ಕಾವ್ಯ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
” ಹೊಸತೇನಿದೆ?”


ಹೊಸತೇನಿದೆ
ಏನಿದೆ ಹೊಸತು ಈ
ಮುಂಜಾವಿನಲ್ಲಿ
ಅದೇ ಹಳೆಯ
ಬಗೆಹರಿಯದ ನೂರು
ಕಂಟಕ ಆತಂಕಗಳು
ರಾತ್ರಿ ಕಚ್ಚಿದ ಕಹಿ ಸುದ್ದಿ
ನಿನ್ನೆಯನೇ ಮತ್ತೆ ಮತ್ತೆ
ಬಿಚ್ಚಿಡುವ ಆ ನಾಳೆಯಲ್ಲಿ…?
ಹೊಸತೇನಿದೆ
ಹೊಸತೇನಿದೆ
ಮುಂದುವರೆದ ಈ ನಿನ್ನೆಯಲ್ಲಿ?
ಯುದ್ಧ ಸಾವು ನೋವು
ಬಡತನ ಹಸಿವಿಗೆ
ತತ್ತರಿಸಿದವರ ನಡುವೆ
ಕುಡಿದು ತೂರಾಡುವವರ ಸಂಭ್ರಮ
ಹೊಸತೇನಿದೆ ?
ಬುದ್ಧ ಬಸವರ ಬೇಸಾಯವೇ
ಮರೆತು ನಿತ್ಯ ಕೊಲೆ ಸುಲಿಗೆಯಲಿ
ಸತ್ಯ ಹುಡುಕುವ ನಾಟಕ
ಮತದಾನ ಮಾಡಲು ಜನರು
ಹೊರಗೆ ಟಿವಿ ಪತ್ರಿಕೆ
ನೆಲದ ಭವಿಷ್ಯ ಬರೆಯುತ್ತಿವೆ
ಹೊಸತೇನಿದೆ?
ಶಾಂತಿ ಸಮತೆ ಸಮಾಧಿಯಾಗಿ
ದಮನಗಳು ಹಿಂಸೆಯೇ ಧರ್ಮವಾಗಿರುವಾಗ
ಕರುಳ ಪ್ರೀತಿಯ ಕೊಯ್ದು
ಎಳೆ ಹಸುಗಳ ಮಾರಣ ಹೋಮ
ಇನ್ನೂ ನಿಂತಿಲ್ಲ
ಹೊಸತೇನಿದೆ ?
ಅದೇ ಜಾತಿ ಮತ ಧರ್ಮಗಳ
ದ್ವೇಷ ಬೀಜ ಬಿತ್ತನೆ
ನಿರುದ್ಯೋಗಿಗಳು ರೀಲ್
ಮಾಡುತ್ತಿದ್ದಾರೆ
ಭಜಿ ಮಾರುತ್ತಿದ್ದಾರೆ
ಸೂರ್ಯನ ದಿನಚರಿಯೇ
ಇರುಳ ಉಸ್ತುವಾರಿಯಲ್ಲಿರುವಾಗ..
ಮುಂಜಾನೆಯ ಮುಂಗೋಳಿಗಳು
ಹೊರಡಿಸುತ್ತವೆ ಫರ್ಮಾನು
ಅವರ ಹೇಳಿಕೆಯಂತೆ ಬದುಕ ಬೇಕು
ಹೊಸತೇನಿದೆ?
ಮುಂದುವರೆದ ಆ ನಿನ್ನೆಯಲ್ಲಿ…?
ವಿಶ್ವ ನಾಯಕನಾಗುವ ಬಯಕೆ
ಸತ್ತ ಹೆಣಗಳ ಗೋರಿಯ ಮೇಲೆ
ಸಾಮ್ರಾಟನ ಸಮೃದ್ಧಿ ಅಟ್ಟಹಾಸ
ಹೊಸತೇನಿದೆ?
