ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್

ಬೆಸೆದ ಕಂಗಳು ಹೊಸೆದ ಕನಸು ನಿಜವಾಗದೆ ಉಳಿಯಿತು
ಹಸಿದ ದ್ವೇಷವು ಮಸೆದ ಮಸಲತ್ತಿಗೆ ಪ್ರೀತಿಯು ಅಳಿಯಿತು
ಹೂವಿನ ಬನವದು ಹಾವಿಗೆ ತಾಣವೆಂದು ನಂಬಲಿ ಹೇಗೆ
ಕಸಿದ ನಸೀಬಿನ ಆತ್ಮ ನೇಣಿಗೇರಲು ಪ್ರೇತವಾಗಿ ಸುಳಿಯಿತು
ಒಡೆದ ಹಾಲನು ಕಡೆದು ಬೆಣ್ಣೆಯಾಗಿಸಿ ತುಪ್ಪವ
ಕಾಯಿಸಬಹುದೇ ಕುಸಿದ ಸೌಧದ ಮಣ್ಣಿನಡಿ ಸಮಾಧಿಯಲಿ ನೆನಪು ಬೆಳೆಯಿತು
ಮುಸುಕು ಸರಿಸುತ ಬದಲಿಸಿದ ಚೆಹರೆ ಪರಿಚಿತ ಜಗದಲಿ
ಬಸಿರು ಬಯಕೆಗೆ ಹಸಿರು ವನಗಳ ಚಿಗುರು ಮಿಡಿ ಸೆಳೆಯಿತು
ನಸುಕು ಹರಿದರೂ ಹಚ್ಚಿಟ್ಟ ಶಮೆ ಬೆಳಗುತಿದೆ ತೈಲವಿರದೆ
ಬರಡು ನೆಲದಿ ಚಿಮ್ಮುವ ಆಶೆಯ ಸೆಲೆಯಲಿ ಬಾಳು ಕಳೆಯಿತು
ಶಮಾ ಜಮಾದಾರ

ಧನ್ಯವಾದಗಳು ಸರ್ ನನ್ನ.ಗಜಲ್ ಪ್ರಕಟನೆಗೆ..