ಹಮೀದಾಬೇಗಂ ದೇಸಾಯಿ ಅವರ ಗಜಲ್

ಕನಸುಗಳ ಹೆಣೆದ್ಹೆಣೆದು ಹೃದಯ ದಣಿದು ಬಳಲುತಿದೆ
ಆಸೆಗಳ ಬಚ್ಚಿಟ್ಟು ಮನಸು ನೊಂದು ನರಳುತಿದೆ

ಕತ್ತಲೆಯ ಮುಸುಕಿನಲಿ ಒದ್ದಾಡುತ ನಲುಗಿ ಬೆಳೆದೆನಲ್ಲವೇ
ಕಾಮನ ಬಿಲ್ಲಿನ ಬಣ್ಣದಲಿ ಬೆರೆತು ಹಾಯಾಗಿ ತೇಲಬಯಸಿದೆ

ನಸು ಬೆಳಕಿನ ಗೂಡಿನಲಿ ಕಳೆದು ಹೋದ ಭಾವಗಳ ಹುಡುಕುತ್ತಿರುವೆ
ಬಿಸಿಲ ಕೋಲನೇರಿ ಗಗನದಿ ಬಾನಾಡಿಯಾಗಿ ಹಾರಬಯಸಿದೆ

ಕಂಬನಿ ಹರಿದು ಕೆನ್ನೆಗಳ ರಂಗೆಲ್ಲ ಮಾಸಿ ಕರೆಯಾಗಿದೆ
ಉಸಿರಿನ ಬಿಸುಪು ಕಂಗಳ ನೋಟವನು ಮಸುಕಾಗಿಸಿದೆ

ಎದೆಯಲಿ ಕುದಿಯುವ ಬಯಕೆಗಳನು ಅದುಮಿಡು ಬೇಗಂ
ಪ್ರೀತಿಯ ಕಿರಣವೊಂದು ಮುಚ್ಚಿದ ಕದವ ತೆರೆಯಬೇಕಿದೆ..


One thought on “ಹಮೀದಾಬೇಗಂ ದೇಸಾಯಿ ಅವರ ಗಜಲ್

  1. ಭಾವುಕ ಗಝಲ್, ಮಾರ್ಮಿಕವಾಗಿ ಮೂಡಿಬಂದಿದೆ.

Leave a Reply

Back To Top