ಕಾವ್ಯ ಸಂಗಾತಿ
ಎಮ್ಮಾರ್ಕೆ
“ಕೆಂಪಿ(ಕೆಂಡ ನುಂಗಿದವಳು)“


ಬಹುತೇಕ ನಿಮಗನಿಸಬಹುದು
ಮತ್ತೇಕೆ ಬಂದಳೋ ಈ ಕೆಂಪಿ?,
ಹೌದು…ಅವಳಾಗಾಗ ಬರುವವಳೇ,
ಹಳೆ ಮೂಸೆಯಲಿ ಹೊಸತು ಹೊತ್ತು
ಅವಳ ಕಷ್ಟ ಅವಳಿಗಷ್ಟೇ ಗೊತ್ತು
ಇನ್ನೂ ಹಸುಳೆಯವಳು
ಮೊಸಳೆ ಬಾಯ್ಗೆ ಬಿದ್ದವಳು,
ಪರದೇಶಿ ಕೂಸವಳು
ಪರರ ಪಾಲೇ ಆದವಳು,
ಸಾಕುವೆನೆಂದವಳ ಒಯ್ದು
ಯಾರಿಗೋ ಮಾರಿದರು,
ಇಲ್ಲಸಲ್ಲದ ಸಬೂಬು ಹೇಳಿ
ಮೆಲ್ಲ ಮೆಲ್ಲಗೆ ಜಾರಿದರು,
ಮೈಯ ಮಾರಿಕೊಳ್ಳುವವರ
ಮಾರಕಟ್ಟೆಗೆ ದೂಡಿದರು,
ಸ್ವಾರ್ಥಕ್ಕೆ ಕೆಂಪಿಯ ಬಾಳನ್ನೇ
ದಾ(ಗಾ)ಳಕ್ಕೆ ಹೂ(ನೀ)ಡಿದರು
ಬಂದು ಹೋಗುವವರಲ್ಲಿ
ಯಾರೂ ಬಂಧುಗಳಲ್ಲ,
ಮನಬಂದಂತೆ ಭೋಗಿಸಿ
ಕಾಸು ಎಸೆಯುವರಲ್ಲ,
ಬೇಕು ಬೇಡಗಳೆನಿತನು
ಕೇಳುವ ಕಿವಿಗಳಲ್ಲಿಲ್ಲ,
ಕಣ್ಣು,ಕರುಳು ಎರಡೂ
ಅರಿಯುತ್ತಲಿರಲಿಲ್ಲ,
ಹಗಲು ಇರುಳಿಗೂ ಅಲ್ಲಿ
ವ್ಯತ್ಯಾಸವೇ ಇರಲಿಲ್ಲ,
ಯಾಕೆಂದರೆ ‘ಕಾಮ’ಗಾರಿ
ಒಂದು ದಿನವೂ ನಿಲ್ಲಲಿಲ್ಲ
ಉದರವ ಹೊರೆಯಲು
ದರ ನಿಗದಿಯಾಯಿತಲ್ಲ,
ಒಲ್ಲದಿದ್ದರೂ ದೇಹವದು
ಒಗ್ಗಿಕೊಳ್ಳದೇ ವಿಧಿಯಿಲ್ಲ,
ದಣಿದು,ಕುಣಿದು,ಮಣಿದು
ದೇಹದಿ ಏನೂ ಉಳಿದಿಲ್ಲ,
ಕೆಂಡವನೇ ನುಂಗಿದವಳೀಕೆ
ಸೆರಗಿಗೆ ಕಟ್ಟಿಕೊಂಡವಳಲ್ಲ,
ವ್ಯಥೆಯ ಕಥೆ ಹೇಳಲೆಂದೇ
ಹುಟ್ಟಿ ಬಂದಿರುವಳು,
ಆಗಾಗ ತನ್ನೊಡಲ ಕಿಚ್ಚನು
ಕೊಂಚ ಬಿಚ್ಚಿಡುವಳು,
ಸುತ್ತಿ ಸುತ್ತಿ ನೋವಿನತ್ತಲೇ
ಮತ್ತೆ ಹೊರಳುವವಳು,
ಮತ್ತೆ ಬರುವವಳು ಕೆಂಪಿ
ಸದ್ಯಕ್ಕೆ ತೆರಳುವಳು,
ಅಲ್ಲಿಯತನಕ ಅಯ್ಯೋ!
ಪಾಪ…ಎಂದು ಬಿಡಿ
ಎಮ್ಮಾರ್ಕೆ



