ಮಗುವಿನ ಮೊದಲ ಮೋಹಕ ಕರೆ ಅಮ್ಮಾ….ಜಯಶ್ರೀ.ಭ.ಭಂಡಾರಿ.

ಮೇ ತಿಂಗಳ ಎರಡನೇ ಭಾನುವಾರದಂದು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದ ತಾಯಂದಿರ ದಿನವನ್ನು ಆಚರಿಸುವ ಪರಿಪಾಠ ಬಹಳ ಹೆಚ್ಚಾಗಿದೆ. ಇದರಿಂದಾಗಿ ಅನೇಕ ಜನರು ತಾಯಂದಿರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಂದು ನಾವು ತಾಯಂದಿರ ದಿನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ತಾಯಂದಿರ ದಿನದ ಆರಂಭ  : ಅನ್ನಾ ಜೋರ್ವಿಸ್ ಎಂಬ ಅಮೇರಿಕನ್ ಮಹಿಳೆಯು ತಾಯಂದಿರ ದಿನವನ್ನು ಪ್ರಾರಂಭಿಸಿದರು. ಅನ್ನಾ ತನ್ನ ತಾಯಿಯೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು. ಅನ್ನಾ ತನ್ನ ತಾಯಿಯಿಂದ ಸ್ಫೂರ್ತಿಗೊಂಡಿದ್ದರು. ಅವರ ತಾಯಿಯ ಮರಣದ ನಂತರ  ಅನ್ನಾ ಮದುವೆಯಾಗದಿರಲು ನಿರ್ಧರಿಸಿದರು. ತನ್ನ ತಾಯಿಗೆ ತನ್ನ ಜೀವವನ್ನು ಸಮರ್ಪಿಸಿಕೊಳ್ಳಲು ಮುಂದಾದ್ರು. ಇದೇ ಕಾರಣಕ್ಕೆ ಅನ್ನಾ, ತಾಯಂದಿರ ದಿನವನ್ನು ಶುರು ಮಾಡಿದ್ರೆ. ಅದಕ್ಕಾಗಿಯೇ ಕ್ರಿಶ್ಚಿಯನ್ ಸಮುದಾಯದ ಅನೇಕ ಜನರು ಈ ದಿನವನ್ನು ವರ್ಜಿನ್ ಮೇರಿ ಎಂಬ ಹೆಸರಿನಿಂದಲೂ    ಕರೆಯುತ್ತಾರೆ. ಆದರೆ ಯುರೋಪಿನಲ್ಲಿ ಇದನ್ನು ಮದರ್ರಿಂಗ್ ಸಂಡೆ ಎಂದು ಕರೆಯಲಾಗುತ್ತದೆ.

 ಮೇ ತಿಂಗಳ ಎರಡನೇ ಭಾನುವಾರದಂದೆ ಆಚರಣೆ ಏಕೆ? : ಸಾಮಾನ್ಯವಾಗಿ ಎಲ್ಲರನ್ನು ಈ ಪ್ರಶ್ನೆ ಕಾಡುತ್ತದೆ. ಅನ್ನಾ ಜೋರ್ವಿಸ್ ತಾಯಂದಿರ ದಿನಕ್ಕೆ ಅಡಿಪಾಯವನ್ನು ಹಾಕಿದರು. ಆದರೆ ಔಪಚಾರಿಕವಾಗಿ ತಾಯಂದಿರ ದಿನವನ್ನು   ಮೇ 9, 1914 ರಂದು ಅಮೆರಿಕದ ಅಂದಿನ ಅಧ್ಯಕ್ಷ ವುಡ್ರೋ ವಿಲ್ಸನ್ ಪ್ರಾರಂಭಿಸಿದರು.  ಯುಎಸ್ ಸಂಸತ್ತಿನಲ್ಲಿ ಕಾನೂನನ್ನು ಅಂಗೀಕರಿಸುವ ಮೂಲಕ, ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲು ಘೋಷಿಸಲಾಯಿತು. ಅಂದಿನಿಂದ, ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದಂತೆ ಹಲವೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಅದೇ ಸಮಯದಲ್ಲಿ, ಪ್ರಪಂಚದ ಅನೇಕ ದೇಶಗಳಲ್ಲಿ, ತಾಯಿಯ ದಿನವನ್ನು ಮಾರ್ಚ್ ತಿಂಗಳಲ್ಲಿ  ಆಚರಿಸಲಾಗುತ್ತದೆ.

