ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳು ವಾಂತಿ, ಭೇದಿ ಅತಿಸಾರಗಳಂತಹ ತೊಂದರೆಗಳಿಂದ ಬಳಲಿ ಅವರ ದೇಹವು ನಿರ್ಜಲೀಕರಣಗೊಂಡಾಗ ಅವರ ದೇಹದಲ್ಲಿ ಲವಣಾಂಶಗಳ ಮತ್ತು ನೀರಿನ ಕೊರತೆಯಿಂದ ಸಾವು ಕೂಡ ಸಂಭವಿಸಬಹುದಾದ ಅಪಾಯವನ್ನು ನಾವು ಅರಿತಿದ್ದೇವೆ. ಇಂತಹ ಸಮಯದಲ್ಲಿ ಮಕ್ಕಳಿಗೆ ಓ ಆರ್ ಎಸ್ ಅಂದರೆ (ಓರಲ್ ರಿ ಹೈಡ್ರೇಟೆಡ್ ಸಾಲ್ಟ್ )ನ್ನು ಕುಡಿಸಲು ಹೇಳುತ್ತಾರೆ.

 ಓ ಆರ್ ಎಸ್ ಎಂದರೆ ಒಂದು ಲೀಟರ್ ಶುದ್ಧವಾದ ನೀರಿಗೆ ನಿಗದಿತ ಪ್ರಮಾಣದ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಕಲಸಿ ತಯಾರಿಸುವ ದ್ರಾವಣ. ಮನೆಯಲ್ಲಿಯೇ ತಯಾರಿಸುವಾಗ ಒಂದು ಲೀಟರ್ ಶುದ್ಧವಾದ ನೀರಿಗೆ ಆರು ಚಮಚ ಸಕ್ಕರೆ ಮತ್ತು ಮೂರು ಚಮಚದಷ್ಟು ಉಪ್ಪನ್ನು ಹಾಕಿ ಕಲಸಿ ಇಟ್ಟುಕೊಳ್ಳುವ ಈ ದ್ರಾವಣವನ್ನು ವಾಂತಿ ಬೇಧಿ ಗಳಿಂದ ಬಳಲುವ ಯಾವುದೇ ವ್ಯಕ್ತಿಗೂ ಅಮೃತ ಸದೃಶವಾದ ಈ ಸಂಜೀವಿನಿಯನ್ನು ಆಗಾಗ ಕುಡಿಸುತ್ತಲೇ ಹೋಗುವ ಮೂಲಕ ದೇಹಕ್ಕೆ ನೀರಿನ ಮತ್ತು ಅತ್ಯವಶ್ಯಕ ಲವಣಾಂಶಗಳನ್ನು ಪೂರೈಸುವ ಮೂಲಕ ಜೀವಹಾನಿಯಾಗುವುದನ್ನು ತಪ್ಪಿಸಬಹುದು.

 ಓ ಆರ್ ಎಸ್ ಅನ್ನು  ಮನೆಯಲ್ಲಿಯೇ ತಯಾರಿಸಬಹುದು. ಅಳತೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸವಾಗಬಾರದು ಎಂಬ ಕಾರಣಕ್ಕೆ ಇದನ್ನು ಮಾರುಕಟ್ಟೆಯಲ್ಲಿ ಕೂಡ ಲಭ್ಯವಾಗಿಸಿದ್ದಾರೆ. ಓ ಆರ್ ಎಸ್ ಲ್ಲಿ ಒಟ್ಟು ನಾಲ್ಕು ವಸ್ತುಗಳಿದ್ದು ಅವುಗಳು ಗ್ಲುಕೋಸ್ ಸೋಡಿಯಂ ಕ್ಲೋರೈಡ್ ಪೊಟ್ಯಾಶಿಯಂ ಕ್ಲೋರೈಡ್ ಮತ್ತು ಸೋಡಿಯಂ ಸಿಟ್ರೇಟ್ ಇವುಗಳನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಕಲಸಿ ತಯಾರಿಸುವ ದ್ರಾವಣವನ್ನು ಓ ಆರ್ ಎಸ್ ಎಂದು ಕರೆಯುತ್ತಾರೆ.

