದವ್ಯಾಸರ ಮಾತಿನಂತೆ ಶ್ರೇಷ್ಠ ಮುನಿಗಳೆಲ್ಲರನ್ನೂ ಕರೆಸಿದ. ಅವರ ಒಪ್ಪಿಗೆಯನ್ನು ಪಡೆದ. ಯಜ್ಞಶಾಲೆ ಈ ಮೊದಲೇ ನಿರ್ಮಾಣವಾಗಿತ್ತು. ಅಲ್ಲಿ ದೀಕ್ಷೆಯನ್ನು ತೆಗೆದುಕೊಂಡ ಧರ್ಮಜ. 

                           ‘ಚಂದ್ರವಂಶದ ಶ್ರೇಷ್ಠ ಅರಸ ಪಾಂಡುರಾಜನ ಪುತ್ರ ಯುದಿಷ್ಠಿರ ಮಹಾರಾಜನ ಯಾಗದ ಕುದುರೆಯಿದು. ದಿಟ್ಟತನದವರು ಯಾರಾದರೂ ಇದ್ದರೆ ಈ ಕುದುರೆಯನ್ನು ಕಟ್ಟಿಹಾಕಿ’ ಎಂದು ಚಿನ್ನದ ಪಟ್ಟಿಯೊಂದರಲ್ಲಿ ಬರೆದು ಅದನ್ನು ಕುದುರೆಯ ಹಣೆಗೆ ಕಟ್ಟಲಾಗಿತ್ತು. ಮೌಲ್ಯಯುತವಾದ ವಸ್ತç ಆಭರಣಗಳಿಂದ ಕುದುರೆಯನ್ನು ಸಿಂಗರಿಸಲಾಗಿತ್ತು. ಅಶ್ವಕಾಯಕ್ಕೆ ಗಂಧದ ಲೇಪನ. ಕೊರಳಲ್ಲಿ ಒಂದು ಮಾಲೆ. ಚೈತ್ರ ಮಾಸದ ಪೌರ್ಣಮಿಯಂದು ಕುದುರೆಯನ್ನು ಸಂಚಾರಕ್ಕೆ ಕಳುಹಿಸಿಕೊಡಲಾಯಿತು. 

    ಕುದುರೆಯ ರಕ್ಷಣೆಗೆ ಹೊರಟವನು ನಾನು. ನನ್ನ ಜೊತೆ ಅನುಸಾಲ್ವ, ಸಾತ್ಯಕಿ, ಪ್ರದ್ಯುಮ್ನ, ಕೃತವರ್ಮ, ಯೌವನಾಶ್ವ ಮೊದಲಾದ ಪರಾಕ್ರಮಿಗಳಿದ್ದರು. ಚತುರಂಗ ಬಲ ನಮ್ಮೊಡನಿತ್ತು. ಶ್ರೀಕೃಷ್ಣ ಅಕ್ಕರೆಯಿಂದ ಒದಗಿಸಿಕೊಟ್ಟ ಯಾದವಸೈನ್ಯವಿತ್ತು ನಮ್ಮ ಜೊತೆ. ಗಜಮುಖನನ್ನು ಪೂಜಿಸಿದೆವು. ನವಗ್ರಹಗಳಿಗೆ ನಮಿಸಿದೆವು. ಅಣ್ಣಂದಿರಾದ ಧರ್ಮಜ, ಭೀಮ ಇವರಿಗೆ ನಮಸ್ಕರಿಸಿದೆ ನಾನು. ತಾಯಿ ಕುಂತಿಯ ಪಾದಕ್ಕೆ ಮಣಿದೆ. ಶ್ರೀಕೃಷ್ಣ ಪಾದಯುಗ್ಮಗಳಿಗೆ ವಂದಿಸಿದೆ. ಮುನಿಗಣದ ಆಶೀರ್ವಾದ ಪಡೆದೆ. ಹೆಂಗಳೆಯರು ಅಕ್ಷತೆಯಿಕ್ಕಿ ಹರಸಿದರು. ಮಂಗಳಘೋಷ ಮೊಳಗಿತು. ಹಸ್ತಿನಾವತಿಯಿಂದ ಹೊರಟೆವು ನಾವೆಲ್ಲರೂ, ಕುದುರೆಯ ನಡಿಗೆಯನ್ನೇ ಅನುಸರಿಸಿದ ವೀರಾಧಿವೀರರು. 