ಕರಾಳ ಮುಖ ಸವರಿ
ಕದ್ದು ಮುಚ್ಚಿಡುವ
ಕನ್ನಡಿಗಳು ಇರುವತನಕ
ನಂಜಿನ ಕೀವು ನೆತ್ತಿಗೇರಿ
ಕಣ್ಣು ಮಂಜಾಗಿರುವ ತನಕ..
ವಿಶ್ವಾಸ ಮೂಡಿಸದ
ಸಾಹಿತ್ಯವಿರುವ ತನಕ
ಸುತ್ತುತ್ತಲೇ ಇರುವ
ಗಂಡು ಜೋಗುತಿಯರ ಮೆರವಣಿಗೆ
ಚಕ್ರವ್ಯೂಹ ಬೇಧಿಸದ ತನಕ..
ಏನಿದೆ ಹೊಸತು?
ಹೊಸತೇನಿದೆ?
ನಾಳೆಯಾಗದ ಈ ನಿನ್ನೆಯಲ್ಲಿ ?
ಮಂದಿರ ಮಸೀದಿ ಚರ್ಚ
ಬಸದಿ ವಿಹಾರಗಳು ಬೆಪ್ಪನೆ ಮಲಗಿವೆ
ಕಾವಿ ಬುರ್ಖಾಗಳ ಕಾದಾಟ
ಹಲಾಲ್ ಬಾಡೂಟ
ಹತ್ತಿ ಉರಿಯುತ್ತಿದೆ ದೇಶ
ಹೊಸತೇನಿದೆ ?
ಮತ್ತೆ ಹೊರಗೆ ಸಜ್ಜಾಗಿವೆ
ಮೊಹಲ್ಲಾಗಳ ಮುಂದೆ
ಭುಸುಗುಟ್ಟುತ್ತಿರುವ
ಬುಲ್ದೊಜರ್ ಭೀತಿಯ
ಮತ್ತೊಂದು ಕ್ರೂರ ದಿನದಲ್ಲಿ ..
ಹೊಸತೇನಿದೆ?
ಕೇರಿಯಲೆಂದೂ ಕಾಲಿಡದ
ಗ್ರಹಣ ಸೂರ್ಯನ ನಡಿಗೆಯಲ್ಲಿ..
ಭಾನುವಾರಗಳೇ ಇರದ
ತಾಯಂದಿರರ ಕ್ಯಾಲೆಂಡಿರಿನಲ್ಲಿ …
ಹೊಸತೇನಿದೆ?
ಮುಂದುವರೆದ
ನಿನ್ನೆಯ ಆ ಹಳೆಯ ಕಥೆಯಲ್ಲಿ ?
ಮನೆ ಚಾವಡಿಯಲ್ಲಿ ಮಾತು
ಒಳಗೆ ಒಲೆಗೆ ತೂತು
ನಡುಮನೆಯಲ್ಲಿ
ಮನು ಸಂತಾನ
ಸೈತಾನನ ಹಿರಿತನದಲಿ
ಮಂತ್ರ ಪೂಜೆ ಘೋಷಣೆ
ಹೊಸತೇನಿದೆ ?
ಈ ಬೆಳಗಲ್ಲಿ ಮತ್ತೆ
ಅದೇ ಹಳೆಯ ಪುಸ್ತಕದ
ಹೊಸ ಭರವಸೆ ಹಳಸಲು
ಕನಸು ಕುಣಿಯುತಿವೆ
ಮತ್ತೊಂದು ಅಧ್ಯಾಯದಲಿ.
ಮಂಕಾಗಿವೆ ವಚನ
ಹೊಸತೇನಿದೆ ಇಂದು ಮತ್ತೆ?
ಇರುಳ ಮರುಳಿಲ್ಲದ ಹೊಸ
ಬೆಳಕು ಬೇಕೀಗ ನಮ್ಮ ನಡುವೆ
ಕರಾಳ ಕತ್ತಲ ಜೊತೆ
ಒಳಒಪ್ಪಂದವಲ್ಲ
ದರ್ಪಿಗೆ ಬೆದರಿ ಮುದುರಿ
ಕುಳಿತುಕೊಳ್ಳುವುದಲ್ಲ.
