ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಕಾಣದ ಗಾಯಗಳು.

ಈಗೀಗ ಮುಲಾಮು
ಖಾಲಿಯಾಯಿತೆಂಬ ದೂರುಗಳಿಲ್ಲ
ಕಾರಣ ಗಾಯಗಳು ಕಾಣುವುದೇ ಇಲ್ಲ
ಪಾದಗಳಿಗೆ ಚುಚ್ಚುತ್ತಿದ್ದ ಮುಳ್ಳುಗಳೆಲ್ಲ
ನೇರ ಹೃದಯಕ್ಕೆ ಚುಚ್ಚುವಾಗ
ಮದ್ದಾಗುವವರೇ ಎದ್ದು
ಹೋಗುವುದೂ ಹೊಸತೇನಲ್ಲ!
ಕೀವು ಬಾವುಗಳಿಲ್ಲದ ನೋವಿಗೆ
ಮೌನವೇ ಆಪ್ತವಾಗುವಾಗ
ಶಬ್ದ ಖರ್ಚಾಗುವುದೇ ಇಲ್ಲ!
ಕಣ್ಣೀರನ್ನಷ್ಟೇ ಸುರಿಸುವ ಗಾಯವಿಲ್ಲದ ನೋವಿಗೆ
ರಕ್ತದ ಪರಿಚಯವೇ ಇಲ್ಲ
ಹೆಸರಿಲ್ಲದ ಒಳ ನೋವಿಗೆ
ಕಲೆ ಉಳಿಯುವ ಭಯವೂ ಇಲ್ಲ
ನೆಟ್ಟ ಗಿಡಗಳೆಲ್ಲವೂ
ಬೇರು ಬಿಡುವುದಿಲ್ಲ..
ಹೃದಯಾಳಕ್ಕಿಳಿದ ಬೇರುಗಳ
ಕಿತ್ತೆಸೆಯುವ ನೋವು ಸಲೀಸಲ್ಲ
ನೆನಪುಗಳ ಖಾತೆಗೆ ಸಿಹಿಕಹಿಗಳು
ಜಮೆಯಾಗುತ್ತಲೇ ಇರುವಾಗ
ನೆನಪುಗಳ ಅಡಿಪಾಯದ
ಮೇಲೊಂದಿಷ್ಟು..
ಕನಸುಗಳೂ..ಚಿಗುರುತ್ತಲೇ ಇರುತ್ತವೆ
ತುದಿ ಕತ್ತರಿಸಿದ ಗುಲಾಬಿ ಗಿಡದಂತೆ
ಅದರಲ್ಲೂ ಮುಳ್ಳುಗಳೇ.!
ಆದರೂ ಹೂವರಳುವ ಹೊತ್ತಿಗೆ
ಧ್ಯಾನಮೌನದ ಜೊತೆ
ಕಾಯಬೇಕಿಲ್ಲಿ ನೋಯುತ್ತಲೇ..
ಲೀಲಾಕುಮಾರಿ ತೊಡಿಕಾನ

Suuper