“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್‌ ಅವರ ಲಹರಿ

“ಸರಿ ಏನೇ ಇದು ಸರಿ ಏನೇ” ದೂರದಲ್ಲೆಲ್ಲೋ ಮೊಳಗುತ್ತಿದ್ದ ಭಾವಗೀತೆಯ ಜೊತೆ ಜೊತೆಗೆ ಹತ್ತಿರದಲ್ಲಿ ಇದೇ ಹಾಡು ಪ್ರತಿದ್ವನಿಸಿದಾಗ.. ಗಾಬರಿಯಿಂದ ಪಕ್ಕಕ್ಕೆ ನೋಡಿದರೆ ಗುರ್ರೆಂದು ಬುಸುಗುಡುತ್ತಾ ….ನನ್ನ ನಲ್ಲನ ಬಾಯಿಯಲ್ಲೂ ಇದೇ ಹಾಡು,
ನಡು ರಸ್ತೆಯ ಸುಡು ಬಿಸಿಲಲ್ಲಿ ನನ್ನ ನಲ್ಲನ ಕಪ್ಪಾದ ಮುಖ ಮತ್ತಷ್ಟು ಕಪ್ಪಿಟ್ಟಿತ್ತು.

ಏನು ಸರಿ ಇಲ್ಲ ? ಈಗ ಯಾಕೆ ಹೀಗೆ ಪ್ರಶ್ನಿಸುತ್ತಿದ್ದೀಯಾ ಎಂದು ಕೇಳುವುದನ್ನೇ ಕಾಯುತ್ತಿದ್ದಂತೆ, ವಿರಾಮವಿಲ್ಲದ ಸಿದ್ದ ಉತ್ತರ ನಿರಂತರವಾಗಿ ಮುಂದುವರೆಯಿತು. ನನ್ನನ್ನು ಬಹಳವಾಗಿ ಪ್ರೀತಿಸುವೆ ಎನ್ನುವ ನೀನು ಹೀಗೆ ನಡು ರಸ್ತೆಯಲ್ಲಿ ನನ್ನನ್ನು ಬಿಟ್ಟು ಹೋಗುವುದು ಸರಿಯೇ  ? ಎರಡು ವರ್ಷಗಳಿಂದ ಸತತವಾಗಿ ನಿನ್ನ ಬಳಿಯೇ ಇರುವೆ, ನೀ ಕರೆದಲ್ಲೆಲ್ಲ ನಿನ್ನ ಜೊತೆಗೆ ಬರುವೆ, ಹಗಲೆನ್ನದೆ ಕಗ್ಗತ್ತಲ ರಾತ್ರಿ ಎನ್ನದೆ ನನ್ನ ಪ್ರೀತಿಯ ಬೆಳಕ ಹರಿಸಿ ನಿನ್ನ ಗಮ್ಯವ ತಲುಪಿಸಿರುವೆ. ಸದಾ ನಿನ್ನನ್ನು ಹೊತ್ತು ಊರೆಲ್ಲಾ ಮೆರೆಸಿರುವೆ ನಿನ್ನ ಪಾದ ನೆಲ ಸೋಕಿದರೆ ನೀನೆಲ್ಲಿ ನಲುಗಿಬಿಡುವೆಯೋ ಎಂದು ನಿನ್ನ ಮೃದು ಪಾದಗಳನ್ನು ನನ್ನೆದೆ ಮೇಲೆ ಹೊತ್ತು ಪ್ರೀತಿಯಿಂದ ಜತನ ಮಾಡಿರುವೆ ಅಷ್ಟೇ ಏಕೆ ನೀ ಮುಡಿದ ಮಲ್ಲಿಗೆ ಬಾಡಿ ಕೆಳಗೆ ಉದುರಿದರೂ ಜೋಪಾನವಾಗಿ ನನ್ನ ಉಡಿಯಲಿ ಇರಿಸಿಕೊಂಡಿರುವೆ,  ನಾ ನಿನ್ನ ಪರಮಾಪ್ತೇ… ಅತ್ಯಾಪ್ತೆ… ಎಂದೆಲ್ಲಾ ಹೇಳಿ ಹೀಗೆ ಬಿಟ್ಟು ಹೋಗುತ್ತಿರುವೆಯಲ್ಲ ಹಾಗಾದರೆ ಇಷ್ಟು ದಿನ ನೀ ಹೇಳಿದ್ದೆಲ್ಲ ಬೊಗಳೆಯೇ ಎಲ್ಲಾ ಆತ್ಮೀಯರಿಗಿಂತ ನಾನು ನಿನ್ನ ಪ್ರೀತಿಪಾತ್ರ ಒಡನಾಡಿ,ನಾನೊಬ್ಬ ನಿದ್ದರೆ ನಿನ್ನ ಜೊತೆಯಲ್ಲಿ ಸ್ವರ್ಗಕ್ಕೆ ಮೂರೇ ಗೇಣೆಂದು ಆಗಸದಲ್ಲೇ ಹಾರಾಡುತ್ತಿದ್ಯಲ್ಲ  ನಮ್ಮಿಬ್ಬರ ಕೈಗಳು ಸೇರಿದಾಗ ಈ ಭೂಮಿಯ ಮೇಲೆ ನಮ್ಮ ಕಾಲ್ಗಳು ನಿಲ್ಲುತ್ತಿರಲಿಲ್ಲ. ಎಷ್ಟೆಲ್ಲಾ ಸುತ್ತಾಡುತ್ತಿದ್ದೆವು!ಮುಂಗಾರು ಮಳೆಯ ಸೋನೆಯಲೂ ನೀ ಚಳಿಯಲ್ಲಿ ನಡುಗದಂತೆ ನನ್ನ ಬಿಸಿ ಶಾಖದಲ್ಲಿ ನಿನ್ನನ್ನು ಎಷ್ಟು ಜೋಪಾನವಾಗಿ ನೋಡಿಕೊಂಡಿರುವೆ, ಅದೆಷ್ಟು ಪ್ರೀತಿಯಿಂದ ಎತ್ತೆತ್ತ ಹೇಳಿದರು ಅತ್ತತ್ತ ಹೊತ್ತೊಯ್ಯುವೆ,ನೀನೆ ಹೇಳುವಂತೆ ನಾ ಸಿಕ್ಕ ಮೇಲೆ ನಿನಗೆ ಯಾವ ಗೆಳತಿಯರ ಹಂಗಿಲ್ಲ ಎನ್ನುವ ಮಾತೆಲ್ಲ ಈಗ ಎಲ್ಲಿ ಹೋಯಿತು, ಒಮ್ಮೊಮ್ಮೆ ನಿನ್ನ ಸ್ನೇಹಿತೆಯರು ನಮ್ಮ ಜೊತೆ ಬಂದಾಗ ನನಗೋ ಮುಜುಗರ,ಕೇವಲ ನಿನ್ನ ತೃಪ್ತಿಗಾಗಿ ಅವರನ್ನು ನಮ್ಮೊಡನೆ ಕೊಂಡೆಯ್ದೆನಲ್ಲ !ನನಗೆ ಸ್ವಲ್ಪ ಆರೋಗ್ಯ ಏರುಪೇರಾದಾಕ್ಷಣ
ಅದೆಷ್ಟು ನಿರ್ಭಾವುಕತೆಯಿಂದ ನನ್ನನ್ನು ಒಂಟಿ ಮಾಡಿ ನಡು ರಸ್ತೆಯಲ್ಲಿ ಬಿಟ್ಟು ಹೋಗುವೆಯಲ್ಲ ಹೀಗೆ..! ಈಗ್ಯಾರ್ಯಾರು ನನ್ನ ಮೇಲೆ  ಕಣ್ ಹಾಕುವರೋ  ಯಾರು ಬಂದು ನನ್ನನ್ನು ಕರೆದುಕೊಂಡು ಹೋಗುವರೋ ಯಾರ ಜೊತೆ ಹೋಗಬೇಕೋ ನಾನು ಎಂದು ಮುಖ ಉಬ್ಬಿಸಿಕೊಂಡು ಕಪ್ಪಾಗಿ ಕಳೆಗುಂದಿದ ಮುಖದಿಂದ ಕರುಣೆಯಿಂದ ನನ್ನೆಡೆಗೆ ನೋಡಿತು ನನ್ನ ಪ್ರೀತಿಯ ಕರಿಯ , ಅಂದ ಹಾಗೆ ನನ್ನ ಚಿ. ಮು .ರ.  ಅಂದ್ರೆ ಚಿನ್ನ ಮುದ್ದು ರನ್ನನ ಹೆಸರು  ಬಜಾಜ್ ಚೇತಕ್.ಅವನ ಬಣ್ಣ ಕಪ್ಪೆಂದು ಹೇಳುವುದು ಬೇಡ ತಾನೆ….


Leave a Reply

Back To Top