
ಧಾರಾವಾಹಿ-71
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಅಂಜುತ್ತಲೇ ಶಾಲೆಗೆ ಬಂದ ಮಕ್ಕಳು

ಲಗುಬಗೆಯಿಂದ ಅಡುಗೆ ಮಾಡಿ ಮುಗಿಸಿದಳು…. “ಚೆಕ್ ರೋಲ್ ಸಮಯಕ್ಕೆ ಕೂಲಿ ಕಾರ್ಮಿಕರೆಲ್ಲಾ ನಮ್ಮ ಮನೆಯ ಮುಂದೆ ಒಂದೆಡೆ ಬಂದು ಸೇರುತ್ತಾರೆ….ಟೀಚರ್ ಆ ಸಮಯಕ್ಕೆ ನೀವು ಅಲ್ಲಿಗೆ ಬಂದರೆ ನಿಮ್ಮನ್ನು ಅವರಿಗೆಲ್ಲಾ ಪರಿಚಯಿಸಿ, ಇಂದಿನಿಂದ ಅಕ್ಷರ ಕಲಿಯಲು ಅವರ ಮಕ್ಕಳನ್ನು ಬಂಗಲೆಯ ಪಕ್ಕದಲ್ಲಿ ಇರುವ ಕಾರ್ ಶೆಡ್ ಗೆ ಬರಲು ಹೇಳುತ್ತೇನೆ”….ಅಲ್ಲಿಯೇ ನೀವು ಮಕ್ಕಳಿಗೆ ಪಾಠ ಹೇಳಿ ಕೊಡಿ”….ಎಂದು ಹಿಂದಿನ ದಿನವೇ ರೈಟರ್ ಸುಮತಿಗೆ ತಿಳಿಸಿದ್ದರು. ಅದರಂತೆಯೇ ಗಂಟೆ ಬಾರಿಸುವ ಶಬ್ದಕ್ಕಾಗಿ ಕಾಯುತ್ತಾ ಕುಳಿತಳು. ಸಮಯ ಇನ್ನೇನು ಏಳು ಗಂಟೆಯಾಗುತ್ತದೆ ಎನ್ನುವಾಗ ಮಾಲಿಯ ಹೆಂಡತಿ…”ಟೀಚರಮ್ಮಾ….ಬನ್ನಿ ಚೆಕ್ ರೋಲ್ ಗೆ ಹೋಗುವ ಸಮಯವಾಯಿತು… ಅಯ್ಯಾ (ರೈಟರ್) ಅವರ ಮನೆಗೆ ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದಳು. ಅವಳ ಕರೆಗೆ ಓಗೊಟ್ಟು ಸುಮತಿ ಮನೆಯ ಹೊರಗೆ ಬಂದಳು. ಮೈ ತುಂಬಾ ಸೆರಗು ಹೊದ್ದು ಅವಳ ಹಿಂದೆ ನಡೆದಳು. ಗುಡ್ಡದ ಮೇಲಿದ್ದ ಮನೆಯಿಂದ ನಿಧಾನವಾಗಿ ಇಳಿಜಾರನ್ನು ಇಳಿಯುತ್ತಾ ಕಾಲುದಾರಿಯಲ್ಲಿ ಇಬ್ಬರೂ ನಡೆದು ರೈಟರ್ ಮನೆಯಿದ್ದ ಎದುರಿನ ರಸ್ತೆಗೆ ಬಂದರು. ಅಲ್ಲಿ ತೋಟದ ಕೂಲಿಯ ಹೆಣ್ಣಾಳು ಹಾಗೂ ಗಂಡಾಳುಗಳು ವಿನಯ ಪೂರ್ವಕವಾಗಿ ಕೈ ಕಟ್ಟಿ ಸಾಲಾಗಿ ನಿಂತಿದ್ದರು. ಅವರ ಎದುರು ಇಸ್ತರಿ ಹಾಕಿದ ಗರಿಮುರಿ ಪ್ಯಾಂಟು ಶರ್ಟು ತೊಟ್ಟು ತಲೆಯ ಮೇಲೆ ಒಂದು ಟೋಪಿಯನ್ನು ಹಾಕಿಕೊಂಡು ಕೈಯಲ್ಲಿ ಬೆತ್ತದ ಕೋಲೊಂದನ್ನು ಹಿಡಿದು ತೋಟದ ಕಾರ್ಯಕಾರಿ ರೈಟರ್ ಕೆಲಸಗಾರರ ಜೊತೆ ಮಾತನಾಡುತ್ತಿರುವುದು ಕಂಡಿತು.
