ಜಿ. ಹರೀಶ್ ಬೇದ್ರೆ ಅವರ ಕಥೆ-ಮಂಜುನಾಥನ ಮೇಲಾಣೆಜಿ.

ಬೆಳಿಗ್ಗೆ ಎಂಟು ಗಂಟೆಗೆ ತಿಂಡಿ ತಿಂದು ಮಧ್ಯಾಹ್ನದ ಊಟಕ್ಕೆ ಬಾಕ್ಸ್ ತೆಗೆದುಕೊಂಡು ಹೋಗುವ ಮಗನಿಗೆ, ಇದೇ ರೀತಿ ಒಂಭತ್ತುವರೆಗೆ ಮನೆ ಬಿಡುವ ಗಂಡನಿಗೆ ತಿಂಡಿ, ಊಟ ಸಿದ್ದಪಡಿಸುವ ಸಲುವಾಗಿ ಶಾಲಿನಿ ಹೊತ್ತು ಮೂಡುವ ಮುನ್ನವೇ ಎದ್ದು ಮನೆಯ ಅಂಗಳವನ್ನು ಗುಡಿಸಿ, ನೀರು ಹಾಕಿ, ರಂಗೋಲಿ ಬಿಡಿಸಿ ಒಳಗಿನ ಕೆಲಸಕ್ಕೆ ಕೈ ಹಾಕುವುದು ದಶಕಗಳಿಂದ ರೂಢಿಸಿಕೊಂಡು ಬಂದಿದ್ದಳು. ಇಂದು ಅದೇ ರೀತಿ ಎದ್ದು ಹೊರ ಬಂದವಳಿಗೆ ಗೇಟಿನ ಬಳಿಯ ವಸ್ತುಗಳನ್ನು ಕಂಡು ದಿಗಿಲಾಯಿತು. ಅಲ್ಲಿ ಸಣ್ಣ ಮಣ್ಣಿನ ಕುಡಿಕೆ, ಮುರಿದ ಬಳೆಯ ಚೂರು, ಮಂತ್ರಿಸಿದ ನಿಂಬೆಹಣ್ಣು ಮುಂತಾದ ವಸ್ತುಗಳು ಯಾರೋ ಜೋಡಿಸಿಟ್ಟಿದ್ದರು. ಇದನ್ನು ನೋಡಿದ ಅವಳ ಮನಸ್ಸು ಹಿಂದಿನ ತಿಂಗಳಿಗೆ ಜಾರಿತು. ಅದೊಂದು ದಿನ ಅಂಗಳ ಗುಡಿಸಲು ಬಂದಾಗ ಪೊರಕೆಗೆ ಯಾವುದೋ ವಸ್ತು ಉರುಳಿ ಹೋದ ಅನುಭವವಾಗಿತ್ತು. ಏನೆಂದು ನೋಡುವ ಎಂದರೆ ಅದೇ ಸಮಯಕ್ಕೆ ಜೋರಾಗಿ ಮಳೆ ಆರಂಭವಾಗಿ ಸುಮ್ಮನೆ ಒಳಬಂದಿದ್ದಳು. ಆದರೆ ಮಧ್ಯಾಹ್ನ ಏನುಕ್ಕೋ ಹೊರಬಂದಾಗ, ಗೇಟಿನಿಂದ ಸ್ವಲ್ಪ ದೂರದಲ್ಲಿ ಇದೇ ರೀತಿಯ ವಸ್ತುಗಳನ್ನು ನೋಡಿದ್ದಳು. ಆದರೆ ಅಂದು ಜೋರಾಗಿ ಸುರಿದ ಮಳೆಗೆ ಎಲ್ಲಿಂದಲೋ ಕೊಚ್ಚಿಕೊಂಡು ಬಂದಿರಬೇಕು ಎಂದು ಸುಮ್ಮನಾಗಿದ್ದಳು.  ಆದರೆ ಇಂದು ಎಲ್ಲವನ್ನೂ ನೋಡಿದ ಮೇಲೆ ಅಂದು ಕೂಡ ಯಾರೋ ತನ್ನ ಮನೆಯ ಮುಂದೆಯೇ ಇಟ್ಟಿದ್ದು ಎಂದು ಖಚಿತವಾಯಿತು.

