ನಾನೋರ್ವ ಕವಿ

ಪ್ರಕಾಶ್ ಕೋನಾಪುರ

ನಾನೇನು ಮಾಡಲಿ ನಾನೋರ್ವ ಕವಿ
ಕವಿತೆ ಬರೆಯುವುದೇ ನನ್ನ ಕಾಯಕ
ಅಕ್ಷರಗಳ ಅಭ್ಯಾಸದಲಿ ರೂಪಕಗಳ
ಮೋಹಪಾಶದಲಿ ಪ್ರತಿಮೆಗಳ ಪೇರಿಸಿ
ಭಾವಸನ್ನೀಯಲ್ಲೀ ತೇಲಾಡುವ ಕವಿ

ಮೊಗ್ಗು ಹೂ ಹಣ್ಣು ದುಂಬಿ ತರುಲತೆ
ಕಾಗೆ ಗುಬ್ಬಿ ಗಿಳಿವಿಂಡು ಪಾರಿವಾಳ
ಮೊಲ ಹಸು ಕರು ನಾಯಿ ನರಿ ಕುರಿ ತೋಳ
ನದಿ ಬೆಟ್ಟ ಕಾನನ ಸೂರ್ಯ ಚಂದ್ರ ಆಕಾಶ
ಬೈಗು ಬೆಳಗು ಸೃಷ್ಟಿಯ ಸೊಬಗು ವರ್ಣಿಸಿ ವರ್ಣಿಸಿ
ಕವಿತೆಗಳ ಮಹಾಪೂರವೇ ಹರಿಸಿಯಾಯ್ತು

ಹೆಣ್ಣಿನ ಮೂಗು ತುಟಿ ಕಟಿ ಕದಪು ಮುಂಗುರುಳು
ಎದೆಕಳಸ ನಾಭಿ ನಡ ನೀತಂಬ ಕೋಮಲ ಪಾದ
ಪಡುವ ಪಾಡು ತ್ಯಾಗ ಸಹನೆ ಬಾಳುಗೋಳು
ಹೆರಳು ತುರುಬು ಮುಡಿಗೆ ಮುಡಿಪ ಹೂ
ಸೌಂದರ್ಯ ಬಣ್ಣಿಸಿ ಬರೆದ ಕವಿತೆಗಳ ಸಾಲು
ಬತ್ತದ ಕಾವ್ಯದ ಒರತೆ ನಿತ್ಯ ಹರಿಯುತಿರುವ ಝರಿ

ನಾನೇನು ಮಾಡಲಿ ನಾನೋರ್ವ ಕವಿ
ಕವಿತೆ ಬರೆಯುವುದೇ ನನ್ನ ಕಾಯಕ
ಎಲ್ಲರೂ ಇರುವಂತೆ ಮೂಕನೂ ಅಲ್ಲಾ
ಕಣ್ಣಿದ್ದೂ ಕಾಣದ ಹಗಲು ಕುರುಡನೂ ಅಲ್ಲಾ

ಕಂಡದ್ದನ್ನು ಕಂಡ ಹಾಗೇ
ಕಣ್ಣಿದ್ದ ಕುರುಡರೂ ನಾಚುವಂತೆ
ಹೇಳಬೇಕೆನ್ನಿಸಿದ್ದನ್ನು ಭಿಡೇ ಭಿಟ್ಟು
ಹರಿತಕತ್ತಿ ಇರಿದಂತೆ ಹೇಳದೇ
ಇರುವನಂತೂ ನಾನಲ್ಲ

ನಾನೇನು ಮಾಡಲಿ ನಾನೋರ್ವ ಕವಿ
ಕವಿತೆ ಬರೆಯುವುದೇ ನನ್ನ ಕಾಯಕ
ಪ್ರಭುತ್ವವನ್ನು ಆರೋಪಿಸಿ ಕಟಕಟೆಯಲ್ಲಿ ನಿಲ್ಲಿಸಿ
ಹಸಿವಿನ ನ್ಯಾಯ ಪದಗಳ ಸಂಯೋಜನೆಯಲ್ಲಿ

ಕಾವ್ಯದ ಶಬ್ಧಾಡಂಗುರದಲ್ಲಿ
ಅಲಂಕಾರ ಪ್ರತಿಮೆಗಳಲ್ಲಿ
ತಿವಿದು ತಿವಿದು ಪ್ರಶ್ನಿಸುತ್ತೇನೆ
ಕಾವ್ಯಾತ್ಮಕ ಲಯಲಾವಣ್ಯದಲಿ
ಪ್ರಜೆಪ್ರಭುಗಳಿಬ್ಬರನ್ನೂ ಎಚ್ಚರಿಸುತ್ತೇನೆ

ನಾನೇನು ಮಾಡಲಿ ನಾನೋರ್ವ ಕವಿ
ಕವಿತೆ ಬರೆಯುವುದೇ ನನ್ನ ಕಾಯಕ
ಕೈಕೋಳ ತೊಡಿಸಿ ಜೈಲಿಗಟ್ಟಿದರೂ ಬಿಡದ ಕಾಯಕ
ನನ್ನ ಮುಂಗೈ ಕತ್ತರಿಸಿದರೂ ಹಿಡಿದ ಪೆನ್ನು ಬಿಡೆನು

ಕವಿತೆ ಬರೆಯಲು ಜೈಲು ಗೋಡೆಯಾದರೇನು
ಕಲ್ಲು ಬಂಡೆಯಾದರೇನು ಯಾವುದೇನು
ಯಾರಾಜ್ಞೆಗೂ ನಿಲುಕದ ಕವಿಸಮಯ
ಪೆನ್ನೇ ನನ್ನ ಗನ್ನು ಬರೆಯುತ್ತೇನೆ ಕವಿತೆಯನ್ನು

ನಾನೇನು ಮಾಡಲಿ ನಾನೋರ್ವ ಕವಿ
ಕವಿತೆ ಬರೆಯುವುದೇ ನನ್ನ ಕಾಯಕ

*********

8 thoughts on “ನಾನೋರ್ವ ಕವಿ

Leave a Reply

Back To Top