ಕಾವ್ಯ ಸಂಗಾತಿ
“ಸಂಭ್ರಮವೊ ಸಂಭ್ರಮ”
ಜಯಶ್ರೀ ಭ.ಭಂಡಾರಿ.

ನನ್ನ ಮಲ್ಲೆಮಾಲೆಯಲಿ ಹೆರಳ ಹೆಣಿಕೆಯಲಿ ನವಿರಾದ ನವುರಿನಲಿ
ಹಣೆಯ ಶೃಂಗಾರದ ಕುಂಕುಮದಲಿ
ಹೊಳೆಯುವ ಮೂಗಿನ ನತ್ತಿನಲಿ
ಹಚ್ಚುವ ಕೆನ್ನೆಯ ಅರಸಿನದಲಿ
ಹೇಳಲಾರದ ಸಂಭ್ರಮವೊ ಸಂಭ್ರಮ ಸಖನೆ ಇದೆಲ್ಲ ನಿನಗಾಗಿ
ನಿನ್ನಾಗಮನದ ನಿರೀಕ್ಷೆಗಾಗಿ…
ನೀನಿಲ್ಲದಲಿ ಏನಿಲ್ಲ ಸೊಗಸು
ನೀನಿದ್ದರೆ ಮನಸ್ಸೆಲ್ಲ ಸದಾಕನಸು
ಹೃದಯದ ಸಂಭ್ರಮವೆಲ್ಲ ನನಸು
ಹಗಲುರಾತ್ರಿ ತಿಳಿಯದ ಮುನಿಸು
ಹರಡೈತೆ ಸುತ್ತೆಲ್ಲ ನಿನ್ನಾಗಮನದ
ತಳಮಳದ ತಲ್ಲಣದ ಸಂಚಲನ
ನವಿರಾದ ಹೃದಯದ ಸಂಕಲನ
ಬಾ ಗೆಳೆಯಾ ಸಂಭ್ರಮ ನೀಡುಬಾ..
ಕನ್ನಡಿಯ ಮುಂದೆ ನಿಂತಾಗಲೊಮ್ಮೆ
ಕನಸಿನ ಲೋಕಕೆ ಜಾರುವೆ ಕಾರಣ
ಕಂಗಳು ಕನ್ನಡಿಯಲಿ ನಿನ್ನನೆ ಕಂಡು
ಸಂಭ್ರಮಿಸುತ್ತವೆ ಕನ್ನಡಿಗೂ ನಿನ್ನದೆ ಧ್ಯಾನ ಕಣೋ
ನನ್ನೆಲ್ಲ ಸಂತಸ ಸಂಭ್ರಮಗಳನು
ನಿನ್ನೆದುರು ನಿವೇದಿಸುವ ನಿನಾದ
ಒಳಒಳಗೆ ಒಪ್ಪವಾಗಿ ಓರಣವಾಗಿ
ಓತಪ್ರೋತಗಳಾಗಿ ನಲಿಯುತಿವೆ ನಲ್ಲನೆ,ನಲುಮೆಯ ಕ್ಷಣಗಳಿಗಾಗಿ
ನಖಶಿಖಾಂತ ಶಬರಿಯಾಗಿದ್ದೆನೆ
ಹೇ ಗೆಳೆಯನೆ ಸಂಭ್ರಮ ಸರಿಯುವ ಮುನ್ನ…
ಸಡಗರ ಸಜೆಯಾಗೋ ಮುನ್ನ..
ಸಂಕಟ ಸಂದಿಗ್ಧವಾಗೋ ಮುನ್ನ…
ಸಂಜೆ ಸೂರ್ಯ ಜಾರೋ ಮುನ್ನ..
ಮೌನ ಮ್ಲಾನವಾಗುವ ಮುನ್ನ…
ಕೈಹಿಡಿದು ನಡೆಸು ಬಾ …..
ಹಿಡಿದಿಟ್ಟ ಕಾಯ್ದಿಟ್ಟ ಕನಸುಗಳೆಲ್ಲ ಕೊಸರಿ ಹೋಗುವ ಮುನ್ನ ಸಂಭ್ರಮೀಸೋಣ ಬಾ ಗೆಳೆಯನೆ…
ಜಯಶ್ರೀ ಭ.ಭಂಡಾರಿ.




