ಮಕ್ಕಳ ಸಂಗಾತಿ
“ಮಹಿಳಾ ಮತ್ತು ಮಕ್ಕಳ
ರಕ್ಷಣಾ ಕಾವಲು ಸಮಿತಿ –
ಏಕೆ? ಏನು? ಹೇಗೆ?”
ಮೇಘ ರಾಮದಾಸ್ ಜಿ.

ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?
ಭಾರತ ಸಂವಿಧಾನದ 73 ನೇ ತಿದ್ದುಪಡಿ ಬಹಳ ಮಹತ್ವವಾದದ್ದು. ಅಧಿಕಾರ ವಿಕೇಂದ್ರೀಕರಣದ ಮುನ್ನುಡಿಯಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಜನನ ಆಗಿದ್ದು ಇದರಿಂದಲೇ. ಅಭಿವೃದ್ಧಿ ಎಂದಿಗೂ ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಕೇಂದ್ರೀಕೃತವಾಗಿರಬಾರದು, ಬದಲಿಗೆ ತಳಮಟ್ಟದಿಂದ ಅಂದರೆ ಗ್ರಾಮಗಳಿಂದ ಅಭಿವೃದ್ಧಿಯ ಪರಿಕಲ್ಪನೆ ರಚನೆಯಾಗಬೇಕು ಎನ್ನುವುದು ಈ ಅಧಿಕಾರ ವಿಕೇಂದ್ರೀಕರಣದ ಆಶಯವಾಗಿದೆ. ಕೇವಲ ಅಭಿವೃದ್ಧಿಯ ಕಾರಣಕ್ಕೆ ಅಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಗಳಾಗಿಯೂ ಸಹಾ ಈ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿಯೇ ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳ ರಚನೆ ಕಡ್ಡಾಯವಾಗಿದೆ. ಈ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತು ಗಮನ ಹರಿಸಬೇಕಿದೆ. ಆದರೆ ವಾಸ್ತವದಲ್ಲಿ ಈ ಸಮಿತಿಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಾಗರಿಕರಾಗಿ ನಮ್ಮ ಕರ್ತವ್ಯವಾಗಿದೆ.
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಎಂದರೇನು?
ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಅರಿವು ಮೂಡಿಸುವುದು ಮತ್ತು ರಕ್ಷಣೆ ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ.
ಈ ಸಮಿತಿಯ ಸದಸ್ಯರು ಯಾರ್ಯಾರು?
ಅಧ್ಯಕ್ಷರು – ಗ್ರಾಮ ಪಂಚಾಯತಿ ಅಧ್ಯಕ್ಷರು (ಮಹಿಳೆ)
ಉಪಾಧ್ಯಕ್ಷರು – ಗ್ರಾಮ ಪಂಚಾಯತಿ ಉಪಾಧ್ಯಕ್ಷರು (ಮಹಿಳೆ)
ಸದಸ್ಯರು – ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು (ಒಬ್ಬರು ಮಹಿಳೆ ಕಡ್ಡಾಯ)
ಸದಸ್ಯರು – ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖೋಪಾಧ್ಯಾಯರು (ಪುರುಷವಿದ್ದಲ್ಲಿ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು)
ಸದಸ್ಯರು – ಗ್ರಾಮಲೆಕ್ಕಿದರು
ಸದಸ್ಯರು – ಆಶಾ ಕಾರ್ಯಕರ್ತೆ
ಸದಸ್ಯರು – ಬಿಟ್ ಪೊಲೀಸ್
ಸದಸ್ಯರು – ICDS ಮೇಲ್ವಿಚಾರಕಿ
ಸದಸ್ಯರು – ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿ
ಸದಸ್ಯರು – ಅಂಗನವಾಡಿ ಕಾರ್ಯಕರ್ತೆ
ಸದಸ್ಯರು – ಸ್ತ್ರೀಶಕ್ತಿ ಸಂಘದ ಪ್ರತಿನಿಧಿ
ಸದಸ್ಯರು – ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ
ಸದಸ್ಯ ಕಾರ್ಯದರ್ಶಿ – ಪಿಡಿಒ/ಕಾರ್ಯದರ್ಶಿ
ಸಮಿತಿಯ ಜವಾಬ್ದಾರಿಗಳು
1. ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಮತ್ತು ಬಾಲ್ಯವಿವಾಹ ನಿಷೇಧದ ಕಾನೂನಿನ ಬಗ್ಗೆ ಅರಿವು ಮೂಡಿಸುವುದು
2. ಗ್ರಾಮದಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು
3. ಗ್ರಾಮ ಪಂಚಾಯತಿ ವ್ಯಾಪ್ತಿಯ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಂಘಸಂಸ್ಥೆಗಳಿಂದ ಅಗತ್ಯ ನೆರವನ್ನು ಪಡೆದುಕೊಳ್ಳುವುದು
4. ಗ್ರಾಮ ಪಂಚಾಯತಿ ಮಟ್ಟದಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳ ಮಾಹಿತಿಯನ್ನು ಹೊಂದಿರಬೇಕು
5. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಅಂಕಿ ಸಂಖ್ಯೆಗಳನ್ನು ದಾಖಲಿಸಿಕೊಂಡಿರಬೇಕು
6. ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದು ಮತ್ತು ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ನೈತಿಕ ಮತ್ತು ವೈದ್ಯಕೀಯ ನೆರವು ದೊರೆಯುವಂತೆ ಮಾಡುವುದು
7. ಗ್ರಾಮ ಪಂಚಾಯತಿಯ ಪ್ರತಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಅಥವಾ ಬಾಲಕಿಯರ ಗುಂಪು ತಂಡ ರಚಿಸುವುದು
8. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿಕಲಚೇತನ ಮಕ್ಕಳಿಗೆ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು
9. ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ತಡೆಯಲು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜನೆ
10. ಪೋಷಕರಿಗೆ ಬೇಡವಾದ ಮಕ್ಕಳು ಮತ್ತು ರಸ್ತೆಯಲ್ಲಿ ಅನಾಥವಾಗಿ ಕಂಡು ಬಂದ ಮಕ್ಕಳನ್ನು ಗುರುತಿಸಿ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡುವುದು
11. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು ಕಂಡುಬ೦ದಲ್ಲಿ ಮಗುವಿಗೆ ರಕ್ಷಣೆ ನೀಡಿ ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದು
12. ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆ ನಡೆಸಲು ಮತ್ತು ಸದರಿ ಸಭೆಯಲ್ಲಿ ಚರ್ಚಿಸಿದ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವುದು
ಈ ಸಮಿತಿಗಳು ಸ್ಥಳೀಯ ಮಟ್ಟದ ಮಹಿಳೆ ಮತ್ತು ಮಕ್ಕಳ ರಕ್ಷಣಾ ಗೋಡೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಮಿತಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಗ್ರಾಮದ ನಾಗರೀಕರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಮಿತಿಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದಾಗ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ.3
ಮೇಘ ರಾಮದಾಸ್ ಜಿ