ತಾಯಂದಿರ ದಿನದ ಪ್ರಾಮುಖ್ಯತೆ : ತಾಯಿಯ ಮಹತ್ವವನ್ನು ಜನರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.  ತಾಯಂದಿರ ದಿನದ ಮಹತ್ವವನ್ನು ಅರಿತ ಜನರು, ತಮ್ಮದೇ ಆದ ರೀತಿಯಲ್ಲಿ ತಾಯಂದಿರ ದಿನವನ್ನು ಆಚರಿಸುತ್ತಾರೆ.

    ವಿಶೇಷವಾಗಿ ಭಾರತದಲ್ಲಿ, ಮಕ್ಕಳು ತಮ್ಮ ತಾಯಿಗೆ ವಿಶೇಷ ಭಾವನೆ ಮೂಡಿಸಲು ಏನಾದರೂ ವಿಶಿಷ್ಟ ಯೋಜನೆ ರೂಪಿಸುತ್ತಾರೆ. ತಾಯಿಯನ್ನು ಗೌರವಿಸುವವರು ಆ ದಿನ ವಿಶೇಷ ಊಟ, ಉಡುಗೊರೆ ನೀಡುವುದು ಸಂಪ್ರದಾಯ.ಆದರೆ ಎಲ್ಲಾ ಮಕ್ಕಳು ಒಂದೇ ತರಹ ಇರುವುದಿಲ್ಲ.   ಕೆಲವರಿಗೆ ತಾಯಿ ಮಾಡಿದ ಕೆಲಸ ಮರೆತು ಹೋಗಿರುತ್ತದೆ. ತಾಯಂದಿರ ದಿನಕ್ಕೆ ಶುಭ ಕೋರದೆ,ಉಡುಗೊರೆ ನೀಡದೆ ಆಕೆಯನ್ನು ಹೊರ ಹಾಕಿದ ಉದಾಹರಣೆಗಳು ಸಾಕಷ್ಟಿವೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ. ತಾಯಿಯಂತೆ ಮಗಳು ನೂಲಿನಂತೆ ಸೀರೆ. ಇಂತಹ ನಾಣ್ಣಡಿಗಳು

ತಾಯಿಯ ಮಹತ್ವವನ್ನು ಸಾರಿ ಹೇಳುತ್ತವೆ.

 ಅಮ್ಮನನ್ನು ಹೊಗಳಿ ಹಾಡಿದ ಗೀತೆಗಳಿವೆ.ಕೇಳಲು ತುಂಬಾ ಖುಷಿಯೆನಿಸುತ್ತವೆ.ಕೇಳತಾನೆ ಇರಬೇಕು ಅನಿಸುತ್ತದೆ. ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವು…. …ಅಮ್ಮ,ಅವ್ವ,ಆಯಿ,ಮಾ,ಅಮ್ಮಿಜಾನ ಹೀಗೆ ನಾನಾ ಹೆಸರುಗಳಲ್ಲಿ ಕರೆಯಿಸಿಕೊಂಡರೂ ಮಮತೆ ವಾತ್ಸಲ್ಲ ಒಂದೆರೀತಿಯದು.ವೇಷಭೂಷನ ಬದಲಾದರೂ ಕರುಳ ವಾಂಛೆ ಬದಲಾಗದು. ಹಳೆಕಾಲದ ಅಮ್ಮನಿಂದ ಆಧುನಿಕ ಕಾಲದ ಅಮ್ಮನವರೆಗೆ ಏನೆ ಬದಲಾದರೂ ಅಮ್ಮನ ಪ್ರೀತಿ ಬದಲಾಗಿಲ್ಲ.ಇನ್ನೂ ಹೆಚ್ಚು ಜವಾಬ್ದಾರಿ ಪರಿಶ್ರಮ ತೆಗೆದುಕೊಳ್ಳುತ್ತಿದ್ದಾಳೆ.

