
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಒಳ್ಳೆಯ ಪುರುಷ

ಓರ್ವ ಪುರುಷ ಒಳ್ಳೆಯ ಪತಿಯಾಗದ ಹೊರತು ಒಳ್ಳೆಯ ತಂದೆಯಾಗಲಾರ, ಕಾರಣ ಮಕ್ಕಳು ತಮ್ಮ ತಂದೆ ತನ್ನ ಪತ್ನಿಯೊಂದಿಗೆ ಅಂದರೆ ತಮ್ಮ ತಾಯಿಯೊಂದಿಗೆ ನಡೆದುಕೊಳ್ಳುವ ರೀತಿಯನ್ನು ಗ್ರಹಿಸುವ ಮೂಲಕ ಕಲಿಯುತ್ತಾರೆ. ನಿಮ್ಮ ಪತ್ನಿಯೊಂದಿಗಿನ ನಿಮ್ಮ ನಡವಳಿಕೆಯೇ ನಿಮ್ಮ ಮಕ್ಕಳ ಬದುಕಿನ ಮೂಲ ಬುನಾದಿಯಾಗಿರುತ್ತವೆ. ನಿಮ್ಮ ನಡವಳಿಕೆಯ ಮೂಲಕ ಮಕ್ಕಳು ಸಾಮಾಜಿಕ ಸಂಬಂಧಗಳು ಗೌರವ ಮತ್ತು ಪ್ರೀತಿಯ ಭಾವವನ್ನು
ಕಲಿಯುತ್ತವೆ.
ಪುರುಷನಾಗಿ ತಮ್ಮ ಪತ್ನಿಯನ್ನು ಗೌರವಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ನಿಮ್ಮ ಕುಟುಂಬಕ್ಕಾಗಿ ನೀವು ಹಣವನ್ನು ದುಡಿಯಬಹುದು ಆದರೆ ಕೌಟುಂಬಿಕ ಪೋಷಣೆ ಮಾಡುವವಳು ಹೆಣ್ಣು ಮಗಳು ಮಾತ್ರ. ತನ್ನೆಲ್ಲ ಶಕ್ತಿ, ಪ್ರೀತಿ, ವಾತ್ಸಲ್ಯ, ಅಕ್ಕರೆಯ ಭಾವನೆಗಳನ್ನು ಹರಿಸಿ ಆಕೆ ಕುಟುಂಬದ ಸದಸ್ಯರಿಗೆ ಬದುಕಲು ಒಂದು ಸುರಕ್ಷಿತವಾದ ಮತ್ತು ಪ್ರೀತಿಯ ವಾಸಸ್ಥಾನವನ್ನು ನೀಡುತ್ತಾಳೆ. ಆಕೆಯನ್ನು ಗೌರವಿಸುವ ಮೂಲಕ ನೀವು ನಿಮ್ಮ ಕುಟುಂಬದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತೀರಿ.
ನಿಮ್ಮ ಪತ್ನಿ ಕೇವಲ ನಿಮ್ಮ ಸಂಗಾತಿಯಲ್ಲ… ಆಕೆ ನಿಮ್ಮೊಂದಿಗೆ ಮಕ್ಕಳ ಭವಿಷ್ಯವನ್ನು ರೂಪಿಸುವ ರೂವಾರಿಯಾಗಿರುವುದರಿಂದ ಆಕೆಯ ಮಾನಸಿಕ ಆರೋಗ್ಯ, ಶಾಂತಿ, ಸಂತೋಷಗಳು ಕುಟುಂಬದ ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ಬಹಳ ಪರಿಣಾಮವನ್ನು ಬೀರುತ್ತವೆ. ಆಕೆಯ ಭಾವನೆಗಳಿಗೆ ಬೆಲೆ ಕೊಡದೆ, ಆಕೆಯ ಶ್ರಮಕ್ಕೆ ಮೆಚ್ಚುಗೆ ಸೂಸದೆ ಆಕೆಯನ್ನು ಕಡೆಗಣಿಸಿದಾಗ ಕುಟುಂಬದ ಭದ್ರ ಬುನಾದಿಯಲ್ಲಿ ಬಿರುಕನ್ನುಂಟು ಮಾಡಿದಂತಾಗುತ್ತದೆ.
