ವಾಣಿ ಯಡಹಳ್ಳಿಮಠ ಅವರ ಗಜಲ್

 ನಾವು ಮೊದಲು ಭೇಟಿಯಾದ ದಿನ ಮರಳಿ ಪಡೆದುಕೊ  ಅಪರಿಚಿತರಾಗೋಣ
ನೀ  ಮೊದಲು ನೀಡಿದ ಸಮಯವನ್ನೆಲ್ಲಾ ಮರಳಿ ತೆಗೆದುಕೊ  ಅಪರಿಚಿತರಾಗೋಣ

ನನ್ನೆಲ್ಲಾ ಮಾತುಗಳಿಗೂ ನೀ ನಗುವಾಗುವ ಕ್ಷಣಗಳೂ ಇದ್ದವು, ದಿನಗಳೂ ಇದ್ದವು
ಆ ದಿನಗಳ ಸಂತಸವನೂ , ನೆನಪನೂ ಮರೆಯದೇ ಕಸಿದುಕೊ  ಅಪರಿಚಿತರಾಗೋಣ

ನಾನೆಂದರೇ ಸ್ನೇಹದ ಪ್ರತೀಕ ಎಂದೆನ್ನುತ್ತಿದ್ದ ಸಂಭ್ರಮದ ವಸಂತ ಕಾಲವೊಂದಿತ್ತು  ಗೆಳೆಯ  
‘ನೀನೆಂದರೆ  ಇಷ್ಟ ‘ಎನ್ನುತಿದ್ದ ಮಾತುಗಳ ಮಾಲೆ ಹಿಂತೆಗೆದುಕೊ  ಅಪರಿಚಿತರಾಗೋಣ

ಮಳೆ , ಹುಣ್ಣಿಮೆ ಎಂದ್ಹೇಳಿ ಹೊಗಳುತ್ತಿದ್ದ ಸುಂದರ ಸಮಯವೊಂದಿತ್ತು  
ಆಡಿದ ಅಷ್ಟೂ ಮಾತುಗಳನು  ಮನಸಲ್ಲಿಯೇ ಮಸೆದುಕೊ ಅಪರಿಚಿತರಾಗೋಣ

ವಾಣಿಯ ಪ್ರತಿ ಕವಿತೆಯಲ್ಲಿಯೂ ನೀ ಇಂದಿಗೂ ಭಾವವಾಗಿ ಇಣುಕುವೆ  
ನಾ ಬೇಡ ಎಂಬ ಭಾವನೆಯೊಮ್ಮೆ ಮನಸಾರೆ ಹೊಸೆದುಕೊ ಅಪರಿಚಿತರಾಗೋಣ

Leave a Reply

Back To Top