ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–13
ಮತ್ತಷ್ಟು ಮೆಲಕುಗಳು

ಈ ಹಿಂದೆ ಹೇಳಿದಂತೆ ನನ್ನ ಓದಿನ ಹವ್ಯಾಸದ ಬಗ್ಗೆ ಹೇಳುತ್ತೇನೆ ಈ ಸಾರಿ. ಸ್ವಲ್ಪ ಮನೆಯ ಕಡೆ ಎಲ್ಲಾ ಸರಿ ಮಾಡಿದ ನಂತರ ಚಿಕ್ಕಮ್ಮನ ಮಗಳು ರೂಪಳ ಜೊತೆ ಹೋಗಿ ಮನೆಯ ಬಳಿಯೇ ಇದ್ದ ಸರಕಾರಿ ಗ್ರಂಥಾಲಯದಲ್ಲಿ ಎರಡು ಪುಸ್ತಕಗಳ ಕಾರ್ಡ್ ಮಾಡಿಸಿದ್ದು. ಯಾವ ಊರಿಗೆ ವರ್ಗವಾಗಿ ಹೋದರು ನಾನು ಮಾಡುತ್ತಿದ್ದ ಮೊದಲ ಕೆಲಸ ಮುಂದೆ ಇದೇ ಆಯಿತು. ಗ್ರಂಥಾಲಯದ ಕಾರ್ಡ್ ಮಾಡಿಸಿಕೊಂಡರೆ ಒಂದು ರೀತಿ ಓದಲು ಪುಸ್ತಕಗಳು ಸಿಗುವ ಖಾತರಿ. ಅಷ್ಟೇನೂ ಹೊಸ ಪುಸ್ತಕಗಳು ಇರಲಿಲ್ಲ ಆ ಗ್ರಂಥಾಲಯದಲ್ಲಿ . ಅಲ್ಲದೆ ತೆಲುಗು ಪುಸ್ತಕಗಳೇ ಹೆಚ್ಚು .ಆದರೂ ಓದಿರದ ಬಹಳಷ್ಟು ಪುಸ್ತಕಗಳಿದ್ದುದರಿಂದ ಚಿಕ್ಕಬಳ್ಳಾಪುರದಲ್ಲಿ ಇರುವಷ್ಟು ದಿನವೂ ಪುಸ್ತಕಗಳನ್ನು ಬದಲಾಯಿಸಿ ತೆಗೆದುಕೊಂಡು ಬರುತ್ತಿದ್ದು ನನ್ನ ನಂತರ ಆ ಕಾರ್ಡ್ ಅನ್ನು ನನ್ನ ಕಸಿನ್ ರೂಪಾಗೇ ಕೊಟ್ಟು ಬಂದೆ. 15 ದಿನಗಳ ಕಾಲ ಮಿತಿ ಇದ್ದರು ಎರಡು ಅಥವಾ ಮೂರು ದಿನಗಳಲ್ಲಿಯೇ ಪುಸ್ತಕಗಳನ್ನು ಬದಲಾಯಿಸಿಕೊಂಡು ಬರುತ್ತಿದ್ದಿತ್ತು ವಾಡಿಕೆ.
ಪ್ರತಿ ಶಾಖೆಯಲ್ಲಿಯೂ ಒಂದು ಮನರಂಜನ ಕೇಂದ್ರ ರಿಕ್ರಿಯೇಷನ್ ಕ್ಲಬ್ ಇರುತ್ತಿದ್ದು ಪ್ರತಿ ತಿಂಗಳು ಒಂದು ನಾಮಿನಲ್ ಮೊತ್ತ ಉದ್ಯೋಗಿಗಳ ಪ್ರತಿ ತಿಂಗಳ ಸಂಬಳದಲ್ಲಿ ಹಿಡಿಯುತ್ತಿದ್ದು ಅದರಲ್ಲಿ ಒಂದು ಭಾಗ ನಿಯತಕಾಲಿಕೆಗಳನ್ನು ಕೊಳ್ಳಲಾಗುತ್ತಿತ್ತು ಮತ್ತೆ ಸ್ವಲ್ಪ ಹಣದಲ್ಲಿ ವರ್ಷಕ್ಕೊಮ್ಮೆ ಎಲ್ಲಾದರೂ ಪ್ರವಾಸ ಆಯೋಜಿಸುತ್ತಿದ್ದುದು.