ಕಸ ಹೊಡೆಯುವುದನ್ನು ಬಿಟ್ಟ ಶಾಲಿನಿ ದಡದಡನೆ ಒಳಹೋಗಿ ಇನ್ನು ಮಲಗಿದ್ದ ಗಂಡ ರಾಮನಾಥನನ್ನು ಎಬ್ಬಿಸಿ, ಮುಖ ತೊಳೆಯಲು ಬಿಡದೆ ಹೊರಗೆಳೆದು ಕೊಂಡು ಬಂದು ತೋರಿಸಿದಳು. ರಾಮನಾಥನಿಗು ಇದನ್ನು ನೋಡಿ ಕಸಿವಿಸಿಯಾದರೂ ತೋರಿಸಿಕೊಳ್ಳದೆ, ಅಯ್ಯೋ ಯಾರೋ ಮಾಡಲು ಕೆಲಸ ಇಲ್ಲದವರು ತಂದು ಇಟ್ಟಿದ್ದಾರೆ. ತೆಗೆದು ಹಾಕಿದರೆ ಆಯಿತು ಎಂದು ಕೈಯಿಂದ ತೆಗೆಯಲು ಹೋದ, ಆದರೆ ಶಾಲಿನಿ ಅದಕ್ಕೆ ಅವಕಾಶ ಕೊಡದೆ ತಡೆದು ಕಸಪೊರಕೆಯಿಂದ ಚರಂಡಿಗೆ ತಳ್ಳಿದಳು.

ಇಬ್ಬರಿಗೂ ಇದು ಯಾರ ಕೆಲಸ ಇರಬಹುದು? ಏಕೆ ಮಾಡಿದ್ದಾರೆ? ಎಂದು ಎಷ್ಟು ತಲೆ ಕೆಡಿಸಿಕೊಂಡರೂ ಏನು ಹೊಳೆಯಲಿಲ್ಲ. ಇನ್ನೇನು ಇಬ್ಬರು ಈ ಘಟನೆ ಮರೆತ್ತಿದ್ದಾರೆ ಎನ್ನುವಾಗಲೇ ಮತ್ತೊಂದು ದಿನ ಇದು ಪುನರಾವರ್ತನೆ ಆಯಿತು.  ಅವತ್ತು ಅಮಾವಾಸ್ಯೆ ದಿನ ತಂದು ಇಟ್ಟಿದ್ದು ಇವತ್ತು ಅಮಾವಾಸ್ಯೆ ದಿನವೇ ತಂದಿಟ್ಟಿದ್ದಾರೆ ಅಲ್ಲವೇ ಎಂದಳು ಶಾಲಿನಿ. ಹೌದು, ಏನೀಗ ಎನ್ನುವಂತೆ ನೋಡಿದ ರಾಮನಾಥ.
ಅಲ್ಲಾ ನಾವೇನು ಮಾಡಿದ್ದೀವಿ ಅಂತ ನಮಗೆ ಹೀಗೆ….!?
ಏನು?
ಈ ಮಾಟ, ಮಂತ್ರ ಎಲ್ಲಾ…
ಪಾಪ ಯಾರಿಗೋ ಮಾಡಲು ಕೆಲಸ ಇಲ್ಲದವರು ಮಾಡುತ್ತಿದ್ದಾರೆ ಮಾಡಿಕೊಳ್ಳಲಿ ಬಿಡು, ನಮಗೇನು ನಷ್ಟ ಇಲ್ಲವಲ್ಲ.
ಸಧ್ಯ ದೇವರ ದಯೆ ಏನೂ ಆಗಿಲ್ಲ, ಮುಂದೆ….
ಮುಂದೆನೂ ಏನೂ ಆಗೋಲ್ಲ.
ಹೇಗೆ ಹೇಳ್ತಿರಾ?
ನಾವು ಯಾರಿಗೆ ಏನು ಕೇಡು ಮಾಡಿದ್ದೀವಿ, ಬಯಸಿದ್ದೀವಿ ಹೇಳು ತೊಂದರೆ ಆಗೋಕೆ.
ನೀವು ಹೇಳ್ತಿರ ಆದ್ರೆ……
ಆದ್ರೆನೂ ಇಲ್ಲ ಹೋದ್ರೆನೂ ಇಲ್ಲ ಸುಮ್ನೆ ಬಾ ಒಳಗೆ ಎಂದು ರಾಮನಾಥ ಒಳಗೆ ಬಂದ.
ಶಾಲಿನಿ ಎಷ್ಟೇ ಸಮಜಾಯಿಷಿ ಕೊಟ್ಟುಕೊಂಡರು ಮನಸ್ಸಿನ ದುಗುಡ ಕಡಿಮೆ ಆಗಲಿಲ್ಲ.
ರಾಮನಾಥ ಶಾಲಿನಿಗೆ ಸಮಾಧಾನ ಹೇಳಿದರು, ಬರುವ ಅಮಾವಾಸ್ಯೆಯ ದಿನ ಹೀಗೆ ಮಾಡುತ್ತಿರುವವರು ಯಾರು ಎಂದು ಕಂಡುಹಿಡಿಯಬೇಕೆಂದು ಮನದಲ್ಲೇ ನಿಶ್ಚಯಿಸಿದ.

