ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಕೊಂಡು ತಂದು, ಹೊತ್ತು ಮಾರಿ ಲಾಭ ಗಳಿಸಿ ಹೊಟ್ಟೆ ಹೊರೆಯಲು ವಿದ್ಯೆಯೇನು ಬಳೆಯ ಮಲಾರವೇ…? ಎಂದು ಕವಿ ರನ್ನನ ವಿದ್ಯಾಭ್ಯಾಸದ ಆಸೆಗೆ ತಣ್ಣೀರೆರಚಿದ ಗುರುಗಳಾಗಲಿ, ಕವಿ ಎಂದು ಗುರುತಿಸಿಕೊಳ್ಳಲು ಪೊನ್ನ ರಾಜಾಶ್ರಯದಲ್ಲಿ ಪಟ್ಟ  ಪಾಡಾಗಲೀ ಇಂದಿನ  ವಿದ್ಯಾಕಾಂಕ್ಷಿಗಳಿಗೆ, ಬರಹಗಾರರಿಗೆ ಇಲ್ಲ. ಬರಹಗಾರರಿಗೆ ಆ ಕ್ಷೇತ್ರದಲ್ಲಿ ಮುಂದೆ ಸಾಗಲು ಸಾಕಷ್ಟು ಅವಕಾಶಗಳಿವೆ. ಹಲವಾರು ವೇದಿಕೆಗಳು  ಬರಹಗಾರರಿಗೆ  ಪ್ರೋತ್ಸಾಹ ಕೊಡುತ್ತಿವೆ. ಲೇಖಕ- ಲೇಖಕಿ ಎಂದು ಗುರುತಿಸಿಕೊಳ್ಳಲು ಬಹಳಷ್ಟು ಸಾಹಿತ್ಯ ಪರ ಬಳಗಗಳು    ಸಹಕರಿಸುತ್ತವೆ. ಸಮುದಾಯದ ಸಹವರ್ತಿಗಳೊಂದಿಗೆ ಬರೆಯಲು, ಸಮಾನ ಮನಸ್ಕರು ಸೇರಿ ಮಾಡಿರುವಂತಹ ಇಂತಹ ಬಳಗಗಳು ಉದಯೋನ್ಮುಖ ಬರಹಗಾರರ  ಸೃಜನಾತ್ಮಕತೆಯನ್ನು ಹೆಚ್ಚಿಸಲು, ಬರಹ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಹಳ ಸಹಕಾರಿಯಾಗಿವೆ. ಬರೆಯುವ ಕಲೆಗಾರಿಕೆಯೊಂದಿದ್ದರೆ ಸಾಕು ಇಂತಹ ಬಳಗಗಳಲ್ಲಿರುವ ಶ್ರೇಷ್ಠ ಬರಹಗಾರರಿಂದ ಮಾರ್ಗದರ್ಶನವೂ ದೊರೆಯುತ್ತದೆ. ಆದರೆ ಇಂತಹ ಬಳಗಗಳಿಗೆ ಸೇರಿಕೊಳ್ಳುವ  ಕೆಲ ಬರಹಗಾರರು  ತಮ್ಮ ಒಂದೆರಡು ಬರಹಗಳಲ್ಲಿಯೇ ತಾವು ಪ್ರಸಿದ್ಧರಾಗಬೇಕೆಂದು ಬಯಸುತ್ತಾರೆ. ಭಾಷಾ ಶುದ್ಧತೆ, ನೀತಿ ನಿಯಮಗಳು ಏನೂ  ಇಲ್ಲದಿದ್ದರೂ ತಮ್ಮ ಬರಹಗಳನ್ನು ಎಲ್ಲಾ ಕಡೆ ಅಪ್ಲೋಡ್ ಮಾಡುತ್ತಾರೆ. ಸರಿ ತಪ್ಪುಗಳ ವಿಮರ್ಶೆಗೆ  ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ತಿದ್ದಿ ಹೇಳುವವರನ್ನು ಶುದ್ಧ ವೈರಿಗಳೆಂದು ಪರಿಗಣಿಸುವ ಮನಸ್ಸುಗಳೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ  ಗುರುವಿನ ಸ್ಥಾನದಲ್ಲಿ ಇದ್ದುಕೊಂಡು ತಿದ್ದಿ ಹೇಳಲು ಯಾರು ತಾನೇ ಸಿದ್ಧರಾಗುತ್ತಾರೆ? ತಪ್ಪುಗಳನ್ನು ನೋಡಿ ಸುಮ್ಮನಾಗುತ್ತಾರೆ. ಅಲ್ಲಿಗೆ ಬರಹಗಾರರ ಬೆಳವಣಿಗೆ ನಿಂತು ಹೋಗುತ್ತದೆ. ತಾವೇ ಸರಿ, ತಮ್ಮ ಬರಹಗಳೇ ಸರಿ ಎಂಬ ಭ್ರಮಾಲೋಕದಲ್ಲಿ ವಿಹರಿಸುವ ಸ್ವಯಂ ಘೋಷಿತ ಕವಿಗಳು ಬಹಳಷ್ಟು ಬಳಗಗಳಲ್ಲಿ ಕಾಣಿಸಿರುತ್ತಾರೆ.