ಕನ್ನಡದ ಎಲ್ಲಾ ವಾರ ಹಾಗೂ ಮಾಸಪತ್ರಿಕೆಗಳನ್ನು ತರಿಸಲಾಗುತ್ತಿತ್ತು ತರಂಗ ಸುಧಾ ಮಂಗಳ ಮಯೂರ ಮಲ್ಲಿಗೆ ಕಸ್ತೂರಿ ಮೊದಲಾದುವು ಅಷ್ಟೇ ಅಲ್ಲದೆ ಇಂಗ್ಲಿಷಿನ ವುಮೆನ್ಸ್ ಎರಾ ಸಹ ಬರುತ್ತಿತ್ತು ಹಿಂದಿ ವಿಭಾಗದಿಂದ ಒಂದು ಹಿಂದಿ ಮಾಸಪತ್ರಿಕೆ ಸಹ ತರಿಸಲಾಗುತ್ತಿತ್ತು. ಇದರ ಜೊತೆಗೆ ಒಂದು ಕಬ್ಬಿಣದ ಅಲೆಮಾರಿಯ ತುಂಬಾ ಕನ್ನಡ ಹಾಗೂ ತೆಲುಗು ಪುಸ್ತಕಗಳನ್ನು ಜೋಡಿಸಿ ಇಡಲಾಗಿತ್ತು. ಆಗ ನಿಯತ ಕಾಲಿಕೆಗಳ ವಿಂಗಡಣೆ ಹಂಚಿಕೆ ಕೆಲಸವನ್ನು ಮಂಜುಳಾ ಎಂಬ ಟೈಪಿಸ್ಟ್ ನೋಡಿಕೊಳ್ಳುತ್ತಿದ್ದರು. ಸ್ವಲ್ಪ ದಿನಗಳಲ್ಲೇ ಅವರು ಹೆರಿಗೆರಜೆ ಹೋದದ್ದರಿಂದ ಅವರು ಹೋಗುವ ಮೊದಲು ಅದನ್ನು ನನಗೆ ವಹಿಸಿ ಕೊಟ್ಟಿದ್ದರು. ಅವರು ಬಂದ ನಂತರವೂ ನಾನು ಮತ್ತೆ ವರ್ಗಾವಣೆ ಆಗುವವರೆಗೂ ಆ ಕೆಲಸ ನಾನೇ ನಿರ್ವಹಿಸಿದೆ. ಆಗ ತುಂಬಾ ಜನ ನಿಯತಕಾಲಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಲ್ಲರಿಗೂ ಸಮಾನ ಅವಕಾಶ ಸಿಗುವ ಹಾಗೆ ಒಂದು ಪಟ್ಟಿ ಮಾಡಿ ಪ್ರತಿಯೊಬ್ಬರ ಸರತಿ ಬಂದಾಗ ಹೊಸ ಪುಸ್ತಕ ತೆಗೆದುಕೊಳ್ಳುವ ಹಾಗೆ ಮಾಡುತ್ತಿದ್ದುದು. ಈಗ ೫ _೬ ವರ್ಷಗಳಿಂದ ಓದುವ ಹವ್ಯಾಸ ತೀರಾ ಕಡಿಮೆಯಾಗಿದೆ ಎಂಬುದನ್ನು ಗಮನಿಸಿದಾಗ ಬೇಸರವಾಗುತ್ತದೆ. ಕರೆದು ಕೊಟ್ಟರೂ ನಿಯತಕಾಲಿಕೆಗಳು ಯಾರಿಗೂ ಬೇಡ.

