ಮಳೆಹಾಡು-3

ಸಂಜೆಯ ಮುಹೂರ್ತ

ಆಶಾ ಜಗದೀಶ್

ಅದೆಷ್ಟೋ ವರ್ಷಗಳ ಪೂರ್ವ ನಿಯೋಜಿತ
ಘಟನೆಯಿದು ಎನಿಸುವಂತೆ
ಸುರಿಯುತ್ತಿರುವ ಈ ಮಳೆಗೆ
ಸಂಜೆಯ ಮುಹೂರ್ತ

ರಾಗ, ರಂಗು ಮತ್ತು ದೀರ್ಘ ಕ್ಷಣಗಳ
ಕಟು ಮೌನ
ಕಣ್ಣೀರು ಸ್ಫುರಿಸುವಂತೆ ತಾಕುವ
ತಣ್ಣ ಸಣ್ಣ ಸಣ್ಣ ಸಿಡಿ ಹನಿಗಳು
ಯಾವುದಕ್ಕೂ ಪ್ರತಿರೋಧ ಒಡ್ಡದ
ರಸ್ತೆಗೆ ಇದೊಂದು ಜನ್ಮದ ಸುವಾಸನೆಯನ್ನು
ಬಿಗಿ ಹಿಡಿದು ಉಚ್ವಾಸಕ್ಕೆ ಎಳೆಸುವ ಆಸೆ
ಮತ್ತಷ್ಟು ಕಠೋರವಾಗಿ ಎದೆ ಸೆಟೆಸಿ
ಮಲಗುತ್ತದೆ…

ಒಂಚೂರೂ ನಡುಗದ ಮಲ್ಲಿಗೆ ಬಳ್ಳಿ
ಮಳೆಯ ಹೊಡೆತಕ್ಕೆ ನಲುಗಿದೆ
ಮತ್ತೆ ಮತ್ತೆ ಸರಿ ಮಾಡಿ ಹಿಡಿದೆತ್ತಿ
ತಂತಿಯಿಂದ ಬಂಧಿಸಿ ತರಸಿಗೇರುವಂತೆ
ಮಾಡುವ ಒಡತಿ ನಡುಗುತ್ತಾ ಒಳಗಿದ್ದಾಳೆ
ತಾನು ಕಟ್ಟಿದ ತಂತಿ ತುಂಡಾಗಿ
ಬೀಳುತ್ತಿರುವ ಬಳ್ಳಿಯ ಕಂಡು
ಹೆಚ್ಚೇ ಎರೆಡು ಹನಿ ಉದುರಿಸುತ್ತಾ

ತಾರಸಿಯ ಕೆಳಗೆ ಮಳೆ ಸೋಕದಂತೆ
ಇರಿಸಲಾಗಿರುವ ಬಣ್ಣದ ಗಿಡಗಳ
ಮುಖ ಬಾಡಿ ಬತ್ತಿದೆ
ಮಳೆಯೆನ್ನುವ ಇವನ ಸ್ಫರ್ಷಕ್ಕೆಂದು
ಕಾದ ಒಂದಿಡೀ ವರ್ಷ
ಹೀಗೆ ವಿರಹದ ಮಡುವಿಗೆ ಹರಿದು ಹೋಗಿ
ಸೇರುತ್ತಿದೆ ಎಂದು

ಆದರೆ
ಯಾವುದನ್ನೂ ಎಣಿಸದ ಒಡತಿ
ಜಗ್ಗಿನಿಂದ ಎರೆಡು ಲೋಟದಷ್ಟು ನೀರನ್ನು
ಬುಡಕ್ಕೆ ಸುರಿದು ಹೋಗುತ್ತಾಳೆ
ಮಳೆಯ ಹೊಡೆತ ತಿಂದು ನೆನೆಯಬೇಕಿತ್ತೆಂದು
ಹಪಹಪಿಸುತ್ತಿರುವ ಕುಂಡದ ಗಿಡಗಳ
ಪ್ರಶ್ನಾರ್ಥಕ ನೋಟಗಳ
ಕನಿಷ್ಠ ಗಮನಿಸದೆಯೇ

ಮಳೆಕೊಯ್ಲು ಎನ್ನುವ ಹೆಸರಿನ
ಇಡೀ ವ್ಯವಸ್ಥೆಯ ಪೈಪುಗಳಲ್ಲಿ ರಕ್ತಸಂಚಾರ
ವರ್ಷವಿಡೀ ಕೆಲಸಕ್ಕೆ ಬಾರದಂತೆ ನಗಣ್ಯಕ್ಕೆ
ಗುರಿಯಾದ ಇವುಗಳಿಗೆ ಈಗ ಎಂಥದೋ ಹೆಮ್ಮೆ
ಒಂದಷ್ಟು ಕಚ್ಚು ಕೆಸರನ್ನು ಕಕ್ಕಿ ಗಂಟಲು
ಸರಿ ಮಾಡಿಕೊಂಡು ತಿಳಿ ನೀರ ಹರಿಸಿ
ಎಂಥದೋ ನೆಮ್ಮದಿ ಅವುಗಳ ಒಣ ಜೀವಕ್ಕೆ
ಅಲ್ಲಾ ಮಳೆಯನ್ನು ಹೇಗೆ ಕೊಯ್ಯುವುದೆಂದೇ
ಅರ್ಥವಾಗುವುದಿಲ್ಲ ನನಗೆ

ಆದರೆ ಮಳೆ ಎನ್ನುವ ಈ ಮಳೆ
ಭಾವಕೋಶದ ತಂತಿಯನ್ನು
ಬಿಗಿ ಮಾಡಿ ಟಣ್ ಎಂದು
ಮೀಟಿಬಿಡುತ್ತದೆ ಹೇಗೋ
ಸೋಲಿಸುವ ಹಾಗೆ….

********

Leave a Reply

Back To Top