ಮತ್ತೆ ಅಮಾವಾಸ್ಯೆ ಬಂದೆ ಬಿಟ್ಟಿತು, ಬಂದಿದ್ದಲ್ಲದೇ ತಡರಾತ್ರಿಯೂ ಆಯಿತು. ಆದರೆ ಈಗಾಗಲೇ ಒಳಗೇ ಕುಗ್ಗಿ ಹೋಗಿರುವ ಶಾಲಿನಿಗೆ ತಿಳಿಯದಂತೆ ಮತ್ತು ಮನೆಯ ಮುಂದೆ ವಾಮಾಚಾರ ಮಾಡಿ ಹೋಗುವವರನ್ನು ಅವರಿಗೆ ಗೊತ್ತಾಗದಂತೆ ಕಂಡುಹಿಡಿಯುವುದು ಹೇಗೆ ಎನ್ನುವುದೇ ರಾಮನಾಥನಿಗೆ ಯಕ್ಷಪ್ರಶ್ನೆಯಾಗಿ ಕಾಡತೊಡಗಿತು. ಇದೇ ಯೋಚನೆಯಲ್ಲಿ ರಾಮನಾಥ ಇದ್ದಾಗ, ಅಪ್ಪ ಒಂದು ನಿಮಿಷ ಬರ್ತಿಯಾ ಎಂದು ತನ್ನ ರೂಮಿಗೆ ಮಗ ಕರೆದ. ಏಕಿರಬಹುದು ಎಂದು ರಾಮನಾಥ ಅಲ್ಲಿಗೆ ಹೋದಾಗ, ಅಪ್ಪ ನಿನ್ನ ಮನಸ್ಸಲ್ಲಿ ಏನು ಓಡುತ್ತಿದೆ ನನಗೆ ಗೊತ್ತು. ಚಿಂತಿಸಬೇಡ ಹಾಯಾಗಿ ಮಲಗು, ಯಾರು ಅಂತ ಬೆಳಿಗ್ಗೆ ನಾನು ಹೇಳ್ತೀನಿ.
ಹೇಗೆ?
ಎದುರು ಮನೆಯ ನನ್ನ ಫ್ರೆಂಡಿಗೆ ಅವರ ಮನೆಯ ಸಿ.ಸಿ. ಕ್ಯಾಮೆರಾ ನಮ್ಮ ಮನೆಯತ್ತ ತಿರುಗಿಸಲು ಹೇಳಿದ್ದೀನಿ. ನಾವು ಹೊರಗಿನ ಲೈಟ್ ಹಾಕಿಬಿಟ್ಟರೆ ಸಾಕು. ಆಗ ಯಾರೇ ಬಂದು, ಏನೇ ಮಾಡಿದರೂ ಅದರಲ್ಲಿ ರೆಕಾರ್ಡ್ ಆಗಿರುತ್ತದೆ, ನೋಡಬಹುದು.