    ನಮ್ಮೆಲ್ಲರನ್ನೂ ಕಳುಹಿಸಿಕೊಟ್ಟ ಅಣ್ಣ ಧರ್ಮಜ ಅಸಿಪತ್ರ ವ್ರತಾಚರಣೆಯೆಡೆಗೆ ಮನಸ್ಸು ಮಾಡಿದ. ಅಶ್ವಮೇಧ ಯಾಗ ದೀಕ್ಷಿತರು ಮಾಡುವ ವ್ರತವದು. ವ್ರತವಾಚರಿಸುವವರು ಮಜ್ಜನ ಮಾಡಬಹುದು. ಭೋಜನ ಗೈಯ್ಯಬಹುದು. ತಾಂಬೂಲ ಸೇವನೆಗೆ ಅಡ್ಡಿಯೇನಿಲ್ಲ. ವಸ್ತಾçಲಂಕಾರಕ್ಕೆ ತಡೆಯೇನಿಲ್ಲ. ಕುಸುಮವನ್ನು ಆಘ್ರಾಣಿಸಬಾರದೆಂಬ, ಸುಗಂಧ ದ್ರವ್ಯವನ್ನು ಲೇಪಿಸಿಕೊಳ್ಳಬಾರದೆಂಬ ನಿರ್ಬಂದವಿಲ್ಲ ಅದರಲ್ಲಿ. ಮಲಗುವ ಕೋಣೆಯಲ್ಲಿ ಸಂಗಾತಿಯೊಂದಿಗೆ ಒಂದೇ ಮಂಚದಲ್ಲಿ ಪವಡಿಸಬಹುದು. ಆದರೆ ಸಂಭೋಗ ಸುಖದೆಡೆಗೆ ಮನಸ್ಸು ಮಾಡುವಂತಿಲ್ಲ. ಎಲ್ಲಾ ಬಗೆಯ ಸುಖಭೋಗಗಳಿದ್ದರೂ ಹೆಣ್ಣಿನ ತನುವನ್ನು ಸೇರಿ ಗಂಡಸ್ತನವನ್ನು ತೋರಲಾಗದ ಅನಿವಾರ್ಯತೆಯದು. ಮನಮೆಚ್ಚಿದವಳು ಬಳಿಯಲ್ಲಿಯೇ ಇದ್ದರೂ ಒಲವನ್ನು ಬಾಹ್ಯರೂಪದಲ್ಲಿ ತೋರಿಸಲಾಗದ ಸ್ಥಿತಿಯದು. ಕುದುರೆಯನ್ನು ಹಿಂಬಾಲಿಸಿ ಹೊರಟ ನಮಗೆಲ್ಲರಿಗೂ ರಣರಂಗದ ಶತ್ರುವನ್ನು ಗೆಲ್ಲುವ ಶಕ್ತಿಪರೀಕ್ಷೆ. ಹಸ್ತಿನಾವತಿಯಲ್ಲಿಯೇ ಉಳಿದ ಅಣ್ಣ ಧರ್ಮಜನಿಗೆ ಅಸಿಪತ್ರ ವ್ರತದ ನೆಪದಲ್ಲಿ ಅಂತರಂಗದ ಕಾಮನೆಯನ್ನು ಗೆಲ್ಲುವ ಸತ್ವಪರೀಕ್ಷೆ. 

