ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ

ಕಳೆದ ಸಂಚಿಕೆಯ ಮುಕ್ತಾಯ ಹೀಗೆ ಮಾಡಿದ್ದೆ..
ಅದರ ನಂತರ ಸಾಲು ಸಾಲಾಗಿ ಮಲಯಾಳಿ ಚಿತ್ರಗಳು ಬೆಂಗಳೂರು ಹಾಗೂ ಕರ್ನಾಟಕದ ಸಿನಿಮಾ ಗಲ್ಲಾ ಪೆಟ್ಟಿಗೆಗೆ ಲಗ್ಗೆ ಇಟ್ಟವು. ಸಾಲು ಸಾಲಾಗಿ ಹಸಿ ಹಸಿ ಚಿತ್ರಗಳು ತುಂಬಿಹೋಯಿತು. ಕೆಲವು ಸಿನಿಮಾಗಳು ನೂರು ದಿನ ಓಡಿದವು, ಮಾರ್ನಿಂಗ್ ಶೋ ಗಳಲ್ಲಿ. ಕೆಲವು ಸಿನಿಮಾಗಳಿಗೆ ಒಬ್ಬೊಬ್ಬರೇ ಬಚ್ಚಿಟ್ಟುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಗಿನ ಮಲಯಾಳಿ ಸಿನಿಮಾಗಳ ಹೆಸರುಗಳು…ಅವಳೊ ಡೇ ರಾವುಕಲ್, ಅವಳೊಡೇ ರಾತ್ರಿ ಕಲ್, ಉವರ್ಶಿ ಯೊಡನೆ ಕೆಲ ಆಟಂ… ರಂಭಾ ಸಂಗಮಂ…
ನೇರ ರಾತ್ರಿಯ ಸುಗಮ್,ರಂಭಾ ರಾತ್ರಿ….. ಹೀಗೆ.ಅವಳೊಡೆ ರಾವುಕಲ್ ಸೀರಿಸಿನ ಹಲವಾರು ಚಿತ್ರಗಳು ಬೆಂಗಳೂರಿನಲ್ಲಿ ಮತ್ತು ಇತರ ಎಡೆಗಳಲ್ಲಿ ಮಾರ್ನಿಂಗ್ ಶೋಗಳಲ್ಲಿ ಪ್ರದರ್ಶಿಸಿ ಕೊಂಡವು ಮತ್ತು ಜನರಲ್ಲಿ ಅಭಿರುಚಿ ಹಾಳುಮಾಡುತ್ತಿದೆ ಎನ್ನುವ ಆರೋಪ ಸಹ ಹೊತ್ತಿತ್ತು…!
ಇಂತಹ ಚಿತ್ರ ತೆಗೆದವರು ಮುಂದೆ ಕ್ಲಾಸಿಕ್ ಚಿತ್ರಗಳನ್ನು ಮಲಯಾಲದಲ್ಲಿ ತೆಗೆದರು.
ನಿಧಾನಕ್ಕೆ ಅದು ತನ್ನ ಹಾದಿ ಬದಲಿಸಿದ್ದು ಈಗ ಇತಿಹಾಸ. ಮಾರ್ಕೆಟ್ ಹಿಡಿಯುವಲ್ಲಿ ಈ ರೀತಿಯ ಚಿತ್ರಗಳು ಪ್ರಮುಖ ಪಾತ್ರ ವಹಿಸಿದ್ದವು. ಈಗ ಇಲ್ಲಿ ಒಂದೂ ಸಿನಿಮಾ ನಾನು ನೋಡಲಿಲ್ಲ ಹಾಗೂ ಒಂದೇ ಒಂದು ಪುಸ್ತಕದ ಅಂಗಡಿಯೂ ನಾನು ಓಡಾಡಿದ ಪ್ರದೇಶದಲ್ಲಿ ಕಾಣಿಸಲಿಲ್ಲ. ಪುಸ್ತಕದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ?ಟೀಕಡೆ ಟೀ ಅಂಗಡಿಯಲ್ಲಿ ಕೂತ ಜನ ಪೇಪರು ಓದುತ್ತಾರೆ ಮತ್ತು ಒಂದೇ ಪೇಪರು ಹಲವಾರು ಜನ ಓದುತ್ತಾರೆ, ನಮ್ಮ ಹಾಗೆ!
ಇಲ್ಲಿರಬೇಕಾದರೆ ಮಲಯಾಳಿ ಸಿನೆಮಾಗಳನ್ನು ವಿಶ್ವದಾದ್ಯಂತ ಪರಿಚಯಿಸಲು ತಮ್ಮ ಉತ್ತಮ ಅಭಿರುಚಿಯ ನಿರ್ಮಾಣ ದಿಂದ ಹೆಸರು ಮಾಡಿದ್ದ ಶ್ರೀ ರವೀಂದ್ರ ನಾಥ ನಾಯರ್ ಮೃತರಾದ ಸುದ್ದಿ ಹಿಂದೂ ಇಂಗ್ಲಿಷ್ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಬಂದಿತ್ತು! ರಾಜ್ಯಕ್ಕೆ ರಾಷ್ಟ್ರಕ್ಕೆ ಹೆಸರು ತಂದು ಕೊಟ್ಟವರ ಸಾವು ಸಣ್ಣ ಸುದ್ದಿ ಆಗಬಾರದು ಎನ್ನುವ ಸ್ಕೂಲ್ ಆಫ್ ಥಿಂಕಿಂಗ್ ನನ್ನದು. ಆದರೆ ನನ್ನಂತಹವರ ಥಿಂಕಿಂಗ್ ಕೇಳೋರು ಯಾರು…?

This image has an empty alt attribute; its file name is download-3-10.jpg

ಈಗ ಮುಂದಕ್ಕೆ..

