ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಮನಸ್ಸು ತುಂಬಾ ಮುಗ್ಧವಾದದ್ದು, ತಾಯಿಯ ಗರ್ಭದಿಂದ ಹೊರಬಂದು, ಮಾತನ್ನು ಕಲಿತು, ನಡೆಯಲು ಪ್ರಾರಂಭಿಸಿದಾಗ ಮನಸ್ಸಿನಲ್ಲಿ ಕುತೂಹಲ ಉಂಟಾಗುತ್ತದೆ. ಹೊರ ಪ್ರಪಂಚವನ್ನು ಕಾಣುವ ತನಕ ಹೆಚ್ಚುತ್ತದೆ. ಹೊಸತನವನ್ನು ತಿಳಿದುಕೊಳ್ಳುವ, ಹೊಸ ಜ್ಞಾನವನ್ನು ಪಡೆದುಕೊಳ್ಳುವ ಹಂಬಲ ಮಕ್ಕಳಲ್ಲಿ ಇರುತ್ತದೆ.ಮಗು ತನ್ನ ಸುತ್ತಮುತ್ತಲಿನ ಪ್ರಪಂಚವನ್ನು ನೋಡಿ, ನಾನು ಹಾಗೆ ಆಗಬೇಕೆಂದು ಕನಸು ಕಾಣುತ್ತದೆ.ಆದರೆ ಅದು ತನ್ನ ಸಾಮರ್ಥ್ಯಕ್ಕೆ ಅಥವಾ ಯೋಗ್ಯತೆಗೆ ಅನುಗುಣವಾಗಿ ಇದೆಯೇ ಇಲ್ಲವೇ ಎಂಬುದನ್ನು ಆಲೋಚನೆ ಮಾಡದೆ, ಮಗು ಕನಸನ್ನು ಕಂಡು ಕನಸಿಗೆ ರೆಕ್ಕೆಯನ್ನು ಕಟ್ಟಿ ಹಾರಾಡಲು ಸಿದ್ದವಾಗಿರುವಾಗ, ತಂದೆ ತಾಯಿಗಳಾದವರು ಮಗುವಿನ ಕನಸಿನ ರೆಕ್ಕೆಯನ್ನು ಕತ್ತರಿಸಲು ಹೋಗುತ್ತಾರೆ. ಇದರಿಂದಾಗಿ ಆ ಮಕ್ಕಳ ಮನಸ್ಸಲ್ಲಿ ನೋವು ಉಂಟಾಗುತ್ತದೆ. ಹಾಗಾಗಿ ಮಕ್ಕಳೊಂದಿಗೆ ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ವ್ಯವಹರಿಸಬೇಕಾಗುತ್ತದೆ.ಮಕ್ಕಳ ಭಾವನೆಗಳಿಗೆ ನೋವುಂಟಾಗದಂತೆ ತಂದೆ ತಾಯಿಗಳು ಮಕ್ಕಳ ಮನಸ್ಸನ್ನು ಅರಿತು ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸಮಾಜದಲ್ಲಿ ಕಾಣುತ್ತೇವೆ.ಅತಿ ಸಣ್ಣ ಪ್ರಾಯದಲ್ಲಿ ಮಕ್ಕಳು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ .ಇದಕ್ಕೆ ಕಾರಣ ತಮ್ಮ ಬದುಕಿನಲ್ಲಿ ತಾವು ಬಯಸಿದ್ದು ಸಿಗದೇ ಇರೋದು. ತಾನೂ ಹಾಗೆಯೇ ಆಗಬೇಕು ಹೀಗೆಯೇ ಆಗಬೇಕು ಎನ್ನುವಂತಹ ಕನಸನ್ನು ಕಾಣುತ್ತಾ ಕನಸಿನ ರೆಕ್ಕೆಯನ್ನು ಕಟ್ಟಿ ಹಾರಾಡುತ್ತಿರುವಾಗ ಕನಸು ಈಡೇರದೇ ಇದ್ದಾಗ ಜೀವನದಲ್ಲಿ ಅರ್ಥವನ್ನೇ ಕಳೆದುಕೊಂಡಂತೆ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇಲ್ಲಿ ಮಕ್ಕಳಿಗೆ ತಿಳುವಳಿಕೆಯ ಕೊರತೆ ಇರಬಹುದು .ಹಾಗಾಗಿ ಮಕ್ಕಳನ್ನು ಬೆಳೆಸುವಾಗ ಜೀವನದ ಅನುಭವವನ್ನು ಕೊಡಬೇಕಾದದ್ದು ತಂದೆ ತಾಯಿಗಳ ಕರ್ತವ್ಯವಾಗಿರುತ್ತದೆ.