ಮನದಲ್ಲಿ ಎಷ್ಟೇ ತಳಮಳವಿದ್ದರೂ  ಶಾಲಿನಿಗೆ ಹಾಗೂ ಮಗನಿಗೆ ತಿಳಿಸಬಾರದು ಎಂದು ಸಾಕಷ್ಟು ಜಾಗ್ರತೆ ವಹಿಸಿದ್ದ ರಾಮನಾಥ. ಇದರ ಬಗ್ಗೆ ಒಂದೇ ಒಂದು ದಿನವೂ ಮಗನ ಬಳಿ ಮಾತನಾಡದಿದ್ದರೂ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ತನ್ನದೇ ರೀತಿಯಲ್ಲಿ ಸಹಾಯಕ್ಕೆ ಬಂದವನನ್ನು ನೋಡಿ ರಾಮನಾಥನಿಗೆ ತುಂಬಾ ಖುಷಿಯಾಗಿ, ಮಗನನ್ನು ಬಾಚಿ ತಬ್ಬಿದ. ಅಲ್ಲಿ ಏನೂ ಮಾತನಾಡದೆ ನಿಶ್ಚಿಂತೆಯಿಂದ ಬಂದು ಮಲಗಿದ.

ಮಾರನೇ ದಿನ ಬೆಳಿಗ್ಗೆ ಎದ್ದು ನೋಡಿದಾಗ ವಾಮಾಚಾರ ಮತ್ತೆ ಮನೆಯ ಮೇಲೆ ನಡೆದಿತ್ತು.  ರಾಮನಾಥನಿಗೆ ಯಾರು ಮಾಡಿದ್ದು ನೋಡುವ ತವಕ. ಆದರೆ ಶಾಲಿನಿ ಮುಂದೆ ತೋರಿಸಿಕೊಳ್ಳಲು ಆಗದೆ ಅವಳು ಸ್ನಾನಕ್ಕೆ ಹೋಗುವುದನ್ನೇ ಕಾದಿದ್ದು, ಮಗನಿಗೆ ಕೇಳಿದ.
ನಾನು ಫ್ರೆಂಡಿಗೆ ಹೇಳಿದ್ದೀನಿ, ಅವನು ನನಗೆ ಪೋಟೆಜ್ ವಾಟ್ಸಪ್ ಮಾಡ್ತಾನೆ. ಅದನ್ನು ನಾನು ನಿನಗೆ ಕಳಿಸುತ್ತೇನೆ, ಅದನ್ನು ಆಫೀಸಿನಲ್ಲಿ ನೋಡು ಇಲ್ಲಿ ಬೇಡ ಎಂದ. ಮಗನ ಬುದ್ಧಿವಂತಿಕೆಗೆ ತಲೆದೂಗುತ್ತಾ ಆಫೀಸಿಗೆ ಹೋದ.

ಮಗನಿಂದ ವಾಟ್ಸಪ್ಪಿನಲ್ಲಿ ಬಂದ ವಿಡಿಯೋ ನೋಡಿ ದಂಗಾಗಿ ಹೋದ. ಏಕೆಂದರೆ ಒಡಹುಟ್ಟಿದ ಸ್ವಂತ ಅಕ್ಕನೇ ಗಂಡನೊಂದಿಗೆ ಬಂದು ವಾಮಾಚಾರ ಮಾಡಿ ಹೋಗಿದ್ದು ಸ್ಪಷ್ಟವಾಗಿ ದಾಖಲಾಗಿತ್ತು.  ಇದನ್ನು ನೋಡಿ ತಕ್ಷಣ ಅವರಿಗೆ ಕರೆ ಮಾಡಬೇಕು ಎಂದುಕೊಂಡ ಆದರೆ ಪೋನ್ ಮಾಡಿದರೆ ಸರಿ ಹೋಗುವುದಿಲ್ಲ, ನೇರವಾಗಿ ಅವಳ ಮನೆಗೇ ಹೋಗಿ ಮಾತನಾಡಬೇಕು ಎಂದು ತೀರ್ಮಾನಿಸಿ ಸುಮ್ಮನಾದ.