ಇಲ್ಲಿನ ಮಹಾರಾಜರ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿ ಪ್ರೀತಿ ಪ್ರೇಮ ವಿಶ್ವಾಸ ಉಕ್ಕಿ ಹರಿಯುತ್ತಿದ್ದು ಅದು ಅವರ ಮಾತಿನಲ್ಲಿ ಎದ್ದು ತೋರುತ್ತದೆ. ರಾಜರು ಮಾಡಿರುವ ದಾನಗಳನ್ನು, ಅವರ ಪ್ರಜಾ ಪ್ರೀತಿಯನ್ನು ನೆನೆಯುತ್ತಾರೆ. ಕಟ್ಟಾ ರಾಜಸ್ವ ವಿರೋಧಿ ಪಕ್ಷ (ರಾಜಸ್ವಿ ಅನ್ನೋ ಪದ ಇದೀಗ ಹುಟ್ಟಿದೆ.ರಾಜಮಹಾರಾಜರ ಆಳ್ವಿಕೆ ವಿರೋಧಿಗಳು ಅಂತ ಅರ್ಥ)ಕಮ್ಯುನಿಸ್ಟ್ ಆಡಳಿತವನ್ನು ಅಷ್ಟು ಕಾಲ ನೋಡಿರುವ ಜನ ರಾಜರ ಮೇಲೆ ಇಟ್ಟಿರುವ ಪ್ರೀತಿ ಸೋಜಿಗ ಹುಟ್ಟಿಸುತ್ತದೆ. ಅದೇ ಸಮಯದಲ್ಲಿ ನಮ್ಮ ರಾಜಕಾರಣಿ ಒಬ್ಬರು ಒಬ್ಬರೇನು ಇಡೀ ಅವರ ಹಿಂಡೇ ಮೈಸೂರು ಮಹಾರಾಜರನ್ನು ಕುರಿತು ‘ ಅವನೇನು ಮಾಡಿದ. ನಮ್ಮ ದುಡ್ಡು ನಮಗೆ ಹಾಕಿದ…”ಎನ್ನುವ ಮಾತು ನೆನಪಿಗೆ ಬರುತ್ತದೆ. ನಮ್ಮ ರಾಜಕಾರಣಿಗಳ ಕೃತಘ್ನ ನಡತೆ ಹೇಸಿಗೆ ಹುಟ್ಟಿಸುತ್ತದೆ.ತಿರುವನಂತಪುರದ ಮಧ್ಯ ಭಾಗದಲ್ಲಿ ಸುಮಾರು ದೊಡ್ಡ ಸ್ಥಳವನ್ನು ISRO ವಿಸ್ತರಣೆಗೆ ರಾಜವಂಶದ ಮುಖ್ಯರು ನೀಡಿದ್ದಾರೆ. ಅದೇರೀತಿ ಇಲ್ಲಿನ ಸುಮಾರು ಜನೋಪಯೋಗಿ ಕಾರ್ಯಗಳಿಗೆ ರಾಜರ ನೆರವು ಇದ್ದೇ ಇರುತ್ತದೆ ಎಂದು ಜನ ಹೇಳುತ್ತಾರೆ. ಅದೇ ನಮ್ಮೂರಿನಲ್ಲಿ ನೋಡಿ,IISc ಜಾಗ ಮಹಾರಾಜರು ನೀಡಿದ್ದು ಎಂದು ಒಂದೇ ಒಂದು ಸಲ ನೆನೆಸಿದೆವಾ, ರಾಮನ್ ಇನ್ಸ್ಟಿಟ್ಯೂಟ್ ಇರುವುದು ಮಹಾರಾಜರ ಜಾಗ,ಮೈಸೂರಿನ ಮಾನಸ ಗಂಗೋತ್ರಿ ಮಹಾರಾಜರದ್ದು ಎನ್ನುವ ಸತ್ಯ ಗೊತ್ತಿಲ್ಲ. ಕನ್ನಂಬಾಡಿ ಕಟ್ಟೆ ಕಟ್ಟಲು ರಾಜರು ಅವರ ಚಿನ್ನ ಮತ್ತಿತರ ಆಭರಣಗಳನ್ನು ಮುಂಬೈ ನಲ್ಲಿ ಮಾರಿ ಹಣ ಹೊಂದಿಸಿದರು ಎನ್ನುವುದು ಚರಿತ್ರೆಯಲ್ಲಿ ಹೂತು ಹೋಗಿರುವ ಸತ್ಯ. ಮತ್ತು ಈ ಸತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪಾಪದ ಕೆಲಸವನ್ನು ಸಂಬಂಧಿಸಿದವರು ಮಾಡಿಲ್ಲ. ಮುಂದೆ ಮಾಡುವ ನೆಚ್ಚಿಕೆಯೂ ಇಲ್ಲ!
ತಿರುವನಂತಪುರದ ದೇವಸ್ಥಾನದ ಮುಂದೆ ಒಂದು ಹಳೆಯ ಮಸಕು ಮಸಕು ಪೋಟೋ ನೋಡಿದೆ. ಅದು ಅಲ್ಲಿನ ಮಹಾರಾಜರ ಪೋಟೋ ಹಿಂದೆ ಯಾವುದೋ ಸಂದರ್ಭದಲ್ಲಿ ಹಾಕಿದ್ದರು ಅಂತ ಅಲ್ಲಿನ ಕಸ ಬಳಿಯುವ ಸಿಬ್ಬಂದಿ ಹೇಳಿದರು. ಒಟ್ಟಾರೆ ಆಳುವ ಜನರ ಮನೋಭಾವ ಒಂದೇ ಅನಿಸಿಬಿಟ್ಟಿತು. ಒಂದು ಬೇರೆ ಪೋಟೋ ನೇತುಹಾಕಲು ಸರ್ಕಾರಕ್ಕೆ ಹಣ ಕಾಸಿನ ಅಡಚಣೆ ಇರಬಹುದು ಪಾಪ ಅನ್ನಿಸಿತು!
ಇಲ್ಲಿ ಇರಬೇಕಾದರೆ ಒಂದು ಸುದ್ದಿ ಓದಿದೆ (11/7/23). ತಿರುವಾಂಕೂರು ಮಹಾರಾಜರ ಆಡಳಿತ ಕುರಿತ ಒಂದು ಪುಸ್ತಕ ಶ್ರೀ ಶಶಿ ತರೂರ್ ಅವರು ಬಿಡುಗಡೆ ಮಾಡಿದ್ದರು.ಮಹಾರಾಜರ ಕಾಲದ ದಿವಾನ್ ರಾಮಸ್ವಾಮಿ ಅವರ ಆಡಳಿತದ ಇತಿಹಾಸ ಕುರಿತದ್ದು ಈ ಪುಸ್ತಕ. ಇವರ ಆಡಳಿತ ಅವಧಿಯಲ್ಲಿ ನವ ಉದ್ಯಮಗಳ ಹುಟ್ಟಿಗೆ ಒತ್ತು ಕೊಟ್ಟು ಉತ್ತಮ ಬೆಳವಣಿಗೆ ಆಯಿತು ಎಂದು ಭಾಷಣ ಕಾರರು ಹೇಳಿದ್ದರು.  ರಾಜರ  ಸಂಸ್ಥಾನಗಳು ಕೇರಳದ ಬೆಳವಣಿಗೆಗೆ ಕಾರಣ ವಾಗಿದ್ದವು ಎಂದು ಬಿಂಬಿಸುವ ಚಿತ್ರಣ ಪುಸ್ತಕದ ಜಿಸ್ಟು. ನಮ್ಮ ಮೈಸೂರು ಮಹಾರಾಜರೂ ಸಹ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ನಮ್ಮ ಮೈಸೂರು ಮಾದರಿ ಮೈಸೂರು ಅಂತ ಹೆಸರು ಮಾಡಿತ್ತು.ಇವರ ಆಡಳಿತವನ್ನು ಮಹಾತ್ಮ ಗಾಂಧೀಜಿ ಅವರೂ ಸಹ ಶ್ಲಾಘಿಸಿದ್ದರು….ಅದರ ನೆನಪು ಈಗಿನವರಿಗೆ ದುಃಸ್ವಪ್ನ!