ನಿಮ್ಮ ಪತ್ನಿಯ ಭಾವನೆಗಳಿಗೆ ಬೆಲೆ ಕೊಡಿ.. ಆಕೆಯ ಹೃದಯದಾಳದ ಮಾತುಗಳಿಗೆ ಕಿವಿ ಕೊಡಿ. ಆಕೆ ತನ್ನ ಭಾವನೆಗಳನ್ನು ಹೇಳಿಕೊಳ್ಳುವಾಗ ಅದೆಷ್ಟೇ ಅಸಮಾಧಾನ ಎನಿಸಿದರೂ ಕುಟುಂಬದ ಒಳಿತಿಗಾಗಿ ಆಕೆ ಹೇಳುವ ಎಲ್ಲ ಮಾತುಗಳನ್ನು ಯಾವುದೇ ರೀತಿಯ ಪುರುಷ ಅಹಮಿಕೆಗಳಿಗೆ ಒಳಗಾಗದೆ ಕೇಳಿ. ಆಕೆಯ ಮಾತುಗಳು ನಿಮಗೆ ಹೊರೆಯಲ್ಲ ಬದಲಾಗಿ ಆಕೆಯ ಹೃದಯದ ದನಿಯಾಗಿರುತ್ತದೆ. ಸಹಾನುಭೂತಿಯಿಂದ ನೀವು ಆಕೆಯ ಮಾತುಗಳನ್ನು ಆಲಿಸಿದಾಗ ನಿಮ್ಮಿಬ್ಬರ ನಡುವೆ ಒಂದು ಸುಂದರವಾದ ಬಂಧ ಏರ್ಪಡುತ್ತದೆ. ಅದು ನಿಮ್ಮ ಮಕ್ಕಳ ಬೆಳವಣಿಗೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಮಕ್ಕಳು ಪ್ರೀತಿ ಗೌರವ ಮತ್ತು ಸಮಾನತೆಯನ್ನು ಕಲಿಯುವುದು ತನ್ನ ತಂದೆ ತನ್ನ ತಾಯಿಯೊಂದಿಗೆ ನಡೆದುಕೊಳ್ಳುವುದನ್ನು ನೋಡುವ ಮೂಲಕ. ಓರ್ವ ವ್ಯಕ್ತಿ ತನ್ನ ಪತ್ನಿಗೆ ಪ್ರೋತ್ಸಾಹ ನೀಡುವ, ಗೌರವಿಸುವ ಮತ್ತು ಕುಟುಂಬಕ್ಕೆ ಆಕೆ ನೀಡುವ ಸಹಯೋಗವನ್ನು ಗುರುತಿಸುವುದನ್ನು ನೋಡಿದಾಗ ಮಕ್ಕಳು ತನ್ನ ತಂದೆಯ ನಡವಳಿಕೆಗಳನ್ನು ತಮ್ಮದಾಗಿಸಿಕೊಳ್ಳುವರು. ಬದಲಾಗಿ ತಂದೆ ತನ್ನ ಪತ್ನಿಯನ್ನು ಕೀಳಾಗಿ ಕಾಣುವ, ತಿರಸ್ಕಾರ ಮನೋಭಾವದಿಂದ ನೋಡುವ ಅಗೌರವದಿಂದ ನಡೆಸಿಕೊಳ್ಳುವುದನ್ನು ನೋಡಿ ಗ್ರಹಿಸುವ ಮಕ್ಕಳು ತಮ್ಮ ಬದುಕಿನಲ್ಲಿಯೂ ಮುಂದೆ ಇದೇ ರೀತಿಯ ಸಂಬಂಧಗಳನ್ನು ಹೊಂದುತ್ತಾರೆ. ತನ್ನ ತಂದೆ ತಾಯಿಯೊಂದಿಗೆ ಪ್ರೀತಿಯಿಂದ ವಿಶ್ವಾಸದಿಂದ ನಡೆದುಕೊಳ್ಳುವುದನ್ನು ನೋಡುವ ಮಕ್ಕಳು ತಾವು ಕೂಡ ಮುಂದೆ ತಮ್ಮ ಬದುಕಿನಲ್ಲಿ ಬರುವ ಹೆಣ್ಣು ಮಕ್ಕಳಿಗೆ ಗೌರವಾದರವನ್ನು ನೀಡುತ್ತಾರೆ.