ಅಲಮಾರಿಯಲ್ಲಿದ್ದ ಪುಸ್ತಕಗಳು ತೆಗೆದುಕೊಂಡು ಹೋಗುವ ಮುನ್ನ ಒಂದು ಪುಸ್ತಕ ರಿಜಿಸ್ಟರ್ ನಲ್ಲಿ ಸಹಿ ಹಾಕಿ ತೆಗೆದುಕೊಂಡು ಹೋಗಬೇಕಿತ್ತು .ನಂತರ ವಾಪಸ್ಸು ಮಾಡಿದಾಗ ಅದನ್ನು ಗುರುತು ಹಾಕಿಕೊಳ್ಳುತ್ತಿದ್ದೆವು. ಆ ರೀತಿ ಬಹಳಷ್ಟು ಪುಸ್ತಕಗಳು ಕನ್ನಡದ ಎಲ್ಲಾ ಪುಸ್ತಕಗಳನ್ನು ಅಲ್ಲಿಯೇ ಓದಿ ಮುಗಿಸಿದೆ. ಕೆಲವು ಎರಡು ಅಥವಾ ಮೂರನೆಯ ಓದು ಆಗಿದ್ದರು ಸಹ.
ಹೀಗೆ ನನ್ನ ಓದಿನ ಹಸಿವಿಗೆ ಅಲ್ಲಿ ಹೊಟ್ಟೆ ತುಂಬಾ ತುತ್ತು ಸಿಕ್ಕಿತು ಎಂದೆ ಹೇಳಬಹುದು.
ಚಿಕ್ಕಮ್ಮ ಮತ್ತು ಅವರ ಮಕ್ಕಳು ಹಾಗೂ ಬೀದಿಯಲ್ಲಿನ ಅನೇಕ ನೆರೆಹೊರೆಯವರು ಕನ್ನಡ ಸಿನಿಮಾ ಬಂದಾಗೆಲ್ಲ ಬಿಡದೆ ನೋಡುತ್ತಿದ್ದರು. ಚಿಕ್ಕ ಊರು ಎಲ್ಲಾ ಸಿನಿಮಾ ಥಿಯೇಟರುಗಳು ಹತ್ತಿರದಲ್ಲೇ ಇದ್ದುದರಿಂದ ಮತ್ತು ಸೆಕೆಂಡ್ ಶೋ ನೋಡಲು ಸಹ ಅನುಕೂಲವಿದ್ದುದರಿಂದ ಅಲ್ಲಿ ಅವರುಗಳೊಂದಿಗೆ ಬಹಳಷ್ಟು ಸಿನಿಮಾಗಳನ್ನು ನೋಡಿದೆ. ಮನೆಯಿಂದ ಕೂಗಳತೆ ದೂರದಲ್ಲಿದ್ದ ಕೃಷ್ಣ ಟಾಕೀಸಿನಲ್ಲಿ ಸೆಕೆಂಡ್ ಷೋ ಗೆ ಹೋದದ್ದೇ ಹೆಚ್ಚು.ಅಲ್ಲದೆ ರಾತ್ರಿಯ ಆ ನೀರವತೆಯಲ್ಲಿ ಸಿನಿಮಾ ಸಂಭಾಷಣೆಗಳು ಚೆನ್ನಾಗಿ ಕೇಳುತ್ತಿದ್ದು ಮಲಗುವ ತನಕ ದಿನಾ ಅದನ್ನು ಕೇಳಿಸಿಕೊಳ್ಳುತ್ತಿದ್ದುದು.
ಮೈಸೂರಿನಲ್ಲಿ ಪ್ರತಿ ಶುಕ್ರವಾರ ಮಾತ್ರ ಸಿನಿಮಾ ಬದಲಾವಣೆ ಆದರೆ ಅಲ್ಲಿ ಆ ನಿರ್ಬಂಧ ಇರಲೇ ಇಲ್ಲ ಮೂರು ನಾಲ್ಕು ದಿನಗಳಿಗೆ ಸಿನಿಮಾ ಬದಲಾವಣೆ ಆಗುತ್ತಿತ್ತು ಹಾಗಾಗಿ ಬಂದ ಕನ್ನಡ ಹಿಂದಿ ಸಿನಿಮಾ ಗಳ ಜೊತೆಗೆ ಕೆಲವೊಂದು ಪ್ರಸಿದ್ಧ ನಟರ ತೆಲುಗು ಚಿತ್ರಗಳನ್ನು ನೋಡುವ ಅವಕಾಶ ದೊರೆಯಿತು ಅಲ್ಲಿ ಚಿರಂಜೀವಿ ಹಾಗೂ ಡಾಕ್ಟರ್ ರಾಜಶೇಖರ ಅವರ ತುಂಬಾ ಹಿಟ್ ಚಿತ್ರಗಳನ್ನು ಅಲ್ಲಿ ನೋಡಿದ ನೆನಪು. ಒಂದು ತಮಾಶೆಯ ವಿಷಯ ಎಂದರೆ ಚಿತ್ರ ಆರಂಭವಾಗುವಾಗ ಓಡುತ್ತಿದ್ದ ಫ್ಯಾನುಗಳು ನಡುವಿನಲ್ಲಿ ಇದಕ್ಕಿದಂತೆ ನಿಂತು ಹೋಗಿರುತ್ತಿದ್ದವು. ಜನ ಮತ್ತೆ ಗಲಾಟೆ ಮಾಡಿದಾಗ ಫ್ಯಾನ್ ಹಾಕುತ್ತಿದ್ದರು. ಚಿತ್ರ ನಡೆಯುತ್ತಿರುವಾಗ ಮಧ್ಯದಲ್ಲಿ ಕಡಲೆಕಾಯಿ ಚುರುಮುರಿ ಇವುಗಳನ್ನು ತಂದು ಮಾರುತ್ತಿದ್ದುದು ಸ್ವಲ್ಪ ಆಶ್ಚರ್ಯ ತರುತ್ತಿತ್ತು.
ಪೇಟೆಯಲ್ಲಿ ಹಾಗೂ ಶಾಖೆಗೆ ಬರುವ ಪಾಲಿಸಿದಾರರು ಹೆಚ್ಚಿನ ಅಂಶ ತೆಲುಗಿನಲ್ಲಿ ಮಾತನಾಡುತ್ತಿದ್ದು, ತೆಲುಗು ಬರುವುದಿಲ್ಲ ಎಂದಾಗ ಮಾತ್ರ ಕನ್ನಡದಲ್ಲಿ ಮಾತನಾಡುತ್ತಿದ್ದರು. ಗಡಿನಾಡಿನ ವಿಶೇಷತೆ ಹಾಗೂ ಭಾಷಾ ಸೌಹಾರ್ದ ಇವುಗಳ ಬಗ್ಗೆ ಅರಿವು ಮೂಡಿದ್ದೇ ಆಗ.
ಸೆಪ್ಟೆಂಬರ್ ೧೨ ಕ್ಕೆ ತರಬೇತಿ ಅವಧಿ ಮುಗಿದು ಪ್ರೊಬೇಷನರಿ ಅವಧಿ ೩ ತಿಂಗಳು ಆರಂಭವಾಯಿತು. ಈ ಸಮಯದಲ್ಲಿ ಸಾಂಧರ್ಭಿಕ ರಜೆ (ಸಿ ಎಲ್) ಹಾಗೂ ಅರ್ಜಿತ ರಜೆ (ಪಿ. ಎಲ್) ಗಳೂ ದೊರಕಿದವು. ನಿಗಮದ ಉದ್ಯೋಗಿಗಳಿಗೆ ವರ್ಷಕ್ಕೆ 15 ಸಾಂದರ್ಭಿಕ ರಜೆಗಳು ನಮಗೆ ಸೆಪ್ಟೆಂಬರ್ ನಿಂದ ಅನ್ವಯವಾಗುವಷ್ಟು ಮಾತ್ರ ದೊರೆತವು ಅರ್ಜಿತ ರಜೆ 11 ದಿನ ಕೆಲಸ ನಿರ್ವಹಿಸಿದ ನಂತರ ಒಂದು ದಿನ ಎನ್ನುವ ಲೆಕ್ಕದಲ್ಲಿ ಜಮೆಯಾಗುತ್ತಿತ್ತು ಇದಲ್ಲದೆ ಕಾಯಿಲೆ ಬಂದಾಗ ಸಿಕ್ ಲೀವ್ ತೆಗೆದುಕೊಳ್ಳಬಹುದು ಆದರೆ ಅದು ಒಂದು ವರ್ಷ ಉದ್ಯೋಗ ನಿರ್ವಹಿಸಿದ ನಂತರ ಒಂದು ತಿಂಗಳು ಜಮೆ ಆಗುತ್ತಿತ್ತು.
