ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
I

ನಾಗರಿಕತೆಯೆಂದರೆ ಸುಸಂಸ್ಕೃತವಾದ ಜೀವನವೆಂದು ಹೇಳಬಹುದು. ನಮ್ಮ ದೇಶದ ನಾಗರಿಕತೆ ಸಿಂಧೂ ನದಿ ಬಯಲಿನಲ್ಲಿ ಹುಟ್ಟಿಕೊಂಡಿತು ಎಂದು ನಾವು ಭಾರತದ ಇತಿಹಾಸದಲ್ಲಿ ಓದುತ್ತೇವೆ. ಅಂದರೆ ಮನುಷ್ಯ ತನ್ನ ಅನುಭವದಿಂದ ಹೊಸ ಹೊಸ ಜ್ಞಾನವನ್ನು ಪಡೆದು ಅಜ್ಞಾನವನ್ನು ತೊಲಗಿಸಿ,ಉತ್ತಮ ರೀತಿಯಲ್ಲಿ ಬದುಕನ್ನು ಬದುಕಲು ಕಲಿತ.ಇದನ್ನು ನಾಗರಿಕತೆ ಎನ್ನುತ್ತೇವೆ. “ವಿದ್ಯಾವಂತರೆಲ್ಲರೂ ನಾಗರಿಕರು,ಅವಿದ್ಯಾವಂತರು ಅನಾಗರಿಕರು”ಎಂದು ಹೇಳುವುದಕ್ಕೆ ಬರುವುದಿಲ್ಲ.ಏಕೆಂದರೆ ಹಿಂದಿನ ಕಾಲದಲ್ಲಿ ಹೆಚ್ಚಿನ ಜನರು ಅವಿದ್ಯಾವಂತರಾಗಿದ್ದರು. ಅಂತಹ ಜನರೇ ನಾಗರಿಕತೆಯನ್ನು ಬೆಳೆಸಿಕೊಂಡವರು. ಆದರೆ ಇಂದಿನ ಸಮಾಜದಲ್ಲಿ ವಿದ್ಯೆ, ಬುದ್ಧಿ, ಸಕಲ ಸಂಪತ್ತು, ಐಶ್ವರ್ಯ, ಸುಖ ಭೋಗ ಎಲ್ಲವೂ ದೊರೆತಿರುವಾಗ ನಮ್ಮ ನಾಗರಿಕ ಜನಾಂಗ ಎತ್ತ ಸಾಗುತ್ತಿದೆ ಎಂದು ಆಲೋಚಿಸುತ್ತಿದ್ದರೆ ಭಯ ಬೀಳುತ್ತೇವೆ.!

ವಿದ್ಯಾವಂತರೆಂದು ಕರೆಸಿಕೊಳ್ಳುವ ನಾಗರಿಕರಲ್ಲಿ ಮಾನವನಾಗಿ ಬದುಕುವುದಕ್ಕೆ, ಮನುಷ್ಯತ್ವ ಇದೆ ಎಂದು ತೋರಿಸಿಕೊಳ್ಳುವುದಕ್ಕೆ, ಬೇಕಾಗುವಂತಹ ಮೂಲಭೂತ ಮಾನವೀಯ ಗುಣಗಳೇ ಕಾಣಸಿಗದೆ, ಅನಾಗರಿಕರು ಎನಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಸಾಧಿಸಿದಂತೆ, ಹೆಚ್ಚು ಹೆಚ್ಚು ಬುದ್ಧಿವಂತರಾದಂತೆ,ಇನ್ನೊಂದು ಕಡೆಯಲ್ಲಿ ಮನುಷ್ಯನ ಮನಸ್ಸು ಅನಾಗರಿಕವಾಗಿ ವರ್ತಿಸುತ್ತಿದೆ.ಪೈಶಾಚಿಕ ಗುಣಗಳು ವಿಜೃಂಭಿಸುತ್ತಿವೆ.

