ಪುಸ್ತಕ ಸಂಗಾತಿ

ಆಲದ ನೆರಳು

ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಕತೆಗೆ ಬೇಕಾದ ವಸ್ತು, ಅದರಲ್ಲಿ ತುಂಬಿಕೊಳ್ಳುವ ಪಾತ್ರಗಳು, ಪ್ರಾದೇಶಿಕ ಭಾಷೆಯ ಸೊಗಡು,ಅದರ ನಿರ್ವಹಣೆ, ಅನಿರೀಕ್ಷಿತ ತಿರುವುಗಳು, ಕಾಡುವ ಪಾತ್ರಗಳ ಹೆಣಿಗೆ, ಕೃತಕತೆಯಲ್ಲೂ ಮೈಮರೆಯದ ವಾಸ್ತವೀಕತೆ… ಇವುಗಳಿಂದ ಮಧುರಾ ಅವರು ಕತೆಗಳ ಮೂಲಕ ನಮ್ಮನ್ನು ಬಂಧಿಸಿಡುವಲ್ಲಿ ಯಶಸ್ವಿ ಆಗಿದ್ದಾರೆ.

ಆಲದ ನೆರಳು – ಪುರುಷ ಪ್ರಧಾನ ಸಮಾಜದಲ್ಲಿ ಎರಡು ಹೆಣ್ಣು ಜೀವಗಳು ಸಾಂಸ್ಕೃತಿಕವಾಗಿ ನಲುಗಿ,ಕೊರಗಿ ಹೋಗುವ ಕಥಾ ಹಂದರ ಹೊಂದಿದೆ. ‘ ಬರೀ ನೆರಳಿದ್ರೆ ಉಳಕಿ ಗಿಡಗೋಳು ಬೆಳ್ಯೋದೆ ಇಲ್ಲ. ಸ್ವಲ್ಪ ಬೆಳಕು, ಬಿಸಿಲು ಬರ್ಲಿ. ಅಂದ್ರ ಬ್ಯಾರೇ ಗಿಡಗೋಳು ಬೆಳಿತಾವ’.ಇದು ಇಡೀ ಕಥೆಯ ಧ್ವನಿ ಹಾಗೂ ಸತ್ವಯುತವಾದ ಭಾಗ.

ಅನಾವರಣ – ಕೇದಾರನಾಥ ಯಾತ್ರೆಗೆ ಹೋದ ದಂಪತಿಗಳು ಪ್ರಕೃತಿ ಅವಘಡಕ್ಕೆ ಸಿಲುಕುವುದು. ಆಗ ಅವರ ಢೋಲಿ ಹೊತ್ತವನು, ಅವನ ಪುಟ್ಟ ಡೇರೆ ಮನೆಯಲ್ಲಿ ಉಳಿಸಿಕೊಂಡು ಉಪಚರಿಸುವುದು. ಬಡತನದ ಆ ಕುಟುಂಬ ಇವರನ್ನು ಆದರಿಸುವ ರೀತಿ. ಗಂಡ, ತಾವು ಉಳಿಯುವುದು ಕಷ್ಟ ಎಂದಾಗ ಮಾಡುವ ವರ್ತನೆ. ಬದುಕಿ ಮರಳಿ ಹೊರಟಾಗ ಬದಲಾಗುವ ಅವನ ಚರ್ಯೆ. ಎಲ್ಲಕ್ಕಿಂತ ಮುಖ್ಯವಾಗಿ ಕೊನೆಯಲ್ಲಿ ಲೇಖಕಿ ಕಥೆಯನ್ನು ನಿಭಾಯಿಸಿದ ರೀತಿ ಗಮನ ಸೆಳೆಯುತ್ತದೆ.

ಅಕ್ಕಮ್ಮ – ಕತೆಯೊಳಗೊಂದು ಕತೆ, ಅದರಲ್ಲಿ ಉಪಕಥೆ ಅನ್ನುವಂತೆ ತಿರುವು ಪಡೆಯುವ ಕತೆಯಿದು. ಕತೆ ಹೇಳುವವನೇ ಇಲ್ಲಿ ದುರಂತ ನಾಯಕ. ಅವನೇ ಅವನಜ್ಜ ಅಮ್ಮನ ಮೇಲೆ ಬಲಾತ್ಕಾರ ಮಾಡಿ ಹುಟ್ಟಿದ ಮಗ. ನೈತಿಕತೆ ಮಾಯವಾಗಿ, ನಂಬಲಸಾಧ್ಯ ಅನ್ನಿಸುವ ಕಥೆಗೆ ಓದುಗರೂ ಸಾಕ್ಷಿಯಾಗುವುದರ ಜೊತೆಗೆ ಕಸಿವಿಸಿಗೂ ಒಳಗಾಗುವುದು ಖಚಿತ.

ನೆಲದ ಅಂಚು – ಗ್ರಾಮ ಮತ್ತು ನಗರದ ಬದುಕನ್ನು ಒಟ್ಟುಗೂಡಿಸುತ್ತಲೇ ಮಧ್ಯಮ ವರ್ಗದ ಆಸೆ, ದುರಾಸೆ, ಕನಸನ್ನು ಹೊರಹಾಕುವ ಈ ಕಥೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸಂದೇಶವನ್ನು ನೀಡುತ್ತದೆ.

ಪಲಾಯನ- ಬದಲಾದ ಕಾಲಘಟ್ಟದಲ್ಲಿ ಮತ್ತು ನಗರೀಕರಣದ ಪರಿಣಾಮವಾಗಿ ಎಲ್ಲವೂ ಕೃತಕ.ಹಳ್ಳಿಯ ಸೊಗಡಿನ ವಸ್ತು, ರೈತರ ಕಷ್ಟ, ಆರ್ಥಿಕ ಸ್ಥಿತಿಯನ್ನು, ಮಾನಸಿಕ ತೊಳಲಾಟವನ್ನು ಗ್ರಾಮೀಣ ಹಿನ್ನೆಲೆಯಲ್ಲಿ ಸಹಜವಾಗಿ ಮಧುರಾ ಅವರು ಕಟ್ಟಿಕೊಟ್ಟಿದ್ದಾರೆ.

ಇವುಗಳ ಜೊತೆಗೆ ಇತರ ಕಥೆಗಳೂ ಸಹ ಮಹತ್ವದ ಕಥೆಗಳು. ಆದರೆ ಇಲ್ಲಿನ ಮಿತಿಯಲ್ಲಿ ಇಷ್ಟನ್ನು ಹೇಳಿದ್ದೇನೆ.
ಆಲದ ನೆರಳು ಕೃತಿಯನ್ನು ಒಮ್ಮೆ ಓದಿ.
****

ಡಾ. ಅಜಿತ್ ಹರೀಶಿ

Leave a Reply

Back To Top