ಮೇಘ ರಾಮದಾಸ್ ಜಿ
ಮಕ್ಕಳು ಮತ್ತು ಯುವಜನ ಕಾರ್ಯಕರ್ತರು
ಗುಳಿಗೇನಹಳ್ಳಿ ಸಿರಾ ತುಮಕೂರು
7760908097




ಧನ್ಯವಾದಗಳು ಮೇಡಂ
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಏಕೆ? ಏನು ಹಾಗೂ ಹೇಗೆ ಎಂಬುದರ ಕುರಿತು ವಿವರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ತಿಳಿಸಿದಕ್ಕೆ, ಮೊದಲಿಗೆ ನಾನೂ ಕೂಡ ಒಬ್ಬ ಸಮಾಜ ಕಾರ್ಯಕರ್ತನಾಗಿ ಜೊತೆಗೆ ಸಮಾಜದ ಒಬ್ಬ ನಾಗರಿಕರಾಗಿ ನಿರ್ವಹಿಸಬೇಕಾದ ಕರ್ತವ್ಯವನ್ನು ನೆನಪಿಸಿದ್ದೀರಿ.
ಮೊದಲ ಬಾರಿಗೆ ಈ ಸಮಿತಿಯ ಕುರಿತಂತೆ, ಸಮಿತಿಯಲ್ಲಿರಬೇಕಾದ ಸದಸ್ಯರ ಕುರಿತು ಹಾಗೂ ಅವರಿಗಿರುವ ಜವಾಬ್ದಾರಿಯನ್ನು ನಿಮ್ಮ ಬರವಣಿಗೆ ಮೂಲಕ ತಿಳಿದುಕೊಳ್ಳಲು ಸಾಧ್ಯವಾಯಿತು. ಇದೇ ರೀತಿ ಇನ್ನಷ್ಟು ಮಾಹಿತಿಗಳು ನಿಮ್ಮ ಬರವಣಿಗೆ ರೂಪದಲ್ಲಿ ಪ್ರಕಟವಾಗುವಂತೆ ಹಾಗೂ ನಮ್ಮಂತಹ ಯುವ ಮನಸ್ಸುಗಳು ಪ್ರಭುದ್ಧರಾಗುವಂತಾಗಲಿ ಮತ್ತು ಪ್ರಶ್ನಿಸುವಂತಾಗಲಿ ಎಂದು ಆಶಿಸುತ್ತೇನೆ.