
ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ನಿರ್ಮಲಾ ಶೆಟ್ಟರ್

ಶ್ರಮದೊಳಗೆ ಸಂತಸದ ಹೊನಲಿದೆ ಎಂದು ಸಾರುವ ನಿರ್ಮಲಾ ಶೆಟ್ಟರ್ ಅವರ ಗಜಲ್
ಅದೆಷ್ಟು ಬರೆದರು ಅಳಿಸಿಹೋಗುವ ಹೆಸರಿದು ಗಳಿಕೆಯಲಿ ಮರೆಯಬೇಡ
ಇತಿಹಾಸವಾದವರು ವಿÀಳಾಸ ಕಳೆದುಕೊಂಡರು ಜಗದಲಿ ಮರೆಯಬೇಡ
ಗಡಿಯ ಒಳಹೊರಗ ತಂತ್ರ ಮರುಕಳಿಸಿದೆ ರಣಗೀತೆ ಕೇಳಿರಬೇಕು ನೀನು
ಲಡಾಯಿಗೆಂದೆ ನಿಂತವರು ಬುನಾದಿಯಾದ ಕತೆ ಕದನದಲಿ ಮರೆಯಬೇಡ
ಜೀವನವಿಡೀ ದಾನಧರ್ಮಕೆಂದು ಮುಡಿಪಾದವರಿಗೂ ಕಷ್ಟ ಸೂತಕವಿದೆ
ಚಂದ್ರಮನ ಬೆಳದಿಂಗಳಿಗೂ ಗ್ರಹಣದ ನಂಟಿದೆ ನೋವಿನಲಿ ಮರೆಯಬೇಡ
ನನ್ನೆದೆಯಲಿ ಬರೆದಿಟ್ಟ ದೂರುಗಳ ಕುರಿತು ನೀನೇ ಕಾರಣ ಕೊಡಬೇಕಿದೆ
ಮನದ ಗಾಯಕೆ ಸಮಯವೇ ಮುಲಾಮು ಅವಸರದಲಿ ಮರೆಯಬೇಡ
ಶ್ರಮಿಕರು ಮಾತ್ರ ನೆಮ್ಮದಿ ಸಂತಸದ ಗುತ್ತಿಗೆದಾರರು ‘ನಿಶೆ’ ನೆನಪಿಟ್ಟುಕೊ
ಅರಮನೆಗೆ ನಿದ್ರೆಯಂಬುದು ಬರಗಾಲದ ನೆರೆ ಅಮಲಿನಲಿ ಮರೆಯಬೇಡ
****
ನಿರ್ಮಲಾ ಶೆಟ್ಟರ್

ವಿಶ್ಲೇಷಣೆ

[ನಿರ್ಮಲಾ ಶೆಟ್ಟರ್ ಸಮಕಾಲೀನ ಸಂದರ್ಭದ ಬಹುಮುಖ್ಯ ಗಜಲ್ಕಾರ್ತಿಯರಲ್ಲಿ ಒಬ್ಬರು. ಅವರು ಕವಿಯತ್ರಿಯಾಗಿಯೂ ಹೆಸರು ಮಾಡಿದವರು.ಹಾಗೆ ನೋಡಿದರೆ ಕವಿತೆಗೆ ಮೊದಲು ಒಲಿದ ನಿರ್ಮಲಾ ಅವರು ನಂತರದಲ್ಲಿ ಗಜಲ್‌ಕಾವ್ಯಕ್ಕೆ ಒಲಿದವರು.ಅವರ ಕವನ ಸಂಕಲನ ಕೂಡ ಪ್ರಸಿದ್ಧವಾಗಿದೆ.ಸದ್ಯಕ್ಕೆ ಹುಬ್ಬಳ್ಳಿ ಯಲ್ಲಿ ನೆಲೆಸಿರುವ ನಿರ್ಮಲಾ ಅವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರ “ನಿನ್ನ ಧ್ಯಾನಿಸಿದ ಮೇಲೂ” ಎಂಬ ಗಜಲ್ ಸಂಕಲನ ಪ್ರಕಟವಾಗಿದೆ.
