ʼನೀನೆಂದರೆ ಹಾಗೆ” ಡಾ.ಲೀಲಾ ಗುರುರಾಜ್

ನೀನೆಂದರೆ ಹಾಗೆ
ನನ್ನೊಳಗಿನ ನಾಚಿಕೆ ಮೊಗ್ಗಿನ ಹಾಗೆ
ಮೊಗ್ಗು ಅರಳಿ ಹೂವಾದ ಹಾಗೆ
ಹೂವರಳಿ ಎಲ್ಲರ ಗಮನ ಸೆಳೆದ ಹಾಗೆ

ಬೆಳಗಿನ ಕಾಫಿಯ ಘಮಲಿನಂತೆ
ರುಚಿಯಾದ ತಿಂಡಿಯ ಸವಿಯಂತೆ
ಮಧ್ಯಾನ್ನದ ರಸಕವಳದಂತೆ
ರಾತ್ರಿಯ ಭೂರಿ ಭೋಜನಂದಂತೆ

ಬೆಳಗಿನ ಸ್ನಾನದ ಬಿಸಿನೀರ ಹಬೆಯಂತೆ
ಹಿತವಾಗಿ ಮೈಸೋಕಿ ಹುರುಪಾದಂತೆ
ದಿನವೆಲ್ಲ ಲವಲವಿಕೆಯಿಂದಿರುವಂತೆ
ಮಾಡುವ ಪ್ರೇರಣೆಯ ಉತ್ಸಾಹದಂತೆ

ನೀನೆಂದರೆ ಸ್ವಾತಿಮುತ್ತಿನ ಮಳೆಯ ಹಾಗೆ
ಮಲಯ ಮಾರುತದ ತಂಪಿನ ಹಾಗೆ
ಮರುಭೂಮಿಯಲ್ಲಿ ನೀರ ಝರಿ ಹಾಗೆ
ಬರಡಾದ ಬಾಳಲ್ಲಿ ಹಸಿರಾಗುವಾಗೆ


Leave a Reply