 ಓ ಆರ್ ಎಸ್ ಮತ್ತು ಜಿಂಕ್ ಇವುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯೂನಿಸೆಫ್ ನವರು ಅತಿಸಾರ ಮತ್ತು ಭೇದಿಗೆ ಅತ್ಯುತ್ತಮವಾದ ಪರಿಣಾಮಕಾರಿ ಚಿಕಿತ್ಸೆಗೆ ಸಹಾಯಕವಾಗಿದ್ದು ದೇಹವು ಕಳೆದುಕೊಂಡ ಎಲ್ಲ ಅಂಶಗಳನ್ನು ಮರುಪೂರಣ ಗೊಳಿಸುವ ಶಕ್ತಿಯನ್ನು ಇವು ಹೊಂದಿವೆ ಎಂದು ಘೋಷಿಸಿದೆ. ಜಿಂಕ್ ಕೂಡ ತೊಂದರೆಯನ್ನು  ತಡೆಯುವ ಮತ್ತು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಭೇದಿಯಿಂದ ನಿರ್ಜಲೀಕರಣಗೊಂಡು ಮರಣ ಹೊಂದುವ ಪ್ರಮಾಣವನ್ನು 93 ರಷ್ಟು ಕಡಿಮೆಗೊಳಿಸುವ ಶಕ್ತಿ ಈ ದ್ರಾವಣಕ್ಕಿದೆ.

 ಆದ್ದರಿಂದಲೇ ಓ ಆರ್ ಎಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯವರು ಅತ್ಯಂತ ಅವಶ್ಯಕ ಔಷಧಿಗಳ ಪಟ್ಟಿಯಲ್ಲಿ ಕಾಣಿಸಿದ್ದು ತಾಯಂದಿರು ಹಾಗೂ ಮಕ್ಕಳಿಗೆ ಮಾತ್ರವಲ್ಲದೆ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿಯೂ ಕೂಡ ವಿಶ್ವ ಆರೋಗ್ಯ ಸಂಸ್ಥೆಯು ಕೊಡ ಮಾಡುವ ಅತ್ಯವಶ್ಯಕ ಔಷಧಿಗಳಲ್ಲಿ ಓ ಆರ್ ಎಸ್ ನ್ನು ಪರಿಗಣಿಸಿದೆ.
ಬಹಳಷ್ಟು ರಾಷ್ಟ್ರಗಳಲ್ಲಿ ಕೂಡ ಜೀವ ರಕ್ಷಕ ಸರಕುಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಅನಾರೋಗ್ಯ ಸಮಸ್ಯೆಯ ಸಮಯದಲ್ಲಿ ನೀಡಲಾಗುವ ಒ ಆರ್ ಎಸ್ ಅನ್ನು ಒಂದೆಂದು ಪರಿಗಣಿಸಲಾಗಿದೆ. 2005ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯೂನಿಸೆಫ್ ಸಂಸ್ಥೆಗಳು ಒ ಆರ್ ಎಸ್ ಜೊತೆಗೆ ಜಿಂಕ್ ನ ಸುಧಾರಿತ ಪೂರಕಗಳನ್ನು ನೀಡುವುದನ್ನು ಶಿಫಾರಸು ಮಾಡಿದೆ.

ಆದರೆ ಕಳೆದ ಕೆಲವು ವರ್ಷಗಳ ಹಿಂದೆ ವ್ಯಾಪಾರಿ ದೃಷ್ಟಿಕೋನ ಹೊಂದಿದ ಹಲವಾರು ಕಂಪನಿಗಳು ತಮ್ಮದೇ ಆದ ಓ ಆರ್ ಎಸ್ ಎಂದು ಹೇಳುವ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯನ್ನು ಪಡೆಯದ ಈ ಉತ್ಪನ್ನಗಳು ಮಕ್ಕಳ ಹಾಗೂ ಅನಾರೋಗ್ಯ ಪೀಡಿತರ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಎಂಬ ಅರಿವನ್ನು ಹೊಂದಿದ್ದರೂ ಕೂಡ ಇವುಗಳ ಮಾರಾಟ ಭರದಿಂದ ಸಾಗಿತ್ತು.

ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸುವ ಈ ನಕಲಿ ದ್ರಾವಕಗಳು ಮಕ್ಕಳ ಆರೋಗ್ಯವನ್ನು ಮತ್ತಷ್ಟು ಹಾನಿಗೊಳಿಸುವ ಕಾರಣ ಇವುಗಳ ವಿರುದ್ಧ ಹೈದರಾಬಾದಿನ ಮಕ್ಕಳ ತಜ್ಞೆಯಾಗಿರುವ
ಡಾ. ಶಿವರಂಜಿನಿ ಸಂತೋಷ್ ಎಂಬ ಮಹಿಳೆ ನ್ಯಾಯಾಲಯದ ಮೊರೆ ಹೋದರು.

