ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ ಸಂತಬಾ
ʼಅವ್ವಾ ನಾ ಕಳ್ಳನಲ್ಲʼ

ಅವ್ವಾ ನಾ ಕಳ್ಳನಲ್ಲ
ನೀ ಹಾಕಿದ ಗೆರೆ ದಾಟದವ
ನಿನ್ನ ಪ್ರೀತಿ ಮಗ ನಾನವ್ವ
ನಾನು ಕಳ್ಳತನ ಮಾಡಿಲ್ಲವ್ವ
ನಿನ್ನೆದೆಯ ಭಾಗ ನಾನಿದ್ದೀನಿ
ನಿನ್ನ ಕಣ್ಣಿನ ಕಾಂತಿ ನಾನು
ಅಪ್ಪನ ರಾಜಕುಮಾರ ನಾನು
ನಾನು ಕಳ್ಳತನ ಮಾಡಿಲ್ಲವ್ವ
ನಿಮ್ಮ ವೃದ್ಧಾಪ್ಯದ ಆಧಾರನಿದ್ದೆ
ಮನೆಯ ಬಂಗಾರದ ಕಳಸನಿದ್ದೆ
ಎಲ್ಲರ ಮಾತನ್ನು ಕೇಳುತಿದ್ದೆ
ನಾನು ಕಳ್ಳತನ ಮಾಡಿಲ್ಲವ್ವ
ತಿನಿಸಿ ಪಾಕೀಟ್ ರಸ್ತೇಲಿ ಬಿದ್ದಿತ್ತು
ಆಸೆಯಾಗಿ ಗಬಕ್ಕನೇ ತಗೊಂಡೆ
ಮನಸ್ಸು ತಿನ್ನಲು ಹೇಳಿತು
ನಾನು ಕಳ್ಳತನ ಮಾಡಿಲ್ಲವ್ವ
ಅಂಗಡಿಯವ ತಪ್ಪಾಗಿ ತಿಳಿದ
ನಾನು ಕದ್ದೆ ಅಂತ ಹೊಡೆದ
ನಿನ್ನನ್ನೂ ಕರೆದು ಅಪಮಾನಿಸಿದ
ನಾನು ಕಳ್ಳತನ ಮಾಡಿಲ್ಲವ್ವ
ನೀನೂ ವಿಶ್ವಾಸ ತೋರಿಸಲಿಲ್ಲ
ಅಂಗಡಿಯವನಂಗ ಬೈದೆ ಹೊಡೆದೆ
ಗೊತ್ತು ನಿನಗೂ ಅಪಮಾನ ಆಗಿದ್ದು
ನಾನು ಕಳ್ಳತನ ಮಾಡಿಲ್ಲವ್ವ
ಮನೆಮಂದಿನೂ ಕಳ್ಳ ತಿಳಿದರು
ಜನರೆಲ್ಲ ಕಳ್ಳ ಅಂದಬಿಟ್ಟರು
ಭಾಳ ಮನಸ್ಸಿಗೆ ನೋವಾಗಿದೆ
ನಾನು ಕಳ್ಳತನ ಮಾಡಿಲ್ಲವ್ವ
ಅವ್ವ ನನ್ನ ಮಡಿಲಾಗ ಹಾಕಿಕೋ
ಎಲ್ಲಾರ ಚುಚ್ಚು ಮಾತು ಚುಚ್ಚುತ್ತಿದೆ
ಕ್ಷಮಿಸವ್ವ ನಿಮ್ಮನ್ನೆಲ್ಲ ಬಿಟ್ಟು ಹೊರಟೀನಿ
ನಾನು ಕಳ್ಳತನ ಮಾಡಿಲ್ಲವ್ವ
ಡಾ.ರೇಣುಕಾತಾಯಿ ಸಂತಬಾ.
