ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತನ್ನನ್ನು ಬಿಗಿಯಾಗಿ ಅಪ್ಪಿಕೊಂಡ ಅಮ್ಮನನ್ನು ಮಗಳು ತಾನೂ ಅಪ್ಪಿಕೊಂಡಳು. ಸ್ವಲ್ಪ ಹೊತ್ತು ಮಗಳ ಅಪ್ಪುಗೆಯಲ್ಲಿ ಹಾಗೇ ಕಳೆದ ಸುಮತಿ ಮಗಳನ್ನೂ ಜೊತೆಗೆ ಕರೆದುಕೊಂಡು ಶ್ರೀ ಕೃಷ್ಣನ ಪಟದ ಮುಂದೆ ಕಣ್ಣು ಮುಚ್ಚಿ ನಿಂತಳು. ಅವಳ ಕಣ್ಣುಗಳಿಂದ ಸಂತೋಷದ ಬಿಂದುಗಳು ಜಾರಿ ಕೆನ್ನೆಯ ಮೇಲೆ ಹರಿಯಿತು. ಏನೊಂದೂ ಅರ್ಥವಾಗದೇ ತನ್ನನ್ನೇ ನೋಡುತ್ತಾ ನಿಂತಿದ್ದ ಮಗಳನ್ನು ನೋಡಿ…”ಅಮ್ಮನ ಮಂದವಾದ ಕಣ್ಣಿನ ದೃಷ್ಟಿ ಇನ್ನು ಮೇಲೆ ಸರಿಯಾಗುತ್ತದೆ ಮಗಳೇ… ಶಾಲೆಯ ಕೆಲಸ ಕೈ ಬಿಟ್ಟು ಹೋಗುತ್ತದೆ ಎನ್ನುವ ಭಯವಿಲ್ಲ…. ಕಣ್ಣು ಕಾಣದೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ನನಗೆ ಬಹಳ ಕಷ್ಟವಾಗುತ್ತಿತ್ತು…. ವೈದ್ಯರು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಆಗಬೇಕು ಎಂದು ಹೇಳಿದಾಗ ಅಷ್ಟೊಂದು ಹಣವನ್ನು ನಾನು ಎಲ್ಲಿಂದ ಹೊಂದಿಸಲಿ ಎಂದು ಬಹಳ ಯೋಚನೆಗೀಡಾಗಿದ್ದೆ….. ಆದರೆ ನಮ್ಮ ತೋಟದ ದೊಡ್ಡ ಸಾಹುಕಾರರು ನನ್ನ ಮನದ ದುಗುಡವನ್ನು ನಿವಾರಿಸಿದ್ದಾರೆ…. ಸಣ್ಣ ಸಾಹುಕಾರರು ಬೆಂಗಳೂರಿಗೆ ಹೋಗುವಾಗ ಅವರ ಜೊತೆಗೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹೇಳಿದ್ದಾರೆ…. ಶಸ್ತ್ರಚಿಕಿತ್ಸೆಯ ಖರ್ಚನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಕೂಡ ಹೇಳಿದರು…. ನಮ್ಮ ತೋಟದ ಸಾಹುಕಾರರು ಹಾಗೂ ಅವರ ಕುಟುಂಬದ ಸದಸ್ಯರು ದಯಾಳುಗಳು…. ತಮ್ಮ ತೋಟದಲ್ಲಿ ಕೆಲಸ ಮಾಡುವ ಪ್ರತಿಯೊಂದು ಕೆಲಸಗಾರರ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ…. ಈ ಬಾರಿ ಸಣ್ಣ ಸಾಹುಕಾರರು ಬೆಂಗಳೂರಿಗೆ ಹೋಗುವಾಗ ನಮ್ಮನ್ನು ಅವರ ಜೊತೆಗೆ ಕರೆದುಕೊಂಡು ಹೋಗುತ್ತಾರೆ…. ಪ್ರಯಾಣಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಆದಷ್ಟು ಬೇಗ ನಾನು ಮಾಡಬೇಕಿದೆ…. ನಿನ್ನನ್ನು ಒಬ್ಬಳನ್ನೇ ಇಲ್ಲಿ ಯಾರ ಜೊತೆಯಲ್ಲಿ ಬಿಟ್ಟು ಹೋಗಲಿ… ನೀನು ಕೂಡ ನನ್ನ ಜೊತೆಗೆ ಬರುತ್ತೀಯ”…. ಎಂದಳು ಸುಮತಿ.