“ಈ ಬಳಗದಲ್ಲಿ ಕವನಗಳನ್ನು ಹಾಕುವ ಕವಿಗಳು ತಮ್ಮ ಬರಹವನ್ನು ಸಾಕಷ್ಟು ಬಾರಿ ಓದಿ ಸರಿ ಎನಿಸಿದ ನಂತರವಷ್ಟೇ ಹಂಚಿಕೊಳ್ಳುವುದು ” ಎಂಬ ಅಡ್ಮಿನ್ ಅವರ  ಸಂದೇಶವೊಂದನ್ನು ರಾಜ್ಯಮಟ್ಟದ ಬಳಗದಲ್ಲಿ ಕಂಡೆ. ಪಾಪ ಅವರಿಗೂ  ನೇರವಾಗಿ ಹೇಳಲು ಕಷ್ಟವಾಗಿರಬೇಕು.  ಕವಿಯಾಗುವವನಿಗೆ  ಕಿವಿಯಾಗುವ ಗುಣವಿರಬೇಕು. ಭಾಷಾ ಪ್ರೀತಿ, ಸೃಜನಾತ್ಮಕ ಅಭಿವ್ಯಕ್ತಿ, ಕಲ್ಪನಾ ಶಕ್ತಿ, ಲಯ ಮತ್ತು ಸಂಗೀತದ ಪ್ರಜ್ಞೆ ಇತ್ಯಾದಿಗಳಿರಬೇಕು. ಭಾವನೆಗಳನ್ನು ಪದಗಳಲ್ಲಿ ಹಿಡಿದಿಡುವ ಕಲೆಗಾರಿಕೆ ಅಗತ್ಯವಾಗಿ ಬೇಕು. ಕವನಗಳನ್ನು ಬಳಗಗಳಲ್ಲಿ ಹಂಚಿಕೊಳ್ಳುವ ಮುನ್ನ ತನ್ನ ಭಾವನೆಗಳು  ಸಾರ್ವತ್ರಿಕವಾಗಿ  ತಾಳೆಯಾಗುವುದೇ ಎಂಬ ಯೋಚನೆ ಇರಬೇಕು. ಬರಹಗಾರರ ಸಾಮಾಜಿಕ ಒಡನಾಟಕ್ಕೆ ಎಂದು ಕೊಡುವಂತಹ  ಬಳಗಗಳ  ಅಡ್ಮಿನ್ ರವರಿಗೆ  ನಮ್ಮ ಬರಹಗಳಿಂದ ಕಿರಿಕಿರಿಯಾಗಬಾರದು ಎನ್ನುವ ಸಾಮಾಜಿಕ ಪ್ರಜ್ಞೆ ಬರೆಯುವವರಿಗೆ ಮೊದಲು ಬೇಕು.