ಮನುಷ್ಯನ ಬದುಕು ಕೂಡ ಸಮಯಾಧೀನ . ಅವನ ಅವಧಿ ಮುಗಿದ ಮೇಲೆ ಇಲ್ಲಿ ಇರಲು ಸಾಧ್ಯವಿಲ್ಲ. ಮತ್ತೆ ಇರಬೇಕೆಂದರೆ ಹೆಚ್ಚು ಹೊತ್ತು ಇರಲೂ ಸಾಧ್ಯವಿಲ್ಲ . ಆದರೂ ಈ ಸತ್ಯವನ್ನು ಅರಿಯದ ಮನುಷ್ಯ ಮಾತ್ರ ತಾನಿಲ್ಲಿ ಶಾಸ್ವತನು ಎಂಬ ರೀತಿಯಲ್ಲಿ ವರ್ತಿಸುವ ಸಂದರ್ಭಗಳೂ ಅನೇಕ. ದುಷ್ಟರೂ ಶಿಷ್ಟರೂ ಎಲ್ಲರೂ ಸಮಯಾಧೀನರು. ಯಾರೂ ಇಲ್ಲಿ ಶಾಸ್ವತರಾಗಿ ಉಳಿಯುವವರಲ್ಲ ಎನ್ನುವದನ್ನು ಗಜಲ್ ಸಾರುತ್ತದೆ. ಆದರೆ ಬದುಕಿನ ನಿಜವಾದ ಶಾಂತಿ ಸಮಾಧಾನಗಳು ಪ್ರಾಮಾಣಿಕ ದುಡಿಮೆಯಲ್ಲಿವೆ . ಆದ್ದರಿಂದಲೇ ನಮ್ಮ ಬದುಕನ್ನು ನಾವು ಸಾಧ್ಯವಾದಷ್ಟು ಶ್ರಮ., ಮತ್ತು ಪ್ರಾಮಾಣಿಕತೆಯ ನೆಲೆಯಲ್ಲಿ ಸಾಗಿಸಬೇಕು ಎಂದು ಸಾರುವದು ಗಜಲ ನ ಸಾರವಾಗಿದೆ.
ಇಂತಹ ಎಲ್ಲ ಸಂದರ್ಭಗಳನ್ನು ವಿವರಿಸುವ ನಿರ್ಮಲಾ ಶೆಟ್ಟರ್ ಅವರ ಮೇಲಿನ ಗಜಲ್ ಅರ್ಥವಿವೇಚನೆ ಹೀಗಿದೆ.
ಗಜಲ ನ ಮೊದಲ ಷೇರಗಳಲ್ಲಿ (ಮತ್ಲಾದಲ್ಲಿಯೆ) ತಮ್ಮ ಉದ್ದೇಶ ಏನು ಎನ್ನುವದನ್ನು ಗಜಲ್ ಸಾರುತ್ತದೆ. ತನ್ನ ಹೆಸರಿನ ಹಂಬಲಕ್ಕಾಗಿ ತಪಿಸುವ ಮನುಷ್ಯನಿಗೆ ಎಚ್ಚರಿಕೆ ಕೊಡುತ್ತ ಗಜಲ್‌ಕಾರ್ತಿ ಹೆಸರಿಗಾಗಿ ,ಅದೆಷ್ಟು ಬಡಿದಾಡುವೆ . ಹೆಸರು ಶಾಸ್ವತವಲ್ಲ ಎನ್ನುವ ಸೂಚನೆ ನೀಡುತ್ತಾರೆ ,
ಅದೆಷ್ಟು ಬರೆದರು ಅಳಿಸಿಹೋಗುವ ಹೆಸರಿದು ಗಳಿಕೆಯಲಿ ಮರೆಯಬೇಡ
ಇತಿಹಾಸವಾದವರು ವಿಳಾಸ ಕಳೆದುಕೊಂಡರು ಜಗದಲಿ ಮರೆಯಬೇಡ