ಗುರು ಹಿರಿಯರಿಗೆ ಗೌರವ ತೋರಿಸಬೇಕಾದಲ್ಲಿ ಅಗೌರವ. ಹಿರಿಯರ ಮಾತನ್ನು ಪಾಲಿಸಬೇಕಾದಲ್ಲಿ ನಿರ್ಲಕ್ಷ್ಯ ಮಾಡುವುದು. ದೀನದಲಿತರಿಗೆ ಕರುಣೆ ತೋರಿಸಬೇಕಾದಲ್ಲಿ ದಬ್ಬಾಳಿಕೆ ಮಾಡುವುದು. ಅನಾಥರಿಗೆ,ವೃದ್ಧರಿಗೆ ಸಹಾಯ ಮಾಡಬೇಕಾದಲ್ಲಿ ಅವಹೇಳನ ಮಾಡುವುದು.ಇಂಥದ್ದೆಲ್ಲ ದುರ್ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ ಎಂದಾದರೆ ನಾವು ವಿದ್ಯಾವಂತರು ಬುದ್ಧಿವಂತರೂ ಆಗಿದ್ದು ಏನು ಪ್ರಯೋಜನ? ನಮ್ಮ ನಾಗರಿಕತೆ ಎತ್ತ ಸಾಗುತ್ತಿದೆ?

ಸಮಾಜದಲ್ಲಿ,ನಿರುದ್ಯೋಗ, ಭ್ರಷ್ಟಾಚಾರ, ಮೂಢನಂಬಿಕೆಗಳು ತಾಂಡವವಾಡುತ್ತಿವೆ. ರಾಜಕೀಯವಾಗಿ ಬಹುಜನರು, ಕೆಲವೇ ಕೆಲವು ಜನರ ಹಿಡಿತದಲ್ಲಿದ್ದಾರೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಜನರ ನಡುವಿನ ಅಂತರ ಅಧಿಕವಾಗಿದೆ. ರಾಜಕಾರಣ ಆಗಲಿ, ಆರ್ಥಿಕ ಕ್ಷೇತ್ರವಾಗಲಿ, ಸಾಮಾಜಿಕ ಆಥವಾ ಸಾಂಸ್ಕೃತಿಕ ರಂಗವಾಗಲಿ ಎಲ್ಲಿ ಕೂಡ ಜಾತಿಯ ಪಾತ್ರ ತಳ್ಳಿ ಹಾಕುವಂತಿಲ್ಲ.  ಜಾತಿ ಎಂಬ ಅನಿಷ್ಟ ಪದ್ಧತಿಯೇ ನಮ್ಮೆಲ್ಲ ಸಮಸ್ಯೆಗಳ ಮೂಲ ಬೇರಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹಿಂದೆ ನಮ್ಮ ಸಾಮಾಜಿಕ ವ್ಯವಸ್ಥೆ ಬೇರೆ ಸಾಮಾಜಿಕ ವ್ಯವಸ್ಥೆಗಳಿಗೆ ಮಾದರಿಯಾಗಿತ್ತು.ಜನರು ಪ್ರಕೃತಿಯ ಆರಾಧಕರಾಗಿದ್ದರು.ಪ್ರಕೃತಿಯ ರಕ್ಷಣೆ ಆಗುತ್ತಿತ್ತು. ಆದರೆ ಈಗ ನಾಗರಿಕರು ಎನಿಸಿಕೊಂಡ ನಮ್ಮ ಜನತೆ ಏನು ಮಾಡುತ್ತಿದೆ? ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಗಳ ಕತ್ತನ್ನು ಕೊಯ್ಯುತ್ತಿದೆ.ಆರ್ಥಿಕ ಲಾಭಕ್ಕಾಗಿ ಕಾಡನ್ನು ಕಡಿದು ಬರಿದಾಗಿಸುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಳವಾಗಿ ಜೀವಕ್ಕೆ ಸಂಚಕಾರ ಬಂದಿದೆ. ಆದರೂ ನಾಗರಿಕನಾದ ಮಾನವ ಇನ್ನೂ ಎಚ್ಚೆತ್ತುಕೊಳ್ಳಿಲ್ಲ. ಹಾಗಾದರೆ ನಾಗರಿಕತೆ ಅರ್ಥಾತ್ ನಮ್ಮ ನಾಗರಿಕ ಜನಾಂಗ ಎತ್ತ ಸಾಗುತ್ತಿದೆ.!!

