ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಮತ್ತದೇ ಬೇಸರ

ಮತ್ತದೇ ಬೇಸರ ಅದೇ ಸಂಜೆ ಗಾಳಿ
ಬೀಸಿದಾಗ ತಂತು ನಿನ್ನದೇ ಸುಳಿಗಾಳಿ
ನಾವಿಬ್ಬರಿದ್ದ ಸಮಯ ಬೇಡಿದೆ ಮರಳಿ
ಸಹಿಸದಾದೆ ನೋವಲಿ ಬೀಸಿತು ತಂಗಾಳಿ
ಎಲ್ಲೋ ನೀನಿದ್ದು ಕಾಡಿರುವೆ
ನಿನ್ನ ನೆನಪಲ್ಲೇ ನಾ ಕಾದಿರುವೆ
ನೀ ಬರುವ ದಾರಿ ನೋಡುತ್ತಿರುವೆ
ಬರುವ ಸೂಚನೆ ಕಂಡಿಲ್ಲ ಸೋತಿರುವೆ
ನಾವು ಸಂಧಿಸಿದ ಜಾಗದ ಬಿಸುಪು
ಅಣಕಿಸಿ ಕಾಡಿದೆ ನಾವಾಡಿದ ನೆನಪು
ವಯ್ಯಾರದಲ್ಲೇ ಬೆಸೆದಿತ್ತು ನಿನ್ನೀ ಒನಪು
ನಿನಗೆ ಪಣವಿಟ್ಟೆ ಈ ಬಾಳ ಮುಡಿಪು
ಈಗ ಬರೀ ನೋವೇ ತುಂಬಿದೆಯಲ್ಲ
ನಿನ್ನಾಸರೆಯಲ್ಲಿ ಜೀವನ ನಡೆಸಿದೆನಲ್ಲ
ಕಾಣದೆ ಮರೆಯಾಗಿರುವೆ ಏಕೆ ನಲ್ಲ
ನಿನ್ನ ನೆನಪಲ್ಲೇ ಕಾಯುತ್ತಿರುವೆನಲ್ಲ
ಡಾ. ಲೀಲಾ ಗುರುರಾಜ್

ಚೆಂದದ ಕವನ ಮೇಡಂ