ಹಿಂದೂ ಗಳು ಮೂಲನಿವಾಸಿಗಳು.ಜಾತ್ಯಾತೀತ ಸಮನ್ವಯದ ಆ ಮೂರೂ ಪ್ರಾರ್ಥನಾ ಮಂದಿರ ಹೇಗಿದೆ ಅಂದರೆ ದೊಡ್ಡ ಚರ್ಚು, ದೊಡ್ಡ ಮಸೀದಿ, ಇವೆರಡಕ್ಕ ಹೋಲಿಸಿದರೆ ಪುಟ್ಟ ಗಣಪತಿ ಗುಡಿ! ಆಹಾ, ಎಂತಹ ಸಮನ್ವಯ ಅಂತ ಯಾರಿಗಾದರೂ ಅನಿಸಲೇ ಬೇಕು, ನನಗೂ ಅನಿಸಿತು!
ನಾವಿದ್ದ ಏರಿಯಾ ದಲ್ಲಿ ಕೆಲವು ಹಳೇ ಮನೆಗಳು ಇನ್ನೂ ಇವೆ. ಸುತ್ತಲೂ ತೋಟ, ತೋಟದಲ್ಲಿ ಮಾವು ತೆಂಗು ಹಲಸು ಬಾಳೆ ಹಾಗೂ ಇತರೆ ಗಿಡ ಮರಗಳು. ಸುಮಾರು ಗಿಡ ಮರಗಳು ಅವಾಗಿ ಅವೇ ಬೇಳೆದಿರಬೇಕು.ವಯಸ್ಸಾದ ಮುದುಕ ಮುದುಕಿಯರು ಇಲ್ಲಿ ವಾಸ. ಮಕ್ಕಳು ಎಲ್ಲೋ ದೂರ. ಮುಕ್ಕಾಲು ಜನ ಅರಬ್ ದೇಶದಲ್ಲಿ.ಅವರುಗಳ ಮನೆ ಮುಂದೆ ಹಾದು ಹೋದಾಗ ಒಂದು ವಿಶೇಷ ಕಾಣಿಸಿತು. ಮನೆ ಮುಂದಿನ ಗೇಟಿಗೆ ಒಂದು ಕೊಳವೆ ಆಕಾರದ ವಸ್ತು ಕಟ್ಟಿದ್ದರು. ಅದಕ್ಕೆ ಒಂದು ಕಡೆ ಸೀಲ್ ಆಗಿದ್ದರೆ ಮತ್ತೊಂದು ಕಡೆ ಮುಚ್ಚಳ ಇತ್ತು. ನಮ್ಮ ಸೇರನ್ನು ಅಡ್ಡಡ್ಡ ಮಲಗಿಸಿ ಅದಕ್ಕೊಂದು ಮುಚ್ಚಳ ಸಿಕ್ಕಿಸಿ ಗೇಟಿಗೆ ನೇತು ಹಾಕಿದರೆ ಹೇಗಿರುತ್ತೆ ಇಮ್ಯಾಜಿನ್ ಮಾಡಿಕೊಳ್ಳಿ. ಸುಮಾರು ಹಳೇ ಮನೆಗಳಲ್ಲಿ ಈ ವ್ಯವಸ್ಥೆ. ನಂತರ ಕಟ್ಟಿದ ಮನೆಗಳ ಗೇಟಿನ ಮುಂದೆ ಒಂದು ಗಲೀಜು ನೀರು ಹೋಗಲು ಉಪಯೋಗಿಸುವ pvc ಪೈಪ್ ಅಡ್ಡಡ್ಡ ಕಟ್ಟಿದ್ದರು, ಇದು ಎರಡೂ ಕಡೆ ತೆರೆದ ಬಾಗಿಲು! ಮೊದಮೊದಲು ಇದು ಯಾಕೆ ಎಂದು ಅರ್ಥ ಆಗಲಿಲ್ಲ.ನಂತರ ತಿಳಿಯಿತು.ಪೋಸ್ಟುಗಳು ಬಂದರೆ ಇದರಲ್ಲಿ ಸಿಕ್ಕಿಸುತ್ತಾರೆ.ಪತ್ರ ಪೈಪ್ ಒಳಗೆ ಇದ್ದರೆ ಮಳೆ ಬಿಸಿಲಿನಿಂದ ರಕ್ಷಣೆ ಸಿಗುತ್ತೆ.ಅದಕ್ಕಾಗಿ ಇದು ಮಾಡಿರೋದು, ಒಂದು ರೀತಿ ಪೋಸ್ಟ್ ಬಾಕ್ಸ್ ಅಂತ ಊಹಿಸಿದೆ. ಈಗ ಯಾರ ಮನೆಗೆ ಪೋಸ್ಟ್ ಬರುತ್ತೆ ಅಂತ ದುರ್ಬೀನು ಹಾಕಿ ಹುಡುಕಬೇಕು.ಅದರಲ್ಲಿ ಅಂದರೆ ಈ ಕೊಳವೆಯಲ್ಲಿ ಪೇಪರ್ ಇಟ್ಟು ಹೋಗ್ತಾನೆ ಪೇಪರ್ ಹುಡುಗ ಅಂತ ಕರಾವಳಿ ಸ್ನೇಹಿತರು ತಿಳಿಸಿದರು. ಇದು ತದ ನಂತರ ( ತದ ನಂತರ ಅಂದ ಕೂಡಲೇ ಇದು ನೆನಪಾಯಿತು…ಈ ಶೀರ್ಷಿಕೆಯ ಒಂದು ಧಾರಾವಾಹಿ ಕಾದಂಬರಿಯನ್ನು ಶ್ರೀ ಅರಾಸೇ ಅವರು ಸುಧಾದಲ್ಲಿ ಬರೆದಿದ್ದರು! ನಮ್ಮ ಕಾಲೇಜು ಪ್ರೊಫೆಸರ್ ರ  ಒಬ್ಬರ ಕುರಿತ ವಿಡಂಬನೆ ಅದು. ಅದು ಪ್ರಕಟ ಆಗುತ್ತಿದ್ದ ಕಾಲದಲ್ಲಿ ಬೆಂಗಳೂರಿಗೆ ಬಂದಿದ್ದ ಅರಾಸೇ ಸಿಕ್ಕಿದರು. ಕಾದಂಬರಿ ಹಿನ್ನೆಲೆ ಯನ್ನು ತುಂಬಾ ರಸವತ್ತಾಗಿ ವಿವರಿಸಿದ್ದರು. ಅದರಲ್ಲಿ ಹಂಪ್ಟಿ ದಾಂಪ್ಟಿ ಎನ್ನುವ ಪಾತ್ರ ನಮ್ಮ ಹಿರಿಯ ಕವಿಯೊಬ್ಬರನ್ನು ವಿಡಂಬಿಸಿದ ರೀತಿ ಎಂದು ನಗೆ ಉಕ್ಕಿಸಿದ್ದರು) ತದ ನಂತರ ಬಂದ ಕಟ್ಟಡಗಳಲ್ಲಿ ಈ ಪೆಟ್ಟಿಗೆ ಹಲವಾರು ಇಂಪ್ರೂವ್ಮೆಂಟ್ ಕಂಡವು. ಕೆಲವು ಚೌಕಾಕಾರದ, ಅಷ್ಟ ಭುಜದ,ಪಂಚಮ ಕೋನ ದ … ಹೀಗೆ ವಿವಿಧ ಅವತಾರ ತಾಳಿದವು. ಅವುಗಳಿಗೆ ಪ್ರಪಂಚದಲ್ಲಿನ ಎಲ್ಲಾ ಬಣ್ಣಗಳ ಮೆರುಗು ಸಿಕ್ಕಿತ್ತು.ಈಗಲೂ ಸುಮಾರು ಮನೆಗಳ ಗೇಟು ಗಳಲ್ಲಿ ತುಕ್ಕು ಹಿಡಿದ ಓಬೀರಾಯನ ಕಾಲದ ಕೊಳವೆ,pvc ಪೈಪ್ ಕಾಣಿಸುತ್ತವೆ.ಇತ್ತೀಚಿನ ಕಟ್ಟಡ ಗಳು ಬೆಂಗಳೂರಿನ ಮಾಡಲ್ ಅನುಸರಿಸಿ ನಮ್ಮಲ್ಲಿನ ಲೆಟರ್ ಬಾಕ್ಸ್ ತರಹ ಪರಿವರ್ತಿತ ವಾಗಿವೆ!