ಅಮ್ಮನ ಮಾತುಗಳನ್ನು ಕೇಳಿದ ಮಗಳು ಖುಷಿಯಿಂದ “ಹೌದಾ ಅಮ್ಮಾ”… ನಿಮ್ಮ ಕಣ್ಣಿನ ಶಸ್ತ್ರಕ್ರಿಯೆಗೆ ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆಯೇ?… ಎಂದು ಕಣ್ಣರಳಿಸಿ ಕೇಳಿದಳು. ಹೌದೆಂಬಂತೆ ಸುಮತಿ ತಲೆ ಆಡಿಸಿ ಮಗಳ ತಲೆಯನ್ನು ಸವರಿ ತನ್ನ ಕೆಲವು ಸೀರೆಗಳನ್ನು ಹಾಗೂ ಮಗಳ ಬಟ್ಟೆಗಳನ್ನು ತೆಗೆದಿಟ್ಟಳು. ವರ್ಷಕ್ಕೊಮ್ಮೆ ದೀಪಾವಳಿ ಹಬ್ಬಕ್ಕೆ ತೋಟದ ಲೆಕ್ಕದಲ್ಲಿ ತನಗೆ ದೊರೆತ ಹತ್ತಿಯ ಸೀರೆ ಹಾಗೂ ತಾನು ಸಂತೆಗೆ ಹೋಗುವಾಗ ಖರೀದಿಸಿದ ಸೀರೆಗಳಲ್ಲಿ ಕೆಲವೊಂದು ಸಾಮಾನ್ಯ ಚೆನ್ನಾಗಿದೆ ಎಂದು ಅನಿಸುವ ಒಂದೆರಡು ಸೀರೆಗಳನ್ನು ಹಾಗೆಯೇ ಮಗಳಿಗೆ ಹಬ್ಬದ ಸಮಯದಲ್ಲಿ ತೋಟದ ಲೆಕ್ಕದಲ್ಲಿ ದೊರೆತ ಫ್ರಾಕ್ ಮತ್ತು ತಾನು ಖರೀದಿಸಿದ ಒಂದೆರಡು ಫ್ರಾಕ್ ಗಳನ್ನು ತೆಗೆದಿಟ್ಟಳು. ತನ್ನ ಅಗತ್ಯಕ್ಕೆ ಬೇಕಾದ ಔಷಧಿಗಳನ್ನು ಹಾಗೂ ಇತರೆ ಸಾಮಾಗ್ರಿಗಳನ್ನು ಒಂದು ಚೀಲದಲ್ಲಿ ಇಟ್ಟಳು. ಸಣ್ಣ ಸಾಹುಕಾರರು ತೋಟದ ಮಾಲಿಯ ಮೂಲಕ ಸುಮತಿಯನ್ನು ಬರಹೇಳಿ …. “ನಾಳೆ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ…. ಮಗಳನ್ನು ಕರೆದುಕೊಂಡು ಬೆಳಗ್ಗೆ ಹೊರಟು ಬಂದು ಇಲ್ಲಿನ ಕಾರ್ ಶೇಡ್ ಹತ್ತಿರ ಇರಿ…. ನಿಮ್ಮನ್ನು ನಾನು ಕರೆದುಕೊಂಡು ಹೋಗುತ್ತೇನೆ”…. ಎಂದು ಹೇಳಿ ಮುಗುಳ್ನಗುತ್ತಾ ಬಂಗಲೆಯ ಒಳಗೆ ಹೋದರು.