ಇಲ್ಲಿ ನಾವೆಷ್ಟು ಸಲ ನಮ್ಮ ಹೆಸರನ್ನು ಬರೆದರೂ ನಮ್ಮ ಹೆಸರು ಅಳಿಸಿಯೇ ಹೋಗುತ್ತದೆ ನಾವು ಇದನ್ನು ಇಲ್ಲಿ ಶಾಸ್ವತವಾಗಿ ಕೊರೆದಿಡಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಎಷ್ಟೋಜನ ತಾನು ಅಜರರಾಮನಾಗಬೇಕೆಂದು ಹಂಬಲಿಸಿದರೂ ಅವರ ಹೆಸರು ಹೋಗಲಿ ಅವರ ವಿಳಾಸವೂಈ ಪತ್ತೆ ಇಲ್ಲ .ನಾನು ಈ ಜಗತ್ತನ್ನು ಗೆದ್ದವನು ಎನ್ನುವ ಎಷ್ಟೋ ಜನ ಇಲ್ಲಿದ್ದರು ಎಂಬ ಗುರುತೇ ಇಂದು ಇಲ್ಲ. ಅದನ್ನು ಗಜಲ್ಕಾರ್ತಿ ವಿಳಾಸ ಕಳೆದು ಹೋಗಿದೆ ಎಂಬ ನುಡಿಗಟ್ಟಿನ ಮಊಲಕ ವಿಡಂಬಿಸುತ್ತಾರೆ. ವಿಳಾಸ ಕಳೆಯುವದು ಎಂಬ ನುಡಿಗಟ್ಟಿಗೆ ಪತ್ತೆಯೇ ಇಲ್ಲದೇ (ಹೆಸರಿಲ್ಲದೆ) ಕಾಣೆಯಾಗು ಎಂಬ ಅರ್ಥವಿದೆ. ಮನುಷ್ಯ ತನ್ನ ಹೆಸರು ಉಳಿಸಲು ಯತ್ನಿಸುವ ಅವನ ನಡೆಗಳನ್ನು ಇಲ್ಲಿ ಗಜಲ್ ವಿಡಂಬಿಸುತ್ತದೆ.
ಜಗತ್ತಿನ ಚರಿತ್ರೆಯಲ್ಲಿ ಇದು ನನ್ನರಾಜ್ಯದ ಗಡಿ ಎಂದು ಬಡಿದಾಡಿದ ರಾಜರುಗಳೂ ಇಂದು ಇದ್ದಾರೆಯೇ? ಇಲ್ಲ ಅವರ ಯುದ್ದ ರಣಗೀತೆಗಳು ಇಂದು ಕಾಣೆಯಾಗಿವೆ ಅದನ್ನೆ ಮುಂದಿನ ಷೆರ್ ಗಳಲ್ಲಿ ಗಜಲ್ಕಾರ್ತಿ ವಿವರಿಸುತ್ತಾರೆ.
ಗಡಿಯ ಒಳಹೊರಗ ತಂತ್ರ ಮರುಕಳಿಸಿದೆ ರಣಗೀತೆ ಕೇಳಿರಬೇಕು ನೀನು
ಲಡಾಯಿಗೆಂದೆ ನಿಂತವರು ಬುನಾದಿಯಾದ ಕತೆ ಕದನದಲಿ ಮರೆಯಬೇಡ
ಅಂದು ತಮ್ಮ ತಮ್ಮ ಯುದ್ದ ಗಳಿಗಾಗಿ ರಾಜರುಗಳು ಹಾಡುತ್ತಿದ್ದ ರಣಗೀತೆಗಳ ಆರ್ಭಟ ಇಂದು ಇಲ್ಲಿ ಇಲ್ಲ. ಯಾರು ಶಾಸ್ವತವಾಗಿ ಉಳಿಯಬೇಕೆಂದು ಯದ್ದ ಮಾಡಿದರೋ ಅವರೇ ಯುದ್ದ ದಲ್ಲಿ ಸೋತು ಸತ್ತು ಹೇಳ ಹೆಸರಿಲ್ಲದವರಾಗಿದ್ದಾರೆ. ಯುದ್ಧಗಳನ್ನು ಮಾಡಿದ , ದಂಡು ದೌಲತ್ತುಗಳನ್ನು ನಿರ್ಮಿಸಿಕೊಂಡಿದ್ದ ಅಂಥವರ ಪಾಳಿಯೇ ಹಾಗಾದ ಮೇಲೆ ಇನ್ನು ಉಳಿದವರ ಪಾಡೇನು ? ಯೋಚಿಸು ಎಂಬ ಸೂಕ್ಷ್ಮ ಎಚ್ಚರವನ್ನು ಗಜಲ್ ತಿಳಿಸುತ್ತದೆ.