ಕಾಫಿ ಅಂದರೆ ಬ್ರೂ ಕಾಫಿ ಇಲ್ಲಿ. ಸ್ಟ್ರಾಂಗ್ ಬೇಕು ಅಂದರೆ ಇನ್ನೊಂದು ಚಿಟಿಕೆ ಹೆಚ್ಚು ಪುಡಿ ಉದುರಿಸಿ ಕೊಡುತ್ತಾರೆ. ಫಿಲ್ಟರ್ ಕಾಫಿ ಅಭ್ಯಾಸದವರು ಕಣ್ಣು ಮುಚ್ಚಿ ದೇವರ ಧ್ಯಾನ ಮಾಡುತ್ತಾ ಕಾಫಿ ಹೀರ ಬೇಕು! ಪಾಲ್ಗಾ ಟ್ ಅಯ್ಯರ್ ಕಡೆಯ ಕೆಲವರ ಪೂರ್ತಿ ವೆಜ್ ಹೋಟೆಲ್ ಗಳಲ್ಲಿ ಫಿಲ್ಟರ್ ಕಾಫಿ ಸಿಗುತ್ತೆ, ಅಲ್ಲಿಗೆ ಇನ್ನೂ ಭೇಟಿಸಿಲ್ಲ. ಬ್ರೂ ಕಾಫಿ ಯೇ ಅಸಲಿ ಕಾಪಿ ಎನ್ನುವ ನಂಬಿಕೆ ನಿಧಾನಕ್ಕೆ ತಲೆಯಲ್ಲಿ ಬೇರೂರಲು ಶುರು ಆಗಿದೆ!
ಹೊಸದಾಗಿ ಕಟ್ಟಿರುವ ಮನೆಗಳು ಸಮತಟ್ಟು ಇರುವ ತಾರಸಿ ಹಾಕಿ ಕೊಂಡಿರುತ್ತದೆ. ಅಂದರೆ ಮುಂದೆ ಅದರ ಮೇಲೂ ಮನೆ ಕಟ್ಟುವ ಯೋಚನೆ ಇರಿಸಿದ್ದಾರೆ ಎಂದು ಅರ್ಥ. ಇದು ಇಲ್ಲಿ ನಮ್ಮಲ್ಲಿಯ ಹಾಗೆ ಹೌಸಿಂಗ್ ಕಾಂಪ್ಲೆಕ್ಸ್ ಬಂತು ನೋಡಿ ಅದರ ಪ್ರಭಾವ ಇರಬಹುದು. ಕಾರಣ ಇಲ್ಲಿ ಬಹು ಮಹಡಿ ಮನೆಗಳ ನಿರ್ಮಾಣ ಈಚಿನದು. ಹಳೆಯ ಮನೆಗಳು ಹೆಂಚಿನ ಚಾವಣಿ ಮತ್ತು ಇಳಿಜಾರು, ತಾರಸಿ ಹೀಗಿದ್ದಾಗ ಮಳೆ ನೀರು ಸುಲಭವಾಗಿ ಹರಿಯುತ್ತದೆ. ಅಂದಹಾಗೆ ಇ ಲ್ಲಿ ಮಳೆ ನೀರಿನ ಕೊಯ್ಲು (ಇದು rain harvesting ಗೆ ನಮ್ಮ bwssb ತರ್ಜುಮೆ!) ಅಷ್ಟು ಪ್ರಚಲಿತ ಇಲ್ಲದ ಶಬ್ದ. ಕುಡಿಯುವ ನೀರಿನ ಬರ ಹೊರ ವಲಯದಲ್ಲಿ ಇದ್ದರೂ ಹಳೇ ನಗರದಲ್ಲಿ ಈಗಲೂ ವಾರಕ್ಕೆ ಏಳು ದಿವಸ ನೀರು ಬಿಡುವ ವ್ಯವಸ್ಥೆ ಇದೆ. ಹೊರವಲಯದಲ್ಲಿ ವಾರಕ್ಕೆರಡು ಬಾರಿ ನೀರು ಸರಬರಾಜು ಇದೆ. ಇನ್ನೊಂದು ತಮಾಷೆ ಅಂದರೆ ಇಲ್ಲೂ ಕರೆಂಟ್ ಹೋದರೆ ಪಕ್ಕದ ಮನೆಲೂ ಹೋಗಿದೆಯಾ ಅಂತ ನೋಡುತ್ತಾರೆ . ಹಳೇ keb ಮಾಡಿದ ರೀತಿ ಇಲ್ಲಿ ಇನ್ನೂ ವಲಯಗಳು ಆಗಿಲ್ಲ, ಬದಲಿಗೆ ಇಡೀ ರಾಜ್ಯಕ್ಕೆ ಒಂದೇ ವಿದ್ಯುತ್ ಸರಬರಾಜು ನಿಗಮ ಇದೆ, ಅದು KSEB ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್(ಹಿಂದೆ ನಮ್ಮಲ್ಲಿ mseb ಇದ್ದ ಹಾಗೆ). ಕರೆಂಟ್ ಹೋದರೆ ಆಚೆ ಬಂದು ಕೂಡುತ್ತಾರೆ, ಥೇಟ್ ನಮ್ಮ ಹಾಗೆಯೇ! ವಿದ್ಯುತ್ ಕಚೇರಿಗೆ ಪೋನ್ ಮಾಡಿ ದೂರು ಕೊಡುವುದು ದೂರದ ಮಾತು . ಇಲ್ಲೂ ಸಹ KSRTC ಇದೆ, ನಮ್ಮಲ್ಲಿ ಸಹ KSRTC ಉಂಟು. ಅಲ್ಲಿ ಕರ್ನಾಟಕ, ಇಲ್ಲಿ ಕೇರಳ. ಪ್ರಯಾಣಿಕರು ಗೊಂದಲಕ್ಕೆ ಒಳಗಾಗ್ತಾರೆ ನಿಮ್ಮದರ ಹೆಸರು ಬದಲಾಯಿಸಿ ಅಂತ ಕೇರಳ ದವರು ಕೇಳಿದರಂತೆ.ಕರ್ನಾಟಕದವರು ನೋ ಅಂದರು. ಕೇಸು ಕೋರ್ಟಿಗೆ ಹೋಯಿತು. ಕೇರಳ ದವರಿಗೆ ಈ ಹೆಸರೇ ಉಳಿಸಿಕೊಳ್ಳುವ ಆದೇಶ ಬಂದಿದೆ!
ಕಸ ವಿಲೇವಾರಿ ನಮ್ಮೂರಿನ ಹಾಗೆ ಇಲ್ಲೂ ಸಹ ದೊಡ್ಡ ಸಮಸ್ಯೆ ಹೌದೇ ಅಂದರೆ ಹೌದು ಮತ್ತು ಇಲ್ಲ. ಹೌದು ಯಾಕೆ ಅಂದರೆ ಕಸ ವಿಲೇವಾರಿ ಬಗ್ಗೆ ಯಾರಾದರೂ ಒಬ್ಬರು ಮಂತ್ರಿ ಸರಾಸರಿ ದಿವಸಕ್ಕೆ ಒಂದು ಹೇಳಿಕೆ ಕೊಡ್ತಾನೆ. ಎಲ್ಲೋ ಸೆಮಿನಾರ್, ಎಲ್ಲೋ ಸಂಕಿರಣ, ಎಲ್ಲೋ ವಿಚಾರ ವಿನಿಮಯ ಇದು ಆಗ್ತಾ ಇರ್ತವೆ.ಸಮಸ್ಯೆ ಅಲ್ಲ ಯಾಕೆ ಅಂದರೆ ಹೊರವಲಯದ ಮನೆಗಳಿಗೆ ಹಸಿ ಕಸ ಒಯ್ಯುವ ವ್ಯವಸ್ಥೆ ಇಲ್ಲ. ಮನೆಯ ಒಂದು ಮೂಲೆಯಲ್ಲಿ ಕೊಂಚ ಜಾಗ ಬಿಟ್ಟಿರುತ್ತಾರೆ. ಅದರಲ್ಲಿ ಒಂದು ಎರಡು ಮೂರು ಅಡಿ ಆಳದ ಗುಂಡಿ ಮಾಡಿರುತ್ತಾರೆ. ಎಲ್ಲಾ ಹಸಿ ಕಸ ಅದರಲ್ಲಿ ಸುರಿತಾರೆ. ಆಗಾಗ ಅದರ ಮೇಲೆ ಮಣ್ಣು ಸುರಿಯುತ್ತಾರೆ, ಅದಕ್ಕೆ ಮುನ್ನ ಅದನ್ನ ಕೆದಕುತ್ತಾರೆ!
ಒಣಕಸ ಕಲೆಕ್ಷನ್ ಗೆ ತಿಂಗಳಿಗೆ ಒಮ್ಮೆ (ಇದು ಲೆಕ್ಕ, ಕೆಲವು ಸಲ ಇದು ಇನ್ನೂ ಹೆಚ್ಚು) ಕಾರ್ಪೋರೇಶನ್ ಅವರು ಬರ್ತಾರೆ. ಯಾವ ಒಣಕಸ ತಗೋ ಬೇಕು ಅಂತ ಅವನು ಡಿಸೈಡ್ ಮಾಡ್ತಾನೆ. ಒಂದು ಸಲ ಹಳೇ ಬಟ್ಟೆ, ಇನ್ನೊಂದು ಸಲ ಪ್ಲಾಸ್ಟಿಕ್, ಇನ್ನೊಂದು ಸಲ ಕಾರ್ಡ್ ಬೋರ್ಡ್ ಬಾಕ್ಸ್… ಹೀಗೆ. ಕಸದವನು ಬಂದಿಲ್ಲ ಅಂತ ನಮ್ಮೂ ರಿನವರ ಹಾಗೆ ಯಾರೂ ತಲೆ ಮೇಲೆ ಆಕಾಶ ಬಿದ್ದ ಹಾಗೆ ಆಡುವುದಿಲ್ಲ. ಪತ್ರಿಕೆಗೆ ಬರೆಯೋದಿಲ್ಲ, ಟಿವಿ ಅವರು ನ್ಯೂಸ್ ಮಾಡೋ ದಿ ಲ್ಲ.ಹೀಗೆ ತಿಂಗಳಿಗೆ ಒಮ್ಮೆ ಬಂದು ಕಸ ಕಲೆಕ್ಟ್ ಮಾಡೋರಿಗೆ ನೂರು ರೂಪಾಯಿ ಕೊಡಬೇಕು. ಅದಕ್ಕೆ ಕಾರ್ಪೋರೇಶನ್ ರಸೀತಿ ಕೊಡ್ತಾರೆ. ಅದನ್ನ ಅಂದರೆ ಕಸವನ್ನು ಅವರು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಒಯ್ಯಬೇಕು. ಇಲ್ಲೂ ನಮ್ಮ ಹಾಗೇ ಒಯ್ಯಲು ಟ್ರಕ್ ಸಿಕ್ಕಿರಲ್ಲ. ಅದರಿಂದ ಈ ಮೂಟೆ ಗಳು ಸಾಲು ಸಾಲಾಗಿ ಯಾವುದಾದರೂ ಕಾಂಪೌಂಡ್ ಒರಗಿ ನಿಂತಿರುತ್ತದೆ. ಅದರ ಮೇಲೆ Trivandram corporation ಹೆಸರು ಇರುತ್ತೆ.ಒಂದು ಸಲ ಏರ್ ಪೋರ್ಟ್ ರಸ್ತೆಯಲ್ಲಿ ಸಾಲು ಸಾಲಾಗಿ ಈ ಮೂಟೆ ಗಳು ಗಣ್ಯರು ಯಾರನ್ನೋ ಸ್ವಾಗತಿಸುತ್ತಿರುವ ಹಾಗೆ ಶಿಸ್ತಿನಿಂದ ನಿಂತಿದ್ದವು! ಬಿಳಿ ಧಿರಿಸು ಧರಿಸಿ ಕವಾಯಿತಿಗೆ ನಿಂತ ಸೈನಿಕರ ಹಾಗೆ ಕಂಡವು!ಆಗಾಗ್ಗೆ ಮನೆಯಲ್ಲಿರುವ ಮುದುಕರು (ಹೆಚ್ಚಾಗಿ ಗಂಡಸರೇ) ಮನೆ ಮುಂದೆ ಕಸ
ಗುಡಿಸಿ ಒಟ್ಟು ಮಾಡಿ ಅದಕ್ಕೆ ಬೆಂಕಿ ಇಡ್ತಾರೆ. ಮಿಕ್ಕ ಸಮಯದಲ್ಲಿ ಚೌಕಳಿ ಲುಂಗಿಧಾರಿ ಗಳಾಗಿರುವ ಗಂಡಸರು ಈ ಸಮಯದಲ್ಲಿ ಬರ್ಮುಡಾ ಚೆಡ್ಡಿ ಮತ್ತು ಟೀ ಶರ್ಟ್ ಧರಿಸಿರುತ್ತಾರೆ. ಬಹುಶಃ ಮಕ್ಕಳು ಊರಿಗೆ ಬಂದಾಗ (ಅವರು ಬಿಸಾಕಲು ತಂದವು)ಕೊಟ್ಟ ಗಿಫ್ಟ್ ಇರಬೇಕು.ಈ ಊರಿನಲ್ಲಿ ನಮ್ಮ ಊರಿನಲ್ಲಿ ಇದ್ದ ಹಾಗೆ ಕಸಕ್ಕೆ ಬೆಂಕಿ ಇಡಬಾರದು ಎನ್ನುವ ಕಾನೂನು ಇದ್ದ ಹಾಗೆ ಕಾಣೆ. ಇವತ್ತು(11/7/23) ಇನ್ನೊಂದು ಸುದ್ದಿ ನನ್ನ ಸೆಳೆಯಿತು.ಕೇರಳದಲ್ಲಿ “ಮಾಲಿನ್ಯ ಮುಕ್ತ ನವ ಕೇರಳo   ” ಎನ್ನುವ ಒಂದು ಘೋಷ ವಾಕ್ಯ ಚಾಲನೆ ಆಗುತ್ತಂತೆ.ನಮಗೆ ಅಂದರೆ ಕರ್ನಾಟಕದವರಿಗೆ ವಿಶೇಷ ಅನಿಸಬಹುದಾದ ಇನ್ನೊಂದು ತಮಾಷೆ ಅನಿಸಿದ್ದು ಹಳೇ ಪೇಪರ್ ಖಾಲಿ ಸೀಸೇ ಕೊಳ್ಳುವವರು ಇಲ್ಲಿಲ್ಲ! ಯಾರೋ ಬರ್ತಾನೆ ಮನೆ ಹಳೇ ಪೇಪರ್ ಅವನ ಮುಂದೆ ಇಡ್ತೀರ, ಅವನು ಇಷ್ಟು ಕಾಸು ಕೊಡಿ ಅನ್ನುತ್ತಾನೆ. ಕೊಡ್ತೀರ ಅಷ್ಟೇ . ಅವನೇ ಕೆಲವು ಸಲ ಬಾಟಲು ತೆಗೆದು ಕೊಳ್ಳುತ್ತಾನೆ, ಎಲ್ಲವೂ ನೀವು ಕಾಸು ಕೊಟ್ಟ ನಂತರ. ಬಾಟಲಿಗಳು ರಸ್ತೆಯ ಮೂಲೆಯಲ್ಲಿ ಅಥವಾ ಮೂರು ರಸ್ತೆ ಆದಮೇಲೆ ಅನಾಥವಾಗಿ ಬಿದ್ದಿರುತ್ತದೆ. ಹೀಗೆ ಹಲವೆಡೆ ಖಾಲಿ ಬಾಟಲು ತುಂಬಿರುವ ಬ್ಯಾಗ್ ಕಣ್ಣಿಗೆ ಬೀಳುತ್ತೆ.
ಒಂದು ಅಪರೂಪದ ಪ್ರಸಂಗಕ್ಕೆ ನಾನೇ ಸಾಕ್ಷಿ ಆದೆ. ನಾವು ಇಳಿದುಕೊಂಡಿದ್ದ ನೆಂಟರ ಮನೆಯ ಹತ್ತಿರ ರಾತ್ರಿ ಹೊತ್ತು ನವಿಲು ಕೂಗಿದ ಶಬ್ದ ಕೇಳಿಸಿತು.ಅದನ್ನ ಬೆಳಿಗ್ಗೆ ಹೇಳಿದಾಗ ಕೆಲವರ ಮುಖದಲ್ಲಿ ಇವನು ಬುರುಡೆ ಬಿಡ್ತಿದಾನೆ ಎನ್ನುವ ಭಾವ ಕಾಣಿಸಬೇಕೇ?ಅದಾದ ಅರ್ಧ ಗಂಟೆಗೆ ಮಾಡಿ ಹತ್ತಿ ಬಟ್ಟೆ ಹರವುತ್ತಾ ಇಡಿವಿ. ಪಕ್ಕದ ಮನೆ ಮೇಲೆ ಒಂದು ನವಿಲು ಹಾರಿ ಬಂದು ಕುಳಿತಿತು.ತಿರುವನಂತಪುರದಲ್ಲಿ ನವಿಲುಗಳು ಹೀಗೆ ಕಾಣುವುದು ಇಲ್ಲವಂತೆ!