ಪ್ರಸ್ತುತ ನಾಗರಿಕ ಸಮಾಜದಲ್ಲಿ ಕೊಲೆ ,ಕಳ್ಳತನ, ದರೋಡೆ ಸೇಡು, ರೋಷ ,ಕೋಪ ಇವುಗಳೆಲ್ಲ ಮಿತಿಮೀರಿ ಹತೋಟಿಗೆ ಸಿಗದೆ ಸಾಗುತ್ತಿವೆ.ಕಾನೂನಿನ ಹಿಡಿತಕ್ಕೂ ಸಿಗದೇ ನುಸುಳಿ ಹೋಗುವಷ್ಟು ಜನರು ದುಷ್ಟ ಬುದ್ಧಿಯನ್ನು ತೋರಿಸುತ್ತಿದ್ದಾರೆ.ಇಂದು ನ್ಯಾಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅಪರಾಧಿ ಪ್ರಕರಣಗಳು ಕಡಿಮೆ ಆಗಿಲ್ಲ ಎನ್ನುವುದಾದರೆ ನಮ್ಮ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ?

ಭಾರತದಲ್ಲಿ ನಾಗರೀಕರ ರಕ್ಷಣೆಗಾಗಿ ಸಂವಿಧಾನ ರೂಪುಗೊಂಡಿದೆ. ಸಂವಿಧಾನದ ವ್ಯಾಪ್ತಿಯಲ್ಲಿ ನಾವೇ ರಚಿಸಿಕೊಂಡಿರುವ ಕಾನೂನು ವ್ಯವಸ್ಥೆಯ ಅಂಗವಾಗಿ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಇದರ ಭಯವಿಲ್ಲದೆ ಅಪರಾಧಿ ಪ್ರಕರಣಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರದೆ, ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ಇರುವಾಗ ನ್ಯಾಯ ಸಿಗುವುದಾದರೂ ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಇಂದು ರಾತ್ರಿ ಇರಲಿ ಹಗಲಿನಲ್ಲಿಯೂ ಭಯದ ಹೊದಿಕೆಯಲ್ಲೇ ಜೀವನವನ್ನು ಕಳೆಯುವಂತಾಗಿದೆ.
ದೇವರ ಮುಂದೆ ಭಯಭಕ್ತಿಯಿಂದ ನಡೆದುಕೊಳ್ಳುವಂತಹ ಮನುಷ್ಯ ದೇವಾಲಯದ ಹೊರಗೆ ಬಂದರೆ ತನ್ನ ನಡೆನುಡಿಯಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಿಲ್ಲ. ದೇವರ ಹುಂಡಿಯನ್ನೇ ಕಳ್ಳತನ ಮಾಡುವಷ್ಟು ಮನುಜನ ಮನಸ್ಸು ವಿಕೃತವಾಗಿದೆ.ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ.

ಇನ್ನು ನಮ್ಮ ಸಮಾಜದಲ್ಲಿ ಆಗಾಗ ಕಾಣುವಂತಹ ಅನಾಗರಿಕ  ಕೃತ್ಯವೆಂದರೆ ಅತ್ಯಾಚಾರ. ತಂದೆಯ, ಅಣ್ಣನ ಸ್ಥಾನದಲ್ಲಿರುವವರೇ ಅತ್ಯಾಚಾರ ಎಸಗುತ್ತಿದ್ದಾರೆ ಎಂಬುವುದು ಭಯಪಡಬೇಕಾದ ಸಂಗತಿ.ಇದಕ್ಕಿಂತ ಇನ್ನೂ ಹೆಚ್ಚು ಭೀಕರವಾದ ಸಂಗತಿ ಎಂದರೆ , ಸ್ವತಃ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುವಂಥದ್ದು, ಅಣ್ಣನೇ ತಂಗಿಯ ಮೇಲೆ ಅತ್ಯಾಚಾರ ಮಾಡುವಂಥದ್ದು ಇವೆಲ್ಲ ನಮ್ಮ ಸಮಾಜದಲ್ಲಿ ದಿನನಿತ್ಯವೆಂಬಂತೆ ನಡೆಯುತ್ತಿವೆ ಹಾಗಾದರೆ ನಮ್ಮ ನಾಗರಿಕತೆ ಎತ್ತ ಸಾಗುತ್ತಿದೆ ಎಂದು ಯೋಚಿಸಿದರೆ ಭಯ ಮೂಡಿಸದೇ ಇರದು.
ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹ ಘಟನೆಗಳು ಇಂದು ದಿನನಿತ್ಯವೂ ನಮ್ಮ ನಮ್ಮ ಊರುಗಳಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಉತ್ಕೃಷ್ಟ ಸಂಸ್ಕೃತಿಗೆ ಹೆಸರಾದ ನಮಗೆ ಶೋಭೆ ತರುವ ವಿಚಾರವಲ್ಲ.