ಅಲ್ಲದೆ ಈ ಪ್ರೊಬೇಷನ್ ಅವಧಿಯಲ್ಲಿ ಹಬ್ಬದ ಮುಂಗಡ ಅಂದರೆ ಫೆಸ್ಟಿವಲ್ ಅಡ್ವಾನ್ಸ್ ಅನ್ನು ತೆಗೆದುಕೊಳ್ಳಬಹುದಿತ್ತು. ಹಾಗಾಗಿ ಆ ವರ್ಷದ ದೀಪಾವಳಿ ಹಬ್ಬಕ್ಕೆ ನನ್ನ ಮೊದಲ ಹಬ್ಬದ ಮುಂಗಡ ತೆಗೆದುಕೊಂಡಿದ್ದು. ಆಗ ಅದು 500 ರೂಗಳು ಇತ್ತು. ಇದು ಬಡ್ಡಿ ರಹಿತ ಉಂಗಡ ಆಗಿತ್ತು, ಮುಂದಿನ 10 ತಿಂಗಳಗಳ ಕಾಲ ಅದನ್ನು ಸಂಬಳದಿಂದ ಹಿಡಿದುಕೊಳ್ಳುತ್ತಿದ್ದರು. ಆಗಿನಿಂದ ಆರಂಭವಾಗಿ ಕಳೆದ ವರ್ಷದವರೆಗೂ ನಿಯಮಿತವಾಗಿ ಪ್ರತಿ ವರ್ಷ ಹಬ್ಬದ ಮುಂಗಡ ತೆಗೆದುಕೊಳ್ಳುತ್ತಿದ್ದುದು. ಈಗ ಅದು 80000 ಆಗಿದೆ ಆದರೆ ಆಗಿನ 500 ಕೊಡುತ್ತಿದ್ದ ಖುಷಿ ಇಂದಿನ 80000 ಕೊಡುವುದಿಲ್ಲ ಎಂಬುದೂ ಒಂದು ವಿಷಾದನೀಯ ಸತ್ಯ.
ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತಿ ವರ್ಷ ಒಂದು ಅಪ್ರೈಸಲ್ ನಡೆದು ಹೆಚ್ಚಿನ ಸಾಧನೆ ಮಾಡಿದವರಿಗೆ ನಿಗದಿತ ಮೊತ್ತ ಲಭಿಸುತ್ತಿತ್ತು ಹಾಗೆ ಅಭಿವೃದ್ಧಿ ಅಧಿಕಾರಿಗಳು ಶಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಊಟ ಕೊಡಿಸುತ್ತಿದ್ದು ವಾಡಿಕೆ ಕೆಲವೊಮ್ಮೆ ಒಂದು ತಿಂಗಳಲ್ಲಿ ಇಬ್ಬರು ಮೂವರು ನಡೆದಿದ್ದರೆ ಆಗ ಎಲ್ಲಾದರೂ ಹೊರಗಡೆ ಪ್ರವಾಸ ಹೋಗುತ್ತಿದ್ದು ಅಲ್ಲಿನ ಅಭ್ಯಾಸ ನಾನು ಇದರ ಅವಧಿಯಲ್ಲಿ ಒಮ್ಮೆ ಹೀಗೆ ನಂದಿ ಬೆಟ್ಟಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದರು. ಒಂದು ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ಶಾಖ ಅವರಣದಲ್ಲಿ ಎಲ್ಲರೂ ಸೇರಿದೆವು.