ನವೋದಯ, ನವ್ಯ ಸಾಹಿತ್ಯ ರಚನೆಯ ಕಾಲಘಟ್ಟದಲ್ಲಿ  ಕವಿತಾ ರಚನೆಗೆ ನಿರ್ದಿಷ್ಟವಾದ ನಿಯಮಗಳೇನು ಇಲ್ಲವಾದರೂ ಪಾಶ್ಚಾತ್ಯ ಕಾವ್ಯ ಪಂಥಗಳ ಗಾಢ ಪ್ರಭಾವ ಇದೆ, ಆಧುನಿಕವಾದ ಮೀಮಾಂಸೆ ಇದೆ. ಹಾಗಾಗಿ ತೋಚಿದ್ದನ್ನೆಲ್ಲ ಗೀಚಿದರೆ ಅದು ಕವನ ಎನಿಸಿಕೊಳ್ಳಲಾರದು. ‘ಕವನ ಎಂದರೆ  ಬುದ್ಧಿ ಭಾವಗಳ ವಿದ್ಯುದಾಲಿಂಗನ ‘ ಎಂದಿದ್ದಾರೆ ರಾಷ್ಟ್ರ ಕವಿ ಕುವೆಂಪು. ‘ಪಟ್ಟು ಹಿಡಿದು ಹೊಸೆದರೆ  ಅದು ಕಟ್ಟು ಕವಿತೆ… ಭಾವನೆಗಳೊಂದಿಗೆ ಹಾಳೆಗೆಳಿದರೆ ಅದು ಹುಟ್ಟು ಕವಿತೆ. ಅನುಭವಗಳನ್ನು  ಕಲ್ಪನೆಯ ಮೂಸೆಯಲ್ಲಿ ಎರಕ ಹೊಯ್ದಾಗ ಕವನಗಳು ಹುಟ್ಟಿಕೊಳ್ಳುತ್ತವೆ’ ಎನ್ನುವ ಮಾತಿದೆ. ಹಾಗಾದರೆ ಕಲ್ಪನೆ ಮತ್ತು ಜೀವನಾನುಭವ ಇವೆರಡಿದ್ದರೆ ಸಾಕೇ? ಅನುಭವಗಳೆಲ್ಲ ಕವನಗಳಾದಾವೇ?

emotions are naked,
Expressions are dresssed.

ಇದು ಅನುಭವದ ಆಂಗ್ಲ ನುಡಿ. ಅನುಭವ ವೇದ್ಯವಾದ ವಸ್ತುವನ್ನು  ಆಯ್ಕೆ ಮಾಡಿಕೊಂಡರೆ ಸಾಲದು, ವಿಷಯದ ಆಳ ತಿಳಿದಿರಬೇಕು, ಶಕ್ತಿಯುತ ಪದಗಳ ಬಳಕೆ ಅಥವಾ ಶಬ್ದ ಚಮತ್ಕಾರ ಅಲ್ಲಿರಬೇಕು. ಪ್ರಾಸ ಪದಗಳ ಜೊತೆ ಜೊತೆಗೆ ಉಪಮೆ  ರೂಪಕಗಳನ್ನು ಬಳಸಿಕೊಂಡು  ಬರೆದಾಗ ಒಂದು ಸುಂದರ ಕವನ ರೂಪುಗೊಳ್ಳುತ್ತದೆ. ಮೊನ್ನೆ ಅನಸೂಯ ಮೇಡಂ ಒಂದು ಕವನ ಬರೆದಿದ್ದರು. ಅದು ಬಿಳಿ ಕೂದಲಿನ ಬಗ್ಗೆ.

ಒಂಟಿಯಾಗಿ ಬಂತು ನನಗೆ
ಒಂದು ಬಿಳಿಯ ಕೂದಲು
ರಕ್ತ ಬೀಜಾಸುರನೇ ಆಯ್ತು
ವರುಷ ದಾಟಿ ಹೋಗಲು…!

