ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್

ಮನ್ನಣೆಯ ಸಿಗದಾಗ ಕೊರಗದಿರು ಗೆಳತಿ
ಸೋತು ಹೋದೆನೆಂದು ಮರುಗದಿರು ಗೆಳತಿ

ಛಲ ಬಿಡದ ವಿಶ್ವಾಸ ನಿನ್ನ ನೆರಳಾಗಿರಲಿ
ಕಡೆಗಣಿಸಿದರೆಂಬ ಚಿಂತೆಯಲಿ ಸೊರಗದಿರು ಗೆಳತಿ

ಸನ್ಮಾನಿಸುವವರೆ ತಿರಸ್ಕರಿಸಿದರೆಂದು ಬೇಸರಿಸದಿರು
ನಿನ್ನ ಮನದ ಅಭಿರುಚಿಗಳ ತೊರೆಯದಿರು ಗೆಳತಿ

ಅನುದಿನವು ನಡೆಯುವುದು ಬಾಳ ಪರೀಕ್ಷೆ
ಸೋತವರೆ ಗೆಲ್ಲುವುದು ಎಂಬುದ ಮರೆಯದಿರು ಗೆಳತಿ

ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ

ಜಯವ ಹುಡುಕುವ ದಾರಿಯಲಿ ಸಾಗುತಿರು
ಮೋಸ ಅನ್ಯಾಯದ ಮುಳ್ಳ ತುಳಿಯದಿರು ಗೆಳತಿ

ನೀರ ಮೇಲಿನ ಗುಳ್ಳೆ ಸೋಲು ಎಂದಿದೆ ಶುಭಳ ಮನ
ಕ್ಷಣಿಕವಾದ ದುಃಖ ದುಗುಡಗಳಿಗೆ ಹೆದರದಿರು ಗೆಳತಿ


2 thoughts on “ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್

  1. ಗೆಳತಿಗೆ ಗೆಲ್ಲಲು ಸಾಧ್ಯ ಎಂದು ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top