ಕಾವ್ಯ ಸಂಗಾತಿ
ವಿದ್ಯಾಶ್ರೀ ಅಡೂರ್
ತವರೂರ ದಾರಿ

ತವರೂರ ದಾರಿಯಲಿ ದಿನವೂ ಅರಳುವ ಮಲ್ಲೆ
ನೆನಪುಗಳ ಘಮಘಮಿಸಿ ರಮಿಸುತಿಹುದು
ಮಣ್ಣರಸ್ತೆಯ ತಿರುವು ಹೊನ್ನ ನಿಧಿಯಂತೆಯೇ
ದೀನಗೊಲಿದೈಸಿರಿಯ ಹೋಲುತಿಹುದು
ಇಕ್ಕೆಲದ ತೋಪುಗಳು ಹಕ್ಕಿಯಿಂಚರದಲ್ಲಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ
ನಾನು ನಾನಾಗಿಯೇ ಮೆರೆದಿದ್ದ ಮೆರುಗು..

ತುಳಿದ ಹಾದಿಯು ಇಂದು ತಳೆದು ನಿಂದಿದೆಯಲ್ಲ
ಭೂರಮೆ ಅಚ್ಚರಿಯ ಒಡವೆ ರೂಪ
ನಡೆದು ದಣಿಯುವುದಿಲ್ಲ,ಬೆಡಗು ಅಳಿಯುವುದಿಲ್ಲ
ಕಣ್ಣ ಗೊಂಬೆಗಳಲ್ಲಿ ಸದಾ ಮಿನುಗೋ ದೀಪ
——————————————————————————
ವಿದ್ಯಾಶ್ರೀ ಅಡೂರ್
