ಪುಸ್ತಕ ಸಂಗಾತಿ

ಹಾಲಕ್ಕಿ ಕೋಗಿಲೆ

ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ.

ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ ಸುಕ್ರಜ್ಜಿಯವರ ಮನೆಯಂಗಳದಲ್ಲಿ ವೈಶಿಷ್ಟಪೂರ್ಣವಾಗಿ ಕವಿ ಕಥೆಗಾರ ಜಯಂತಕಾಯ್ಕಿಣಿಯವರು ಬಿಡುಗಡೆಗೊಳಿಸಿದ ಕೃತಿ ಇದು.ಆ ಬಿಡುಗಡೆಯ ಕ್ಷಣ ಮರೆಯಲಾಗದು.ನಿರಾಡಂಬರವಾದ ಸರಳ ಸಮಾರಂಭದಲ್ಲಿ ಅತ್ಯಂತ ಆತ್ಮೀಯ, ಪ್ರೀತಿಯ, ಒಂದು ರೀತಿಯಲ್ಲಿ ದಿವ್ಯ ಎನಿಸಬಹುದಾದ ವಾತಾವರಣದಲ್ಲಿಜಾನಪದ ಹಾಡುಗಾರ್ತಿಯರಾದ ಪದ್ಮಾವತಿ, ಕುಸಲಿ, ಲಲಿತಾ ಅವರ ಹಾಡಿನ ಹಿನ್ನೆಲೆಯಲ್ಲಿ ಜಯಂತಕಾಯ್ಕಿಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಸುಕ್ರಜ್ಜಿಯವರ ಕೈಗಿಟ್ಟ ಅಪರೂಪದ ಘಳಿಗೆಯಲ್ಲಿ ನಾನೂ ಪಾಲುದಾರಳಾಗಿದ್ದೆ. ಈ ಹಾಲಕ್ಕಿ ಹಾಡುಗಾರ್ತಿಯರ ಹೃದಯ ತುಂಬುವ ಮನಸ್ಸು, ಮುಖದಲ್ಲಿನ ಸಂತೃಪ್ತ ಭಾವ, ಜೀವನ ಪ್ರೀತಿ, ಪ್ರಾಮಾಣಿಕ ಪಾರದರ್ಶಕ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶನ ಎನಿಸುವಂತಹುದ್ದು.ಕನ್ನಡ ಜಾನಪದ ಸಾಹಿತ್ಯದ ವೈಶಿಷ್ಟಪೂರ್ಣ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪೂರ್ವವಾದದ್ದು.

                      ನಾಡೋಜ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಲಕ್ಕಿ ಒಕ್ಕಲು ಬುಡಕಟ್ಟಿನ  ಸುಕ್ರಿ ಬೊಮ್ಮಗೌಡ ಅವರ ಜೀವನ ಪರಿಚಯಿಸುವ ಇಪ್ಪತ್ತೊಂದು ಲೇಖಕರ ಬರಹಗಳ ಗುಚ್ಛವೇ ಹಾಲಕ್ಕಿ ಕೋಗಿಲೆ. ಸುಕ್ರಜ್ಜಿ ಬದುಕಿನ ಶೈಲಿ, ಸರಳತೆ, ಜಾನಪದ ಜಗತ್ತಿಗೆ ಅವರ ಕೊಡುಗೆ, ಅವರ ಸಮಾಜಮುಖಿ ವ್ಯಕ್ತಿತ್ವ ಮುಂತಾದ ವಿಷಯಗಳ ಕುರಿತು ಹತ್ತಿರದಿಂದ ಸುಕ್ರಜ್ಜಿಯವರನ್ನು ಕಂಡ ಲೇಖಕರು ಸರಳ ಸುಂದರವಾಗಿ, ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇದು ಜಾನಪದದಲ್ಲಿ ಅರಳಿದ ಹೂವಿಗೆ ಸರಳವಾಗಿ ಸುಂದರವಾಗಿ ಸಂದ ಗೌರವವೆನಿಸುತ್ತದೆ. ಸುಕ್ರಜ್ಜಿಯ ಸಾಮಾಜಿಕ ಕಳಕಳಿ, ಔಷಧೀಯ ಸಸ್ಯಗಳ ಕುರಿತು ಜ್ಞಾನವು ತುಂಬ ಮಹತ್ವಪೂರ್ಣವಾದದ್ದು. ಸಾವಿರಗಟ್ಟಲೇ ಹಾಡುಗಳ ಧ್ವನಿಭಂಡಾರವಾದ ಸುಕ್ರಜ್ಜಿಗೆ ಅಕ್ಷತಾ ಅವರು ಬಳಸಿದ `ಧ್ವನಿದೂತೆ’ ಪದ ಮಾರ್ಮಿಕ ವೆನಿಸಿತು.

            ಹಲವಾರು ಲೇಖಕರು ಸುಕ್ರಜ್ಜಿಯವರ ಕಷ್ಟದ ಜೀವನದ ಕ್ಷಣಗಳನ್ನು ಎಳೆಎಳೆಯಾಗಿ ಬಿಡಿಸುತ್ತ ಸುಕ್ರಜ್ಜಿಯವರ ಜಾನಪದ ಹಾಡುಗಳ ಧಾರೆಯಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಸುಕ್ರಜ್ಜಿಯ ಪ್ರತಿಭೆ, ನಮ್ಮ ನಾಡಿನ ಹೆಮ್ಮೆಯಾಗಿ ಸುಕ್ರಜ್ಜಿ, ಜಾನಪದದ ಅಗಣಿತ ನಿಧಿಯಾಗಿ, ಲೋಕಸಿರಿಯಾಗಿ, ಕಲಾಸಿರಿಯಾಗಿ ಸುಕ್ರಜ್ಜಿಯ ಜೀವನ ಸುಂದರವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. `ನೀನೊಂದುಕೋಗಿಲೆಯೋ’ ಜನಪದ ಜಗದ ಬಾಗಿನವೋ’ ಎಂಬುದಾಗಿ ಹಿರೇಗುತ್ತಿಯವರು ರೂಪಕ ನೀಡಿರುವುದು ಉತ್ಫ್ರೇಕ್ಷೆ ಅನಿಸುವುದಿಲ್ಲ. ಸುಕ್ರಜ್ಜಿಯ ಸರಳ ಬದುಕು, ಪ್ರತಿಭೆ, ಸಮಾಜಮುಖಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ನಿಲ್ಲುವಲ್ಲಿ ಪ್ರಸ್ತುತ ಕೃತಿ ಪ್ರೇರಣೆಯಾಗಿ ನಿಲ್ಲುತ್ತದೆ. ಇಂತಹ ಅಮೂಲ್ಯಕೃತಿ ಲೋಕಾರ್ಪಣೆ ಮಾಡಿದ ಅಕ್ಷತಾಕೃಷ್ಣಮೂರ್ತಿ ಹಾಗೂ ಅವರ ವಿವರ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.ಜೊತೆಗೆ ಈ ಕೃತಿಗೆ ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು.

************

ಡಾ. ಪ್ರೀತಿ ಭಂಡಾರಕರ್

Leave a Reply

Back To Top