ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೃಷ್ಣನೂರಿನ ವೈಭವವನ್ನು ಕಣ್ಣಾರೆ ಕಾಣುತ್ತಾ, ಮನಸಾರೆ ಮೆಚ್ಚುತ್ತಾ ಹಾಗೆಯೇ ಮುಂದೆ ಮುಂದೆ ನಡೆದುಬಂದ ಭೀಮ. ಮಾಧವನ ಕೀರ್ತಿಯನ್ನು ತಿಳಿದು, ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವುದಕ್ಕಾಗಿ ದ್ವಾರಕೆಗೆ ಬಂದಿದ್ದ ವಿವಿಧ ವಿದ್ವಜ್ಜನರ ಸಮೂಹ ಅಲ್ಲಿತ್ತು. ವೈನೋದಿಕವಾದ ಕ್ರೀಡೆಗಳ ಮೂಲಕ ಮನರಂಜನೆಯನ್ನು ಪಡೆಯುವ ಆಸಕ್ತ ಜನ ಅಲ್ಲಿದ್ದರು. ಟಗರುಗಳ ಕಾಳಗ, ಕೋಳಿ ಅಂಕ, ಪಕ್ಷಿಗಳ ಕಾದಾಟ, ಕಪ್ಪು ಕುದುರೆಗಳ ಸೆಣಸಾಟ, ಪಗಡೆಯಾಟ ಮೊದಲಾದವುಗಳು ನಡೆಯುತ್ತಿದ್ದವು. ಜೂಜುಕೋರರಿದ್ದರು. 

     ರಾಜಕುವರರು ತಮ್ಮ ತನುವಿಗೆ ಲೇಪಿಸಿಕೊಂಡು ನೆಲದ ಪಾಲಾಗಿದ್ದ ಪರಿಮಳದ ಧೂಳಿಯನ್ನು ಸೊಕ್ಕಿನ ಆನೆಗಳು ತಮ್ಮ ಮೈಮೇಲೆರಚಿಕೊಂಡು ಸಂಭ್ರಮಿಸುತ್ತಿದ್ದವು. ಅಳಿದುಳಿದ ಲೇಪನಗಳಿಂದಲೇ ಆನೆಗಳಿಗೆ ಸೊಗವೀಯುವಷ್ಟರಮಟ್ಟಿಗೆ ಸಮೃದ್ಧವಾಗಿತ್ತು, ಸಂಪದ್ಭರಿತವಾಗಿತ್ತು ಆ ಕೃಷ್ಣನಗರಿ. 

     ತನ್ನ ಒಡಲಲ್ಲಿ ನೆಲೆಸಿದ್ದ ಮಹಾವಿಷ್ಣು ಶ್ರೀಕೃಷ್ಣನಾಗಿ ದ್ವಾರಕೆಯನ್ನು ಸೇರಿಕೊಂಡಾಗ ತಾನು ಅವನಿಗಿಂತಲೂ ಮೊದಲು ಅಲ್ಲಿರಬೇಕೆಂಬ ಭಾವದಿಂದ ಹಾಲಿನ ಕಡಲು ಚಿನ್ನಸಹಿತವಾಗಿ ದ್ವಾರಕೆಯನ್ನು ತಲುಪಿರುವಂತೆ ದಿವ್ಯ ಶ್ರೀಕೃಷ್ಣನಿರುವ ಆ ಭವ್ಯ ಅರಮನೆ ತೋರುತ್ತಿತ್ತು. ರಥದಿಂದಿಳಿದ ಭೀಮ ಅರಮನೆಯನ್ನು ಪ್ರವೇಶಿಸುವ ಆ ಗಳಿಗೆಯಲ್ಲಿ ಪುಳಕಿತನಾದ. ಮನ್ಮಥನನ್ನೇ ಮಗನಾಗಿ ಪಡೆದವನು ಶ್ರೀಕೃಷ್ಣ. ಸೊಬಗಿನಿಂದ ಭೂಮಿಯನ್ನಾಳುವವನು ಶ್ರೀಕೃಷ್ಣ. ರಾಜರ ಪಾಲಿನ ಭಾಗ್ಯ ಶ್ರೀಕೃಷ್ಣ. ಅಂತಹ ಘನಶ್ಯಾಮನಿದ್ದ ಆ ಅರಮನೆಯ ವಿಸ್ತಾರ ವೈಭೋಗದ ವರ್ಣನೆ ಸಹಜವಾದ ಅಕ್ಷರಸಮೂಹಗಳಿಗೆ, ಪದಪುಂಜಗಳಿಗೆ ನಿಲುಕುವಂಥದ್ದಲ್ಲ. ಮಣಿಗಳ ತೋರಣಗಳಿಂದ ಕಾಂತಿ ಪಡೆದಿದ್ದ ಆ ಅರಮನೆ ಭೀಮಸೇನನ ಕಣ್ಣಿಗೆ ರಮಣೀಯವಾಗಿ ತೋರಿತು. 