ತಂದೆ ತನ್ನ ಮಕ್ಕಳಿಗೆ ಶಿಕ್ಷಕನಾಗಿ ಪ್ರೀತಿಯ ಪಾಠವನ್ನು ಮಕ್ಕಳಿಗೆ ಹೇಳಿಕೊಡಬೇಕು. ತಾಯಿಯ ಪ್ರೀತಿ, ಅಭಯ ಆಕೆಯ ಕನಸುಗಳನ್ನು ಅರಿಯುವುದರ ಜೊತೆ ಜೊತೆಗೆ ಆಕೆಯ ಧೈರ್ಯ ಮತ್ತು ಸಾಮರ್ಥ್ಯಗಳನ್ನು ಮುಕ್ತವಾಗಿ ಶ್ಲಾಘಿಸಬೇಕು, ಆಕೆಯ ಕಷ್ಟದ ಸಮಯದಲ್ಲಿ ಆಕೆಯ ಜೊತೆಗಿದ್ದು ಸಾಂತ್ವನ ಹೇಳಬೇಕು…. ತಂದೆಯ ಈ ನಡವಳಿಕೆ ಮಕ್ಕಳ ಮೇಲೆ ಬೀರುವ ಪರಿಣಾಮ ಅತ್ಯದ್ಭುತ. ಸಾಂಗತ್ಯದ ನಿಜವಾದ ಅರ್ಥವನ್ನು ಮಕ್ಕಳು ಪಾಲಕರ ನಡುವಿನ ಒಡನಾಟದಿಂದ ಅರಿತಾಗ ಅವರು ಕೂಡ ತಮ್ಮ ಬದುಕಿನಲ್ಲಿ ಇದನ್ನು ಪಾಲಿಸುತ್ತಾರೆ. ಪತ್ನಿಯ ಮೇಲೆ ನಿಮ್ಮ ಸಿಟ್ಟು ಸೆಡವುಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ನಿಮಗೆ ನಿಮ್ಮ ಪ್ರೀತಿಯನ್ನು ಪ್ರದರ್ಶಿಸಲು ಹಿಂಜರಿಕೆ ಏಕೆ?
.
