ಕಾವ್ಯ ಸಂಗಾತಿ
“ಆಲದ ಮರ”
ಡಾ ತಾರಾ ಬಿ ಎನ್ ಧಾರವಾಡ


ನೆರಳು ಕೊಡದ ಅಪ್ಪನೆಂಬ
ಆಲದ ಮರ
ನೆರಳು ಕೊಡದಿದ್ದರೂ
ಬೇಸಿಗೆಯ ಬರಡಾಗಿ
ಮಧ್ಯೆ ನಿಂತಿರುವ
ಆಲದ ಮರದಂತೆ
ನಮ್ಮ ಅಪ್ಪ
ಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದು
ಮಳೆಯಿಲ್ಲದೆ ಒಣಗಿ
ಬೇರುಗಳಲ್ಲಿ ನೋವು ಕಟ್ಟಿಕೊಂಡು
ನಿಂತವನು.
ನಮಗೆ ನೆರಳು ಬೇಕಿತ್ತು,
ಅವನಿಗೆ ಮಾತ್ರ
ಆಕಾಶದಷ್ಟು ಹೊಣೆ.
ಮಾತಾಡಲಿಲ್ಲ,
ಅಳಲಿಲ್ಲ,
ತನ್ನ ಹಸಿವನ್ನು
ರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡು
ಬೆಳಗಿನ ಬೆಳಕಿಗೆ
ನಮ್ಮ ಕನಸುಗಳನ್ನು ಎತ್ತಿಕೊಟ್ಟವನು.
ಎಲೆಗಳಿಲ್ಲದ ಕೊಂಬೆಗಳ ಮೇಲೆ
ನಮ್ಮ ನಾಳೆಗಳನ್ನೇ ಕಟ್ಟಿಕೊಂಡು
ಬಿರುಗಾಳಿಗೂ ಎದುರಾಗಿ
ಅಚಲವಾಗಿ ನಿಂತವನು.
ನೆರಳು ಸಿಗದಿದ್ದಕ್ಕೆ
ನಾವು ಅವನನ್ನು ತಪ್ಪು ತಿಳಿದೆವು,
ಆದರೆ
ನೆಲದೊಳಗೆ ಅವನು
ನಮಗಾಗಿ ಹರಿಸಿದ್ದ
ಅದೆಷ್ಟು ಮೌನವಾದ ಶ್ರಮ!
ನೀರಿಲ್ಲದ ಆಲದ ಮರದಂತೆ
ಅವನ ಪ್ರೀತಿಗೂ
ಹೆಸರು ಇರಲಿಲ್ಲ,
ಬಣ್ಣವೂ ಇರಲಿಲ್ಲ,
ಆದರೆ
ಅದು ಜೀವ ಉಳಿಸುವ ಬೇರು.
ಇಂದು ನಾವು
ಎತ್ತರಕ್ಕೆ ಬೆಳೆದಾಗ
ಹಿಂದೆ ನೋಡಿದರೆ
ನೆರಳು ಕಾಣುವುದಿಲ್ಲ,
ಆದರೆ
ನೆಲದೊಳಗೆ ಕೈ ಹಾಕಿದರೆ
ಅಪ್ಪನ ತ್ಯಾಗ
ಇನ್ನೂ ತೇವವಾಗಿಯೇ ಇದೆ.
ನೆರಳು ಕೊಡದ ಅಪ್ಪನೆಂಬ ಆಲದ ಮರ—
ಬೀಳದೆ ನಿಂತು
ಬೇರೂರಿ
ನಮ್ಮ ಬದುಕನ್ನೇ
ತುಂಬಿಸಿಕೊಂಡವನು.
ಡಾ ತಾರಾ ಬಿ ಎನ್ ಧಾರವಾಡ





ಅತ್ಯುತ್ತಮ ಕವನ
ಅಪ್ಪನಿಗೆ ಆಲದ ಮರದ ಹೋಲಿಕೆ ಬಹಳ ಸಮರ್ಪಕ. ಇದೊಂದು ಕವನ
ಇದೊಂದು ಕವನದ ಬದಲು – ಚಂದದ ಕವನ ಎಂದು ಓದಿ
ಸುಮತಿ ನಿರಂಜನ