ಅರ್ಥಪೂರ್ಣ ಕಾವ್ಯ ಪ್ರತಿಮೆ ಇದು!

ನಮ್ಮ ಕವನಗಳು ಧೀರ್ಘಕಾಲ ಜನ ಮಾನಸದಲ್ಲಿ ಉಳಿಯಬೇಕಾದರೆ ಕವನದಲ್ಲಿ ವ್ಯಕ್ತವಾಗುವ ಅನುಭವಗಳು ಸಾರ್ವತ್ರಿಕ ಅನುಭವ ಆಗಿರಬೇಕು. ಹೆಸರು ಗಳಿಸುವ ಧಾವಂತದಲ್ಲಿ  ಕವನ ರಚಿಸಿ  ಅಲ್ಲಿ ಇಲ್ಲಿ ಹರಿಯ ಬಿಟ್ಟಾಗ  ಕೆಲವೊಮ್ಮೆ ಲಯ ಲಾಲಿತ್ಯಗಳು ಇಲ್ಲದ ತುಂಡರಿಸಿದ ಗದ್ಯದ ಸಾಲುಗಳೇನೋ ಎಂಬಂತೆ ಆ ಸಾಲುಗಳು ಭಾಸವಾಗುತ್ತವೆ.

Best words in best order is poetry.. ಎನ್ನುತ್ತಾರೆ ವಿಲಿಯಂ ವರ್ಡ್ಸ್‌ವರ್ತ್.

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು
ಸಹಜ ಪ್ರಾಸ..
ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸ…
ಭೃಂಗದ ಬೆನ್ನೇರಿ ಬಂತೂ.

ಭೃಂಗದ ಬೆನ್ನೇರಿ ಬಂತು.

ಇದು ವರ ಕವಿ ಬೇಂದ್ರೆಯವರ ಶಬ್ದ ಮತ್ತು ಅರ್ಥ ಚಮತ್ಕಾರ. ಇಂತಹ ಶಬ್ದಗಳು ಸಿಗಬೇಕಾದರೆ ಮೊದಲು ಭಾಷೆಯ ಮೇಲೆ ಹಿಡಿತ ಸಾಧಿಸಬೇಕು. ನಾವು ಹೆಚ್ಚು ಹೆಚ್ಚು ಓದಬೇಕು. ಸಾಗರದಷ್ಟು ಓದಿದಾಗ   ಸಾಸಿವೆಯಷ್ಟು ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

ಪ್ರಾಸ ಪದಗಳು ಕವಿತೆಯ ಅಂದವನ್ನು ಹೆಚ್ಚಿಸುತ್ತದೆ ನಿಜ. ಆದರೆ ಅಲ್ಲಿ ಅರ್ಥಗೆಡಬಾರದು. ಕೆಲವರು ಹಠಕ್ಕೆ ಬಿದ್ದವರಂತೆ ಪ್ರಾಸ ಪದಗಳನ್ನು ತಮ್ಮ ಕವಿತೆಗಳಲ್ಲಿ ಬಳಸುತ್ತಾರೆ. ಔಚಿತ್ಯವರಿತು ಬಳಸದ  ಪ್ರಾಸ ಪದಗಳು  ಆಭಾಸವೆನಿಸುತ್ತವೆ. ಅನೌಚಿತ್ಯವು ರಸಭಂಗಕ್ಕೆ ಕಾರಣ ಎಂದು ಕಾವ್ಯ ಮೀಮಾಂಸಕರು ಎಚ್ಚರಿಸಿದ್ದಾರೆ. ಎಲ್ಲೋ ಓದಿದ ಸಾಲುಗಳು… ಆದಿಪ್ರಾಸ ಗರತಿಯಂತೆ
ಅಂತ್ಯಪ್ರಾಸ  ಗೆಳತಿಯಂತೆ … ಎಂದು.

