ಪರಸ್ಪರ ಸ್ನೇಹ ,ಸಹಕಾರ, ಕೊಡು ತೆಗೆದುಕೊಳ್ಳುವಿಕೆ ಇನ್ನೂ ಮುಂತಾದ ಗುಣಗಳು ಮಾನವ ಹೊಂದಾಣಿಕೆಯ ಸ್ವಭಾವವನ್ನು ತೋರಿಸುವಂತೆ ಇತರೆ ಪ್ರಾಣಿಗಳಲ್ಲಿ ಸಹ ಅದು ಕಂಡು ಬರುತ್ತದೆಯಲ್ಲದೆ ಮಾದರಿ ಅರ್ಥಪೂರ್ಣ ಸಹಕಾರಕ್ಕೊಂದು ಉದಾಹರಣೆಯಾಗಿಯೂ ನಿಲ್ಲುತ್ತದೆ.

 ತೋಟ ಗದ್ದೆಗಳಲ್ಲಿ ಮೇಯುವ ದನಕರುಗಳ ಹಿಂದಿಂದೆ ಬಂದು ಆಗೋಮ್ಮೆ ಈಗೊಮ್ಮೆ ಮೈಮೇಲೆ ಅಲ್ಲಲ್ಲಿ ಕುಕ್ಕಿ ಉಣ್ಣೆಯಂತಹ ಪರಾವಲಂಬಿ ಜೀವಿಗಳನ್ನು ಹೆಕ್ಕಿ ತಿನ್ನುವ ಬೆಳ್ಳಕ್ಕಿಗಳನ್ನು  ನಾವು ನೋಡಿದ್ದೇವೆ.

 ಇದು ಹಿಂಸೆಯಂತಹ ಪರಾವಲಂಬಿಗಳಿಂದ ಆ ಎತ್ತು ಎಮ್ಮೆಗಳಿಗೆ ಮುಕ್ತಿಯು ಆಯಿತು. ಪರಾವಲಂಬಿಗಳನ್ನೇ ಆಹಾರವಾಗಿ  ಅವಲಂಬಿಸಿರುವ ಬೆಳ್ಳಕ್ಕಿಯಂತಹ ಜೀವಗಳಿಗೆ ಆಹಾರವು ದೊರೆಯಿತು. ಇಂಥ ಒಂದು ಸಹಕಾರದ ಮಾದರಿ ಪರಸ್ಪರಾವಲಂಬನೆಯ ವ್ಯವಸ್ಥೆ ಜಲಚರಿ ಮೀನುಗಳಲ್ಲಿ ಇನ್ನೂ ಸ್ವಾರಸ್ಯ ಪೂರ್ಣವಾಗಿ ತೋರಿ ಬರುತ್ತದೆ. ಜನರ ಮೈಯನ್ನು ಮಸಾಜ್ ಗೊಳಿಸುವ ಮೂಲಕ ತಮ್ಮ ಮೈ ಹೊಟ್ಟೆಯನ್ನು ಹೊರೆಯುವ ಕ್ಷೌರಿಕ ಕಾಯಕದ ಮೀನುಗಳ ಒಂದು ಜಾತಿ ಇದೆ.

ಬಣ್ಣಬಣ್ಣದಿಂದ ಕೂಡಿದ ಸ್ಪಂಜು ಪ್ರಾಣಿಯ ಬಳಿ ಅದು ತನ್ನ ಸಲೂನ್ ತೆರೆಯುತ್ತದೆ. ಈ ಮೂಲಕ ಕ್ಷೌರಕ್ಕೆ ಬರುವ ಎಲ್ಲ ಮೀನುಗಳಿಗೆ ಸೂಚಿತ ಸ್ಥಳವನ್ನು ಅದು ಸುಲಭವಾಗಿಸುತ್ತದೆ. ಇಂತು ಕ್ಷೌರದ ಅಂಗಡಿ ಉದ್ಘಾಟನೆಯಾದ ತರುವಾಯ ಸುತ್ತಮುತ್ತಲಿನ, ದೂರ ದೂರದ ಪ್ರದೇಶಗಳಿಂದ ಮೀನುಗಳೆಲ್ಲ ಬಂದು ಸೇರುತ್ತವೆ ಅವುಗಳ ಸಂಖ್ಯೆ ಒಮ್ಮೊಮ್ಮೆ ಮಿತಿಮೀರಿದಾಗ ಕಟಿಂಗ್ ಗಾಗಿ ಅವು ಕ್ಯೂನಲ್ಲಿ ನಿಂತುಕೊಳ್ಳಬೇಕಾದ ಸರದಿ ಸಂದರ್ಭಗಳು ಬರುವುದುಂಟು.

ಹೀಗೆ ಒಂದೊಂದು ಮೀನುಗಳನ್ನು ಮಸಾಜ್ ಮಾಡುವ ಕ್ಷೌರಿಕರಿಗೆ ಹೊಟ್ಟೆ ತುಂಬುವಷ್ಟು ತರಹೇವಾರಿ ಲಾಭವು ಆಗುತ್ತದೆ.

 ಮೀನುಗಳ ದೇಹಕ್ಕಂಟಿಕೊಂಡಿರುವ ಪರಾವಲಂಬಿ ಸೂಕ್ಷ್ಮ ಜೀವಿಗಳು ಹಪ್ಪಳಗಟ್ಟಿದ ಚರ್ಮದ ಮೇಲ್ಭಾಗ ಮುಂತಾದವೆಲ್ಲ ಆಹಾರವಾಗಿ ದೊರೆಯುತ್ತವೆ. ಕಡಲ ದೈತ್ಯ ಶಾರ್ಕಗಳು ಸಹ ಈ “ಉಪಯೋಗಿ ಕುಬ್ಜಗಳನ್ನ” ಹುಡುಕಿಕೊಂಡು ಬರುತ್ತವೆ.


Leave a Reply

Back To Top