    ಶ್ರೀಕೃಷ್ಣನ ಜೊತೆ ಭೀಮನಿಗಿದ್ದ ಸಲುಗೆ ಅವನ ವರ್ತನೆಯಲ್ಲಿ ಕಾಣಿಸಿತು. ತಡೆಯುವರಿಲ್ಲ ತನ್ನನ್ನಿಲ್ಲಿ ಎಂಬಂತೆ ಅರಮನೆ ದ್ವಾರವನ್ನು ದಾಟಿ ಮುಂದೆ ಹೋದ. ಅಲ್ಲಲ್ಲಿ ದ್ವಾರಪಾಲಕರು ನಿಂತಿದ್ದರು. ಯಾರ ತಡೆಯೂ ಉಂಟಾಗಲಿಲ್ಲ ಭೀಮ ನಡಿಗೆಗೆ. 

   ದ್ವಾರಕಾಪುರಿಯ ಅರಮನೆಯನ್ನು ಭೀಮ ಹೊಕ್ಕ ಸಮಯವದು ಶ್ರೀಕೃಷ್ಣ ಭೋಜನದ ಗಳಿಗೆ. ದಿವ್ಯಾಸನ ಸ್ಥಿತಿಯಲ್ಲಿ ಭೋಜನಶಾಲೆಯಲ್ಲಿ ಶ್ರೀಕೃಷ್ಣ ಕುಳಿತಿದ್ದ. ಚಿನ್ನದ ತಟ್ಟೆಗಳ ಸಾಲು ರತ್ನದ ದೀಪಗಳ ಬೆಳಕಿನಲ್ಲಿ ಅತಿಯಾಗಿಯೇ ಮಿಂಚುತ್ತಿದ್ದವು. ಮುರಾರಿಯ ಎಡ ಬಲದಲ್ಲಿ ಬಾಂಧವರು, ಆಪ್ತೇಷ್ಟರು. ದೇವಮಾತೆಯರೆನಿಸಿಕೊಂಡ ದೇವಕಿ ಯಶೋದೆಯರು ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಿದ್ದರು. ಅಕ್ಕಪಕ್ಕದಲ್ಲಿದ್ದ ರಾಣಿಯರು ಚಾಮರ ಬೀಸಣಿಗೆಗಳನ್ನು ಬೀಸುತ್ತಾ ಹರಿಚಿತ್ತವನು ಮುದಗೊಳಿಪ ಕೈಂಕರ್ಯದಲ್ಲಿದ್ದರು. ದೇವತೆಗಳು ಕಥೆ ಆಲಾಪಗಳ ಮೂಲಕ ಮೋಹನ ಮುರಳಿಯ ಮನ ತಣಿಸುತ್ತಿದ್ದರು. 

  ದೇವಭೋಜನವದು. ವರ್ಣಿಸಲಸದಳವಾದ ಬಗೆಯಲ್ಲಿ ಭರಪೂರ ಭೋಜನ ನಡೆಯುತ್ತಿತ್ತು. ಹೊನ್ನಿನ ಹರಿವಾಣ. ಚಿನ್ನದ ತಟ್ಟೆ. ಶಾಲ್ಯನ್ನ. ಸಾರಿನ ಮೇಲೆ ತುಪ್ಪ. ಎರಡೆರಡು ಬಗೆಯ ಪಾಯಸಗಳು. ಜೇನು ಸಕ್ಕರೆಗಳ ಸವಿ. ಭೋಜನದ ಮೌಲ್ಯವನ್ನು ಮೇಲುಮೇಲಕ್ಕೇರಿಸುವ ಮೇಲೋಗರ. ಮಾವಿನಹಣ್ಣಿನ ರಸಾಯನವಿತ್ತು. ಉಪ್ಪುಗಾಯಿ ಇತ್ತು. ತರಕಾರಿ ಹಣ್ಣುಗಳು ಬಗೆಬಗೆಯ ಸ್ವರೂಪದಲ್ಲಿ ಮೇಳೈಸಿದ್ದವು. ಹೀಗಿತ್ತು ಶ್ರೀಹರಿಯ ಭವ್ಯಭೋಜನದ ಆ ದೃಶ್ಯ. ಭಕ್ಷ್ಯಪ್ರಿಯನಾದ ಶ್ರೀಕೃಷ್ಣ ಬಡಿಸಿದ ಎಲ್ಲವನ್ನೂ ಸಂತಸದಿಂದ ಸೇವಿಸುವುದರೆಡೆಗೆ ಗಮನ ನೀಡಿದ್ದನು. 

