ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಸೀಮೋಲ್ಲಂಘನ

ಬೇಲಿಗಳೇ ಇಲ್ಲದ
ಬಯಲ ವಿಸ್ತಾರ ಬದುಕಲಿ
ಅದೆಂಥ ನಿರಾಳ ನಿರ್ಲಿಪ್ತತೆ
ಮಿಗ ಖಗಗಳಿಗೆ!
ಹಾರಬೇಕೆನಿಸುದಾಗ ರೆಕ್ಕೆಬಿಚ್ಚಿ
ಭೂಮಿಗೆ ಭಾರವಾಗದಂತೆ
ಪುರ್ರನೆ ಹಾರುವ ಪಕ್ಷಿಗಳಿಗೆ
ಯಾವ ಸೀಮೆ?
ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..
ನಮಗಷ್ಟೆ ಮನಮನದ ನಡುವೆ
ಅಡ್ಡಗೋಡೆ..
ಹೋದಲ್ಲಿ ಬಂದಲ್ಲಿ ಗಡಿ
ಎಲ್ಲೆ ಇಲ್ಲದ ಬಯಲ ಸೀಮೆಗೆ
ಗೆರೆ ಎಳೆದಿವೆ ಮನಗಳು!
ಹರಿದ ನೆತ್ತರಿಗೆ ಸುರಿದ ಕಂಬನಿಗೆ
ಗೆರೆ ದಾಟಬೇಡವೆನ್ನುವುದೆಂತು?
ಗಡಿಗಳಾಚೆಗೂ ಈಚೆಗೂ
ಗುಂಡಿನ ಸದ್ದು ಮೊಳಗುವಾಗ
ಗಡಿ ಎಂದರೇನು?
ಬಂದೂಕುಧಾರಿಗಳೆಲ್ಲರ ಹೃದಯ
ಬಿರಿದ ಶಾಂತಿಯ ಹೂವಾಗಿ ನಗೆ ಬೀರಲಿ..
ಜೊತೆಯಾಗಿ ಆಟವಾಡುವ
ಎಲ್ಲೆ ಇಲ್ಲದ ಬಯಲಾಗಿ ಬಿಡಲಿ!!
——————————-
ಲೀಲಾಕುಮಾರಿ ತೊಡಿಕಾನ

ವರ್ಣನೆಯೊoದಿಗೆ ಸಾಮರಸ್ಯದ ಬದುಕಿನ ಸ್ವಾರಸ್ಯವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ ಸೂಪರ್