ನಿಮ್ಮ ಜೀವನದ ಮುನ್ನುಡಿಯಲ್ಲಿ ನಿಮ್ಮ ಪತ್ನಿ ಬರಲಿಕ್ಕಿಲ್ಲ ಎಂಬುದು ಒಪ್ಪತಕ್ಕ ಮಾತು. ಆದರೆ ನಿಮ್ಮ ಯೌವನದ ಕಾಲದಿಂದ ನಿಮ್ಮ/ಆಕೆಯ ಜೀವಿತದ ಅಂತ್ಯ ಕಾಲದವರೆಗೂ ನಿಮ್ಮ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರ ನಿಮ್ಮ ಪತ್ನಿಯದು ಎಂಬುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಕುಟುಂಬದ ಕಥೆಯಲ್ಲಿ ಆಕೆಯ ಪಾತ್ರ ಕಿರಿದಾದರೂ ನಿಮ್ಮ ವೈಯುಕ್ತಿಕ ಬದುಕಿನಲ್ಲಿ ಆಕೆಯೇ ನಾಯಕಿ. ನಿಮ್ಮ ಮಕ್ಕಳ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಆಕೆಯೇ ಶಿಲ್ಪಿ ಆದರೂ ಆಕೆಗೆ ನಿಮ್ಮ ಸಹಾಯ, ಸಹಕಾರದ ಅವಶ್ಯಕತೆ ಇದ್ದೇ ಇರುತ್ತದೆ. ನಿಮ್ಮ ಪ್ರೋತ್ಸಾಹ ಮತ್ತು ಶ್ರೀರಕ್ಷೆಗಳು ಆಕೆಯ ಆತ್ಮಸ್ಥೈರ್ಯವನ್ನು ವೃದ್ಧಿಸಿ ಆಕೆಯ ಅಂತಸ್ಸತ್ವವನ್ನು ಹೆಚ್ಚಿಸಿ ಆಕೆಯದ್ದೇ ಮತ್ತಷ್ಟು ಉತ್ತಮ ವರ್ಷನ್ ಆಕೆ ಆಗುವುದರಲ್ಲಿ ಸಂದೇಹವೇ ಇಲ್ಲ…. ಇದು ನಿಮ್ಮ ಕುಟುಂಬದ, ಮಕ್ಕಳ ಸಾಮಾಜಿಕ ಪ್ರಗತಿಗೆ ಅತ್ಯುತ್ತಮ ದಾರಿಯನ್ನು ತೆರೆಯುತ್ತದೆ.
ಹೊಂದಾಣಿಕೆ ಎನ್ನುವುದು ಕೆಲಸದ, ಜವಾಬ್ದಾರಿಗಳ ವಿಭಜನೆ ಅಲ್ಲ… ಹೊಂದಾಣಿಕೆ ಎಂಬುದು ಪರಸ್ಪರ ಕೂತು ಕುಟುಂಬದ ಏಳಿಗೆಗೆ ಯಾವುದು ಅವಶ್ಯಕ ಎಂಬುದರ ಕುರಿತು ಯೋಜಿಸಿ ಅವುಗಳನ್ನು ಬದುಕಿನಲ್ಲಿ ಜಾರಿಗೊಳಿಸುವುದು. ಆಕೆಯ ದೈಹಿಕ ಶ್ರಮ, ಮಕ್ಕಳನ್ನು ಪೋಷಿಸುವ ವಿಧಾನ ಮತ್ತು ಆಕೆಯ ಬದ್ಧತೆಗಳನ್ನು ನೀವು ಅರಿಯುವ ಮತ್ತು ಮುಕ್ತವಾಗಿ ಅದನ್ನು ಒಪ್ಪಿ ಗೌರವಿಸಿ, ಪ್ರಶಂಶಿಸಿದಾಗ ಆಕೆ ಇಮ್ಮಡಿ ಉತ್ಸಾಹದಿಂದ ತನ್ನ ಕೆಲಸದಲ್ಲಿ ತೊಡಗಿ ಕೊಳ್ಳುತ್ತಾಳೆ. ಆಫ್ಟರ್ ಆಲ್… ಆಲ್ ಶಿ ವಾಂಟ್ಸ್ ಈಸ್ ರಿಕಗ್ಮಿಷನ್ ಫ್ರಮ್ ಹರ್ ಹಸ್ಬೆಂಡ್ ಅಂಡ್ ಚಿಲ್ಡ್ರನ್ ಓನ್ಲಿ..