    ಮೋಹಿನಿ ವೇಷವನ್ನು ತಾಳಿ ದೇವತೆಗಳಿಗೆ ಮಾತ್ರವೇ ಅಮೃತವನ್ನು ಉಣಿಸಿದವನು ಶ್ರೀಕೃಷ್ಣ. ಸಕಲ ಯಾಗಗಳಲ್ಲಿ ಹವಿಸ್ಸನ್ನು ಸ್ವೀಕರಿಸಿ ಯಾಗ ನಡೆಸಿದವರಿಗೆ ಫಲವನ್ನು ಕರುಣಿಸುವವನು ಶ್ರೀಕೃಷ್ಣ. ಹೀಗೆ ಉಣಿಸಿ ಉಣುವುದರಲ್ಲಿ ಸಂತೃಪ್ತಿ ಪಡೆವ ಅರವಿಂದಲೋಚನ ಶ್ರೀಕೃಷ್ಣ ಅಂದು ಭೀಮ ಅರಮನೆಗೆ ಕಾಲಿಟ್ಟ ಆ ಕ್ಷಣದಲ್ಲಿ ಬಗೆಬಗೆಯ ಅಡುಗೆಯ ಗತ್ತು ಗಮ್ಮತ್ತಿನಲ್ಲಿ ಸೊಗವನ್ನು ಕಂಡುಕೊಂಡಿದ್ದನು. ಬಡಿಸಿದ್ದನ್ನು ಯಾವುದನ್ನೂ ವ್ಯರ್ಥಮಾಡದೆ ಸಂತಸದಿಂದ ಎಲ್ಲದರ ಸವಿನೋಡುವ ಸೊಗಸಿನಲ್ಲಿದ್ದನು ಶ್ರೀಹರಿ. 

    ಹೀಗೆ ಸೊಬಗಿನಿಂದ ಶ್ರೀಕೃಷ್ಣ ಭೋಜನವು ಸಾಗುತಿರಲು ಮನದಿನಿಯನನ್ನು ಮನಸಾರೆ ಛೇಡಿಸುವ ಬಯಕೆಯಾಯಿತು ಸತ್ಯಭಾಮೆಗೆ. “ಮನೆಮನೆಗಳಿಗೆ ಕಳ್ಳನಂತೆ ಹೋಗಿ ಬೆಣ್ಣೆ ಹಾಲು ಮೊಸರುಗಳನ್ನು ಕದ್ದು ತಿನ್ನುತ್ತಿದ್ದವರು ನೀವು. ಗೋಪಾಲರ ಕೈತುತ್ತನ್ನು ತೆಗೆದು ಉಣ್ಣುತ್ತಿದ್ದವರು ನೀವು. ಅದಾದ ಮೇಲೆ ಹಳ್ಳಿಯನ್ನು ತೊರೆದು ಪಾಂಡವರ ಕೂಟವನ್ನು ಸೇರಿದ ಮೇಲೆ ಭಾಗ್ಯ ನಿಮ್ಮದಾಯಿತು. ಇಂದು ರಾಜಭೋಜ್ಯವನ್ನು ಹೊಂದುವ, ಊಟದ ಮಧ್ಯೆ ಮಧ್ಯೆಯೇ ಮುದ್ದು ಪಡೆಯುವ ಅದೃಷ್ಟ ನಿಮ್ಮದಾಗಿದೆ. ಇದು ನಿಜಕ್ಕೂ ಚೋದ್ಯ” ಎಂದಳು ಜಾಣಚೋರನ ಜೋರಿನ ಮಡದಿ ಸತ್ಯಭಾಮೆ, ನಗುವ ಬೀರುತ್ತ. 