ಮನೆಗೆ ಹಿಂದಿರುಗಿದ ಸುಮತಿ ರಾತ್ರಿಗೆ ಮಾತ್ರ ಬೇಕಾಗುವಷ್ಟು ಅಡುಗೆ ಮಾಡಿ ಮಗಳಿಗೂ ಊಟ ಬಡಿಸಿ, ಬಟ್ಟೆಬರೆಗಳನ್ನು ಜೋಡಿಸಿಟ್ಟ ಚೀಲವನ್ನು ಮತ್ತೊಮ್ಮೆ ಪರಿಶೀಲಿಸಿ ತೆಗೆದಿಟ್ಟಳು. ಶಾಲೆಗೆ ಬರುವ ಮಕ್ಕಳಿಗೆ ಮೊದಲೇ ತಾನು ಬೆಂಗಳೂರಿಗೆ ಹೋಗುವ ಬಗ್ಗೆ ತಿಳಿಸಿದ್ದಳು ಹಾಗಾಗಿ ಮಾಲಿಯನ್ನು ಕರೆದು…. “ಶಾಲೆಗೆ ಬರುವ ಮಕ್ಕಳಿಗೆ ಹೇಳಿ…. ನಾನು ನಾಳೆ ಬೆಳಗ್ಗೆ ಸಣ್ಣ ಸಾಹುಕಾರರ ಜೊತೆಗೆ ಬೆಂಗಳೂರಿಗೆ ಹೋಗುತ್ತಿದ್ದೇನೆ…. ನನ್ನ ಕಣ್ಣಿನ ಶಸ್ತ್ರಕ್ರಿಯೆ ಮುಗಿದ ನಂತರ ಮತ್ತೆ ಬಂದು ಎಂದಿನಂತೆ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ದಯವಿಟ್ಟು ತಿಳಿಸಿಬಿಡಿ”…. ಎಂದಳು

ಮಾಲಿಯು…”ಹಾಗೆ ಆಗಲಿ ಟೀಚರಮ್ಮ ಮಕ್ಕಳಿಗೆ ಹೇಳುತ್ತೇನೆ”….ಎಂದು ಹೇಳಿದನು. ಅಂದು ರಾತ್ರಿ ಸುಮತಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಆಚೆ ಈಚೆ ಹೊರಳಿ ಮಲಗಿದರೂ ನಿದ್ರೆ ಸುಳಿಯಲೇ ಇಲ್ಲ. ಕಣ್ಣಿನ ಶಸ್ತ್ರಕ್ರಿಯೆಯ ಬಗ್ಗೆ ನೆನೆದಾಗ ಮನಸ್ಸಲ್ಲಿ ಏನೋ ತಳಮಳ ಜೊತೆಗೆ ಭಯ. ಆದರೆ ಕಣ್ಣಿನ ದೃಷ್ಟಿ ಮತ್ತೆ ಮೊದಲಿನಂತೆ ಆದರೆ ತನಗೆ ಕೆಲಸ ಮಾಡಲು ಕಷ್ಟವಿರುವುದಿಲ್ಲ ಎನ್ನುವುದನ್ನು ನೆನೆದಾಗ ಮನಸ್ಸಿಗೆ ಬಹಳ ನೆಮ್ಮದಿ ಅನಿಸಿತು. ಹಾಗಾಗಿ ಅವಳಿಗೆ ಬೆಳಗಿನ ಜಾವದ ಹೊತ್ತಿಗೆ ಸ್ವಲ್ಪ ನಿದ್ದೆ ಹತ್ತಿತು. ಆದರೆ ಅಷ್ಟೊತ್ತಿಗಾಗಲೇ ಮುಂಜಾವಿನ ಕೋಳಿಯ ಕೂಗು ಕೇಳಿಸಿತು. ಕೋಳಿಯ ಕೂಗು ಕೇಳಿದ್ದೇ ತಡ ದಡಬಡಾಯಿಸಿ ಎದ್ದಳು. ನಿದ್ದೆ ಕಣ್ಣಿನಲ್ಲಿ ಸ್ನಾನಕ್ಕೆ ನೀರು ಬಿಸಿ ಮಾಡಿದಳು. ತಾನು ಸ್ನಾನ ಮಾಡಿ, ಮಗಳಿಗೂ ಸ್ನಾನ ಮಾಡಿಸಿ ದೇವರಿಗೆ ಕೈ ಮುಗಿದು ತಯಾರಾದಳು. ಮಗಳನ್ನು ಜೊತೆಗೆ ಕರೆದುಕೊಂಡು ಕಾರ್ ಶೆಡ್ ಹತ್ತಿರ ಬಂದು ನಿಂತಳು. ಅವಳು ಹೆಚ್ಚು ಹೊತ್ತು ಕಾಯಬೇಕಾದ ಅಗತ್ಯವಿರಲಿಲ್ಲ ಸ್ವಲ್ಪ ಹೊತ್ತಿನಲ್ಲೇ ಸಣ್ಣ ಸಾಹುಕಾರರು ಕೈಯಲ್ಲಿ ಸೂಟ್ಕೇಸ್ ಒಂದನ್ನು ಹಿಡಿದುಕೊಂಡು ನಸುನಗುತ್ತಾ ಬಂದರು. ಸುಮತಿ ಹಾಗೂ ಮಗಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿ ಮಾಲಿಗೆ ಹಿಂದಿನ ಡಿಕ್ಕಿಯನ್ನು ತೆರೆದು ಅವಳ ಕೈಯಲ್ಲಿ ಇದ್ದ ಚೀಲವನ್ನು ಒಳಗೆ ಇಡಲು ಹೇಳಿದರು. ಡಿಕ್ಕಿಯ ಬಾಗಲು ಹಾಕಿದ್ದನ್ನು ಖಚಿತ ಪಡಿಸಿದ ನಂತರ ಕಾರನ್ನು ಸ್ವತಃ ಸಾಹುಕಾರರೇ ಚಲಾಯಿಸಿದರು. ನಂತರ ನೇರವಾಗಿ ತೋಟದ ದೊಡ್ಡ ಬಂಗಲೆಯ ಕಡೆಗೆ ಹೊರಟರು. ದೊಡ್ಡ ಬಂಗಲೆ ತಲುಪಿದ ಮೇಲೆ ಭಟ್ಟರಿಗೆ ಸುಮತಿ ಹಾಗೂ ಮಗಳಿಗೆ ತಿಂಡಿಯನ್ನು ಕೊಡಲು ಸೂಚಿಸಿದರು ಅದರಂತೆ ಭಟ್ಟರು ಬಂದು ಕರೆದಾಗ ಸುಮತಿ ಮನೆಯಿಂದಲೇ ತಿಂಡಿಯನ್ನು ತಿಂದು ಬಂದಿದ್ದಾಗಿ ಹೇಳಿದಳು. ಆದರೂ ಬಿಡದೆ ಭಟ್ಟರು ಇಬ್ಬರಿಗೂ ತಿಂಡಿಯನ್ನು ಕೊಟ್ಟು ಸುಮತಿಗೆ ಬಿಸಿ ಬಿಸಿ ಫಿಲ್ಟರ್ ಕಾಫಿ ಹಾಗೂ ಮಗಳಿಗೆ ಗಟ್ಟಿಯಾದ ಹಸುವಿನ ಹಾಲನ್ನು ಕೊಟ್ಟರು.