ವಿವಿಧ ಕಂಪನಿಗಳು ತಯಾರಿಸುವ ನಕಲಿ ಓ ಆರ್‌ಎಸ್‌ಗಳಲ್ಲಿ ನಿಗದಿತ ಪ್ರಮಾಣದ ಎಲೆಕ್ಟ್ರೋಲೈಟ್ ಗಳ ಬದಲಾಗಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶ ಇದ್ದು, ಈ ಸಕ್ಕರೆಯ ಅಂಶವು ಈಗಾಗಲೇ ಬೇಧಿಯಿಂದ ಬಳಲುತ್ತಿರುವ ಮಕ್ಕಳ ದೇಹಕ್ಕೆ ಮತ್ತಷ್ಟು ಹಾನಿಯನ್ನು ಉಂಟುಮಾಡುತ್ತದೆ ಎಂದು ಆಕೆ ಪ್ರತಿಪಾದಿಸಿದರು.

 ಪ್ರತಿ 200ಮಿ ಲೀ ನೀರಿಗೆ ಸುಮಾರು 90 mmol, ಸೋಡಿಯಂ 63mmol ಪೊಟ್ಯಾಶಿಯಂ 20 mmol ಹಾಗೂ ಕ್ಲೋರೈಡ್ 60 mmol ಸಿಟ್ರೇಟ್ 11 mmol ನಷ್ಟು ಪ್ರಮಾಣವನ್ನು ವಿಶ್ವ ಆರೋಗ್ಯ ಸಂಸ್ಥೆಯು ಮಾನ್ಯತೆ ಮಾಡಿದೆ. ಆದರೆ ನಕಲಿ ತಯಾರಿಕರು ಆರು ಪಟ್ಟು ಹೆಚ್ಚಿನ ಗ್ಲುಕೋಸ್ ಅಂಶವನ್ನು ಇದರಲ್ಲಿ ತುರುಕಿ
ಆಕರ್ಷಕ ಟೆಟ್ರಾ ಪ್ಯಾಕ್ಗಳಲ್ಲಿ ಮಾರಾಟ ಮಾಡಲು ಆರಂಭಿಸಿತು. ಆದರೆ ಈ ರೀತಿಯ ನಕಲಿ ಒ ಆರ್ ಎಸ್ ಪಾಕೆಟ್ಗಳ ಹಾವಳಿಯಿಂದಾಗಿ ಈ ಮೊದಲೇ ಅನಾರೋಗ್ಯ ಪೀಡಿತ ಮಕ್ಕಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿತ್ತು.

ಇದನ್ನು ಮನಗಂಡ ಮಕ್ಕಳ ತಜ್ಞರಾದ ಡಾ. ಶಿವರಂಜನಿ ಅವರು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಉತ್ಪನ್ನಗಳ ಮಾರಾಟವನ್ನು ನಿರ್ಬಂಧಿಸಲು ಕಾನೂನಾತ್ಮಕ ಹೋರಾಟ ಮಾಡಲು ನಿರ್ಧರಿಸಿ  ನ್ಯಾಯಾಲಯದ ಮೊರೆ ಹೋದರು. ಸತತ ಎಂಟು ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಮಂಡಳಿಯ ( ಎಫ್ ಎಸ್ ಎಸ್ ಎ ಐ ) ಈ ಉತ್ಪನ್ನಗಳ ಮಾರುಕಟ್ಟೆಯನ್ನು ನಿರ್ಬಂಧಿಸಿತು. ಪ್ರಬಲ ಮಾರುಕಟ್ಟೆ ಲಾಬಿ ಹಾಗೂ ಉದ್ಯಮಿಗಳ ವಿರುದ್ಧದ ಈ ಹೋರಾಟದಲ್ಲಿ ಆಕೆ ಹಲವಾರು ಬೆದರಿಕೆಗಳನ್ನು ಕೂಡ ಎದುರಿಸಬೇಕಾಯಿತು. ಯಾವುದಕ್ಕೂ ಜಗ್ಗದೆ ಸತತವಾಗಿ ಆಕೆ ಹೋರಾಡಿದ ಪರಿಣಾಮವಾಗಿ ಇದೀಗ
ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯನ್ನು ಪಡೆಯದೆ ಒ ಆರ್ ಎಸ್ ಎಂದು ಲಗತ್ತಿಸಿ ಸಕ್ಕರೆ ನೀರಿನ ದ್ರಾವಣವನ್ನು ಮಾರುತ್ತಿರುವ ಅತಿ ದೊಡ್ಡ ವೈದ್ಯಕೀಯ ಔಷಧಿಗಳ ತಯಾರಿಕ ಸಂಸ್ಥೆಗಳ ಉತ್ಪನ್ನಗಳನ್ನು ಬ್ಯಾನ್ ಮಾಡಲಾಗಿದೆ.

