ಕಾವ್ಯ ಸಂಗಾತಿ
ಬಾಪು ಖಾಡೆ
ಶ್ರೀಕವಿರತ್ನ ರನ್ನ

ವಾಗ್ದೇವಿಯ ಶಬ್ಧ ಭಂಡಾರದ
ಮುದ್ರೆಯೊಡೆದ ರನ್ನ
ಗದಾಯುದ್ಧ ಕಥಾ ಪ್ರಸಂಗ
ಓದಲೆನಿತು ಚೆನ್ನ
ಸೌಮ್ಯ ಸಂವತ್ಸರದ ಶುಭಗಳಿಗೆ
ಇಸವಿ ಒಂಬೈನೂರ ನಲವತ್ತೊಂಬತ್ತು
ಜಿನವಲ್ಲಭ ಅಬ್ಬಲಬ್ಬೆಗೆ
ದೊರೆತ ಭುವನ ಭಾಗ್ಯ ಸಂಪತ್ತು

ಜಂಬುಖಂಡಿ ಮುದುವೊಳಲ್
ಬೆಳುಗಲಿಯ ರನ್ನಮಯ
ಸಾರಸ್ವತ ಲೋಕ ಬೆಳಗಿದ
ಕವಿತಿಲಕ ಮಹನೀಯ
ದಿವ್ಯಪ್ರಭೆಯ ಜ್ಞಾನಸೂರ್ಯ
ಗುರು ಅಜಿತಸೇನಾಚಾರ್ಯ
ಆಶ್ರಯವಿತ್ತು ಬೆಂಬಲಿಸಿದ
ಕರುಣಾಳು ಚಾವುಂಡರಾಯ
ಸಾಹಸಭೀಮ ವಿಜಯ ಕೃತಿ
ಸುಂದರ ಲೌಕಿಕ ಚಂಪೂಕಾವ್ಯ
ಭೀಮ-ದುರ್ಯೋಧನರ ಸಮರಾಂಗಣ
ಚಿತ್ರಿಸಿರುವ ದೃಶ್ಯ ಕಾವ್ಯ
ದೃಡಬಾಹು ರೇಚಣ ಮಾರಯ್ಯ
ಒಡಹುಟ್ಟಿದ ಸಹೋದರರು
ಬಾಳಪಥದಿ ಜೊತೆಗೂಡಿದ
ಜಕ್ಕಿ- ಶಾಂತಿ ಮಡದಿಯರು
ರಾಯ ಮತ್ತು ಅಬ್ಬೆ ಇವರು
ಕರುಳ ಬಳ್ಳಿ ಕುಡಿಗಳು
ದಾನ ಚಿಂತಾಮಣಿ ಅತ್ತಿಮಬ್ಬೆ
ಮಾತೃ ಹೃದಯಿ ಬೆಳದಿಂಗಳು
ಕವಿಚಕ್ರವರ್ತಿ ಕಾವ್ಯ ಕುಸುರಿ
ತಾಯಿ ಶಾರದೆ ಮುಡಿಗೆ ಸಿಂಗಾರ
ಸೂರ್ಯ ಚಂದ್ರ ಇರುವ ತನಕ
ಕವಿಮುಖಚಂದ್ರ ಅಜರಾಮರ

ಬಾಪು ಖಾಡೆ