     ಸ್ವಂತ ಇಚ್ಛೆಯ ಬಲದಲ್ಲಿ ಚಲಿಸುತ್ತಿದ್ದ ಕುದುರೆ ದಕ್ಷಿಣಾಭಿಮುಖವಾಗಿ ಹೊರಟಿತು. ಹೋಗಿಸೇರಿದ್ದು ಮಾಹಿಷ್ಮತೀ ಪಟ್ಟಣದ ಹೊರಭಾಗವನ್ನು. ನೀಲಧ್ವಜ ಎಂಬವನು ಆ ನಗರದ ಅರಸ. ಅವನ ಮಗ ಪ್ರವೀರ. ಮದನಮಂಜರಿಯೆಂಬ ಮಡದಿಯಿದ್ದಳು ಪ್ರವೀರನಿಗೆ. 

    ನಮ್ಮ ಕುದುರೆ ಮಾಹಿಷ್ಮತಿ ನಗರವನ್ನು ಹೋಗಿ ಸೇರುವ ವೇಳೆಗೆ ರಮಣಿಯ ಜೊತೆ ಪ್ರವೀರ ಉದ್ಯಾನಕ್ಕೆ ಬಂದಿದ್ದ. ಮದನಮಂಜರಿಯ ಗೆಳತಿಯರೂ ಸಹ ಆ ದಂಪತಿಯ ಜೊತೆಗಿದ್ದರು. ತರುಣಿಯರ ವೃಂದವನು ಸೆಳೆದದ್ದು ಉದ್ಯಾನವನದಲ್ಲಿದ್ದ ಚಿತ್ತಾಕರ್ಷಕ ಕುಸುಮಗಳು. ಹೂವುಗಳನ್ನು ಕೊಯ್ಯುತ್ತಾ, ಅವುಗಳ ಚೆಲುವನ್ನು ಕಾಣುತ್ತಾ ಸಂಭ್ರಮದಲ್ಲಿದ್ದರು ಆ ಲಲನೆಯರು. 

                                                                                ಹೀಗೆ ಮದನಮಂಜರಿ ಗೆಳತಿಯರ ಜೊತೆಗೆ ಸೊಗಭಾವದಲ್ಲಿ ಕಾಲ ಕಳೆಯುತ್ತಿದ್ದಾಗಲೇ ನಮ್ಮ ಯಾಗದ ಕುದುರೆ ಉದ್ಯಾನವನವನ್ನು ಪ್ರವೇಶ ಮಾಡಿದ್ದು. ಇದ್ದ ಕೋಮಲೆಯರೆಲ್ಲಾ ಬಂದು ಹಯವನ್ನು ಮುತ್ತಿಕೊಂಡರು. ಹಯದ ಹಣೆಯ ಚಿನ್ನದ ಪಟ್ಟಿಯಲ್ಲಿದ್ದ ವರ್ಣಗಳಷ್ಟನ್ನೂ ಶ್ವೇತವರ್ಣ ಸುಂದರಿ ಮದನಮಂಜರಿ ಕುತೂಹಲದಿಂದ ಓದಿದಳು. ವಿಷಯವನ್ನು ತಕ್ಷಣವೇ ಅರುಹಿದ್ದು ಪ್ರಿಯ ರಮಣನಿಗೆ. ಪ್ರವೀರ ಕುದುರೆಯನ್ನು ಕಟ್ಟಿಹಾಕಿದ. ಇದ್ದ ಹೆಂಗಳೆಯರನ್ನೆಲ್ಲಾ ಪಟ್ಟಣಕ್ಕೆ ಕಳುಹಿಸಿದ. ಮಾಹಿಷ್ಮತಿಯ ಸೇನೆಗೆ ವಿಷಯ ತಲುಪಿತು. ನಮ್ಮ ಅಶ್ವಮೇಧ ಯಾಗದ ಅಂಗವಾಗಿ ನಡೆಯಬೇಕಿದ್ದ ಮೊದಲ ಯುದ್ಧಕ್ಕೆ ವೇದಿಕೆ ಸಿದ್ಧಗೊಂಡಿತು.


About The Author

Leave a Reply

You cannot copy content of this page

Scroll to Top