ರಸ್ತೆ ಉದ್ದಕ್ಕೂ ನಿಮಗೆ ಲಾಟರಿ ಟಿಕೆಟ್ ಮಾರಾಟ ಗಾರರು ಕಾಣಿಸುತ್ತಾರೆ. ಲಾಟರಿ ಅಂದರೆ ಏನು ಅಂತ ಈ ಚೆಗೆ  ಹುಟ್ಟಿದವರಿಗೆ ಹೇಳಬೇಕು.. ಲಕ್ಷ ಬಡವರಿಂದ ಒಬ್ಬ ಸಾಹುಕಾರನ ಹುಟ್ಟಿಸುವ ಕ್ರಿಯೆಗೆ ಲಾಟರಿ ಅಂತ ಹೆಸರು. ಮೊದಲು ಇದು ಖಾಸಗಿ ಅವರ ಕಾಯಕ ಆಗಿತ್ತು.ಅದರಲ್ಲಿ ನ ಆರ್ಥಿಕ ಉತ್ಪಾದನೆಯನ್ನು ಕಂಡ ಸರ್ಕಾರ ಮಧ್ಯೆ ಪ್ರವೇಶ ಮಾಡಿತು. ಎಪ್ಪತ್ತು ಎಂಬತ್ತರ ದಶಕದಲ್ಲಿ ಎಲ್ಲಾ ರಾಜ್ಯಗಳೂ ಪೈಪೋಟಿ ಮೇಲೆ ಲಾಟರಿ ನಡೆಸೋವು. ಇದರ ಸ್ಥೂಲ ನೋಟ ಅಂದರೆ ಒಂದು ಉದಾಹರಣೆ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತೇನೆ. ಒಂದು ಲಾಟರಿ ಟಿಕೆಟ್ ಗೆ ಹತ್ತು ರೂಪಾಯಿ ಅಂತ ಇಟ್ಟುಕೊಳ್ಳಿ. ಪ್ರತಿಯೊಂದು ಲಾಟರಿ ಟಿಕೆಟ್ ಗೆ ನಂಬರು ಇರುತ್ತೆ. ಇದನ್ನ ಕೋಟಿ ಲೆಕ್ಕದಲ್ಲಿ ಪ್ರಿಂಟ್ ಮಾಡಿ ಮಾರಬಹುದು . ನಿಗದಿತ ದಿನ ಈ ಟಿಕೆಟ್ ನಂಬರುಗಳನ್ನು ಆಯ್ಕೆ ಮಾಡುತ್ತಾರೆ. ಅದಕ್ಕೆ ಕೆಲವು ಬಹುಮಾನ ಅಂತ ಇರುತ್ತೆ. ಮೊದಲನೇ ಬಹುಮಾನ ಲಕ್ಷ, ಕೋಟಿ ಇಂದ ಕೆಳಮುಖ ಆಗುತ್ತಾ ಬಂದು ಹತ್ತು ಐದಕ್ಕೆ ನಿಲ್ಲುತ್ತದೆ.ಒಂದಂಕಿ, ಎರಡಂಕಿ… ಹೀಗೂ ಬಹುಮಾನ ಇರುತ್ತೆ. ಹಲವಾರು ಬಗೆ ಬಗೆ ಯ ಬಹು ಆಕರ್ಷಕ ಯೋಜನೆಗಳು ಲಾಟರಿ ಸ್ಕೀಮ್ ನಲ್ಲಿ ಇರುತ್ತಿತ್ತು ಮತ್ತು ನಮ್ಮ ಪೀಳಿಗೆಯ ಜನ ಒಂದಲ್ಲಾ ಒಂದು ಬಾರಿ ಲಾಟರಿ ಟಿಕೆಟ್ ಕೊಂಡು ಅದೃಷ್ಟ ಪರೀಕ್ಷೆ ಮಾಡಿಕೊಂಡವರು . ಡೈಲಿ ಲಾಟರಿ, ವೀಕ್ಲಿ ಲಾಟರಿ, ಮಂತ್ಲಿ ಲಾಟರಿ…ಹೀಗೆ ವೈವಿಧ್ಯಮಯ.ಬೆಂಗಳೂರಿನ ಮೆಜೆಸ್ಟಿಕ್ ಥಿಯೇಟರ್ ಸುತ್ತಾ ಮುತ್ತಾ ಸಾವಿರಾರು ಜನ ಈ ಲಾಟರಿ ಟಿಕೆಟ್ ಕೊಳ್ಳಲು ಸೇರುತ್ತಿದ್ದರು.ಲಾಟರಿ ಮಾರಾಟ ಒಂದು ದೊಡ್ಡ ಉದ್ದಿಮೆ ಆಗಿ ಬೆಳೆದಿತ್ತು.ಲಾಟರಿ ರಿಸಲ್ಟುಗಳು ಪೇಪರಿನಲ್ಲಿ ಬರುತ್ತಿತ್ತು.ಸಿಂಗಲ್ ಡಿಜಿಟ್ ಲಾಟರಿ ಅಂತ ಒಂದು ಸ್ಕೀಮ್ ಇತ್ತು.ಅದರ ಮೂಲಕ ಸುಮಾರು ಜನ ಪಾಪರ್ ಆದರು! ನನ್ನ ಒಂದು ನೆನಪು ಇದು.ನನ್ನ ಕಲಿಗ್ ಸತ್ಯ ನಾರಾಯಣ ಅನ್ನುವವನಿಗೆ ಈ ಚಟ ಬಲವಾಗಿ ಅಂಟಿತ್ತು.ಎಲ್ಲಾ ರಾಜ್ಯಗಳ ಟಿಕೆಟ್ ಬಾರೀ ಸಂಖ್ಯೆಯಲ್ಲಿ ಕೊಳ್ಳುತ್ತಿದ್ದ.ಅವನು ರಿಟೈರ್ ಆದಾಗ ಅವನ ಕಬೋರ್ಡ್, ಟೇಬಲ್ ಡ್ರಾ ಎಲ್ಲೆಂದರಲ್ಲಿ ರಾಶಿ ರಾಶಿ ಲಾಟರಿ ಟಿಕೆಟ್ ಗಳೇ.ಅದನ್ನೆಲ್ಲ ಸೇರಿಸಿ ಒಂದು ದೊಡ್ಡ ಹಾರ ಮಾಡಿ ಅವನಿಗೆ ಹಾಕಿ ಅವನಿಗೆ ಬೀಳ್ಕೊಟ್ಟ ಕತೆ ನಡೆಯಿತು.ಇನ್ನೊಬ್ಬ ಗೆಳೆಯ ದೊಡ್ಡ ಸಂಗೀತ ವಿದ್ವಾಂಸ ಇವನು.ಲಾಟರಿ ಚಟಕ್ಕೆ ಬಿದ್ದು ದೊಡ್ಡ ಮನೆ ಮಾರಿ ಪುಟ್ಟ ಗೂಡಿನಲ್ಲಿ ಬಾಡಿಗೆಗೆ ಇದ್ದ.ಇದೇ ಸಮಯದಲ್ಲಿ bts (ಈಗಿನ bmtc) ಒಂದು ಯೋಜನೆ ತಂದಿತು.ಜನ ಬಸ್ ಪ್ರಯಾಣದ ನಂತರ ಟಿಕೆಟ್ ಬಿಸಾಕಿ ನಗರವನ್ನು ಕಸದ ಕೊಂಪೆ ಮಾಡ್ತಾ ಇದ್ದಾರೆ ಅಂತ ಅದಕ್ಕೆ ಅನಿಸಿತ್ತು.ಶ್ರೀ ಪಿಜಿ ಆರ್. ಸಿಂಧ್ಯಾ ಅವರು ಸಾರಿಗೆ ಮಂತ್ರಿ ಆಗ.ಬಸ್ ಟಿಕೆಟ್ ಲಾಟರಿ ಯೋಜನೆ ಅದು .ಇವತ್ತು ಮಾರಾಟ ಆದ ಟಿಕೆಟ್ ನಂಬರುಗಳ ಲಾಟರಿ, ಅದಕ್ಕೆ ಬಹುಮಾನ.ಕೊಂಚ ದಿವಸ ಇದೂ ಸಹ ನಡೆಯಿತು. ಈ ಲಾಟರಿ ಪ್ರೇರಣೆ ಎಲ್ಲೆಲ್ಲೂ ಕಾಣಬಹುದಿತ್ತು. ಸೀರೆ ಲಾಟರಿ, ಕುರಿ ಲಾಟರಿ ಪಟಾಕಿ ಲಾಟರಿ ಹೀಗೆ. ಒಬ್ಬ ಚಾಣಾಕ್ಷ ಇದೇ ತಳಹದಿಯ ಮೇಲೆ ಸಿಂಗಾಪುರ್ ಲಾಟರಿ ಸಹ ನಡೆಸಿದ. ಲಾಟರಿ ಗೆದ್ದವರಿಗೆ ಸಿಂಗಪುರ ಪ್ರವಾಸ!