ಕಾರ್ ಇದ್ದ ಅಭಿವೃದ್ಧಿ ಅಧಿಕಾರಿಗಳು ಶಾಖಾಧಿಕಾರಿ ಹಾಗೂ ಉಪ ಶಾಖಾಧಿಕಾರಿಗಳ ಕಾರ್ಗಳಷ್ಟೇ ಅಲ್ಲದೆ ಮತ್ತೊಂದು ವಾಹನವನ್ನು ಮಾಡಿ ಬೆಟ್ಟದ ಮೇಲೆ ಹೋದ ನಂತರ ಅಲ್ಲಿ ಪ್ರವಾಸಿ ಬಂಗಲೆಯಲ್ಲಿ ಬೆಳಗಿನ ತಿಂಡಿ ಇಡ್ಲಿ ವಡೆ ಸಾಂಬಾರ್ ಹಾಗೂ ಕೇಸರಿ ಬಾತ್ ಪುಷ್ಕಳ ತಿಂಡಿ ತಿಂದ ನಂತರ ದೇವಸ್ಥಾನ ನಂತರ ಸುತ್ತ ಎಲ್ಲ ಓಡಾಡಿ ಮತ್ತೆ ಪ್ರವಾಸಿ ಬಂಗಲೆಗೆ ಬಂದು ಅಲ್ಲಿ ಲಕ್ಷಣವಾಗಿ ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ. ಎಲ್ಲರೂ ಕುಳಿತು ಕೆಲವೊಂದು ಆಟಗಳು ಅಂತ್ಯಾಕ್ಷರಿ ಎಲ್ಲವನ್ನು ಆಡಿ ಸಂಜೆ ಟೀ ಒಂದಿಗೆ ಬಿಸಿ ಬಿಸಿ ಬಜ್ಜಿ ತಿಂದು ಕತ್ತಲಾಗುವುದರ ಒಳಗೆ ಶಾಖೆಯ ಬಳಿ ಕರೆದುಕೊಂಡು ಬಂದಿದಬಂದಿದ್ದರು. ಎಲ್ಲರೂ ಕುಟುಂಬ ಸಮೇತವಾಗಿ ಬನ್ನಿ ಎಂದು ಹೇಳಿದ್ದರು ಆಗ ರವೀಶ್ ಊರಿಗೆ ಬರಲು ಸಾಧ್ಯವಾಗದಿದ್ದರಿಂದ ನಾನೊಬ್ಬಳೇ ಹೋದದ್ದು. ನನ್ನದೇ ವಿಕ್ರಯ ವಿಭಾಗದ ಅಷ್ಟರೊಳಗೆ ತುಂಬಾ ಹತ್ತಿರವಾಗಿದ್ದ ಗೆಳತಿ ಜಯಶ್ರೀ ಹಾಗೂ ಅವಳ ಕುಟುಂಬ ಮಗಳು ಸಂಗೀತ ಜೊತೆಗೆ ಅಂದಿನ ಪ್ರವಾಸವಿಡೀ.
ನನಗಂತೂ ತುಂಬಾ ಖುಷಿ ಕೊಟ್ಟ ಪ್ರವಾಸ ಅದು.