ಇದು ಯುದ್ಧದಲ್ಲಿ ಹೋರಾಡಿದವರ ಕಥೆಯಾಯಿತು! ಅವರು ಹೋಗಲಿ, ತಮಗೆ ಯುದ್ಧವೂ ಬೇಡ ಸಂಘರ್ಷವೂ ಬೇಡ, ನಮ್ಮಿಂದ ಯಾರಿಗೂ ತಾಪತ್ರಯ ಅಗದಿರಲಿ ಎಂದು ಸದಾವಕಾಲ ಶಾಂತಿಯ ಜೀವನವನ್ನೇ ಸಾಗಿಸಿದ ಅತಿ ಸದ್ಗುಣಿಗಳೂ ಸಂತರೂ , ಮಹಾತ್ಮರೂ ಎನಿಸಿಕೊಂಡವರಾದರೂ ಈ ಜಗತ್ತಿನಲ್ಲಿ ಶಾಸ್ವತರಾಗಿ ಇದ್ದಾರೆಯೇ? ಅವರನ್ನಾದರೂ ಕಾಲನೆಂಬ ಮಹಾರಾಯ ಉಳಿಸಿದ್ದಾನೆಯೇ? ಅಂದರೆ ಅದೂ ಸುಳ್ಳು ಎಂಥ ಸೌಜನ್ಯಗಳ ಖಣಿಯೂ ಇಲ್ಲಿ ಶಾಸ್ವತವಾಗಿ ಉಳಿದಿಲ್ಲ ಅವರೂ ಸಾವಿಗೆ ತುತ್ತಾಗಿದ್ದಾರೆ ಎನ್ನುತ್ತದೆ ಗಜಲ್.
ಜೀವನವಿಡೀ ದಾನ ಧರ್ಮಕೆಂದು ಮುಡಿಪಾದವರಿಗೂ ಕಷ್ಟ ಸೂತಕವಿದೆ
ಚಂದ್ರಮನ ಬೆಳದಿಂಗಳಿಗೂ ಗ್ರಹಣದ ನಂಟಿದೆ ನೋವಿನಲಿ ಮರೆಯಬೇಡ
ಎಂಥ ದಾನಿಯೇ ಇರಲಿ, ಉದಾರಿಯೇ ಇರಲಿ ಅವನೂ ಸಾವು ಎಂಬ ಯಜಮಾನನಿಗೆ ಆಹುತಿ ಯಾಗುವವರೆ . ‘ಚಂದ್ರಮನ ಬೆಳದಿಂಗಳಿಗೂ ಗ್ರಹಣದ ನಂಟಿದೆ’ ಎನ್ನುವ ಸುಂದ ರ ಸಾಲನ್ನು ಗಜಲ್ ಕಾರ್ತಿ ಟಂಕಿಸುತ್ತಾರೆ. ಅಂಥಹ ಚಂದ್ರನ ಪಾಡೇ ಹಾಗಾದರೆ ಉಳಿದ ಸಾಮಾನ್ಯರಾದ ನಾವೆಲ್ಲಿ? ಎಂದು ಗಜಲ್ ಆಲೋಚಿಸುತ್ತದೆ.
ಇಲ್ಲಿಯವರೆಗಿನ ಗಜಲ್ ನ ಮಿಶ್ರಾಗಳು ಹೊರಜಗತ್ತಿನ ಲ್ಲಿ ಸುತ್ತುತ್ತ್ತಿದ್ದರೆ ನಾಲ್ಕನೆಯ ಮಿಶ್ರಾದ ಹೊತ್ತಿಗೆ ಗಜಲ್ಕಾರ್ತಿ ತನ್ನ ಬದುಕನ್ನೂ ಒಳಗೊಳ್ಳುತ್ತಾರೆ.