ಇದು ಅಂದರೆ ಲಾಟರಿ ಒಂದು ಚಟ ಆಗಿ ಸುಮಾರು ಸಂಸಾರಗಳು ಎಕ್ಕುಟ್ಟಿ ಹೋದಮೇಲೆ ಕೆಲವು ರಾಜ್ಯ ಸರ್ಕಾರಗಳು ಎಚ್ಚೆತ್ತು ಕೊಂಡು ಲಾಟರಿ ನಿಲ್ಲಿಸಿದವು ಮತ್ತು ಬೇರೆ ರಾಜ್ಯಗಳ ಟಿಕೆಟ್ ಮಾರಾಟ ನಿಷೇಧ ಮಾಡಿದವು .ಕರ್ನಾಟಕದಲ್ಲಿ ಈಗ ಲಾಟರಿ ನಿಷೇಧ ಇದೆ. ಕೆಲವು ರಾಜ್ಯಗಳು ಇನ್ನೂ ಲಾಟರಿ ವ್ಯವಸ್ಥೆ ಇಟ್ಟುಕೊಂಡಿವೆ. ಅದರಲ್ಲಿ ಕೇರಳ ಸಹ ಒಂದು. ಇಲ್ಲಿ ಲಾಟರಿ ಟಿಕೆಟ್ ಅನ್ನು ರಸ್ತೆಯ ಫುಟ್ ಪಾತ್ ನಲ್ಲಿ ಮಾರುತ್ತಾರೆ. ಪಕ್ಕದಲ್ಲಿನ ಒಂದು ಬೋರ್ಡ್ ಮೇಲೆ ಲಾಟರಿ ಬಹುಮಾನದ ವಿವರ ಅಂಟಿಸಿರುತ್ತಾರೆ. ಸುಮಾರು ವಯಸ್ಸಾದವರು ಈ ಮಾರಾಟ ಗಾರರು. ಕೆಲವು ಕಡೆ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳೂ ಸಹ ಇರುತ್ತಾರೆ. ನಗರದ ಸುಮಾರು ಕಡೆ 500*100,15000*10000,10000*100000 ಈ ರೀತಿಯ ಬೋರ್ಡುಗಳು ಎದ್ದು ಕಾಣುತ್ತವೆ. ಅವುಗಳು ಲಾಟರಿ ಟಿಕೆಟ್ ಗಳ ವಿವರ ನೀಡುತ್ತವೆ.
ಮನೆಯಿಂದ ತಿರುವನಂತಪುರಕ್ಕೆ ಅರ್ಜೆಂಟ್ ಅರ್ಜೆಂಟ್ ಆಗಿ ಹೊರಟೆವು ಅಂತ ಹೇಳಿದೆ ತಾನೇ. ಈ ಅರ್ಜೆಂಟ್ ನಲ್ಲಿ ನನ್ನ ಮಾತ್ರೆ ಬ್ಯಾಗು ಮನೇಲೇ ಉಳಿದು ಹೋಯಿತು. ಎರಡು ತಿಂಗಳಿನ ಔಷಧಿ ಬ್ಯಾಗ್ ನಲ್ಲಿತ್ತು. ನಮ್ಮ ಫ್ಯಾಕ್ಟರಿ ಯಲ್ಲಿ ನಿವೃತ್ತ ಉದ್ಯೋಗಿಗಳಿಗೆ ರಿಯಾಯತಿ ದರದಲ್ಲಿ ಒಮ್ಮೆಗೇ ಮೂರು ತಿಂಗಳಿಗೆ ಆಗುವಷ್ಟು ಔಷಧಿ ಕೊಡುವ ಸೌಲಭ್ಯ ಇದೆ. ಈ ಲೆಕ್ಕದಲ್ಲಿ ಮನೆಯಲ್ಲಿ ಒಂದು ವಾರಕ್ಕೆ ಆಗುವಷ್ಟು ಬಿಟ್ಟು ಮಿಕ್ಕದ್ದು ಬ್ಯಾಗಿನಲ್ಲಿ ತುಂಬಿದ್ದೆ. ಅದನ್ನು ನನನ್ನ ಬಾಸ್ ಕಿಟ್ ನಲ್ಲಿ ಹಾಕುತ್ತಾಳೆ ಅಂದುಕೊಂಡಿದ್ದೆ. ರಾತ್ರೀ ಮಾತ್ರೆ ತೆಗೆದುಕೊಳ್ಳಲು ಬ್ಯಾಗು ತೆರೆದರೆ ಮರೆತಿರುವುದು ಗೊತ್ತಾಯಿತು. ಸರಿ ಬಿಡು ಅಂದೆ. ಮಾತ್ರೆ ಬಿಡಲು ಸಾಧ್ಯವೇ. ತಿರುವನಂತಪುರದಲ್ಲಿ ರೈಲು ಇಳಿದ ಮೇಲೆ ಬೆಳಗಿನ ಎಂಟು ಎಂಟೂ ವರೆಗೆ ಐದಾರು ಅಂಗಡಿ ಹುಡುಕಿದೆ. ಸೇಲ್ಸ್ ಮ್ಯಾನ್ ಬಂದಿಲ್ಲ, ನೀವೇ ಹುಡುಕಿ ತಗೊಳ್ಳಿ ಅಂದರು ಒಂದು ಕಡೆ. ಹತ್ತು ನಿಮಿಷ ಹುಡುಕಿದರೂ ಒಂದೂ ಔಷಧಿ ಸಿಗಲಿಲ್ಲ. ಸರಿ ಆಚೆ ಬಂದೆನಾ.. ನನ್ನ ಜತೆ ಬಂದಿದ್ದ ನನ್ನಾಕೆ ಅವಳ ಇಬ್ಬರು ತಂಗಿಯರು ಅವರ ಇಬ್ಬರು ಮಕ್ಕಳು ಎಲ್ಲರಿಗೂ ಮಾತ್ರೆ ಸಿಗಲಿಲ್ಲವೇ ಎನ್ನುವ ಯೋಚನೆ ಶುರು!
ಮಧ್ಯಾಹ್ನ ಹುಡುಗರು ಆಚೆ ಹೋಗಿ ಮಾತ್ರೆ ತಂದರು. ಇಂಜೆಕ್ಷನ್ ರಿ ಫಿಲ್ ತಂದರು, ಸಿರೆಂಜ ಯೂನಿಟ್ ಇರಲಿಲ್ಲ. ಪರವಾಗಿಲ್ಲ ಬಿಡಿ ಅಂತ ಬಿಟ್ಟೆನಾ…
ಅಂದು ಸಂಜೆ ಆಸ್ಪತ್ರೆ ಹತ್ತಿರವೇ ಜನೌಶದ ಅಂಗಡಿ ಕಾಣಿಸಿತು. ನಾನು ತಗೊಳ್ಳುವ ಮಾತ್ರೆಗಳ ಜೆನೆರಿಕ್ ಹೆಸರು ಮೊಬೈಲ್ ನಲ್ಲಿತ್ತು. ಮಾರನೇ ದಿವಸ ಅಂಗಡಿ ಹೊಕ್ಕೆ, ಮೂಲ ಹೆಸರು ಹೇಳಿದೆ. ಅಲ್ಲೇ ಇದ್ದ ಒಂದು ಹುಡುಗಿ ಅವಳ ಮೊಬೈಲ್ ತೆಗೆದಳು. ಮಾತ್ರೆ ಲಿಸ್ಟ್ ಮಾಡಿ ತಂದು ಇಟ್ಟಳು.ಸ್ಟ್ರಿಪ್ ಗೆ ೨೮೦ ಇದ್ದದ್ದು ಇಲ್ಲಿ ಮುವತ್ತಕ್ಕೆ, ನಾನೂರು ಚಿಲ್ರೆದು ಅರವತ್ತಕ್ಕ….. ಹೀಗೆ ಸಿಕ್ತು…! ಜನೌಷಧಿ ಮೋದಿ ಜಾರಿಗೆ ತಂದ ಒಂದು ಯೋಜನೆ.ಮೋದಿ ಹೇಟ್ ಮಾಡುವ ಕಮ್ಯೂನಿಸ್ಟ್  ಮಿತ್ರ ಪಕ್ಷಗಳ ಸರ್ಕಾರ ಕೇರಳದಲ್ಲಿ. ಆದರೆ ಜನಕ್ಕೆ ಅನುಕೂಲ ಆಗುವ ಎಲ್ಲವನ್ನೂ ಬೆಂಬಲಿಸುತ್ತಾರೆ. ಅಂಗಡಿ ಮುಂದೆ ಒಂದು ದೊಡ್ಡ ಬೋರ್ಡ್, ಮೇಲುಗಡೆ ಮೋದಿ ಚಿತ್ರ ಮತ್ತು ಕೆಳಗೆ ಶೇಕಡಾ 50ರಿಂದ 90ರಷ್ಟು ಕಡಿಮೆ ಬೆಲೆಯಲ್ಲಿ ಔಷಧ ಸಿಗುತ್ತದೆ ಎನ್ನುವುದು ಬೋರ್ಡ್!
ನಮ್ಮೂರಲ್ಲಿ ಜನೌಶಧಿ ಮಾರಾಟ ಮಾಡುವ ಅಂಗಡಿಯವರು ಅದೇನೋ ಒಂದು ರೀತಿಯ ಮುಜುಗರ ಪಡೋದು ನೋಡಿದ್ದೆ. ಏನೋ ಕಳ್ಳತನ ಮಾಡುತ್ತಿರೋ ಮುಖಭಾವ ಇರುತ್ತೆ!ನಮ್ಮಲ್ಲೂ ಹೀಗೆ ಬೋರ್ಡ್ ಇಡಬಹುದು ಯಾಕೆ ಯಾರಿಗೂ ಇದು ಹೊಳೆದಿಲ್ಲ…