ಹೊಸತೇನಿದೆ?
ಹತ್ತಿಕ್ಕುವ ತುಳಿಯುವ
ದಮನಗಳ ಯುಗ
ಯುಗಾಂತವಾಗಬೇಕೀಗ
ವೇಷ ಮರೆಸಿದ ವರ್ಷಾಂತವಲ್ಲ
ರಾತ್ರಿ ಕಂಠ ಪೂರ್ತಿ ಕುಡಿದು
ತೂರಾಡುವದಲ್ಲ
ಹೊಸ ಸೂರ್ಯನ ಸಂಕ್ರಮಣಕ್ಕೆ
ಸಿದ್ಧಾವಾಗ ಬೇಕು
ಸಮತೆ ಮಮತೆಗಳ ಹಣತೆ
ಹಚ್ಚ ಬೇಕು
ತ್ಯಾಗ ಬಲಿದಾನಗಳ ತೈಲ ಸುರಿದು
ಬೆಳಗ ಬೇಕು ಭಾರತ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ವಾಸ್ತವಿಕ ನೆಲೆಗಟ್ಟಿನ ಕವನ
ಸಮತೆ ಮಮತೆಗಳ ಹಣತೆ ಹಚ್ಚಿ ಭಾರತವನ್ನು ಬೆಳಗಬೇಕು ….
ನಿಜ ಅದೇ ಹೊಸತು…..
ಅಕ್ಕಮಹಾದೇವಿ
ಅಬ್ಬಾ! ಕವನ ಓದುತ್ತಿದಂತೆ ರೋಮಾಂಚನವಾಗಿ ನಡುಕ ಉಂಟಾಯಿತು. ಸತ್ಯವನ್ನು ಬರೆಯಲು ಧೈರ್ಯ ಬೇಕು, ಆ ಧೈರ್ಯ ದಿಟ್ಟ ಹೋರಾಟಗಾರರಾದ ಪಟ್ಟಣ ಸರ್ ಅವರಲ್ಲಿ ಮಾತ್ರ ಇರುವುದು.
ತುಂಬಾ ಮರ್ಮಿಕ ಕವನ ಸರ್
ಮಾರ್ಮಿಕವಾದ ಸತ್ಯ…ವಾಸ್ತವವನ್ನು ಅರಗಿಸಿಕೊಳ್ಳುವುದು ಕಷ್ಟ…
ಅತ್ಯಂತ ಕಳಕಳಿಯಿಂದ ಕೂಡಿದ ಕವನ…ಸರ್
ಬದಲಾಗಬೇಕು ನಮ್ಮ ಸುತ್ತಮುತ್ತಲಿನ ಜನರು ಎನ್ನುವ ಮನೋಭಾವನೆಯಿಂದ ಕೂಡಿದ ಕವನವನ್ನು ಮತ್ತೆ ಮತ್ತೆ ಓದಬೇಕು… ಒಳಗಣ ಹೂರಣ ತಿಳಿಯಲು… ಅರ್ಥೈಸಿಕೊಳ್ಳಲು…
ಒಂದೊಳ್ಳೆಯ ಅರ್ಥವತ್ತಾದ
ಕವನ… ಸಾಮಾಜಿಕ ನೆಲೆಗಟ್ಟುಗಳನ್ನು ಅರಿಯುವಲ್ಲಿ… ಅದರ ಮೇಲೆ ಬೆಳಕು ಚೆಲ್ಲುವಲ್ಲಿ… ನಮ್ಮನ್ನು ನಾವು ವಿಶ್ಲೇಷಣೆ ಮಾಡಿಕೊಳ್ಳುವಲ್ಲಿ ಸಮಾಜಕ್ಕೆ ಒಂದು ಸಂದೇಶವನ್ನು ಹೊತ್ತು ತಂದಿದೆ… ಕೊನೆಯಲ್ಲಿ ಸಮತೆ ಮಮತೆಗಳ ಹಣತೆ ಹಚ್ಚಿ, ತ್ಯಾಗ, ಬಲಿದಾನಗಳ ತೈಲ ಸುರಿದು ಬೆಳಗಬೇಕು ಭಾರತ ಎನ್ನುವ ಅಭಿಮಾನ ಕವನದ ಸಾರವನ್ನು ಎತ್ತಿ ಹಿಡಿಯುತ್ತದೆ… ಬರೆಯಬೇಕು