ಸಮೂಹ ಮಾದ್ಯಮಗಳಲ್ಲಿ ದಾರವಾಹಿಗಳಲ್ಲಿ  ಪ್ರೀತಿ, ಪ್ರೇಮ ,ಕೊಲೆಯ ವಿಚಾರಗಳ ವಿಜೃಂಭಿಸುವಿಕೆಯನ್ನೂ, ಗಂಡಸರ ಅನಾಗರಿಕ ಹಾಗೂ ಒರಟುತನವೇ ಅವನ ಪೌರುಷವೆಂಬಂತೆ ತೋರಿಸುವುದರಿಂದ, ಅದಕ್ಕೆ ಪ್ರಭಾವಿತರಾಗಿ ಮಾನವರಲ್ಲಿನ ನೈತಿಕ ಮೌಲ್ಯಗಳು ಅದಃಪತನದತ್ತ ಸಾಗುತ್ತಿರುವ ವಿಚಾರದ ಬಗ್ಗೆ ಕಳವಳವಾಗುತ್ತಿದೆ.

ಇಂದಿನ ದಿನಗಳಲ್ಲಿ ಮನೆ, ಕುಟುಂಬಗಳಲ್ಲಿ ನೈತಿಕತೆಯ ವಾತಾವರಣವು ಕಾಣದಿರುವುದು, ಓದಿನಲ್ಲಿ ಹಿಂದುಳಿದ ಪರಿಣಾಮದಿಂದ ಮನೆ ಹಾಗೂ ಶಾಲೆಯಲ್ಲಿ ತಿರಸ್ಕಾರಕ್ಕೆ ಒಳಗಾಗುವುದರಿಂದಲೊ, ಬದುಕಿನ ಕುರಿತ ಸ್ಪಷ್ಟ  ಗುರಿಗಳಿಲ್ಲದ ಸನ್ನಿವೇಶಗಳಲ್ಲಿಯೋ ಅತ್ಯಾಚಾರವೆಸಗುವ ಮನೋಭಾವನೆ ತಾನೇ ತಾನಾಗಿ ಬೆಳೆದು ನಿಂತಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ . ಸಿನಿಮಾ, ಕಿರುತೆರೆಗಳಲ್ಲಿನ ಕಾರ್ಯಕ್ರಮಗಳಿಂದ ಪ್ರಬಾವಕ್ಕೊಳಗಾಗಿಯೋ, ಪ್ರೀತಿಯೆನ್ನುವ ಆಕರ್ಷಣೆಗೆ ಬಿದ್ದೋ, ಹುಡುಗಿಯನ್ನು ಕೇಳಿದಾಗ ಆ ಹುಡುಗಿ ಅದಕ್ಕೊಪ್ಪದೇ ಹೋದ ಸಮಯದಲ್ಲಿ ಅವಳನ್ನು ಹೇಗಾದರೂ ಒಪ್ಪಿಸಿ ತನ್ನವಳನ್ನಾಗಿಸಿಕೊಳ್ಳುವ ಹುಚ್ಚು ಮನಸಿನಿಂದ ಸಹ ಇಂತಹ ಘಟನೆಗಳು ಸಂಭವಿಸುತ್ತವೆ.ಮಾನವನು ತನ್ನ ಮೂಲಭೂತ ಅಗತ್ಯಗಳಾದ ಹಸಿವು, ನೀರಡಿಕೆ, ನಿದ್ರೆ ಹಾಗೂ ಮೈಥುನಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಇತರೆ ಪ್ರಾಣಿಗಳಂತಿರದೆ ಒಂದು ಶಿಸ್ತುಬದ್ದವಾದ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾನೆ. ಅದೇ ‘ನಾಗರಿಕತೆ’. ಈ ಬಗೆಯ ನಾಗರಿಕತೆಯನ್ನು ಮಕ್ಕಳಿಗೆ ಅವರು ಬೆಳೆಯುತ್ತಿರುವಾಗಲೇ ಕುಟುಂಬ, ಸಮಾಜ ಮತ್ತು ಸುತ್ತಲಿನ ಪರಿಸರವು ಕಲಿಸಬೇಕಾಗುತ್ತದೆ. ಆದರೆ ಇಂದು ಆ ಕೆಲಸವು ಆಗುತ್ತಿಲ್ಲ. ಬದಲಿಗೆ ಮಾನವನನ್ನು ಕೇವಲ ಹಣಗಳಿಕೆಯೇ ಮುಖ್ಯ ಉದ್ದೇಶವೆಂದೂ, ಐಷಾರಾಮಿ ಜೀವನ ನಡೆಸುವುದೇ ದ್ಯೇಯವೆಂದೂ ನಂಬುವಂತೆ ಮಾಡಲಾಗುತ್ತಿದೆ. ಇದರಿಂದಾಗಿಯೇ ಸಮಾಜದಲ್ಲಿನ ನಿಜವಾದ ಮೌಲ್ಯಗಳು ಕಣ್ಮರೆಯಾಗಿ ಕ್ರೌರ್ಯವೊಂದೇ ವಿಜೃಂಭಿಸುತ್ತಿದೆ. ತಂದೆ ಮಕ್ಕಳನ್ನು ಮಕ್ಕಳು ತಂದೆಯನ್ನು ಮನೆಯಿಂದ ಹೊರದಬ್ಬಿ ನಿರ್ಗತಿಕರಾಗಿಸುವ,ಕೊಲ್ಲುವಂತಹ ಘಟನೆಗಳು ನಡೆಯುತ್ತಿವೆ