ಸರ್ಕಾರದ ಪ್ರವಾಸೋದ್ಯಮ ಜಾಹಿರಾತಿನಲ್ಲಿ ಕೇರಳ ದೇವರ ಸ್ವಂತ ಭೂಮಿ (Gods own land)ಎನ್ನುವ ಟ್ಯಾಗ್ ಲೈನ್ ನಲ್ಲಿ ಪ್ರಚಾರ ಆಗುತ್ತೆ. ಇಲ್ಲಿನ ಆಯುರ್ವೇದ ಔಷಧಿಗಳು ವರ್ಲ್ಡ್ ಫೇಮಸ್. ಕೇರಳದ ಹಲವಾರು ಫಾರ್ಮಸಿ ಅಂಗಡಿಗಳು ಬೆಂಗಳೂರಿನಲ್ಲಿ ಭರಾಟೆ ವ್ಯಾಪಾರ ನಡೆಸುತ್ತಿವೆ. ಹಿಂದೆ ಹೃಷಿಕೇಶ ಹೋಗಿದ್ದಾಗ ಅಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ಯೋಗ ಕೇಂದ್ರ ಮತ್ತು ಆಯುರ್ವೇದ ಅಂಗಡಿಗಳು ನೋಡಿದ್ದೆ. ಅದೇ ಅನುಭವ ಇಲ್ಲಿ ರಿಪೀಟ್ ಆಯಿತು. ಒಂದು ವ್ಯತ್ಯಾಸ ಅಂದರೆ ಇಲ್ಲಿ ಯೋಗ ಕೇಂದ್ರಗಳು ಇಲ್ಲ.
ಅಂದಹಾಗೆ ಒಂದು ನಿಮಗೆ ಹೇಳಲು ಮರೆತಿದ್ದೆ, ಈಗ ನೆನಪಾಯಿತು. ಕೇರಳದಲ್ಲಿ ಡುಮ್ಮಣ್ಣಗಳು ಇಲ್ಲವೇ ಇಲ್ಲ! ಹೊರಗಡೆಯಿಂದ ಬಂದಿದ್ದ ನಾನೇ ಒಂದು ದೊಡ್ಡ ಡುಮ್ಮಣ್ಣ ಮತ್ತು ಒಂದೇ ಒಂದು ಸಲ ಒಬ್ಬ ಡುಮ್ಮಣ್ಣ ನ್ನ ನೋಡಿದೆ, ಆಸ್ಪತ್ರೆ ಲಿಫ್ಟ್ ನಲ್ಲಿ.ಅವನು ತಮಿಳು ನಾಡಿನವನು. ಮಿಕ್ಕ ಹಾಗೆ ಕೇರಳಿಗರು ತೆಳು ಮತ್ತು ಬೆನ್ನಿಗೆ ಹೊಟ್ಟೆ ಅಂಟಿರುವ ಜನ. ಬಹುಶಃ ಮೀನು ಮುಖ್ಯ ಆಹಾರ ಆಗಿರುವುದರಿಂದ ದೇಹದಲ್ಲಿ ಕೊಬ್ಬು ಸೇರಲು ಆಗಿಲ್ಲ ಎಂದು ತೋರುತ್ತದೆ. ಆದರೆ ಟಿವಿ ಯಲ್ಲಿ ತೋರಿಸುವ ಸುಮಾರು ರಾಜಕಾರಣಿಗಳು ಎರಡು ಮೂರು ಮನುಷ್ಯರನ್ನು ಸೇರಿಸಿ ಆಗಿರುವವರು. ಅವರು ಮೀನಿನ ಬದಲು ಬೇರೆ ಏನನ್ನೋ ತಿನ್ನುತ್ತಾರೆ ಎಂದು ತೋರುತ್ತದೆ.
ನಿಮಗೆ ಆಯುರ್ವೇದ ಸಂಗತಿ ಹೇಳುತ್ತಿದ್ದೆ. ಇಲ್ಲೂ ಸಹ ಸುಮಾರು ಆಯುರ್ವೇದ ಆಸ್ಪತ್ರೆ ಗಳು ಇವೆ ಮತ್ತು ಸುಮಾರು ಆಯುರ್ವೇದ ವೈದ್ಯರು ಸಹ ಇದ್ದಾರೆ. ಒಂದು ರಸ್ತೆಯಲ್ಲಿ ಸುಮ್ಮನೆ ಅತ್ತ ಇತ್ತ ಕಣ್ಣು ಹಾಯಿಸುತ್ತಾ ಹೋಗಿ, ಹಲವು ಹೆಸರಿನ ಆಯುರ್ವೇದ ವೈದ್ಯರು, ಕ್ಲಿನಿಕ್ ಗಳು ಮತ್ತು ಔಷಧಿ ಅಂಗಡಿಗಳು ಕಾಣಿಸುತ್ತವೆ. ಸಿದ್ಧ ಆಯುರ್ವೇದ ಎನ್ನುವ ಬೋರ್ಡು ಸುಮಾರು ಕಡೆ ಇದೆ.ಸಿದ್ಧ ಆಯುರ್ವೇದ ಅನ್ನುವುದೂ ಸಹ ಒಂದು ವೈದ್ಯಿಕೆ.ಸಿದ್ಧರು ನೆನಪಿಗೆ ಬಂದರು.ನನ್ನ ಗೆಳೆಯರೊಬ್ಬರು ಯಾವುದೋ ಬೇನೆ ಇಂದ ನರಳುತ್ತಿದ್ದರು. ಓಡಾಟ ಕಷ್ಟ, ಆಹಾರ ತೆಗೆದು ಕೊಳ್ಳೋದು ಕಷ್ಟ, ಉಸಿರಾಟ ಕಷ್ಟ…ಹೀಗೆ.ಅವರ ಪಾಡು ನೋಡಿದ ಒಬ್ಬರು ಅವರಿಗೆ ಸಿದ್ಧರ ಪರಿಚಯ ಮಾಡಿಸಿದರು.ಅವರು ಗೆಳೆಯನಿಗೆ ಚಿಕಿತ್ಸೆ ನೀಡಿ ಖಾಹಿಲೆ ಗುಣ ಪಡಿಸಿದರು.ಆದರೆ ಸುಮಾರು ಜನ ಕಳ್ಳರು ಈ ವೃತ್ತಿ ಹಿಡಿದಿರುವುದು ಜನರಲ್ಲಿ ನಂಬಿಕೆ ಹೋಗಿದೆ.ಆಯುರ್ವೇದದ ಅಷ್ಟೊಂದು ಜನಕ್ಕೆ ವ್ಯಾಪಾರ ಆಗುತ್ತಾ ಎಂದು ಆಶ್ಚರ್ಯ ಪಟ್ಟಿದ್ದೇನೆ. ವ್ಯಾಪಾರ ಆಗದೇ ಸುಮ್ಸುಮ್ನೆ ಯಾರು ಅಂಗಡಿ ತೆರೆದು ಕೂತಿರ್ತಾರೆ…!