ಇನ್ನೊಂದು ಕಡೆಯಲ್ಲಿ ಮಕ್ಕಳ ಭವಿಷ್ಯಕ್ಕೆ ಕುತ್ತು ಬರಲು ಕಾರಣ, ತಂದೆ ತಾಯಿಗಳ ಆಸೆಗಳ ಅತಿಯಾದ ಹೇರಿಕೆ ಅಥವಾ ಒತ್ತಡವೆಂದೇ ಹೇಳಬಹುದು. ಹೆಚ್ಚಿನ ತಂದೆ ತಾಯಿಗಳು ನಮ್ಮ ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಅದನ್ನು ಮಾಡುವ ಸಾಮರ್ಥ್ಯವಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳವುದಿಲ್ಲ. ಒತ್ತಡವನ್ನು ಹೇರಿಕೆ ಮಾಡುತ್ತಾರೆ. ಆದರೆ ಮಕ್ಕಳಿಗೆ ಅದು ಇಷ್ಟ ಇರೋದಿಲ್ಲ. ಅವರು ಅವರದೇ ಆದ ಕನಸುಗಳನ್ನು ಕಾಣುತ್ತಿರುತ್ತಾರೆ .
ಮಕ್ಕಳ ಕನಸುಗಳ ರೆಕ್ಕೆಯನ್ನು ಹೆತ್ತವರು ಕತ್ತರಿಸಿದರೆ ಮಕ್ಕಳು ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅದರಿಂದಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಹುದು.

ಚಿಂತಕನಾದ ಖಲೀಲ್ ಗಿಬ್ರಾನ್ ಮಕ್ಕಳ ತಂದೆ ತಾಯಿಗಳಿಗೆ ಹೇಳುತ್ತಾನೆ. “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ” ಎಂದು. ಅಂದರೆ ಮಕ್ಕಳು ಹೆತ್ತವರ ಮೂಲಕ ಬಂದರೂ ಹೆತ್ತವರ ಮಕ್ಕಳಲ್ಲ. ಅವರು ಅವರದೇ ಆದ ಭವಿಷ್ಯವನ್ನು ಕಾಣುವವರು. ಹಾಗಾಗಿ ತಂದೆ ತಾಯಿ ತಮ್ಮ ಮನಸ್ಸಿನ ಭಾವನೆಗಳನ್ನು ಹಾಗೂ ತಮ್ಮ ದೃಷ್ಟಿಕೋನವನ್ನು ತಮ್ಮ ಮಕ್ಕಳ ಮೇಲೆ ಹೇರಿಕೆ ಮಾಡಬಾರದು. ಏಕೆಂದರೆ ಮಕ್ಕಳು ಭವಿಷ್ಯದಲ್ಲಿ ಬದುಕನ್ನು ನಡೆಸಲು ಇರುವವರು. ಅವರ ಭವಿಷ್ಯವು ಹೀಗೇಯೆ ಇರುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಅವರ ಭವಿಷ್ಯವನ್ನು ಕಂಡುಕೊಳ್ಳುವವರು ಅವರೇ. ಹಾಗಾಗಿ ಹೆತ್ತವರು ತಮ್ಮ ವಿಚಾರಗಳನ್ನು ಮಕ್ಕಳ ಮೇಲೆ ಹೇರಿಕೆ ಮಾಡದೆ, ಮಕ್ಕಳೇ ತಮ್ಮ ಕನಸಿನಂತೆ ಬದುಕಲು ಬೇಕಾದ ಮಾರ್ಗದರ್ಶನವನ್ನು ನೀಡಬೇಕಾದುದು ಹೆತ್ತವರ ಕರ್ತವ್ಯ ಎಂದು ಅವನು ಹೇಳುತ್ತಾನೆ.

ಬಾಲ್ಯದಲ್ಲಿ ಮಕ್ಕಳ ಬುದ್ಧಿ ಅಷ್ಟು ಬಲಿತಿರುವುದಿಲ್ಲ. ಹಾಗಾಗಿ ತಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವ ಕರ್ತವ್ಯ ಹೆತ್ತವರದ್ದು ಅಥವಾ ಪೋಷಕರದ್ದು ಇರುತ್ತದೆ. ಮಕ್ಕಳು ತಪ್ಪು ನಡೆಯನ್ನು ನಡೆಯದಂತೆ ಅವರಿಗೆ ಮಾರ್ಗದರ್ಶನ ನೀಡಿ ಸರಿದಾರಿಗೆ ಕಳಿಸುವಂತಹ ಜವಾಬ್ದಾರಿ ಹೆತ್ತವರದ್ದಿರುತ್ತದೆ.