ಸುಮತಿ ಮಾಲಿಯ ಹೆಂಡತಿಯ ಜೊತೆಗೂಡಿ ಬಂದಿದ್ದನ್ನು ಕಂಡು…”ಬನ್ನಿ ಸುಮತಿಯವರೇ”…ಎಂದು ವಂದಿಸಿದರು…. “ನಮಸ್ತೇ ಸರ್”… ಎಂದು ಸುಮತಿಯೂ ಅವರಿಗೆ ವಂದಿಸಿದಳು. ಎಲ್ಲರೂ ಸುಮತಿಯನ್ನು ನೋಡಿದರು. ಇದು ಯಾರು ಹೊಸ ಮೇಡಂ? ಎನ್ನುವ ಪ್ರಶ್ನೆ ಅಲ್ಲಿ ನಿಂತಿದ್ದ ಕಾರ್ಮಿಕರ ಮನದಲ್ಲಿ ಮೂಡಿತು.
ಅದನ್ನು ಅರಿತವರಂತೆ…. “ಎಲ್ಲರೂ ನಾನು ಹೇಳುವುದನ್ನು ಗಮನವಿಟ್ಟು ಕೇಳಿ….ನಮ್ಮ ತೋಟದ ಮಾಲೀಕರು ನಿಮ್ಮೆಲ್ಲರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ದೃಷ್ಟಿಯಿಂದ ಹೊಸದಾಗಿ ಒಂದು ಶಾಲೆಯನ್ನು ಈ ತೋಟದಲ್ಲಿ ತೆರೆಯುತ್ತಿದ್ದಾರೆ….ಇವರು ನಿಮ್ಮ ಮಕ್ಕಳಿಗೆ ಪಾಠವನ್ನು ಹೇಳಿಕೊಡುವ ಹೊಸ ಟೀಚರ್….ಇವರ ಹೆಸರು ಸುಮತಿ…. ದಿನವೂ ಶಾಲೆಗೆ ನಿಮ್ಮ ಮಕ್ಕಳನ್ನು ತಪ್ಪದೇ ಕಳುಹಿಸಬೇಕು….ಇವರು ನಿಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಒಳ್ಳೆಯ ನಡತೆಯನ್ನು ಕಲಿಸುತ್ತಾರೆ…. ಎಲ್ಲರೂ ಟೀಚರಮ್ಮನಿಗೆ ನಮಸ್ಕಾರಗಳನ್ನು ತಿಳಿಸಿ ಹಾಗೂ ನಿಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವುದಾಗಿ ವಚನವನ್ನು ಕೊಡಿ…. ಹೇಗಿದ್ದರೂ ನೀವೆಲ್ಲಾ ಬೆಳಗ್ಗೆ ತೋಟದ ಕೆಲಸಗಳಿಗೆ ಹೋದ ಮೇಲೆ ನಿಮ್ಮ ಮಕ್ಕಳು ತೋಟದಲ್ಲಿ ಅಲ್ಲಿ ಇಲ್ಲಿ ಅಲೆಯುತ್ತಿರುತ್ತಾರೆ…. ಆ ಸಮಯವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಲಿ… ಇದು ತೋಟದ ಮಾಲೀಕರ ಆಜ್ಞೆ ಇದನ್ನು ನೀವೆಲ್ಲರೂ ಅನುಸರಿಸಬೇಕು…. ಟೀಚರಮ್ಮನನ್ನು ಗೌರವದಿಂದ ಕಾಣಬೇಕು ಎಂದು ರೈಟರ್ ತಮ್ಮನ್ನೆಲ್ಲಾ ಉದ್ದೇಶಿಸಿ ಹೇಳಿದಾಗ ಸುಮತಿಯನ್ನು ಒಮ್ಮೆ ವಿಚಿತ್ರವಾಗಿ ನೋಡಿ….”