ಈ ಮಧ್ಯೆ ಆರ್ಯ ವೈದ್ಯ ಶಾಲಾ ಎನ್ನುವ ಪ್ರಸಿದ್ಧ ಆಯುರ್ವೇದ ಆಸ್ಪತ್ರೆ ಗೆ ಹೋಗಬೇಕಾಯಿತು. ಬೆಂಗಳೂರಿನಲ್ಲಿ ಈ ಸಂಸ್ತೆ ಚೆನ್ನಾಗಿ ವ್ಯಾಪಾರ ವಹಿವಾಟು ನಡೆಸುತ್ತಿದೆ.ಸಂಸ್ಥೆ ಹುಟ್ಟುಹಾಕಿದ ವಾರಿಯರ್ ಅವರು ಕಳೆದ ವರ್ಷ ಅವರ ನೂರನೇ ಹುಟ್ಟಿದ ವರ್ಷ ತೀ ರಿದರು.ಅವರಿಗೆ ಪದ್ಮಭೂಷಣ ಬಂದಿತ್ತು.ಈ ಸಂಗತಿ ವೈದ್ಯರನ್ನು ಕಾದು ಕೂತಿರುವಾಗ ಗೋಡೆ ಮೇಲೆ ಅವರ ಪೋಟೋ ಮತ್ತು ಅಡಿಬರಹ ನೋಡಿ ತಿಳಿದೆ, ಸರದಿ ಬಂದಾಗ ವೈದ್ಯರ ಬಳಿ ಹೋದೆವು. ವೈದ್ಯರು ಸಮಸ್ಯೆ ಕೇಳಿ ತಿಳಿದರು. ಔಷಧ ಬರೆದು ಕೊಟ್ಟರು.Consultation fee ಬೇಡ ಅಂದರು. ಅಂಗಡಿ ಪ್ರಾಡಕ್ಟ್ಸ್ ಪ್ರಮೋಟ್ ಮಾಡಲು ಈ ವ್ಯವಸ್ಥೆ ಇರಬೇಕು. ಒಟ್ಟಿನಲ್ಲಿ ವೈದ್ಯರ ಸೇವೆ ಉಚಿತ ಆಯಿತಲ್ಲಾ…

ಮುಂದುವರಿಯುವುದು.


2 thoughts on “ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ

  1. ಸರಸ ನಿರೂಪಣೆಯ ಡಾಕ್ಯುಮೆಂಟರಿ ನೋಡಿದಷ್ಟು ಖುಷಿಯಾಯಿತು.
    – ಎಚ್. ಆನಂದ ರಾಮ ಶಾಸ್ತ್ರೀ

  2. ಶ್ರೀ ಆನಂದರಾಮ ಶಾಸ್ತ್ರೀ ಅವರೇ
    ಹ ಹ. ತಮ್ಮ ಸರಸ ಪ್ರತಿಕ್ರಿಯೆಗೆ ಕ್ಲೀನ್ ಬೋಲ್ಡ್ ಆದೆ!

Leave a Reply

Back To Top