ಆದರೆ ಈ ಪೇಯಗಳನ್ನು ತಯಾರಿಸಿರುವ ಉತ್ಪಾದಕರು ಈ ರೀತಿಯ ನಿರ್ಬಂಧದಿಂದ ಈಗಾಗಲೇ ತಮ್ಮಲ್ಲಿ 180 ಕೋಟಿಗಿಂತಲೂ ಹೆಚ್ಚು ಉತ್ಪನ್ನಗಳು ತಯಾರಾಗಿದ್ದು ಅವುಗಳು ಮಾರಾಟವಾಗುವವರೆಗೆ ಈ ನಿರ್ಬಂಧವನ್ನು ತಡೆಹಿಡಿಯಲು ಕೋರಿಕೊಂಡರು. ಪರಿಣಾಮವಾಗಿ ಸುಪ್ರೀಂ ಕೋರ್ಟ್ ಅವರ ಮನವಿಗೆ ಸ್ಪಂದಿಸಿ ಮಾರುಕಟ್ಟೆಯಲ್ಲಿ ಇರುವ ನಕಲಿ ಉತ್ಪನ್ನಗಳ ಮಾರಾಟವಾಗುವವರೆಗೆ ಅವುಗಳ ಮೇಲೆ ವಿಧಿಸಿರುವ ನಿರ್ಬಂಧಕ್ಕೆ ತಡೆಯಾಜ್ಞೆ ನೀಡಿದೆ. ನಿಜವಾದ ತೊಂದರೆ ಇರುವುದು ಇಲ್ಲಿಯೇ.

 ಸುಮಾರು ನಾಲ್ಕು ಕೋಟಿಗೂ ಹೆಚ್ಚು ಇಂತಹ ಪ್ಯಾಕ್ಗಳು ಇನ್ನೂ ಮಾರಾಟವಾಗಬೇಕಿದ್ದು ಇದರಿಂದ ಆ ಕಂಪನಿಗಳಿಗೆ 180 ಕೋಟಿ ರೂಗಳಷ್ಟು ಹಣ ಬರಬೇಕಾಗುತ್ತದೆ. ಮಾರುಕಟ್ಟೆಯ ಈ ನಿರ್ಬಂಧ ತೆರವಿನಿಂದಾಗಿ ನಮ್ಮ ಒಂದು ಕೋಟಿಗೂ ಹೆಚ್ಚು ಮಕ್ಕಳು ಮತ್ತಷ್ಟು ದೈಹಿಕ ತೊಂದರೆಗಳಿಂದ ಬಳಲುವ ಸಾಧ್ಯತೆಗಳೆ ಹೆಚ್ಚು.

ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಮಾರುಕಟ್ಟೆಯಲ್ಲಿ ಈಗಲೂ ಲಭ್ಯವಿರುವ ಇಂತಹ ನಕಲಿ ಪ್ಯಾಕೆಟ್ ಗಳ ಮಾರಾಟವನ್ನು ಮತ್ತು ಖರೀದಿಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕಿದೆ.

ಸ್ನೇಹಿತರೆ, ನಮ್ಮಲ್ಲಿರುವ ಅರಿವಿನ ಕೊರತೆ ಮತ್ತೊಬ್ಬರಿಗೆ ಮಾರುಕಟ್ಟೆಯ ಸಾಧನವಾಗಬಾರದು. ಕನಿಷ್ಠ ಪಕ್ಷ ಏನು ಮಾಡಲಾಗದಿದ್ದರೂ ಬೇರೊಬ್ಬರ ಸಮಾಧಿಯ ಮೇಲೆ ನಮ್ಮ ಪ್ರೀತಿಯ ಮನೆಯನ್ನು ಕಟ್ಟಬಾರದು. ಒಬ್ಬರ ನಿಟ್ಟುಸಿರಿಗೆ ಕಾರಣವಾಗುವ ವಿಷಯದಲ್ಲಿ ನಮಗೆ ಅದೆಷ್ಟೇ ಲಾಭ ಬಂದರೂ ಕೂಡ ಅದನ್ನು ತಿರಸ್ಕರಿಸುವ ನೈತಿಕ ಜಾಗೃತಿ ನಮ್ಮದಾಗಬೇಕು.
 ಜೀವ ಉಳಿಸುವ ಸಾಧನ ನಮಗೆ ಜೀವದಾನ ಮಾಡಬೇಕೆ ಹೊರತು ಜೀವನವನ್ನು ಕಳೆದುಕೊಳ್ಳುವಂಥ ಆಗಬಾರದು ಅಲ್ಲವೇ?
ಬದುಕು ನಮ್ಮದು.. ಆಯ್ಕೆಗಳು ಕೂಡ ನಮ್ಮವೇ ಆಗಿರಬೇಕು. ಏನಂತೀರಾ?


About The Author

Leave a Reply

You cannot copy content of this page

Scroll to Top