ಕಾವ್ಯ ಸಂಗಾತಿ
ರಾಜು ಪವಾರ್
ಹನಿಗಳು


ಗಾಂಧಿ
ಬಟ್ಟೆ ಕಳಚಿ
ಕೈಯಲ್ಲೊಂದು ಕೋಲು ಹಿಡಿದರೆ ಸಾಕು ಗಾಂಧಿಯಾಗುತ್ತೆವೆಂದರು !
ಬಟ್ಟೆ ಕಳಚಿದಷ್ಟು ಸುಲಭವಲ್ಲ ಗಾಂಧಿಯಾಗುವುದು,
ಗಾಂಧಿಯಾಗಹೊರಟವರು
ಜಗತ್ತಿನ ಮುಂದೆ ಬೆತ್ತಲಾದರು !!
ಕಿಂಡಿಯಲ್ಲಿ….
ಸರ್ವರಿಗೂ ಬೆಳಕ ನೀಡುವವಗೆ
ಕಟ್ಟು ಪಾಡುಗಳಲ್ಲಿ ಕಟ್ಟಿ
ಗರ್ಭಗುಡಿಯ ಕತ್ತಲೆಯಲ್ಲಿಟ್ಟು
ದೀಪ ಬೆಳಗಿಸಿ ನೋಡುವವರಿಗೆ
ಕೃಷ್ಣ ಕಾಣಲಿಲ್ಲ !
ಕನಕನ ಕರೆಗೆ ಓಗೊಟ್ಟು
ಮೌಢ್ಯದ ಗೋಡೆ ಕೆಡವಿ
ಹೊಸ ಬೆಳಕಿನೊಂದಿಗೆ ಹಿಂತಿರುಗಿ
ಕಿಂಡಿಯಲ್ಲಿ ಕನಕನಿಗೆ ಕಂಡನಲ್ಲ !!
ಕನ್ನಡಿಯ ನಗು
ಕನ್ನಡಿ ಮುಂದೊಷ್ಟು ಹೊತ್ತು ನಿಂತು
ಮುಖಕ್ಕೆ ಮುದ್ದು ಮಾಡಿ
ಕಣ್ಣಗಲಿಸಿ ಹುಬ್ಬು ತೀಡಿ
ತುಟಿ ಸವರಿ ಬಣ್ಣ ನೀಡಿ
ಎಡ-ಬಲಕ್ಕೆ ಕೂದಲನ್ನು ತಿದ್ದಿ ತೀಡಿ
ಸುಂದರ ವದನವನ್ನಾಗಿಸುವ ಪರಿಗೆ
ಕನ್ನಡಿ ನೋಡಿ ನಗುತ್ತಿತ್ತು
ಮನಸ್ಸಿನ ಮಲಿನ ಕನ್ನಡಿಗೆ ಕಂಡಿತ್ತು !!
ಚಪ್ಪಲಿಯ ಅಳಲು
ಕಲ್ಲು, ಮಣ್ಣು,ಕೆಸರೆನ್ನದೆ
ದಿನವೆಲ್ಲ ಹೊತ್ತು ತಿರುಗಿದ ಎನ್ನ
ಮೈ ಮಲಿನವಾಗಿದೆ ಎಂದು
ಬಾಗಿಲ ಹೊರಗೆ ಬಿಟ್ಟರು,
ಮಲಿನ ಮನಸ್ಸು ಹೊತ್ತು
ಒಳ ಹೋದರು !!
ಬರೀ ಕೆಂಪು
ಧರ್ಮ
ಜಾತಿ,ನೀತಿ,ಅನೀತಿ
ಬಣ್ಣಗಳ ಒಣ ಬಡಿವಾರದ ಹೆಸರಲ್ಲಿ
ಹರಿಸಿದ ರಕ್ತದ ಬಣ್ಣ
ರಾಜು ಪವಾರ್