ಇಂತಹ ಕವನಗಳನ್ನು ಎಲ್ಲರನ್ನೂ ಎಚ್ಚರಿಸುವ ಸಲುವಾಗಿ… ಸಮಾಜದ ಉದ್ಧಾರಕ್ಕಾಗಿ…
ಸುಧಾ ಪಾಟೀಲ
ಬೆಳಗಾವಿ
ಹೊಸತು ಏನೂ ಇಲ್ಲ ಸರ್, ಕ್ಯಾಲೆಂಡರ್ ನ ಹಾಳೆ ಬದಲಾಗುತ್ತವೆ, ಇಸ್ವಿ ಬದಲಾಗುತ್ತದೆ, ಎಲ್ಲಾ ಯಥಾ ಪ್ರಕಾರ, ತಮ್ಮ ಕವನ ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ
ಹೊಸತೇನಿದೆ ? ಎಲ್ಲವೂ ನಿನ್ನದೇ,ಅದೇ ಹಳೆಯ ವಿಷಯಗಳು ನಿಜಕ್ಕೂ ಸತ್ಯ ಸರ್ ನಿಮ್ಮ ಕವನ ಅದ್ಭುತ…
ಹೋಸತೆನಿಲ್ಲ,ಹಾಡು ಹಳೆಯದಾದರೂ ಭಾವ ನವನವಿನ ,ಮನ ನಮ್ಮದು ,ಚಿಮ್ಮಿಸೋಣ ಪನ್ನೀರ ಚಿಲುಮೆ ಹರಿಸೋಣ ಜಗದಿ ಸುಗಂಧ ಸುವಾಸನೆಯ ಹೋಸ ಭಾವಗಳ ,ಇರುಳು ಸಹಜ ಕಾಯೋಣ ಸೋರ್ಯೊದಯದ ಹೊಂಬೆಳಕಿಗೆ ,ಹೊಂದಿಕೋಳ್ಳೋಣ ಬಿಡದೆ ಬರುವ ಇರುಳಿಗೆ ಬಾಡದ ಹೂ ಮನದಿ.
ಅತ್ಯುತ್ತಮ ಕವನ ಸರ್ ಹೊಸ ಅಭಿವ್ಯಕ್ತಿ ಹೊಸ.ಕಾವ್ಯ ಪ್ರಯೋಗ
ಹೊಸ ವರ್ಷದ ಹೊಸ ಬಗೆಯ ಕವನ ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಅಭಿವ್ಯಕ್ತಿಯಾಗಿದೆ
ಸುಂದರ ಪ್ರಜ್ಞೆ ಮತ್ತು ಕಾವ್ಯ ಸೃಷ್ಟಿ
ಎಷ್ಟು ಸುಂದರ,ಮಾರ್ಮಿಕವಾಗಿ ಬರೆದಿರಿ.. ಸರ್
ಅರ್ಥಪೂರ್ಣ ಕಾವ್ಯ ಸರ್
ಹೊಸ ವರ್ಷದ ಹೊಸ ಪ್ರಯೋಗ ನಿಮ್ಮ ಕಾವ್ಯ ಶೈಲಿ ಸರ್
ಅತ್ಯಂತ ಅಪರೂಪದ ಪ್ರಬುದ್ಧ ಮನಮುಟ್ಟುವ ಕವನ ಸರ್