ಎಲ್ಲರೂ ಅವಳ ಕೈತುತ್ತನ್ನು ಉಂಡು ಬೆಳೆದವರೆ.ಯಾವ ಹೊಗಳಿಕೆಗೂ ಅವಳು ಬಯಸಲಾರಳು. ಅಮ್ಮನಿಲ್ಲದ ಮನೆಯನ್ನು ಕ್ಷಣ ಕೂಡ ನೆನೆಯಲು ಆಗಲಾರದು. ಹುಟ್ಟಿದ ಪ್ರತಿಮಗುವಿನ ಜೀವವೆ ಅಮ್ಮ. ಹುಟ್ಟಿದ ಮಗು ಅಮ್ಮಾ ಎಂಬ ಮೋಹಕ ರಾಗದೊಂದಿಗೆ ಉಲಿಯುತ್ತದೆ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಹೆರುವ ಸಮಯದಲ್ಲಿ ಜೀವವನ್ನೇ ಪಣಕ್ಕಿಡುತ್ತಾಳೆ ಸಾಕಪ್ಪ ಈನೋವು ಎಂದು ಅಂದುಕೊಳ್ಳುವಾಗಲೇ ಮಗುವಿನ ಮುಖ ನೋಡಿದಾಗ ಎಲ್ಲವನ್ನು ಮರೆಯುತ್ತಾಳೆ.  ಮಕ್ಕಳ ಖುಷಿಯಲ್ಲಿ ತನ್ನ ಸಂತೋಷ ಕಾಣುತ್ತಾಳೆ.ಅಮ್ಮನಿಲ್ಲದ ಮನೆ ನೀರಿಲ್ಲದ ಬಾವಿಯಂತೆ,ಪರಿಮಳ ಇಲ್ಲದೆ ಹೂವ್ವಿನಂತೆ.

ಒಂದು ಜೀವದ ಸೃಷ್ಠಿಗೆ ತನ್ನ ಜೀವವನ್ನೆ ಪಣವಾಗಿಸುತ್ತಾಳೆ.ಮಗುವನ್ನು ಒಂಬತ್ತು ತಿಂಗಳು ಹೊತ್ತು ,ಹೆತ್ತು ಸಲಹುತ್ತಾಳೆ

ಬಸಿರು ಬಾಣಂತನ ಅಂತ ತನ್ನ ದೇಹವನ್ನೆ ದಂಡಿಸುವಲ್ಲಿ ವಿನೂತನ ಸುಖ ಅನುಭವಿಸುತ್ತಾಳೆ. ಮಗುವಿನ ಲಾಲನೆ ಪಾಲನೆಯಲ್ಲಿ ತನ್ನ ತಾ ಮರೆಯುತ್ತಾಳೆ.ಸಂಸಾರದ ಏನೇ ಜಂಜಡವಿದ್ದರೂ ಮಗುವಿಗೆ ತಾಕದಂತೆ ಸೋಕದಂತೆ ಬೆಳೆಸುತ್ತಾಳೆ.

ಮಗುವಿನ ಪ್ರತಿಹಂತದ ಬೆಳವಣಿಗೆಯಲ್ಲಿ ಆಸರೆಯಾಗಿ ನಿಲ್ಲುತ್ತಾಳೆ. ತಾಯಿಯ ಪುಣ್ಯ ಗರ್ಭದಲ್ಲಿ ಮಹಾತ್ಮರು, ಯೋಗಿಗಳು, ತ್ಯಾಗಿಗಳು ಸಂತರು ಹೀಗೆ ಜಗತ್ತನ್ನೇ ಬೆಳಗುವ ಸುಪುತ್ರರನ್ನ ನೀಡಿದವಳು.

