ರೇಖಾಚಿತ್ರ ಕಲೆಯ ತಾಯಿ

“ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು”

………………………………….

ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ.  ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ.

ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ.

ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ  ಬೆಳೆದ ಕಲಾವಿದ ಇವರು.

ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು  ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ.

………………………………….

“ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ  ಹಜರತ್ ಅಲಿ  ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ.

…………………………….

ನಾಗರಾಜ ಹರಪನಹಳ್ಳಿ :  ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ  ಯಾಕೆ ಆಟವಾಡುತ್ತೀರಿ ಅಥವಾ   ಚಿತ್ರ ಬರೆಯುತ್ತೀರಿ ?

ಹಜರತ್ ಅಲಿ  :   ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ.

ಪ್ರಶ್ನೆ :  ಕಲೆ  ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ?

ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ.  ನಗರದ  ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ.

ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ  ?

ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ  ಹಾಗೂ  ಕಲಾವಿದನಿಗೆ ಅತ್ಯಗತ್ಯ.

ಪ್ರಶ್ನೆ :  ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ  ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ  ವಿಶೇಷತೆ ಏನು ?

ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ  ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ?

ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ?

ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ  ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ.

ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ..

ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ.

ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ  ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ.

ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ.

ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

 ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ  ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು,  ಪ್ರತಿಭಾವಂತ ರಿರುವುದು ಕಡಿಮೆಯೆ..

 ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ,  ಅಧ್ಯಾಪಕ ನ ಪ್ರತಿಭೆ ನಗಣ್ಯ.

ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ

ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು..

ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಉತ್ತರ :  ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು..

ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ   ಬಗ್ಗೆ ನಿಮ್ಮ ಕನಸುಗಳೇನು ?

ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ.

ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ.

……………

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

One thought on “

  1. ಚಿತ್ರಕಲಾಕಾರನ ಹಿನ್ನೆಲೆ, ಆಸಕ್ತಿ, ಬೆಳೆದುಬಂದ ದಾರಿ ಮೆಚ್ಚುವಂತಹುದು.ಚೆನ್ನಾಗಿ ಬರೆದಿದ್ದಿರಿ…ಸರ್

Leave a Reply

Back To Top