ಕಾವ್ಯ ಸಂಗಾತಿ
ಶರತ್ ಸಂತೇಬೆನ್ನೂರು
“ಅಲ್ಲಿ ಎಲ್ಲವು ಒಂದೆ!“

ಅಲ್ಲಿ ಎಲ್ಲವೂ ಒಂದೇ..!!
ಮೆನ್ಯೂ ನೋಡಿ ಆರಿಸಿ
ತರಿಸಿದ ಖಾದ್ಯಗಳಲ್ಲ ಅವೂ.
ನಾವ್ಯಾರು ಎಂದಿಗೂ,
ತಟ್ಟೆಯಲಿದದ್ದನ್ನ ಪೋಟೊ ಕ್ಲಿಕ್ಕಿಸಲೇಯಿಲ್ಲ.
ಅಕ್ಷರ, ಬೆಳಕುಗಳನಿಟ್ಟ
ಶಾಲೆಯೇ ಕೊಡುತಿದ್ದ ಮೃಷ್ಟಾನ್ನವದೂ,
ನಮ್ಮ ಭವಿಷ್ಯದಷ್ಟೆ ಹೊಳೆವ
ತಟ್ಟೆಗಳನಾವೇ ತೊಳೆದು..
ಊಟಕ್ಕೆ ಸಾಲಿಗೆ ನಿಂತರೆ
ಬಿಸಿ ಅನ್ನ,ತರಕಾರಿಕಾಳುಗಳ
ಸಾರಿನ ಘಮ..
ಇಡೀ ಬಾಯ ನೀರಾಗಿಸುತಿತ್ತು.

ಗೆಳೆಯರೆಲ್ಲ ಗುಂಪುಗಟ್ಟಿ
ಉಣ್ಣಲು ಕುಂತರೆ..
ಅಮೃತವನ್ನೆ ಹೊಟ್ಟೆಗಿಳಿಸುವ
ಖುಷಿ ನಮ್ಮದೂ..
ಒಂದೇತಟ್ಟೆಗೆ ಅದೆಷ್ಟು ಕೈಗಳೊ..
ನಾವೆಂದು ಲೆಕ್ಕಯಿಡಲೆಯಿಲ್ಲ
ಎಂಟಣಿ ಉಪ್ಪಿನಕಾಯ್ ನೆಕ್ಕಿ
ಅನ್ನಮುಕ್ಕಿ, ನಾವಡುತಿದ್ದೆವು ಆಟ…
ಸ್ನೇಹದ ಕಡಲಯಾನದಿ
ಒಡಲು,ಜ್ಞಾನದ ಹಸಿವುಗಳೆನೆಲ್ಲ
ನೀಗಿಸುತಿತ್ತು…
ಅಕ್ಷರದಾಸೋಹದ ಬಿಸಿಯೂಟ!!
ಶರತ್ ಸಂತೇಬೆನ್ನೂರು




❤️❤️
❤️