ತಾಯಿಯೇ ದೇವರು:- ದೇವರು ತಾನು ಎಲ್ಲಕಡೆ ಇರಲಾಗುವುದಿಲ್ಲವೆಂದೆ ಪ್ರತಿಮನೆಗೂ ತಾಯಿಯನ್ನು ಸೃಷ್ಠಿಸಿದನಂತೆ.ಮಾತೃದೇವೋ ಭವ ಎಂಬ ವಾಣಿ ಸದಾ ಎಲ್ಲಕಡೆ ಜನಜನಿತವಾಗಿದೆ. ತಾಯಿ ಎಲ್ಲರ ಸ್ಥಾನವನ್ನು ತುಂಬಬಲ್ಲಳು.. ಆದರೆ ತಾಯಿಯ ಸ್ಥಾನವನ್ನು ಮಾತ್ರ ಯಾರೂ ತುಂಬಲಾರರು.

ಅವಳು ನೋಡಲು ಹೇಗೆ ಇರಲಿ  ಮಾಸಿದ ಸೀರೆಯೆ ಇರಲಿ ಗುಣದಲ್ಲಿ ವಾತ್ಸಲ್ಯಮಯಿ. ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬರ,ಅಮ್ಮನೆಂದರೆ ದಿವ್ಯೌಷಧ,ಅಮ್ಮನೆಂದರೆ ಅಮೃತ,ಅಮ್ಮನೆಂದರೆ ಕಡಲು,

 ಅಮ್ಮನೆಂದರೆ ನೆಮ್ಮದಿಯ ಆಗರ,ಅಮ್ಮನ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು.

‘ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮರತಿಯೆಂಬ ಹೊಳೆತಂಪ ನೀ ತಂಪ ಹಡೆದವ್ವ ನನ್ನ ತವರಿಗೆ.’

“ಕಾಶಿಗೆ ಹೋಗಾಕ ಯೇಸೋತ್ತು ದಿವಸ ತಾಸೋತ್ತಿನ ಹಾದಿ ತವರಾದಿ ಕಾಶಿ ಕುಂತಾಳೆ. ಹಡೆದವ್ವ ತವರೂರಲ್ಲಿ”

ಜಾನಪದದಲ್ಲಿಯೂ ಕೂಡ ತಾಯಿಯ ಬಗ್ಗೆ ಸಾಕಷ್ಟು ತ್ರಿಪದಿಗಳಿವೆ. ವೀರಮಾತೆ ಜೀಜಾಬಾಯಿ ಶಿವಾಜಿಯ ಬಾಲ್ಯವನ್ನು ಎಷ್ಟು ಚೆನ್ನಾಗಿ ರೂಪಿಸಿದಳು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ತನ್ಮಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡಿದಳು. ಪುತಲಿ ಬಾಯಿ ಎಂಬ ಮಹಾನ್ ತಾಯಿ ಈ ದೇಶಕ್ಕೆ ಮಹಾತ್ಮನನ್ನು ನೀಡಿದಳು. 

ನೊಬೆಲ್ ವಿಜೇತ ರವೀಂದ್ರನಾಥ ಠಾಕೂರರು “ನಾರಿ ತುಮ್ಮ ಧನ್ಯಹೋ  ತುಮಾರಿ ಪೂಜಾ ದೇವ ಪೂಜಾ ಕೆ ಸಮಾನ್ ಹೈ ಎಂದಿದ್ದಾರೆ. 

ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೆ ತತ್ರ ದೇವತಾಹ.

ಎಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ. ಎಂದು ಮನು ಮಹರ್ಷಿ ಹೇಳಿದ್ದಾರೆ

ಈ ಅಮ್ಮ ಬಣ್ಣನೆಗೆ ಸಿಗದವಳು.ಸದಾ ಕಕ್ಕುಲಾತಿಯ ಕರುಳು.ತನ್ನನೆ ಸುಟ್ಟುಕೊಂಡು ನೋವನುಂಗಿ ನಗುವಳು ಜಗವ ನಗಿಸುವಳು.

ತನಗಾಗಿ ಹಠವ ಮಾಡಳು.ಸದಾ ಸಂತೃಪ್ತಿಯನು ತೋರುವಳು. ಇಲ್ಲಗಳ ಸಂತೆಯಲ್ಲಿ ನಿಂತಿದ್ದರೂ ಸಂತಸ ಬೀರುವಳು.ಕೊರತೆಗಳ ಕೊರಗನು ದಾಟಿಕೊಂಡು ಮೇಲೆಳುವಳು.ಸಂಸಾರದ ನೊಗಕೆ ಹಗಲಿರುಳು ಕೊರಳ ನೀಡಿ ದಣಿಯದೆ ಮುನ್ನುಗ್ಗುವಳು.ತನಗಾಗಿ ಬದುಕ ಮರೆತವಳು.ಮಕ್ಕಳ ಹಿತದಲ್ಲಿ ತನ್ನ ಹಿತ ಕಂಡವಳು.ಮಗು ಹೊಟ್ಟೆ ತುಂಬ ಉಂಡರೆ ತನ್ನ ಹಸಿವನ್ನೆ ಮರೆತು ಸಗ್ಗವಾಗುತ್ತಾಳೆ.

ಏನಿವಳ ಮಹಿಮೆ?…..ಯಾರು ತುಂಬಿದರು ಈ ಬಣ್ಣನೆಗೆ ಸಿಗದ ಗುಣಗಳನು.ತಾಳಿ ಕಟ್ಟಿಸಿಕೊಂಡು ತಾಳ್ಮೆಯಿಂದ ಗಂಡನ ಹೆಗಲೇಣಿಯಾಗಿ ಬದುಕಿನುದ್ದಕ್ಕೂ ಉತ್ಸಾಹದ ಒರತೆಯಾಗುತ್ತಾಳೆ. ಇಡೀ ಸಂಸಾರಕ್ಕೆ ಕಿಂಚಿತ್ ನೋವಬಾರದಂತೆ ಸಲಹುತ್ತಾಳೆ.ಬಳ್ಳಿಗೆ ಕಾಯಿ ಭಾರವೆ ಎಂಬಂತೆ ಎಲ್ಲ ಮಕ್ಕಳನ್ನು ಸಮನಾಗಿ ಪೋಷಿಸುತ್ತಾಳೆ.ಹತ್ತು ಮಕ್ಕಳಿದ್ದರೂ ಸೈ.ಆದರೆ ದುರದೃಷ್ಟವೆಂದರೆ ಹತ್ತು ಮಕ್ಕಳಿದ್ದರೂ ಒಬ್ಬ ತಾಯಿಯನ್ನ ನೋಡಿಕೊಳ್ಳಲಾಗುತ್ತಿಲ್ಲ ಇಂದಿನ ಆಧುನಿಕ ಜಗತ್ತಿನಲ್ಲಿ. ಸಾಹಸಕೆ,ಧೈರ್ಯಕೆ ತನ್ನನೆ ಒಡ್ಡಿಕೊಳ್ಳುತ್ತಾಳೆ. ಬಂದದ್ದೆಲ್ಲ ಬರಲಿ ದೇವನ ಒಲುಮೆ ಇರಲಿ ಎಂದು ಸದಾ ದೇವರಲಿ ಕೋರುತ್ತಾಳೆಯೆ ವಿನಃ ಕೊರಗಲಾರಳು.