“ತಂದೆಯಂತೆ ಮಗ ಗುರುವಿನಂತೆ ಶಿಷ್ಯ”ಎಂಬಂತೆ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಸಂಸ್ಕೃತಿ ಸಂಸ್ಕಾರ ಕೊಟ್ಟು ಬೆಳೆಸುತ್ತಾರೊ ಅದೇ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ.ಹಾಗಾಗಿ ಬೆಳವಣಿಗೆಯ ಹಾದಿಯಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗದಂತೆ, ತಪ್ಪು ದಾರಿ ಹಿಡಿಯದಂತೆ ನೋಡಿಕೊಳ್ಳಬೇಕು.ಅದು ಬಿಟ್ಟು ಮಕ್ಕಳು ತಮ್ಮ ಆಸೆ, ಆಕಾಂಕ್ಷೆಗಳಿಗೆ ಅನುಗುಣವಾಗಿ ಬೆಳೆಯುವುದಕ್ಕೆ ಹೊರಟಾಗ ಹೆತ್ತವರು ಕತ್ತರಿ ಹಾಕುವ ಕೆಲಸವನ್ನು ಮಾಡಬಾರದು. ಕೆಟ್ಟ ಕೆಲಸವನ್ನು ಮಾಡಿದಾಗ ಮಾತ್ರ ಕತ್ತರಿ ಹಾಕುವ ಕೆಲಸ ಹೆತ್ತವರದ್ದು ಅಥವಾ ಪೋಷಕರಾಗಿರುತ್ತದೆ .

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಸಣ್ಣ ಮಕ್ಕಳಿಗೆ ಬೆಳೆಯುವಾಗ ಯಾವ ರೀತಿಯ ಸಂಸ್ಕಾರವನ್ನು ಕೊಡುತ್ತೇವೆಯೋ, ಅದೇ ರೀತಿಯಲ್ಲಿ ಅವರು ಬೆಳೆಯುತ್ತಾರೆ. ಮಣ್ಣಿನ ಮುದ್ದೆಯಂತೆ ಇರುವ ಮಕ್ಕಳ ಮನಸ್ಸಿನಲ್ಲಿ ಎಲ್ಲವೂ ಅಂಟಿಕೊಳ್ಳುತ್ತದೆ. ಹಾಗಾಗಿ ಮಕ್ಕಳ ಮನಸ್ಸಿನಲ್ಲಿ ಉತ್ತಮ ವಿಚಾರಗಳು ಅಂಟಿಕೊಳ್ಳಬೇಕಾದರೆ ಉತ್ತಮ ಸಂಸ್ಕೃತಿ,ಸಂಸ್ಕಾರವನ್ನು ಹಾಗೂ ಜೀವನ ಕ್ರಮವನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಅದುವೆ ಮುಂದೆ ನಮ್ಮ ಮಕ್ಕಳ ಜೀವನಕ್ರಮವಾಗಿ ಪಡಿ ಮೂಡುತ್ತದೆ.

ಇಂದು ಮಕ್ಕಳ ಸ್ವಾತಂತ್ರ್ಯಕ್ಕೆ ಕತ್ತರಿ ಅಥವಾ ಕಡಿವಾಣ ಹಾಕುವುದು ಕಂಡುಬರುತ್ತದೆ.ಕೆಲವು ಮಕ್ಕಳ ತಂದೆ ತಾಯಿಗಳಿಗೆ ತಮ್ಮ ಮಕ್ಕಳು ತಾವು ಹೇಳಿದ್ದನ್ನೇ ಕೇಳಬೇಕು, ಮಾಡಬೇಕು ಎನ್ನುವಂತಹ ಅತಿಯಾದ ಕಾಳಜಿ ಇರುತ್ತದೆ. ಇದು ಒಂದು ರೀತಿಯಲ್ಲಿ ಮಗುವಿನ ಹಿತದೃಷ್ಟಿಯಿಂದ ಸರಿ ಎನಿಸಿದರೂ, ಇನ್ನೊಂದು ರೀತಿಯಲ್ಲಿ ತಪ್ಪಾಗಿ ಕಾಣುತ್ತದೆ. ಏಕೆಂದರೆ ಮಕ್ಕಳು ತಂದೆ ತಾಯಿಯರ ಕಟ್ಟುನಿಟ್ಟಿನೊಳಗೆ ಬದುಕುವುದಾದರೆ ಅವರಿಗೆ ಸ್ವಾತಂತ್ರ್ಯವಾದರೂ ಎಲ್ಲಿಯದು? ಹಾಗಾಗಿ ಮಕ್ಕಳನ್ನು ಬೆಳೆಸುವಾಗ ಬಹಳ ಎಚ್ಚರಿಕೆಯಿಂದ ಬೆಳೆಸಬೇಕಾಗುತ್ತದೆ.ಹೆತ್ತವರು ಕೊಡುವ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು.
ಹಾಗಂತ ಅತಿಯಾದ ಕಟ್ಟುನಿಟ್ಟು ಕೂಡ ಸಲ್ಲದು.ಅತಿಯಾದ ನಿಯಂತ್ರಣ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಕಲಿಕೆಯಲ್ಲಿಯೂ ಮಕ್ಕಳು ಹಿಂದೆ ಬೀಳಬಹುದು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇರಬಹುದು.


About The Author

Leave a Reply

You cannot copy content of this page