ಭಾನುವಾರ ಮಗನಿಗೆ ಹೇಳಿ ತನ್ನಕ್ಕನ ಮನೆಗೆ ಹೊರಟ. ಸುತ್ತು ಬಳಸಿ ಅದು ಇದು ಮಾತನಾಡಿ, ಏಕೆ ನನ್ನ ಮನೆಯ ಮುಂದೆ ವಾಮಾಚಾರ ಮಾಡಿದೆ ಎಂದು ರಾಮನಾಥ ಕೇಳಿದ. ಅಯ್ಯೋ ಎಲ್ಲಾ ಬಿಟ್ಟು ನಾನೇಕೆ ನಿನ್ನ ಮನೆ ಮೇಲೆ ವಾಮಾಚಾರ ಮಾಡಲಿ ಎಂದು ತಪ್ಪಿಸಿಕೊಳ್ಳಲು ನೋಡಿದಳು. ಹಾಗೆ ಹೇಳಿದವಳ ಮುಖಕ್ಕೆ ರಾಮನಾಥ ವಿಡಿಯೋ ಹಿಡಿದ. ಈಗ ಹೇಳು ಏಕೆ ಮಾಡಿದೆ ಎಂದ.

ನಾನು ಅಪ್ಪನ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ, ನೀನು ನನ್ನ ಮಗನ ಮೇಲೆ ಮಾಟ ಮಾಡಿಸಿರುವೆ. ಅದರಿಂದ ನನ್ನ ಮಗ ದಿನಕ್ಕೊಂದು ತೊಂದರೆ ಅನುಭವಿಸುವಂತಾಗಿದೆ. ಅದಕ್ಕೆ ಅದು ನಿನಗೇ ತಿರುಗಲಿ ಎಂದು ಮಾಡಿದೆ ಎಂದಳು. ಅದಕ್ಕೆ ರಾಮನಾಥ, ನಾನು ನಿನಗೆ ಖುಷಿಯಿಂದಲೇ ಕೊಟ್ಟಿದ್ದೇನೆ. ಮತ್ತೆ ಅದರ ಬಗ್ಗೆ ಇವತ್ತಿನವರೆಗೂ ಯೋಚಿಸಲಿಲ್ಲ. ಖಂಡಿತಾ ನಾನು ಯಾರ ಮೇಲೂ ಏನನ್ನು ಮಾಡಿಸಿಲ್ಲ.

ಹಾಗಾದರೆ ನನ್ನ ಮಗನಿಗೆ ಏಕೆ ಪದೇಪದೇ ಏನೇನೋ ತೊಂದರೆ ಆಗುತ್ತಿದೆ.
ಅದಕ್ಕೆ ನೀನು ಒಳ್ಳೆ ಡಾಕ್ಟರ್ ಹತ್ತಿರ ತೋರಿಸು, ಸರಿ ಹೋಗುತ್ತದೆ.
ತೋರಿಸಿದೆ, ಅವರು ಇವನನ್ನು ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಲು ಹೇಳಿದರು.
ಹೋಗಬೇಕಿತ್ತು….
ಇವನಿಗೇನು ಹುಚ್ಚು ಹಿಡಿದಿದೆಯಾ? ಅವರ ಬಳಿ ಕರೆದುಕೊಂಡು ಹೋಗಲು…..
ಅದಕ್ಕೆ…..
ಮಂತ್ರವಾದಿ ಬಳಿ ಹೋಗಿದ್ದೆ, ಅವರೇ ಹೇಳಿದ್ದು, ಯಾರೋ ಇವನ ಮೇಲೆ ಭಾನಾಮತಿ ಪ್ರಯೋಗ ಮಾಡಿಸಿದ್ದಾರೆ ಎಂದು. ಆಮೇಲೆ ಅದು ನೀನೇ ಮಾಡಿಸಿದ್ದು ಎಂದೂ, ಅದಕ್ಕೆ ಏಳು ಅಮಾವಾಸ್ಯೆಗಳು ಅವರು ಹೇಳಿದಂತೆ ಮಾಡಿದರೆ, ಯಾರು ಯಾವ ರೀತಿಯ ಭಾನಾಮತಿ ಮಾಡಿಸಿರುತ್ತಾರೋ ಅದು ಅವರಿಗೇ ತಿರುಗುತ್ತೆ ಎಂದರು, ಅದು ನಿನಗೇ ತಿರುಗಲಿ ಎಂದು ನಾನು ಹೀಗೆ ಮಾಡಿದೆ ತಪ್ಪೇನು?

