ಅನುರಾಧಾ ರಾಜೀವ್ ಸುರತ್ಕಲ್‌ ಗಜಲ್

ಅತೃಪ್ತ ಮನಕೆ ಪಕ್ವತೆ ತುಂಬುತ
ಒಲವ ವಿಗ್ರಹ ಕೆತ್ತಿದೆ
ಸಂತೃಪ್ತ ಭಾವದಿ ಅರ್ಚನೆ ಗೈಯುತ
ಪೂಜಿಸಿ ಆರತಿ ಎತ್ತಿದೆ

ಎದೆಯ ಗುಡಿಯ ಒಳಗೆ ಪ್ರೇಮದ
ಮೂರುತಿ ಪ್ರತಿಷ್ಠೆಯ ಆಸೆಯೇ
ಮೋದದಿ ಹೂವಿನ ಹಾರವ ಹಾಕುತ
ಹೊಸತು ಕನಸ ಬಿತ್ತಿದೆ

ಪಂಚ ದ್ರವ್ಯದಿ ಅಭಿಷೇಕ ಮಾಡುತ
ಮನದ ಕೊಳೆಯ ತೊಳೆದೆ
ಕುಂಚದಿ ಬಣ್ಣವ ಎರಚಿ ಗೀಚುತ
ಪ್ರೀತಿಯ ಅಚ್ಚನು ಒತ್ತಿದೆ

ಮನದ ಬಯಕೆ ಅದುಮಿ ಹಿಡಿದಾಗ
ನಿರಾಸೆ ಕಟ್ಟಿಟ್ಟ ಬುತ್ತಿಯು
ಹೊನಲು ಹರಿಸಿ ನಗೆಯ ಕಡಲು
ಉಕ್ಕಿಸಿ ಬದುಕ ಮುತ್ತಿದೆ

ಕತ್ತಲೆ ಕರಗಿ ರಾಧೆಯ ಬಾಳಲಿ
ಹುಣ್ಣಿಮೆ ಚಂದ್ರನ ಬೆಳಕು
ಚಿತ್ತಾರ ಬಿಡಿಸಿ ರಂಗನು ಬೆರೆಸಿ
ಪ್ರೀತಿಯ ಹೂಬನ ಸುತ್ತಿದೆ


One thought on “ಅನುರಾಧಾ ರಾಜೀವ್ ಸುರತ್ಕಲ್‌ ಗಜಲ್

Leave a Reply

Back To Top