ನನ್ನೆದೆಯಲಿ ಬರೆದಿಟ್ಟ ದೂರುಗಳ ಕುರಿತು ನೀನೇ ಕಾರಣ ಕೊಡಬೇಕಿದೆ
ಮನದ ಗಾಯಕೆ ಸಮಯವೇ ಮುಲಾಮು ಅವಸರದಲಿ ಮರೆಯಬೇಡ
ಸಮಾಜಕ್ಕೆ ನೋವಿರುವ ಹಾಗೆ ವ್ಯಕ್ತಿಗೂ ನೋವಿರುತ್ತದೆ. ಅದು ಒಂದು ನಿರ್ದಿಷ್ಟ ವ್ಯಕ್ತಿಯಿಂದಲೋ , ಒಂದು ಬಂಧದ ಅಗಲಿಕೆಯಿಂದಲೋ ಉಂಟಾಗಿರುತ್ತದೆ. ಹೀಗೆ ತನ್ನನ್ನು ಅಗಲಿದ ಕಾರಣ ತನ್ನೆದೆಯಲಿ ಹುದುಗಿದ ದು:ಖಕ್ಕೆ ಕಾರಣಗಳನ್ನುಅ ವನೇ ಕೊಡಬೇಕಿದೆ ಎನ್ನುವ ಗಜಲ್ ವಿಶಾಲ ಅರ್ಥದಲ್ಲಿ ಚಿಂತಿಸಿದರೆ ಎಲ್ಲದಕೂ ಕಾರಣ ಆದೇವರೇ ಅವನೇ ಉತ್ತರ ಕೊಡಬೇಕು ಎಂಬ ಸೂಚನೆಯನ್ನು ಒಳಗೊಂಡಂತೆ ಸೂಚಿತವಾಗಿದೆ. ಷೇರ್ ನ ಎರಡನೆಯ ಮಿಶ್ರಾದಲ್ಲಿ ‘ಯಾವುದೋ ಗಾಯ ಸಾಸ್ವತವಲ್ಲ ಕಾಲ ನೆಂಬ ವೈದ್ಯನಲಿ ಎಲ್ಲದಕೂ ಸಮಯವಿದೆ’ ಎಂದು ಸಾರುತ್ತಾರೆ.
ಗಜಲ್ ನ ಕೊನೆಯ ಮಿಶ್ರಾದಲ್ಲಿ ಇಡೀ ಗಜಲ್ ಹೇಳಬೇಕಾದ ವಸ್ತು ಸಾರರೂಪವಾಗಿ ವ್ಯಕ್ತವಾಗಿರುವದು ಮಹತ್ವದ್ದು .ಗಜಲ್ಕಾರ್ತಿ ಏನು ಹೇಳಲು ಹೊರಟಿದ್ದಾರೆ ಎಂದರೆ ‘ಈ ಜಗತ್ತನ್ನು ನಿರ್ಮಿಸಿದವರು ಶ್ರಮಿಕರು , ಅವರಿಗೆ ಮಾತ್ರ ಸಂತಸದ ಗುತ್ತಿಗೆ ದೊರಕುತ್ತದೆ ಎನ್ನುವ ಅರ್ಥಪೂರ್ಣ ಸಾಲನ್ನು ಟಂಕಿಸಿದ್ದಾರೆ. ‘ನಿಶೆ’ ಎಂಬ ಕಾವ್ಯನಾಮವೂ ಬಹಳ ಅರ್ಥಪೂಣವಾದುದು . ಯಾರು ಸದಾ ಪ್ರಾಮಾಣಿಕವಾಗಿ ದುಡಿಯುವವರೋ ಅವರಲ್ಲಿ ನೆಮ್ಮದಿಗೆ ಕೊರತೆಯಿಲ್ಲ ಅವರ ಸಂತಸದ ಗುತ್ತಿಗೆದಾರರು ಎನ್ನುವ ಗಜಲ್ ಕೊನೆಯ ಮಿಶ್ರಾದಲ್ಲಿ ‘ಅರಮನೆಗೆ ನಿದ್ರೆಯಂಬುದು ಬರಗಾಲದ ನೆರೆ’ಎನ್ನುತ್ತ ಅರಸೊತ್ತಿಗೆಯಲ್ಲಿ ಮೆರೆಯುವವರಿಗೆ ನೆಮ್ಮದಿಯಂಬುದು ಇರಲಾರದು ಎಂದು ಸಾರುತ್ತದೆ.