ನಿಮ್ಮ ಮಕ್ಕಳ ಮೇಲೆ ನಿಮಗಿರುವಷ್ಟೇ ಪ್ರೀತಿ ಅಕ್ಕರೆ ಕಾಳಜಿಗಳು ನಿಮ್ಮ ಪತ್ನಿಯ ಮೇಲೂ ಇರಬೇಕು. ಹೆಂಡತಿ ಮತ್ತು ಮಕ್ಕಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿಮ್ಮ ಪತ್ನಿಯ ಕುರಿತು ನೀವು ಹೊಂದಿರುವ ಪ್ರೀತಿ, ಕಾಳಜಿ, ಭದ್ರತಾ ಭಾವನೆಗಳ ಪ್ರತಿಫಲನ ನಿಮ್ಮ ಮಕ್ಕಳಲ್ಲಿ ನೀವು ಕಾಣುತ್ತೀರಿ.
ಹೆಣ್ಣು ಮಕ್ಕಳನ್ನು ಅರಿಯಲು ಬಹಳ ಜಾಣ್ಮೆ ಬೇಕಿಲ್ಲ…. ಅಷ್ಟಕ್ಕೂ ಅರಿಯದೆ ಇರಲು ಆಕೆ ಗಣಿತದ ಲೆಕ್ಕವೇನಲ್ಲ. ಆಕೆಗೆ ಬೇಕಾಗಿರುವುದು ತುಸು ಪ್ರೀತಿ, ತನ್ನ ಮೌನದ ಭಾಷೆಯನ್ನು ಕೂಡ ಅರಿಯುವ ತಾಳ್ಮೆಯನ್ನು ಹೊಂದಿರುವ ಪತಿ, ನೋವಿನಲ್ಲಿ ಸಾಂತ್ವನ ನೀಡುವ, ಏನೇ ಬರಲಿ ನಾನು ನಿನ್ನ ಜೊತೆಗಿರುವೆ ಎಂಬ ಭದ್ರತಾ ಭಾವವನ್ನೇ ಹೊರತು ಆಕೆಯುದ್ದ ನೀವು ಸುರಿಯುವ ಚಿನ್ನದ ಒಡವೆ ವಸ್ತ್ರಗಳಲ್ಲ.
ಆದ್ದರಿಂದ ಪುರುಷರೇ, ನಿಮ್ಮ ಮಕ್ಕಳಿಗೆ ನೀವು ಏನನ್ನಾದರೂ ಕೊಡ ಮಾಡುವುದಾದರೆ ಅದು ನಿಮ್ಮ ಪತ್ನಿಯೊಂದಿಗೆ ನಿಮ್ಮ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ಹೊಂದಿರುವ ಸುಂದರ ಬಂಧದ ಉಡುಗೊರೆಯನ್ನು, ಪತ್ನಿಯೊಂದಿಗಿನ ನಿಮ್ಮ ಒಳ್ಳೆಯ ನಡವಳಿಕೆಯ ಈ ಉಡುಗೊರೆಯನ್ನು ನಿಮ್ಮ ಮಕ್ಕಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಮಾದರಿಯಾಗಿ ಬಾಳುತ್ತಾರೆ.
ಪ್ರೀತಿ, ಗೌರವ,ನಂಬಿಕೆ ಮತ್ತು ವಿಶ್ವಾಸಗಳ ದಾರಿಯನ್ನು ಆಯ್ದುಕೊಳ್ಳುವ ಮೂಲಕ ನೀವು ಕೇವಲ ಒಳ್ಳೆಯ ತಂದೆ ಮಾತ್ರ ಆಗುವುದಿಲ್ಲ, ಒಳ್ಳೆಯ ಮಾನವೀಯ ಗುಣವುಳ್ಳ ವ್ಯಕ್ತಿಯಾಗುವಿರಿ.
ಈ ನಿಟ್ಟಿನಲ್ಲಿ ಪ್ರಯತ್ನಪಟ್ಟರೆ ಯಶಸ್ಸು ಖಂಡಿತ… ಏನಂತೀರಾ ಸ್ನೇಹಿತರೇ?
ವೀಣಾ ಹೇಮಂತ್ ಗೌಡ ಪಾಟೀಲ್