ಚಿಕ್ಕಬಳ್ಳಾಪುರದಲ್ಲಿ ನನಗೆ ತುಂಬಾ ಆತ್ಮೀಯವಾದವರು ಜಯಶ್ರೀ. ಮೂಲತಃ ಕೆಜಿಎಫ್ ನವರು. ಮಾತೃಭಾಷೆ ತೆಮಿಳು. ಕೋಲಾರದಲ್ಲಿ ಮೊದಲು ನೇಮಕಾತಿ. ಅಲ್ಲೇ ಅವರದೇ ಬ್ಯಾಚ್ನ ಮುನಿಯಪ್ಪ ಅವರೊಂದಿಗೆ ಪ್ರೇಮ ವಿವಾಹ. ಮುನಿಯಪ್ಪ ಅವರದು ಚಿಕ್ಕಬಳ್ಳಾಪುರದ ಹತ್ತಿರದ ಹಳ್ಳಿಯಾದ್ದರಿಂದ ಇಬ್ಬರೂ ಇಲ್ಲಿಗೆ ವರ್ಗಾವಣೆ ಹೊಂದಿ ಬಂದಿದ್ದರು. ಆಗ ಅವರ ಮಗಳು ಸಂಗೀತಾಗೆ ಮೂರೋ ನಾಲ್ಕೋ ವರ್ಷ. ಚೂಟಿಯಾಗಿದ್ದಳು. ನನ್ನ ಜೊತೆ ಹೊಂದಿಕೊಂಡಿದ್ದಳು. ಟಿವಿಯಲ್ಲಿ ಭವ್ಯಳ ಹಾಡು ಬಂದರೆ ಸುಜಾತಾ ಆಂಡಿ ನೋಡು ಅನ್ನುತ್ತಿದ್ದಳಂತೆ. ಆಗಾಗ ಕಛೇರಿಗೂ ಬರುತ್ತಿದ್ದ ಮುದ್ದಾದ ಮಗು. ವರ್ಗಾವಣೆ ಹೊಂದಿ ಬರುವ ಮುನ್ನ ಜಯಶ್ರೀ ಸಂಗೀತಾ ಜೊತೆ ಫೋಟೋ ಸಹ ತೆಗೆಸಿಕೊಂಡಿದ್ದೆ. ಜಯಶ್ರೀ ತುಂಬಾ ಬುದ್ದಿವಂತೆ. ಚೆನ್ನಾಗಿ ಕೆಲಸ ಮಾಡುತ್ತಿದ್ದರು. ಮೊದಲಿಗೆ ನನಗೆ ಕೆಲಸ ಕಲಿಸಿಕೊಟ್ಟಿದ್ದೂ ಸಹ ಅವರೇ. ಚಿಕ್ಕಬಳ್ಳಾಪುರ ಬಿಟ್ಟ ನಂತರವೂ ಪತ್ರ ಮುಖೇನ ಸಂಪರ್ಕದಲ್ಲಿದ್ದೆವು. ಒಮ್ಮೆ ಮೈಸೂರಿಗೂ ಬಂದಿದ್ದರು. ಸಂಗೀತಾ ಮದುವೆಗೆ ಎಲೆಕ್ಷನ್ ಕರ್ತವ್ಯ ಬಂದಿದ್ದರಿಂದ ಹೋಗಲಾಗಿರಲಿಲ್ಲ. ಅವರ ಜೊತೆಯಲ್ಲಿದ್ದ ಮುನಿಯಪ್ಪ ಅವರ ತಮ್ಮನ ಮದುವೆ ಮೈಸೂರಿನಲ್ಲಿ ಆದಾಗ ನಾವೂ ಹೋಗಿದ್ದೆವು. ಈಗ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲಸಿರುವ ಜಯಶ್ರೀ ಮುನಿಯಪ್ಪ ದಂಪತಿಗಳ ಒಡನಾಟ ಫೋನ್ ನಲ್ಲಿ ಮುಂದುವರಿದಿದೆ.
ನಮಗೆ ವಿಕ್ರಯ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದ ನಾಗರಾಜ್ ಅವರು ಆಗಲೇ ವಿದೇಶ ಪ್ರವಾಸಗಳನ್ನು ಮಾಡಿದ್ದಂತವರು. ಅವರು ತೋರಿಸುತ್ತಿದ್ದ ಫೋಟೋಗಳನ್ನು ಕುತೂಹಲದಿಂದ ನೋಡುತ್ತಿದ್ದೆವು. ಅಲ್ಲದೆ ಅವರು ವಿದೇಶಿ ವಸ್ತುಗಳನ್ನು ವಿಕ್ರಯ ಮಾಡುತ್ತಿದ್ದರು. ಕೀ ಬಂಚ್ ನಲ್ಲಿ ಇದ್ದ ಒಂದು ಕ್ಯಾಲ್ಕುಲೇಟರ್ ಅನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದರು ಅವರ ಬಳಿ ಒಂದು ಇಂಪೋರ್ಟೆಡ್ ಸೀರೆ ಕೊಂಡು ಕೊಂಡಿದ್ದ ನೆನಪು.
