ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು

ಹೃದಯ ಕದ್ದವನಿಗೆ
ಶಿಕ್ಷೆಯೇ ಆಗಲಿಲ್ಲ!
ಸಂಧಾನವೇ ಲೇಸೆಂದು
ಫಿರ್ಯಾದು ಕೊಡಲಿಲ್ಲ.
“ಚುಕ್ಕೆ” ಕಾಣುವವರೆಗೆ
ಹುಸಿ ಮುನಿಸಿನಾಟ,
ಸೂರ್ಯೋದಯ ವರೆಗೆ
ಮುಸುಕಲ್ಲೇ ಗುದ್ದಾಟ.
ಬಸುರಿ ಹೇಳಿದಳು
ತಂದೆಯಾಗೋ ಪತಿಗೆ,
ಪ್ರೀತಿಯ ಹಂಚುವೆನು
ಕಂದಗೂ ನಿನ್ನೊಂದಿಗೆ.
ಮಗುವಿನ ನಗುವ
ನಕಲು ಮಾಡಲ್ಹೋಗಿ
ಅಮ್ಮನೇ ನಮ್ಮೆದರು
ಕಂಡಳು ಮಗುವಾಗಿ.
ಕಂದನ ಭಾಷೆಯಲಿ
ಅಳುವಿನದೇ ಗತ್ತು,
ಹಸಿವೋ, ನಾಟಕವೋ?
ಅಮ್ಮನಿಗಷ್ಟೇ ಗೊತ್ತು.
ಲಿಪಿ ಇಲ್ಲದ ಭಾಷೆ
ಅತ್ಯಮೂಲ್ಯ ಕಾಣಿಕೆ,
ತಾಯಿಗಷ್ಟೇ ತಿಳಿಯೋ
ಕಂದ ತೊದಲುವಿಕೆ.
ಅಪ್ಪ ಅಮ್ಮ ಇಬ್ಬರೂ
ಎರಡು ರೆಪ್ಪೆಯಂತೆ
ಅನುಗಾಲ ಕಾಳಜಿ
ಕಣ್ಣ ರಕ್ಷಿಸುವಂತೆ.

ವ್ಯಾಸ ಜೋಶಿ