ಕಾವ್ಯಸಂಗಾತಿ
ಎಸ್ ವಿ ಹೆಗಡೆ ಅ
ಪಿತ್ರಾರ್ಜಿತ

ಅಪ್ಪನಾಗುವ ತನಕ ತಂದೆಯರಿವಿಲ್ಲ
ಅಮ್ಮಮರೆಯಾದಾಗ ತಾಯಿಬೆಲೆ ಎಲ್ಲ
ಕಣ್ಣೀರ ಧಾರೆ ಹರಿಸಿದರೂ ಮಾತಾಡಲಿಲ್ಲ
ಕಡಿದ ಮರ ಅಂತ್ಯ ಕ್ರಿಯೆಯಲಿ ಭಸ್ಮವೆಲ್ಲ
ಕೂಡಿಟ್ಟ ಸಂಪತ್ತೆಲ್ಲ ತುಲಾಭಾರ ಮಾಡಿದರು
ಅಪ್ಪ ಮರಳಿ ಬರಲಿಲ್ಲ ಅಮ್ಮ ಮತ್ತೆ ಸಿಗಲಿಲ್ಲ
ಜಗುಳಿಯ ಗೋಡೆಗೆ ತೂಗಾಕಿದ ಭಾವ ಚಿತ್ರ
ನೋಡಿನೆನಪಾಗಿ ಚಿತ್ತ ವಿಚಲಿತ ಮನಸು ಛಿದ್ರ
ಹೊಸ ಕಾರು ಟ್ರಾಫಿಕಿನಲ್ಲಿ ನಿಂತಾಗ ಕನ್ನಡಿಯಲ್ಲಿ
ಕಾಣುವ ಅಪ್ಪ ಕಾಲ್ನಡಿಗೆ ತಲೆ ಮೇಲೆ ಸಾಮಾನು
ವಸ್ತ್ರದಂಗಡಿಗೆ ಹೋದಾಗ ಕಪಾಟು ಮೂಲೆಯಲ್ಲಿ ಇಣುಕಿ
ನೋಡುವ ಮಡಿಚಿಟ್ಟ ಅಮ್ಮನ ಹಳೆಯ ಸೀರೆ
ಪಿತ್ರಾರ್ಜಿತ ಆಸ್ತಿ ಬೆವರಿಳಿಸಿ ಬೆಳೆಸಿದ ತೋಟ
ಇನ್ನಿಲ್ಲ ಗತಿ ಬರಡಾಗಿ ನಿಂತ ತೆಂಗು ಹೊಲ ಗದ್ದೆ
ಕೊಟ್ಟಿಗೆ ತುಂಬ ದನಕರುಗಳ ಗದ್ದಲ
ಅಮ್ಮನ ಮೌನ ತಾಳಲಾರದೇ ಖಾಲಿ ಬೆಳೆದಿದೆ ಗೆಜ್ಜಲ
ಅವರು ಬಚ್ಚಿಟ್ಟ ನೋವು ಕಾಣಲೇ ಇಲ್ಲ
ಅಂಗಳದಲ್ಲಿ ನಗುನಗುತ್ತಾ ಬೆಳೆದ ಮಕ್ಕಳಿಗೆಲ್ಲ
ಅಣ್ಣ ತಂಗಿ ಅಕ್ಕ ತಮ್ಮ ದಾಯದಿಗಳೆಲ್ಲ
ಪಿತ್ರಾರ್ಜಿತದಲ್ಲಿ ಸಮಪಾಲು ಬೇಕು
ಅನ್ನುವರೆಲ್ಲ.
ಎಸ್ ವಿ ಹೆಗಡೆ
ಬಹಳ ಉತ್ತಮವಾದ ಕವನ ಓದಿದರೆ ಓದುತ್ತಲೆ ಇರಬೇಕು ಅನಿಸುವಷ್ಟು ಉತ್ತಮವಾದ ಕವನ
ಧನ್ಯ ವಾದ
ಉತ್ತಮವಾದ ಕವಿತೆ, ಮನಮುಟ್ಟುವ ಕವನ
ಧನ್ಯವಾದ
ಮನಮುಟ್ಟಿತು. ತಲೆಮಾರುಗಳ ನಡುವಿನ ತಂತು ಸಡಿಲಾಗುತ್ತಿದೆ.
ಹೌದು