ನಮಸ್ತೇ ಟೀಚರಮ್ಮಾ”… ಎಂದು ಎಲ್ಲರೂ ಒಕ್ಕೊರಲಿನಿಂದ ಟೀಚರ್ ಪ್ರಣಾಮ ಮಾಡಿದರು. ಸುಮತಿಯ ನಸು ನಗುತ್ತಾ ಅವರಿಗೆಲ್ಲಾ ವಂದಿಸಿದಳು. ಕೆಲಸಗಾರರು ಅವರವರಲ್ಲೇ ಮುಸಿ ಮುಸಿ ನಗುತ್ತಾ ಗುಸು ಗುಸು ಎಂದು ತುಳು ಭಾಷೆಯಲ್ಲಿ ಮಾತನಾಡತೊಡಗಿದರು. ಅವರು ಮಾತನಾಡುತ್ತಿದ್ದ ಭಾಷೆ ಸುಮತಿಗೆ ಹೊಸದಾಗಿತ್ತು.
ಕಾರ್ಮಿಕರ ಗುಸು ಗುಸು ಕೇಳಿ ಎಲ್ಲರೂ ಸುಮ್ಮನಿರುವಂತೆ ರೈಟರ್ ತಾಕೀತು ಮಾಡಿದಾಗ ಅವರ ಗುಸು ಗುಸು ನಿಂತಿತು. ಅಂದು ಗಂಡಾಳುಗಳು ಹಾಗೂ ಹೆಣ್ಣಾಳುಗಳು ಮಾಡಬೇಕಾದ ಕೆಲಸಗಳನ್ನು ತಿಳಿಸಿ ರೈಟರ್ ಅವರ ಮನೆಯ ಕಡೆಗೆ ನಡೆದರು.
ರೈಟರ್ ಅತ್ತ ಕಡೆ ಹೋದಂತೆ ಕೂಲಿ ಕೆಲಸಗಾರರು ಮತ್ತೆ ಆವರವರಲ್ಲೇ ಮಾತನಾಡಿಕೊಳ್ಳ ತೊಡಗಿದರು….”ತೋಟದ ಮಾಲೀಕರಿಗೆ ಹಾಗೂ ಈಯಮ್ಮನಿಗೆ ಬೇರೆ ಕೆಲಸವಿಲ್ಲವೇ?… ನಮ್ಮ ಮಕ್ಕಳು ಓದಿ ಯಾವ ಆಫೀಸರ್ ಗಳು ಆಗಬೇಕು?…ನಾವು ಕೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವಂತೆಯೇ ದೊಡ್ಡವರಾದ ಮೇಲೆ ನಮ್ಮ ಮಕ್ಕಳೂ ಮಾಡುತ್ತಾರೆ….ವಿದ್ಯಾಭ್ಯಾಸ ಕಲಿತು ಪಟ್ಟಣಕ್ಕೆ ಹೋಗಿ ನಮ್ಮ ಮಕ್ಕಳು ಏನು ಬೆಟ್ಟ ಕಡಿಯುತ್ತಾರಾ?….ನಮ್ಮ ಮಕ್ಕಳು ಶಾಲೆಗೆ ಹೋದರೆ ನಾವು ಹೋದ ನಂತರ ಮನೆಯಲ್ಲಿ ಯಾರು ಕೆಲಸ ಮಾಡುತ್ತಾರೆ? ಅವರ ತಂಗಿ ಅಥವಾ ತಮ್ಮಂದಿರನ್ನು ಯಾರು ನೋಡಿಕೊಳ್ಳುತ್ತಾರೆ?…ಇವೆಲ್ಲವೂ ನಡೆಯದ ಕೆಲಸ ಈಗ ತೆರೆಯುವ ಶಾಲೆಯನ್ನು ಬೇಗ ಮುಚ್ಚಬೇಕಾಗುತ್ತದೆ….ಅದೂ ಅಲ್ಲದೇ ಇಲ್ಲಿ ಎಲ್ಲಿದೆ ಶಾಲೆಯ ಕಟ್ಟಡ?