ಬಂದ ಬಾಗಿಲು ಮಣ್ಣು
ಬಿಡುವ ಬಾಗಿಲು ಮಣ್ಣು
ನಡುವೆ ಕಾಯುವುದು ತಾಯ ಕಣ್ಣು

ಎಷ್ಟು ಅರ್ಥಪೂರ್ಣ !!  ಕೆ.ಎಸ್. ನರಸಿಂಹಸ್ವಾಮಿಯವರ ಕವನದ ಸಾಲುಗಳಿವು. ಬೇಂದ್ರೆಯವರು ಹೇಳುತ್ತಾರೆ  “ಕವಿತೆಯೊಂದು ಓದುಗನ  ಹೃದಯದಾಳಕ್ಕಿಳಿಯಬೇಕಾದರೆ ಲೇಖನಿ ಹಿಡಿದವನಿಗೆ ಪ್ರಕೃತಿಯನ್ನು ಆಸ್ವಾದಿಸುವ ಗುಣವಿರಬೇಕು ” ಎಂದು. ಪ್ರಕೃತಿ ಒಲಿದಾಗಲೂ ಪ್ರಕೃತಿ ಮುನಿದಾಗಲೂ ಕವನದ ವಸ್ತುಗಳಿಗೆ ಏನೂ ಕೊರತೆಯಾಗುವುದಿಲ್ಲ!

ಪುಸ್ತಕ ಸಂಸ್ಕೃತಿಯೇ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹೊಸ ಹೊಸ ಬರಹಗಾರರು ಕವಿತೆ ರಚನೆಗೆ ಕೈ ಹಚ್ಚುವುದು ಸ್ವಾಗತಾರ್ಹವೇ. ಆದರೆ ಉದಯೋನ್ಮುಖ ಬರಹಗಾರರ ಉತ್ಸಾಹ ನಿಂತ ನೀರಾಗಬಾರದು. ಬರೆಯುವ ಕಲೆಗಾರಿಕೆ  ಕರಗತವಾಗಲು ಓದುವ ಹವ್ಯಾಸವಿರಬೇಕು.

ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಗಳಂ ಕೇಳುತಂ
ಕೆಲವಂ ಮಾಳ್ಪವರಿಂದ ಕಂಡು
ಕೆಲವಂ ಸಜ್ಜನ ಸಂಗದಿಂದರಿಯಲ್ ಸರ್ವಜ್ಞನಪ್ಪಂ ನರಂ “
ಪುಲಿಗೆರೆಯ ಸೋಮನಾಥನ ಈ ಮಾತಿನಂತೆ ಕಾವ್ಯ ಕ್ಷೇತ್ರದಲ್ಲಿ ಅಡಿ ಇಡುವವರು ಬೇರೆ ಬೇರೆ ಕವಿಗಳಿಂದ ರಚಿಸಲ್ಪಟ್ಟ ಕೃತಿಗಳನ್ನು ಓದುವ , ಕವನಗಳನ್ನು ಆಲಿಸುವ, ಸುಜ್ಞಾನಿಗಳಿಂದ ತಮ್ಮ ಬರಹಗಳನ್ನು ತಿದ್ದಿಸಿಕೊಂಡು ಮತ್ತೆ ಹಂಚಿಕೊಳ್ಳುವ ಮನೋಭಾವವನ್ನು, ಸಹನೆಯನ್ನು  ರೂಢಿ ಮಾಡಿಕೊಳ್ಳಬೇಕು. ಆಗ ಮಾತ್ರ ಒಂದು ಬರಹದಿಂದ ಇನ್ನೊಂದು ಬರಹಕ್ಕೆ ತೊಡಗುವಾಗ  ಸುಧಾರಣೆ ತರಲು ಸಾಧ್ಯ. ಬೆಳವಣಿಗೆ ಸಾಧ್ಯ. ಹೀಗಾಗಬೇಕಾದರೆ  ತಿಳಿದವರು ಹೇಳುವ ತಿದ್ದುವಿಕೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಮೊದಲು ಬೇಕು

—————————————————————————————————–

About The Author

Leave a Reply

You cannot copy content of this page

Scroll to Top