ಇದೆಲ್ಲಾ ಕೊನೆಗಾಣಬೇಕಾದರೆ ಮೊದಲು ನಾವು ಸರಿಯಾಗಬೇಕು.ಮಾದರಿಯಾಗಿರಬೇಕು.ನಮ್ಮ ಮೂಲಕ ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಎಲ್ಲದಕ್ಕೂ ಪೋಲೀಸ್ ಹಾಗು ಸರ್ಕಾರದತ್ತ ಬೊಟ್ಟು ಮಾಡಿ ಸುಮ್ಮನೇ ಕೂರುವ ನಮ್ಮ ಮನಸ್ಥಿತಿ ಬದಲಾಗಬೇಕು. ಕೇವಲ ಕಾನೂನು, ನೀತಿ ನಿಯಮಗಳಿಂದ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಮಾಲ್, ಬಾರ್, ಪಬ್ ಗಳ ಸಮಯ ಬದಲಿಸಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಮೌಲ್ಯಾಧಾರಿತ ನೈತಿಕ ಶಿಕ್ಷಣ ಜಾರಿಗೆ ಬರಬೇಕು. ಮಹಿಳೆಯರ ಕುರಿತು ಗೌರವ, ಭಯ ಭಕ್ತಿಯೊಂದಿಗೆ ಆರಾಧನಾ ಭಾವವಿದ್ದ ಪರಂಪರೆ ನಮ್ಮದು. ಇಂದು ಪುನಃ ಅಂತಹ ಭಾವನೆ ಮೂಡಿಸುವ ಪ್ರಯತ್ನಗಳಾಗಬೇಕು. ಇದಕ್ಕಾಗಿ ಮಹಿಳೆಯರೂ ಸಹ ಬದಲಾಗಬೇಕು. ಮಹಿಳೆ ಇಂದಿನ ಆಧುನಿಕ ಜೀವನ ಶೈಲಿಯನ್ನು ರೂಡಿಸಿಕೊಂಡಿದ್ದರಲ್ಲಿ  ತಪ್ಪಿಲ್ಲ. ಆದರೆ ತಮ್ಮ ನಡತೆ, ಮಾತುಗಳಲ್ಲಿ ಪರರ ಮನಸ್ಸಿನಲ್ಲಿ ತಮ್ಮ ಕುರಿತಂತೆ ಗೌರವ ಭಾವನೆ ಮೂಡುವಂತೆ ವರ್ತಿಸಬೇಕಿದೆ. ತಾನು ಪುರುಷನಿಗೆ ಸರಿ ಸಮಾನಳು ಎನ್ನುವ ಹುಮ್ಮಸ್ಸಿನಲ್ಲಿ ಧೂಮಪಾನ, ಮದ್ಯಪಾನಗಳು, ಮಾದಕ ವ್ಯಸನಗಳ ಚಟಕ್ಕೆ ಬಲಿ ಬೀಳದೆ ತನ್ನ ಪರಿಮಿತಿ ಹಾಗೂ ಬದುಕಿನ ನೈಜ ಉದ್ದೇಶವನ್ನು ಅರಿತುಕೊಂಡು