    ಸೊಸೆಯ ಮಾತು ಹಿಡಿಸದಾಯಿತು ದೇವಕಿಗೆ. “ಸೆರೆವಾಸದಲ್ಲಿದ್ದ ನಾನು ಬಂಧಮುಕ್ತಳಾದದ್ದು ಇವನ ದೆಸೆಯಿಂದ. ಇವನು ಬರಿಯ ಮಾನವನಲ್ಲ. ದೇವರು. ಜಗದ್ಗುರು. ಇವನನ್ನು ಜರಿಯದಿರು. ಸಹವಾಸದಿಂದುದಯಿಸಿದ ಸಲುಗೆಯಲ್ಲಿ ಸದರದ ನುಡಿ ಬೇಡ” ಎಂದು ಅಬ್ಬರಿಸಿದಳು ದೇವಕಿ. 

    ಅತ್ತೆಯ ಮಾತಿಗೆ ಪ್ರತಿಯಾಡಿದ ಸತ್ಯಭಾಮೆ ಶ್ರೀಕೃಷ್ಣನಿಗೊದಗಿದ ದುರವಸ್ಥೆಯನ್ನು ಮುಂದಿಟ್ಟುಕೊಂಡು ಬಗೆಬಗೆಯ ಪ್ರಶ್ನೆಗಳನ್ನು ಕೇಳಿದಳು. ಶ್ರೀಕೃಷ್ಣನ ದೈವತ್ವವನ್ನೇ ಧಿಕ್ಕರಿಸುವ ದಿಟ್ಟತೆಯನ್ನು ತೋರಿದಳು. 

     ಅವಳ ಪ್ರಶ್ನೆಗಳಿಗೆ ತನ್ನಲ್ಲಿ ಉತ್ತರವಿದೆ ಎಂಬಂತೆ ನಗುತ್ತಾ ಉತ್ಸಾಹದಿಂದ ಮುಂದೆ ಹೋದ ಭೀಮ. ಆದರೆ ಅಲ್ಲಿದ್ದ ಸೇವಕರು ಅವನನ್ನು ತಡೆದರು. ಊಟದ ಸಮಯಕ್ಕೆ ಹೀಗೆ ಒಳನುಗ್ಗುವುದು ಸರಿಯಲ್ಲ ಎಂಬ ಎಚ್ಚರಿಕೆಯನ್ನು ದ್ರೌಪದಿಯೂ ನೀಡಿದಳು. 

    ತನ್ನನ್ನು ತಡೆದವರ ಮೇಲೆ ಮರುಕ್ಷಣವೇ ಮುನಿಸಿಕೊಂಡ ಮಾರುತಸುತ. ಉಳಿದವರೆಲ್ಲರೂ ಶ್ರೀಕೃಷ್ಣನ ಬಳಿಯಲ್ಲೇ ಇರುವಾಗ ತನ್ನನ್ನು ಮಾತ್ರ ದೂರ ಇಟ್ಟರೇಕೆ ಎಂಬ ಭಾವ ಅವನಲ್ಲಿ ಹುಟ್ಟುಹಾಕಿದ ಕೋಪವದು. ಪ್ರೀತಿಪಾತ್ರರ ಸಾಮಿಪ್ಯವನ್ನು ಪಡೆಯಲಾರದ ಕ್ಷಣದಲ್ಲಿ ಉಕ್ಕಿಬರುವ ಕ್ರೋಧವದು. 

    ಭೀಮನ ಶಿಶುಸಮಾನ ಮುನಿಸನ್ನು ಮನವರಿಕೆ ಮಾಡಿಕೊಂಡ ಮಾರುತಿಪ್ರಿಯ ಮಾಧವ. ಮುಗುಳುನಕ್ಕ. ತನ್ನ ಬಳಿಗೆ ಕರೆಸಿಕೊಂಡ. ತನ್ನ ಜೊತೆಗೆಯೇ ಕುಳ್ಳಿರಿಸಿ ಭೋಜನವನ್ನು ಮಾಡಿಸಿದ ಭೀಮಸೇನನಿಗೆ. ಭೀಮನೊಡಲದು ಸಂತೃಪ್ತವಾಯಿತು. ಊಟ ಮುಗಿದ ಮೇಲೆ, ಅಶ್ವಮೇಧ ಯಾಗದ ಆರಂಭಕ್ಕೆ ಕರೆದೊಯ್ಯಲು ಬಂದಿದ್ದೇನೆ ಎಂದು ಶ್ರೀಕೃಷ್ಣನಲ್ಲಿ ಹೇಳಿದ ಅನಲಸುತ. 


About The Author

Leave a Reply

You cannot copy content of this page

Scroll to Top