ಅಪ್ಪ ಮಾಡಿದ ಆಸ್ತಿಯಲ್ಲಿ ನಿನ್ನ ಭಾಗ ನಿನಗೆ ಕೊಡಲು ನನಗೇಕೆ ಬೇಸರ? ಅಲ್ಲದೆ ನಿನ್ನ ಮಗ ನನಗೆ ಬೇರೇನಾ? ನಾನೇಕೆ ಅವನಿಗೆ ತೊಂದರೆ ಮಾಡಲಿ. ನೀನು ನಂಬು ಬಿಡು, ಮಂಜುನಾಥನ ಮೇಲಾಣೆ ಖಂಡಿತಾ ನಾನೇನು ಮಾಡಿಲ್ಲ. ನಿನಗೆ ನಿನ್ನ ಮಗ ಚೆನ್ನಾಗಿ ಇರೋದು ಬೇಕಾ? ಮೊದಲು ಆ ಡಾಕ್ಟರ್ ಹೇಳಿದಂತೆ ಮಾಡು.
ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋಗಬೇಕಾ?
ಅಲ್ಲಿಗೆ ಬರೀ ಹುಚ್ಚರು ಬರೊಲ್ಲ, ಬೇರೆ ಬೇರೆ ರೀತಿಯ ಮಾನಸಿಕ ಚಿಕಿತ್ಸೆಗೂ ಜನ ಹೋಗ್ತಾರೆ. ನೀನು ಕರೆದುಕೊಂಡು ಹೋಗು.
ಅಷ್ಟೇ ಅಂತಿಯಾ.,…!?
ನಿನ್ನ ಮಗ ಚೆನ್ನಾಗಿ ಇರಬೇಕು ಅಂದರೆ ಕರೆದುಕೊಂಡು ಹೋಗು ಇಲ್ಲ ಬಿಡು.

ಡಾಕ್ಟರ್ ಬಳಿ ಹೋದಾಗ, ಅವನು ಬಾಯಿ ಬಿಟ್ಟ ವಿಷಯ ಕೇಳಿ, ವಾಮಾಚಾರ ಮಾಡಿದ್ದನ್ನು ನೋಡಿ ಭಯಪಟ್ಟಿದ್ದಕ್ಕಿಂತ ಹೆಚ್ಚು ಭಯವಾಯಿತು. ಏಕೆಂದರೆ, ಅಕ್ಕನ ಮಗ ವಯೋಸಹಜ ಆಕರ್ಷಣೆಯಿಂದ ಹುಡುಗಿಯೊಬ್ಬಳನ್ನು ಇಷ್ಟಪಟ್ಟು, ಆಗಾಗ ಅವಳ ಮನೆಗೆ ಹೋಗುತ್ತಿದ್ದ. ಒಮ್ಮೆ ಇಬ್ಬರು ಮೈಮರೆತು ತಮ್ಮ ಲೋಕದಲ್ಲಿ ಇದ್ದದ್ದನ್ನು ಆ ಹುಡುಗಿಯ ಅಜ್ಜಿ ನೋಡಿ, ಇರು ಇಬ್ಬರ ತಂದೆ ತಾಯಿಯರಿಗೆ ತಿಳಿಸುತ್ತೇನೆ ಎಂದು ಫೋನ್ ಮಾಡಲು ಹೋದಾಗ, ಇವರು ತಡೆಯಲು ಹೋಗಿ ಬೀಳಿಸಿದ್ದರು. ಕೆಳಗೆ ಬೀಳುವಾಗ ಅಜ್ಜಿಯ ತಲೆಗೆ ಬಲವಾಗಿ ಪೆಟ್ಟು ಬಿದ್ದು ಅಸುನೀಗಿದ್ದರು. ಇದು ಯಾರಿಗೂ ತಿಳಿಯದಿದ್ದರೂ, ಮಾಡಿದ ಕೆಲಸದ ಪಾಪ ಪ್ರಜ್ಞೆ ಅವನನ್ನು ಕಾಡುತ್ತಿತ್ತು. ಅದರ ಫಲವೇ ಅವನು ಪದೇಪದೇ ಹುಷಾರು ತಪ್ಪುವಂತಾಗಿ ಬೇರೆ ರೀತಿಯ ಸಮಸ್ಯೆಗಳು ಆಗಿತ್ತು. ಇದನ್ನು ಅರಿಯದ ಅವನ ತಂದೆ ತಾಯಿ……..


Leave a Reply

Back To Top