ಬದುಕಬೇಕು. ಸಮಾಜದಲ್ಲಿ ಪುರುಷ ಹಾಗೂ ಮಹಿಳೆಯರಿಬ್ಬರೂ ಪರಸ್ಪರವಾಗಿ ತಮ್ಮ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು. ಹೀಗಾದಾಗ ಮತ್ತೆ ಮತ್ತೆ ಇಂತಹ ಅತ್ಯಾಚಾರ ಪ್ರಕರಣಗಳು ಸಂಭವಿಸಲಾರವು, ಪುನರಾವರ್ತನೆಗೊಳ್ಳಲಾರವು.

ಎಲ್ಲಾ ಅನಿಷ್ಟಗಳಿಗೂ ಬೇರೆಯವರೇ ಕಾರಣ ಎಂದು ದೂರಿ ಕೂರದೆ, ಸುಮ್ಮನಾಗದೆ ಬದಲಾವಣೆಯು ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಇಂದಿನಿಂದಲೇ ನಾವೆಲ್ಲರೂ ಅದಕ್ಕಾಗಿ ಕಟಿಬದ್ದರಾದೆವು ಎಂದಾದರೆ ಶಿಸ್ತುಬದ್ದ, ಸುಸಂಸ್ಕೃತ ಸಮಾಜ ಕಟ್ಟುವುದೇನೂ ಕಷ್ಟದ ವಿಚಾರವಲ್ಲ. ಅದೆಲ್ಲವನ್ನೂ ಬಿಟ್ಟು ಇದೇನು ಮಹಾ ಎಂದು ವಾರ್ತಾ ವಾಹಿನಿಗಳಲ್ಲಿ ಬರುವ ಅತ್ಯಾಚಾರ ವಿಚಾರದ ವರದಿಗಳನ್ನು ನೋಡುತ್ತಾ ಕುಳಿತೆವೆಂದರೆ ನಾಳೆ ನಮ್ಮಗಳ ಮನೆಯಲ್ಲಿಯೂ ಒಬ್ಬೊಬ್ಬ ಕೀಚಕನ ಉದಯವಾಗುತ್ತದೆ, ಎಂಬುದಂತೂ ಸತ್ಯ. ಹಾಗಾಗಿ ನಾವಿಂದು ನಾಗರಿಕರಂತೆ ವರ್ತಿಸಬೇಕಾಗಿದೆ ಮುಂದಿನ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕಾಗಿದೆ ಇಂತಹ ಘನವಾದ ಕಾರ್ಯ ಹಿರಿಯರಾದ ನಮ್ಮ ಹೆಗಲ ಮೇಲಿದೆ.

̲————————————–

About The Author

Leave a Reply

You cannot copy content of this page

Scroll to Top