ಸುಜಾತಾ ರವೀಶ





ಅಂಕಣ ಚೆನ್ನಾಗಿ ಮೂಡಿ ಬರುತ್ತಿದೆ ಸುಜಾತಾ ಮೇಡಂ
ಧನ್ಯವಾದಗಳು .
ಸುಜಾತಾ ರವೀಶ್
Beautiful Naration of your Beautiful Profesional Career…
ಧನ್ಯವಾದಗಳು.
ಸುಜಾತಾ ರವೀಶ್
ಅಂದಿನ ಚಿಕ್ಕ ಪುಟ್ಟ ಅನುಭವಗಳನ್ನು ನೆನಪಿನ ಮೆರವಣಿಗೆಯಲ್ಲಿ ,ಅಕ್ಷರದ ಬರೆವಣಿಗೆಯಲ್ಲಿ ಹೆಕ್ಕಿ ಹೆಕ್ಕಿ ಉಣಬಡಿಸುವುದು ವೈಯಕ್ತಿಕ ಅನುಭವವನ್ನೂ ಸಹ ಸಾಂದ್ರವಾಗಿಸಬಲ್ಲದು.ಇದು ಇಲ್ಲಿ ಸಂವೇದ್ಯ. ಇವೆಲ್ಲವೂmiscellaneousಅನುಭವವಲ್ಲ.ಅನುಭವಗಳ ಪುನರನುಭವಗಳು ಭಾವ ಇದ್ದಿದ್ದರಿಂದಲೇ ನಿಸ್ತೇಜ ಎಂಬ ಅಭಾವದಿಂದ ತಪ್ಪಿಸಿಕೊಂಡಿದೆ. ಖಾಸಗಿ ಖಾಸ್ ಬಾತ್ ಗಳು ರುಚಿ ಶುಚಿ ಸಂವೇದ್ಯ, ಶುಭವಾಗಲಿ ಅಕ್ಕರೆಯ ಅಕ್ಷರದ ಸಲಿಲಸರಿತೆಗೆ.
ನಿಮ್ಮ ಈ ಸುಂದರ ಸವಿ ಸ್ಪಂದನೆಗಾಗಿಯೇ ಕಾಯುವ ಹಾಗೆ ಆಗಿದೆ.ಓದಿದ ಅನುಭವದ ಪಾಕ ಪದಗಳ ಅಚ್ಚಿನಲ್ಲಿ ಹದವಾಗಿ ಹೊರಬಂದದ್ದನ್ನು ಕಂಡಾಗ ಬರೆದ ಕವಿ ಹೃದಯಕ್ಕೆ ಸಾರ್ಥಕ್ಯದ ಭಾವ. ಧನ್ಯವಾದಗಳು ಎಂದು ಹೇಳುವುದು ಬರೀ ಔಪಚಾರಿಕ ಆಗಿಬಿಡುತ್ತದೆ. ಹೃದಯಾಂತರಾಳದ ನಮನಗಳು.
ಸುಜಾತಾ ರವೀಶ್
ಮೈಸೂರು
ನಿಮ್ಮ ಓದಿನ ಹವ್ಯಾಸದ ಬಗ್ಗೆ ಓದಿದಾಗ ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ತಾಯಿಯ ಮನೆಯ ಬಳಿ ಇದ್ದ ಸಿಟಿ ಸೆಂಟ್ರಲ್ ಲೈಬ್ರರಿಗೆ ನಿಯಮಿತವಾಗಿ ಹೋಗಿ ಬೇಕಾದ ಪುಸ್ತಕಗಳನ್ನು ತಂದು ಬೇಗ ಬೇಗ ಓದಿ ಮುಗಿಸುತ್ತಿದ್ದ ಆ ದಿನಗಳ ನೆನಪಾಯಿತು ಸುಜಾತಾ…..ವಯಸ್ಸಾದರೂ ನಿಮ್ಮಂತೆಯೇ ನನಗೆ ಓದುವ ತೃಷೆ ಕುಂದಿಲ್ಲ.
ಧನ್ಯವಾದಗಳು……ಎ.ಹೇಮಗಂಗಾ