ಎಮ್ಮಾರ್ಕೆ ಅವರ ಕವಿತೆ-ಬತ್ತದ ಬೇಗುದಿ

ಯಾವ ಗಾಯ ಮಾಡದೇ
ಘಾಸಿಗೊಳಿಸಿದೆ ಮನವನು,
ಯಾವ ಸುಳಿವು ನೀಡದೇ
ತೊರೆದುಹೋದೆ ನನ್ನನು

ಕನಸ ಕೋಟೆಯ ನೀಲನಕ್ಷೆ
ಅಂದೇ ಕಣ್ಣಲಿ ಮುದ್ರಿಸಿ,
ಕಟ್ಟುವಾಸೆ ಕೈಗೂಡಲಿಂದು
ನಟನೆ ಮಾಡಿದೆ ನಿದ್ರಿಸಿ

ಅಲೆದುಲಿದು ನಲಿದುದೆಲ್ಲವು
ಕರಗಿ ಹೋಯ್ತೆ ಇಂದಿಗೆ?,
ನಮ್ಮಿಬ್ಬರ ನಡುವೆ ಏತಕೋ
ಇಲ್ಲದಾಯಿತೆ ನಂಬುಗೆ?

ಯಾರ ದೂರಿ ಏನು ಮಾಡಲಿ
ವಿಧಿಯ ಬರಹವೇ ಹಾಗಿದೆ,
ಎದೆಗಣ್ಣ ಮುಚ್ಚಿ ಬೆನ್ನು ಮಾಡಿ
ದೂರ ದೂರ ಸಾಗಿಯಾಗಿದೆ

ಸಾಗರವು ಬತ್ತಿ ಸಾಸಿವೆಯಷ್ಟೇ
ಭರವಸೆ ಮಾತ್ರವೇ ಉಳಿದಿದೆ,
ಎಲ್ಲ ಪ್ರಶ್ನೆಗೂ ಒಂದೇ ಉತ್ತರ
ನೀ ನೀಡಿ ನಟಿಸುವೆ ತಿಳಿದಿದೆ

ಬತ್ತದಿಹ ಬೇಗುದಿಯೊಂದೆಯೇ
ಉಳಿಯಿತೀಗ ನನ್ನಯ ಪಾಲಿಗೆ,
ಇಂದೆಲ್ಲವು ಮುಗಿದು ಹೋಗಲಿ
ಮತ್ತೇನನು ಉಳಿಸದೇ ನಾಳೆಗೆ


Leave a Reply