ಶ್ರಮಿಕರು ಮಾತ್ರ ನೆಮ್ಮದಿ ಸಂತಸದ ಗುತ್ತಿಗೆದಾರರು ‘ನಿಶೆ’ ನೆನಪಿಟ್ಟುಕೊ
ಅರಮನೆಗೆ ನಿದ್ರೆಯಂಬುದು ಬರಗಾಲದ ನೆರೆ ಅಮಲಿನಲಿ ಮರೆಯಬೇಡ
ಈ ಜಗತ್ತಿನಲ್ಲಿ ಸಂತೋಷದಿಂದ, ನೆಮ್ಮದಿಯಿಂದ ಇರುವವರು ದುಡಿಯುವವರು ಮಾತ್ರ, ಅರಮನೆಯ ಐಷಾರಾಮಿ ಬದುಕು ಬದುಕುವವರಿಗೆ ಸಮಾಧಾನದ ನಿದ್ರೆಯಂಬುದು ಇರಲಾರದು ಎನ್ನುವದನ್ನು ಗಜಲ್ ಸಾರುತ್ತದೆ.
‘ಚಂದ್ರಮನ ಬೆಳದಿಂಗಳಿಗೂ ಗ್ರಹಣದ ನಂಟಿದೆ’ ,’ ಮನದ ಗಾಯಕೆ ಸಮಯವೇ ಮುಲಾಮು’ , ‘ಶ್ರಮಿಕರು ಮಾತ್ರ ನೆಮ್ಮದಿ ಸಂತಸದ ಗುತ್ತಿಗೆದಾರರು’, ‘ನೆಗೆ ನಿದ್ರೆಯಂಬುದು ಬರಗಾಲದ ನೆರೆ’ ಮೊದಲಾದ ಹೊಸ ಹೊಸ ರೂಪಕಗಳ ಸೃಷ್ಟಿ ನಿರ್ಮಲಾ ಅವರ ಗಜಲ್ ಗೆ ವಿಶೇಷ ಸೌಂದರ್ಯವನ್ನು ನೀಡಿದೆ. ಒಟ್ಟಾರೆ ಗಜಲ್ ಆಶಯವಿಷ್ಟೇ. ಇಲ್ಲಿ ನಾವು ಎಂಥವರೇ ಇರಲಿ, ಒಳ್ಳೆಯವರೋ ಕೆಟ್ಟವರೋ ಅದು ಮುಖ್ಯವಲ್ಲ, ಸಾವೆಂಬ ಯಜಮಾನ ಕರೆದ ಮೇಲೆ ಎಲ್ಲರೂ ತೆರಳಲೇಬೇಕು ಎಂಬ ವಿಚಾರವನ್ನು ಗಜಲ್ ಒಳಗೊಂಡಿದೆ. ಅಂತಿಮವಾಗಿ’ ಶ್ರಮಜೀವಿಗಳು ಮಾತ್ರ ಸಂತಸದಲ್ಲಿ ಇರಲು ಸಾಧ್ಯ ,ಐಷಾರಾಮಿ ಬದುಕನ್ನು ಕಳೆಯುವ ಅರಮನೆಯಲ್ಲಿರುವವರಲ್ಲ’ ಎನ್ನುವದನ್ನು ಹೇಳುವ ಮೂಲಕ ಗಜಲ್ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಾರ್ಯವನ್ನು ಮಾಡಿದೆ.
ಡಾ.ವೈ.ಎಂ.ಯಾಕೊಳ್ಳಿ