ಜಗತ್ತನ್ನು ಮರೆತು ಇರಬಹುದು ತಾಯಿಯನ್ನು ಮರೆತು ಕ್ಷಣ ಇರಲಾಗದು.ಸೃಷ್ಠಿಯ ಅದಮ್ಯಚೇತನಕೆ ಈ ತಾಯಿ ಇವಳಿಗೆ ಅದಾವ ಹೋಲಿಕೆ ಸಾಟಿ ಹೇಳಿ?

ಹೆಣ್ಣಿಗೆ ತಾಯಿ ಹಾಗೂ ತವರು ಎಂದರೆ ಮುಗಿತು ಏನನ್ನೂ ಬಯಸಳು.ತಂದೀಯ ನೆನೆದರ ತಂಗಳ ಬಿಸಿಯಾಯ್ತುತಾಯಿ ಗಂಗಾದೇವಿ ಹಡದವ್ವನ ನೆನೆದರ ಮಾಸಿದ ತಲೆಯು ಮಡಿಯಾಯ್ತು ಎಂಬ ಜನಪದ ವಾಣಿ ತಾಯಿಯ ಅಗಾಧ ಅದಮ್ಯತೆಯನ್ನು ಲೋಕಕ್ಕೆ ಸಾರಿದೆ. ತವರಿಗೆ ಹೋಗೋದು ತಾಯಿ ಮಡಿಲಲಿ ತಲೆಯಿಟ್ಟು ಮಲಗೋದು ಎಂದರೆ ಮಗಳಿಗೆ ಎಲ್ಲಿಲ್ಲದ ಸಂತಸ. ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಎಂಬಂತೆ ಆ ಒಡಲ ಪ್ರೀತಿಯ ಒರತೆ ಸದಾ ಜೇನ್ಗೂಡಾಗಲಿ ನಮ್ಮನು ಪೊರೆಯಲಿ. ಅವಳಿಗೆ ನಾವೇನು ಕೊಡಲು ಸಾದ್ಯ? ನಾವು ಆನಂದವಾಗಿದ್ದರೆ ಆದು ಅವಳಿಗೆ ಭಾಗ್ಯ. ಮಕ್ಕಳ ಏಳ್ಗೆಯನು ನೋಡುತ  ಜೀವನ ಕಳೆಯುವ ಅವಳನ್ನು ಸದಾ ಬೊಗಸೆಕಂಗಳಲಿಟ್ಟು ಕಾಯೋಣ. ಅವಳ ವೃದ್ಯಾಪ್ಯದಲ್ಲಿ ಜೊತೆಯಾಗೋಣ.. ವೃದ್ಧಾಶ್ರಮಗಳು ಹೆಚ್ಚುತ್ತ ಸಾಗುತ್ತಿವೆ. ನಮ್ಮ ತಂದೆ ತಾಯಿಗಳು ನಮಗೆ ಎಂದಿಗೂ ಹೊರೆಯಲ್ಲ. ಅವರನ್ನು ನಮ್ಮ ಕಂಗಳ ದೀಪಗಳಾಗಿ ರಕ್ಷಿಸೋಣ ಎಂಬ ಸಂಕಲ್ಪ ಇಂದೇ ಮಾಡೋಣ ಎಂತಹ ಕಠಿಣ ಪರಿಸ್ಥಿತಿ ಬಂದರೂ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ನೂಕದಿರಿ..   ತಂದೆ ತಾಯಿಗಳನ್ನು ಪ್ರತಿಯೊಬ್ಬ ಮಕ್ಕಳು ಜವಾಬ್ದಾರಿಯಿಂದ ಮನೆಯಲ್ಲಿಟ್ಟುಕೊಂಡು ಸೇವೆ ಮಾಡಿದರೆ ಸಮಾಜ ಕೂಡ ನಿಮ್ಮತ್ತ ಗೌರವದಿಂದ ನೋಡುತ್ತದೆ. ಅಲ್ಲದೆ ನೀವು ಸಮಾಜಕ್ಕೆ ಮಾದರಿಯಾಗುತ್ತೀರಿ.

Happy Mother’s day.

ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.


Media Library

Leave a Reply

Back To Top