…ನಮ್ಮ ಮಕ್ಕಳಿಗೆ ಪಾಠ ಮಾಡಲು ಆಗುವುದಿಲ್ಲ ಎಂದು ಹೇಳಿ ಈಯಮ್ಮನೂ ಬೇಗ ಇಲ್ಲಿಂದ ಬೇಗ ಓಡಿ ಹೋಗುತ್ತಾರೆ”…ಎಂದು ಹೇಳುತ್ತಾ ಸುಮತಿಯನ್ನು ನೋಡಿ ಗೇಲಿ ಮಾಡುತ್ತಾ ನಕ್ಕರು. ಅವರು ಹೇಳಿದ ಯಾವ ಮಾತೂ ಸುಮತಿಗೆ ಅರ್ಥವಾಗಲಿಲ್ಲ. ಸುಮತಿಯ ಜೊತೆಗೆ ಬಂದಿದ್ದ ಮಾಲಿಯ ಹೆಂಡತಿಗೂ ತುಳು ಬರುತ್ತಿರಲಿಲ್ಲ. ಆದರೂ ವಿದ್ಯಾಭ್ಯಾಸದ ವಿರುದ್ಧವೇ ಏನೋ ಮಾತನಾಡಿಕೊಂಡಿದ್ದಾರೆ ಎಂಬುದು ಮಾತ್ರ ಸುಮತಿಗೆ ತಿಳಿಯಿತು. ಅಷ್ಟು ಸುಲಭವಾಗಿ ಇಲ್ಲಿನ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು ಸಾಧ್ಯವಿಲ್ಲ ಎನ್ನುವುದು ಅವಳಿಗೆ ಮನದಟ್ಟಾಯಿತು. ಆದರೂ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು ನನ್ನ ಧರ್ಮ ಹಾಗೂ ತನಗೂ ಜೀವನ ನಿರ್ವಹಣೆಗೆ ಒಂದು ಉದ್ಯೋಗ ಬೇಕು. ಹಾಗಾಗಿ ಏನೇ ಅಡೆತಡೆಗಳು ಬಂದರೂ ಇಲ್ಲಿ ತಾನು ಕೆಲಸವನ್ನು ಮಾಡಲೇಬೇಕು ಎನ್ನುವ ದೃಢ ನಿರ್ಧಾರಕ್ಕೆ ಬಂದಳು.
ಬಂಗಲೆಯ ಹತ್ತಿರ ಇರುವ ಕಾರ್ ಶೆಡ್ ಅನ್ನೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆಯಾಗಿ ಉಪಯೋಗಿಸುವುದು ಎಂದು ತೀರ್ಮಾನ ಮಾಡಲಾಯಿತು. ಅದರಂತೆ ಸುಮತಿ ಬೆಳಗ್ಗೆ ಹತ್ತು ಗಂಟೆಗೆ
ಮೊದಲೇ ಕಾರ್ ಶೆಡ್ ನಲ್ಲಿ ಬಂದು ಶಾಲೆಗೆ ಬರುವ ಮಕ್ಕಳಿಗಾಗಿ ಕಾಯುತ್ತಾ ಕುಳಿತಳು. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆ ಒಂದು ಪುಟ್ಟ ಹುಡುಗಿ ತನ್ನ ಪುಟ್ಟ ತಮ್ಮನನ್ನು ಕರೆದುಕೊಂಡು ಬಂದಳು. ಕೆದರಿದ ಕೂದಲು, ಬಟ್ಟೆಯೂ ಅಸ್ತವ್ಯಸ್ತವಾಗಿ ಧರಿಸಿದ್ದರು ಇಬ್ಬರೂ. ತಮ್ಮನ ಮೂಗಿನಲ್ಲಿ ಸೋರುತ್ತಿದ್ದ ಸಿಂಬಳವನ್ನು ತನ್ನ ಲಂಗದಲ್ಲಿ ಒರೆಸುತ್ತಾ ಸುಮತಿಯನ್ನು ಕಂಡಾಗ…”ನಮಸ್ತೇ ಟೀಚರಮ್ಮಾ ” ಎಂದು ನಾಚುತ್ತಲೇ ಹೆದರಿಕೆಯಿಂದ ನಮಸ್ಕರಿಸಿ ತಮ್ಮನಿಗೂ ನಮಸ್ಕರಿಸಲು ಹೇಳಿದಳು.
ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿ ಮತ್ತು ಆತನ ಹೆಂಡತಿ ತಮ್ಮ ಒಬ್ಬಳೇ ಮುದ್ದಿನ ಮಗಳನ್ನು ಕರೆದುಕೊಂಡು ಬಂದು….”ಟೀಚರಮ್ಮಾ ನಿನ್ನೆ ಇವಳ ಪರಿಚಯ ನಿಮಗೆ ಆಗಿದೆ…. ಇವಳಿಗೂ ಅಕ್ಷರ ಜ್ಞಾನವನ್ನು ಕೊಟ್ಟು ಉದ್ಧಾರ ಮಾಡಬೇಕಾಗಿ ಬೇಡಿಕೊಳ್ಳುವೆ ಎಂದು ಕೈ ಜೋಡಿಸಿ ದಂಪತಿಗಳು ಸುಮತಿಯಲ್ಲಿ ಬೇಡಿಕೊಂಡರು. ಮಾಲಿಯು ಒಂದು ಕುರ್ಚಿಯನ್ನು ತಂದು ಟೀಚರಮ್ಮನನ್ನು ಕುಳಿತುಕೊಳ್ಳಲು ಕೇಳಿಕೊಂಡನು. ಇನ್ನೂ ಕೆಲವು ಮಕ್ಕಳು ಹೆದರುತ್ತಲೇ ಶಾಲೆಗೆ ಬಂದರು. ಸುಮತಿ ಅವರೆಲ್ಲರ ಪರಿಚಯವನ್ನು ಮಾಡಿಕೊಳ್ಳುತ್ತಿರುವಾಗಲೇ ತೋಟದ ಮಾಲೀಕರ ಜೀಪು ಬಂದು ಶೆಡ್ ಮುಂದೆ ನಿಂತುಕೊಂಡಿತು.
ಜೀಪಿನಿಂದ ಮಕ್ಕಳ ಅಚ್ಚುಮೆಚ್ಚಿನ ಅಜ್ಜ “ತೋಟದ ಮಾಲೀಕರು” ಇಳಿದರು. ಅವರು ಇಳಿದ ಕೂಡಲೇ …”ಅಜ್ಜ ಬಂದರು”… ಎಂದು ಹೇಳುತ್ತಾ ಮಕ್ಕಳೆಲ್ಲರೂ ಓಡೋಡಿ ಬಂದು ಅಜ್ಜನ ಸುತ್ತಾ ಸುತ್ತುವರೆದರು. ಆಗ ಅಜ್ಜ… “ಮಕ್ಕಳೇ ಹೀಗೆಲ್ಲಾ ಶಾಲೆಯ ಅವಧಿಯಲ್ಲಿ ಟೀಚರ್ ಅನುಮತಿ ಇಲ್ಲದೇ ಬರಬಾರದು”…ಎಂದು ಹೇಳುತ್ತಾ ಮಕ್ಕಳನ್ನು ಒಳಗೆ ಹೋಗುವಂತೆ ಸೂಚಿಸಿದರು. ಸುಮತಿ ವಿನಮ್ರತೆಯಿಂದ ಮಾಲೀಕರಿಗೆ ವಂದಿಸಿದಳು.
̲——————————————————-