ಸ್ವಲ್ಪ ಸಮಯದ ನಂತರ ಬಂಗಲೆಯಿಂದ ಹೊರಗೆ ಬಂದ ಸಣ್ಣ ಸಾಹುಕಾರರು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಕಾರಿನ ಡಿಕ್ಕಿಯಲ್ಲಿ ಇಡುವಂತೆ ಚಾಲಕನಿಗೆ ಹೇಳಿ ಸುಮತಿ ಹಾಗೂ ಮಗಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಕಾಫಿ ಕುಡಿದ ನಂತರ ಅನತಿ ದೂರದಲ್ಲಿ ನಿಂತಿದ್ದ ಸುಮತಿ ತನ್ನ ಮಗಳನ್ನು ಜೊತೆಗೆ ಕರೆದುಕೊಂಡು ದೊಡ್ಡ ಸಾಹುಕಾರರು ಹಾಗೂ ಅವರ ಧರ್ಮಪತ್ನಿ ಇಬ್ಬರಿಗೂ ವಂದನೆಗಳನ್ನು ಸಲ್ಲಿಸಿ ಧನ್ಯವಾದ ತಿಳಿಸಿದಳು. ಸಾಹುಕಾರರು ಹಾಗೂ ಅವರ ಪತ್ನಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳಿ ಹರಸಿ, ಏನಾದರೂ ಅಗತ್ಯವಿದ್ದರೆ ತಮ್ಮ ಮಗನಿಗೆ ತಿಳಿಸಲು ಹೇಳಿ ಅವರನ್ನು ಬೀಳ್ಕೊಟ್ಟರು. ಕಾರಿನ ಚಾಲಕ ಮಲಯಾಳದಲ್ಲಿಯೇ ಸುಮತಿ ಟೀಚರ್ ಹಾಗೂ ಮಗಳ ಯೋಗಕ್ಷೇಮವನ್ನು ವಿಚಾರಿಸಿದರು. ಹಾಗೆಯೇ ಮಾತನಾಡುತ್ತಿರುವಾಗಲೇ ಕಾರು ನಿಧಾನವಾಗಿ ಚಲಿಸಿತು. ತಿರುವುಗಳನ್ನು ದಾಟುತ್ತಾ ತೋಟದ ನಡುವಿನ ಮಣ್ಣಿನ ರಸ್ತೆಯಲ್ಲಿ ಕಾರು ಸಾಗಿತು. ಸಣ್ಣ ಸಾಹುಕಾರರು ಮಿತಭಾಷಿ ಯಾಗಿದ್ದ ಕಾರಣ ಹೆಚ್ಚು ಏನು ಮಾತನಾಡಲಿಲ್ಲ. ಕಾಫಿತೋಟದ ಮಾರ್ಗದಲ್ಲಿ ಸಾಗಿ ಮುಖ್ಯ ರಸ್ತೆಗೆ ಕಾರು ಬಂದ ನಂತರ ಸ್ವಲ್ಪ ವೇಗವಾಗಿ ಚಲಿಸತೊಡಗಿತು. ರಾತ್ರಿ ಸರಿಯಾಗಿ ನಿದ್ದೆ ಇರದ ಕಾರಣ ಸುಮತಿ ತನ್ನ ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡು ಸೀಟಿಗೆ ಒರಗಿ ನಿದ್ರೆ ಮಾಡಿದಳು. ದೀರ್ಘ ಪ್ರಯಾಣದ ನಂತರ ಕಾರು ಬೆಂಗಳೂರಿನ ಸಣ್ಣ ಸಾಹುಕಾರರ ಮನೆಯ ಮುಂದೆ ಬಂದು ನಿಂತಿತು. ಅಷ್ಟು ಹೊತ್ತಿಗೆಲ್ಲ ಸುಮತಿ ನಿದ್ರೆಯಿಂದ ಎಚ್ಚರಗೊಂಡಿದ್ದಳು. ಕಾರಿನ ಚಾಲಕ ಕೆಳಗಿಳಿದು ಕಾರಿನ ಬಾಗಿಲನ್ನು ತೆರೆದು ಸುಮತಿ ಹಾಗೂ ಮಗಳನ್ನು ಇಳಿಯಲು ಹೇಳಿ ಡಿಕ್ಕಿಯ ಬಾಗಿಲನ್ನು ತೆರೆದು ಅವಳು ತಂದಿದ್ದ ಚೀಲವನ್ನು ತೆಗೆದು ಕೈಗೆ ಕೊಟ್ಟರು. ಭವ್ಯವಾದ ಬಂಗಲೆಯ ಬಾಗಿಲಲ್ಲ ಸದಾ ಹಸನ್ಮುಖಿಯಾದ ಸಾಹುಕಾರರ ಧರ್ಮಪತ್ನಿ ನಸುನಗುತ್ತಾ ನಿಂತಿದ್ದರು. ಪ್ರೀತಿಯಿಂದ ಸುಮತಿ ಹಾಗೂ ಮಗಳನ್ನು ಮನೆಯ ಒಳಗೆ ಬರಮಾಡಿಕೊಂಡರು. 


About The Author

Leave a Reply

You cannot copy content of this page

Scroll to Top